ಬೆಳ್ತಂಗಡಿ: ಆಷಾಢ ಮಾಸದ ಏಕಾದಶೀ ಪ್ರಥಮೈಕಾದಶಿಯಾಗಿ ಭಗವಂತ ಯೋಗ ನಿದ್ರೆಗೆ (ಶಯನೀ) ಸರಿಯುವ ಪರ್ವಕಾಲವಾಗಿ ವಿಶೇಷ ಮಹತ್ವ ಪಡೆದಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಅವರ ನೇತೃತ್ವದಲ್ಲಿ ಶುಕ್ರ ವಾರ ನಡೆದ ಪ್ರಥಮೈಕಾದಶೀ ತಪ್ತ ಮುದ್ರಾಧಾರಣೆಯಲ್ಲಿ 500ಕ್ಕೂ ಹೆಚ್ಚು ಭಕ್ತರಿಗೆ ಮುದ್ರಾಧಾರಣೆ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮೋಕ್ಷಕ್ಕೆ ಅಧಿಪತಿಯಾದ ಮಹಾ ವಿಷ್ಣುವಿನ ಲಾಂಛನವಾದ ಶಂಖ-ಚಕ್ರ ಮುದ್ರೆಯನ್ನು ಸುದರ್ಶನ ಹೋಮದಲ್ಲಿ ಅಭಿಮಂತ್ರಿಸಿ ಧಾರಣೆ ಮಾಡುವುದರಿಂದ ಮಹಾವಿಷ್ಣುವಿನ ಪೂರ್ಣಾನುಗ್ರಹಕ್ಕೆ ಪಾತ್ರವಾಗುವುದರೊಂದಿಗೆ ಸಮಸ್ತ ಪಾಪ ಪರಿಹಾರವಾಗುವುದು. ರೋಗನಿರೋಧಕ ಶಕ್ತಿ ಹೆಚ್ಚುವುದು. ಭಗವದ್ಭಕ್ತರಿಗೆ ಮಹಾ ವಿಷ್ಣು ಆರೋಗ್ಯ, ಸುಖಶಾಂತಿ ನೆಮ್ಮದಿ ಅನುಗ್ರಹಿಸಲಿಎಂದರು.
ವೇ| ಮೂ| ಶ್ರೀಪತಿ ಎಳಚಿತ್ತಾಯ ಸಂದರ್ಶನ ಹೋಮ, ಧಾರ್ಮಿಕ ವಿಧಿ ನೆರವೇರಿಸಿದರು. ಬೆಳ್ತಂಗಡಿ ತಾ| ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಉಜಿರೆ ವಲಯಾಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಮತ್ತು ಪರಾರಿ ವೆಂಕಟ್ರಮಣ ಹೆಬ್ಟಾರ್ ಅವರು ಮುದ್ರಾಧಾರಣೆಯ ವ್ಯವಸ್ಥೆ ಕಲ್ಪಿಸಿದರು.
ಜು. 26ರಿಂದ ಚಾತುರ್ಮಾಸ್ಯ
ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ದೃಷ್ಟಿಯಿಂದ ಜು. 26ರಿಂದ ಸೆ. 13ರ ವರೆಗೆ ತನ್ನ 23ನೇ ಚಾತುರ್ಮಾಸ್ಯವನ್ನು ಸುಬ್ರಹ್ಮಣ್ಯ ಮೂಲ ಮಠದಲ್ಲಿ ನಡೆಸಲಿರುವುದಾಗಿ ಸ್ವಾಮೀಜಿ ತಿಳಿಸಿದರು.