ಅಳ್ನಾವರ: ಗ್ರಾಮೀಣ ಸಮುದಾಯಗಳಿಗೆ ಸಮಾನಶಿಕ್ಷಣ ಪ್ರಕಲ್ಪದಡಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆ ತಾಲೂಕಿನ ಬೆಣಚಿ ಮತ್ತು ಕಡಬಗಟ್ಟಿ ಗ್ರಾಪಂ ಆಯ್ಕೆ ಮಾಡಿಕೊಂಡು ಅಂಗನವಾಡಿಯಿಂದ ಪಿಯುಸಿ ವರೆಗಿನ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ವಿಶೇಷ ಕಾರ್ಯಕ್ರಮ ರೂಪಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಕೆ.ಎಸ್. ಜಯಂತ ಹೇಳಿದರು.
ಡೋರಿ ಗ್ರಾಮದ ಸರ್ಕಾರಿ ಶಾಲಾ ಮೈದಾನದಲ್ಲಿ ಅಂಗನವಾಡಿ ಮಕ್ಕಳಿಗಾಗಿ ಹಮ್ಮಿಕೊಂಡ ಚಿಲಿಪಿಲಿ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಗನವಾಡಿ ಮಕ್ಕಳ ಕಲಿಕೆ, ದಾಖಲಾತಿ ಉತ್ತಮಪಡಿಸುವ ಕಾರ್ಯ ನಡೆದಿದೆ.
ಶೈಕ್ಷಣಿಕ ಚಟುವಟಿಕೆ ಜೊತೆಗೆ ಅಂಗನವಾಡಿ ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸುವ ಪ್ರಯತ್ನದ ಫಲವಾಗಿ ಬೆಣಚಿ, ಡೋರಿ, ಕಿವಡೆಬೈಲ್, ದೋಪೆನಟ್ಟಿಯ ಮಕ್ಕಳಿಗೆ ಹಲವಾರು ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.
ಕಲಿಕಾ ಪದ್ಧತಿ ಸುಧಾರಣೆಗೆ ಸಮುದಾಯದ ಸಹಭಾಗಿತ್ವ ಮುಖ್ಯ ಎಂಬ ಅಂಶ ಮನಗಂಡು ಅಂಗನವಾಡಿಗೆ ಬರುವ ಮಕ್ಕಳ ಪಾಲಕರ ಪಟ್ಟಿ ಮಾಡಿಕೊಂಡು ಆಸಕ್ತಿ ಇರುವವರನ್ನು ಕಲಿಕೆಯಲ್ಲಿ ಬಳಸಿಕೊಳ್ಳುವ ಮಹದಾಸೆ ಇದೆ. ನಮ್ಮ ಸಂಸ್ಥೆ ಆರೋಗ್ಯ, ಶಿಕ್ಷಣ, ಸಮುದಾಯ ಅಭಿವೃದ್ಧಿ, ಸಂಶೋಧನೆ ಮತ್ತು ತರಬೇತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
Related Articles
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಡಾ| ಲಿಂಗರಾಜ ರಾಮಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲ್ಯದಲ್ಲಿ ದೊರೆಯುವ ಶಿಕ್ಷಣ ಮುಂದಿನ ಬದುಕಿಗೆ ಅಡಿಪಾಯ ಇದ್ದಂತೆ ಎಂದರು.ಮಕ್ಕಳಿಗಾಗಿ ಅಭಿನಯ ಗೀತೆ, ವೇಷಭೂಷಣ, ಗುಂಪು ನೃತ್ಯ, ಕಥೆ ಹೇಳುವುದು, ಕಪ್ಪೆ ಓಟ, ಸ್ವಯಂ ಪರಿಚಯ ಸ್ಪರ್ಧೆ ಹಮ್ಮಿಕೊಂಡು ವಿಜೇತರಿಗೆ ಬಹುಮಾನ ನೀಡಲಾಯಿತು. ಪೋಷಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ವಿವಿಧ ಸ್ಪರ್ಧೆ ನಡೆಯಿತು.
ಬೆಣಚಿ ಗ್ರಾಪಂ ಅಧ್ಯಕ್ಷ ಉಮೇಶ ಕದಂ, ಮಹಾಂತೇಶ ಗಾಳಿ, ಕೆ.ಎಂ. ಕರಿಗಾರ, ಆರ್. ಎನ್. ಬಸ್ತವಾಡಕರ, ಡಿ.ಎನ್. ಖಾನಾಪುರಕರ, ಸಂತೋಷ ಕಂಬಾರ, ಸಂಗೀತಾ ಮುತ್ತಲಮುರಿ, ಲಲಿತಾ ಕಮ್ಮಾರ, ಎನ್.ಡಿ. ಕುಕಡೊಳ್ಳಿ ಇದ್ದರು. ಶಿವಾನಂದ ವಸ್ತ್ರದಮಠ ಸ್ವಾಗತಿಸಿದರು. ಯೋಗಿತಾ ಪ್ರಾಸ್ತಾವಿಕ ಮಾತನಾಡಿದರು. ಸೋಮನಾಥ ಪಾಟೀಲ ನಿರೂಪಿಸಿದರು. ಸಂತೋಷ ಕಂಬಾರ ವಂದಿಸಿದರು. ಪೂರ್ಣಿಮಾ ಗೆನಪ್ಪನವರ, ಹೀನಾ ದೊಡ್ಡಮನಿ, ನಿರ್ಮಲಾ ಜಗತಾಪ ನಿರ್ಣಾಯಕರಾಗಿದ್ದರು.