Advertisement

ಕೋವಿಡ್ ಕೋಲಾಹಲದಿಂದಲೂ ಬುದ್ಧಿ ಕಲಿಯದ ಪಾಕಿಸ್ಥಾನ

11:43 PM Apr 12, 2020 | Hari Prasad |

ಈ ಸಮಯದಲ್ಲಿ ಇಡೀ ಪ್ರಪಂಚವೇ ಕೋವಿಡ್ ವಿರುದ್ಧದ ಯುದ್ಧದಲ್ಲಿ ನಿರತವಾಗಿದೆ. ಭಾರತದಂತೆಯೇ, ನೆರೆ ರಾಷ್ಟ್ರ ಪಾಕಿಸ್ಥಾನ ಕೂಡ ಕೋವಿಡ್ ಗ್ರಸ್ತವಾಗಿದೆ. ಆದರೆ ಇಂಥ ಪರಿಸ್ಥಿತಿಯಲ್ಲೂ ಪಾಕಿಸ್ಥಾನ ತನ್ನ ಕೆಟ್ಟ ಚಾಳಿಯನ್ನು ಬಿಡುತ್ತಿಲ್ಲ. ತನ್ನ ದೇಶವಾಸಿಗಳ ಸುರಕ್ಷತೆಗಿಂತಲೂ ಹೆಚ್ಚಾಗಿ ಅದಕ್ಕೆ ಭಾರತಕ್ಕೆ ತೊಂದರೆ ಕೊಡುವುದೇ ಆದ್ಯತೆಯಾಗಿದೆಯೇನೋ. ಇದರ ಪರಿಣಾಮವಾಗಿ, ಗಡಿಯಲ್ಲಿ ಪಾಕಿಸ್ಥಾನದೊಳಗಿಂದ ಉಗ್ರರು ಭಾರತಕ್ಕೆ ನುಸುಳುವ ಪ್ರಯತ್ನ ನಡೆಸುತ್ತಿದ್ದಾರೆ.

Advertisement

ಜಮ್ಮು- ಕಾಶ್ಮೀರದ ಕುಪ್ವಾರಾ ನಿಯಂತ್ರಣ ರೇಖೆಯ ಆ ಬದಿಯಿಂದ ಉಗ್ರರು ನುಸುಳಲು ಪ್ರಯತ್ನಿಸುತ್ತಲೇ ಇದ್ದಾರೆ. ಕಳೆದೊಂದು ವಾರದಿಂದಲೂ ಅವರಿಂದ ಇಂಥದ್ದೊಂದು ಪ್ರಯತ್ನ ನಡೆದೇ ಇತ್ತು. ಕಳೆದ ಶುಕ್ರವಾರವೂ ಕೆಲವು ಉಗ್ರರು ಭಾರತೀಯ ಸೀಮೆಯೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದರು. ಅವರಲ್ಲಿ ನಾಲ್ವರನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.

ಈಗ ಮತ್ತೆ ದೇಶದೊಳಕ್ಕೆ ನುಗ್ಗಲು ಪ್ರಯತ್ನಿಸುತ್ತಿದ್ದ 5 ಉಗ್ರರನ್ನೂ ಭಾರತೀಯ ಸೇನೆ ಹೊಡೆದುರುಳಿಸಿದೆ. ದುರದೃಷ್ಟವಶಾತ್‌, ಈ ಹೋರಾಟದಲ್ಲಿ ನಮ್ಮ ಐವರು ಸೈನಿಕರು ವೀರಮರಣವಪ್ಪಿದ್ದಾರೆ. ಭಾರತಕ್ಕೆ ತೊಂದರೆ ಕೊಡುವ ಅವಕಾಶವನ್ನು ಪಾಕಿಸ್ಥಾನದ ಸೇನೆ ಮತ್ತು ಸರಕಾರ ಹುಡುಕುತ್ತಲೇ ಇರುತ್ತದೆ.

ಅದರಲ್ಲೂ ಕಾಶ್ಮೀರದಿಂದ ಆರ್ಟಿಕಲ್‌ 370 ತೆಗೆದುಹಾಕಿದ ಅನಂತರದಿಂದಂತೂ ಪಾಕಿಸ್ಥಾನಿ ಸೇನೆ-ಸರ್ಕಾರಕ್ಕೆ ಹುಚ್ಚೇ ಹಿಡಿದಂತಾಗಿದೆ. ಈ ಕಾರಣದಿಂದಲೇ ಉಗ್ರರನ್ನು ನುಗ್ಗಿಸಿ, ಭಾರತದಲ್ಲಿ ಅಸ್ಥಿರತೆ ಉಂಟುಮಾಡಲು ನಿರಂತರ ಪ್ರಯತ್ನಿಸುತ್ತಲೇ ಇವೆ.

ಹಾಗೆಂದು ಪಾಕಿಸ್ಥಾನದ ಕಪಟತನದ ಪ್ರದರ್ಶನ ಹೊಸತೇನೂ ಅಲ್ಲವಾದರೂ, ಈಗ ಕೋವಿಡ್ ನಿಂದ ಅದೂ ಕೂಡ  ಹೈರಾಣಾಗಿದೆ. ಇಂಥ ಹೊತ್ತಲ್ಲಿ ತಮ್ಮ ಜನರೆಡೆಗೆ ವೈದ್ಯಕೀಯ ಸೇವೆಯನ್ನು ಕೊಂಡೊಯ್ಯುವುದಕ್ಕಿಂತ, ಭಾರತಕ್ಕೆ ಉಗ್ರರನ್ನು ಕಳುಹಿಸುವುದರಲ್ಲಿ ನಿರತರಾಗಿರುವುದನ್ನು ನೋಡಿದಾಗ, ಆ ದೇಶದ ಮಾನಸಿಕತೆ ಎಷ್ಟೊಂದು ಹಾಳಾಗಿದೆ, ವಿಷಪೂರಿತವಾಗಿದೆ ಎನ್ನುವುದು ಅರ್ಥವಾಗುತ್ತದೆ.

Advertisement

ಈ ಸಮಯದಲ್ಲಿ ಕಾಶ್ಮೀರ ಸೇರಿದಂತೆ ಭಾರತದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. ಎಲ್ಲೆಡೆಯೂ ಪೊಲೀಸರು ಮತ್ತು ಸುರಕ್ಷಾ ದಳಗಳ ಕಣ್ಗಾವಲಿದೆ. ಜನರು ಮನೆಯಿಂದ ಹೊರಗೇ ಬರುತ್ತಿಲ್ಲ. ರಸ್ತೆಗಳಲ್ಲಿ ವಾಹನಗಳೂ ಕಾಣಿಸುತ್ತಿಲ್ಲ. ನಮ್ಮ ಸೇನೆಗೆ ಇದರಿಂದಾಗಿ ಗಡಿಭಾಗದತ್ತ ಹದ್ದಿನ ಕಣ್ಣಿಡಲು ಸಾಧ್ಯವಾಗುತ್ತಿದೆ.

ಇದೆಲ್ಲ ಅರಿವಿದ್ದರೂ, ಪಾಕಿಸ್ಥಾನ ಉಗ್ರರನ್ನು ನುಸುಳಿಸಲು ಪ್ರಯತ್ನಿಸುತ್ತಿದೆ ಎಂದರೆ, ಖಂಡಿತ ಇದು ಅದರ ರಣನೀತಿಯಂತೂ ಅಲ್ಲ, ಬದಲಾಗಿ ಅದರ ಹುಚ್ಚಾಟದ ಪರಮಾವಧಿ ಎನ್ನಬೇಕಾಗುತ್ತದೆ. ಒಂದೆಡೆ ಪಾಕಿಸ್ಥಾನದಲ್ಲಿ ಉಗ್ರರನ್ನೆಲ್ಲ ಪೋಷಿಸುತ್ತಾ, ಇನ್ನೊಂದೆಡೆ ಜಾಗತಿಕವಾಗಿ ಶಾಂತಿಯ ನಾಟಕವಾಡುವ ಇಮ್ರಾನ್‌ ಖಾನ್‌ ಸರ್ಕಾರದ ಸಾಮರ್ಥ್ಯಕ್ಕೆ ಕೋವಿಡ್ ವೈರಸ್ ಈಗ ಸವಾಲೆಸೆಯುತ್ತಿದೆ.

ಈ ಸಮಯದಲ್ಲಿ ತನ್ನ ದೇಶವಾಸಿಗಳ ಗಮನವನ್ನು ಬೇರೆಡೆ ಸೆಳೆದು, ತನ್ನ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳಲು ಇಮ್ರಾನ್‌ ಈಗಲೂ ಕಾಶ್ಮೀರದ ವಿಷಯವನ್ನೇ ಬಡಬಡಿಸುತ್ತಿದ್ದಾರೆ. ಆದರೆ ಕೋವಿಡ್ ಹಾವಳಿಯ ವೇಳೆಯಲ್ಲೂ ಕಾಶ್ಮೀರದ ಬಗ್ಗೆ ಕಟ್ಟುಕಥೆಯನ್ನೇ ಹೇಳುತ್ತಾ ತನ್ನ ಜನರನ್ನು ಹೆಚ್ಚು ದಿನ ಯಾಮಾರಿಸಲು ಸಾಧ್ಯವಿಲ್ಲ ಎಂದು ಪಾಕ್‌ ಸರಕಾರ, ಸೇನೆ ಅರ್ಥಮಾಡಿಕೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next