Advertisement

ಚಟಾಪಟ್‌ ಚಟ್ನಿ

09:58 PM Sep 10, 2019 | mahesh |

ಅನ್ನವೇ ಇರಲಿ, ದೋಸೆ, ರೊಟ್ಟಿ, ಚಪಾತಿಯನ್ನೇ ಆಗಲಿ, ನಾಲಗೆಗೆ ರುಚಿಯಾಗುವಂತೆ ಮಾಡುವುದು ಚಟ್ನಿ. ಅಡುಗೆಯಲ್ಲಿ ಚಟ್ನಿ ಇದ್ದರೆ ತುಸು ಹೆಚ್ಚು ಪ್ರಮಾಣದ ಊಟ ಹೊಟ್ಟೆಗಿಳಿಯುತ್ತದೆ. ಕೆಲವು ಚಟ್ನಿಗಳು ಒಂದೇ ದಿನಕ್ಕೆ ಹಳಸಿದರೆ, ಇನ್ನು ಕೆಲವನ್ನು ಫ್ರಿಡ್ಜ್ನಲ್ಲಿಟ್ಟು ಮೂರ್ನಾಲ್ಕು ದಿನ ಬಳಸಬಹುದು. ಹುಣಸೆಹಣ್ಣಿನ ಚಟ್ನಿ, ಒಂದು ತಿಂಗಳು ಕೆಡುವುದಿಲ್ಲವಾದ್ದರಿಂದ ದೂರದೂರಿನ ಹಾಸ್ಟೆಲ್‌, ಪಿ.ಜಿ.ಯಲ್ಲಿರುವ ಮಕ್ಕಳಿಗೆ ಮಾಡಿ ಕಳಿಸಬಹುದು.

Advertisement

1.ಅನಾನಸ್‌ ಚಟ್ನಿ
ಬೇಕಾಗುವ ಸಾಮಗ್ರಿ: ಅನಾನಸ್‌- 1/2ಹಣ್ಣು, ಒಣಮೆಣಸು-4, ತೆಂಗಿನ ತುರಿ- 3/4 ಕಪ್‌, ಸಾಸಿವೆ, ಉಪ್ಪು, ಸ್ವಲ್ಪ ಬೆಲ್ಲ. ಒಗ್ಗರಣೆಗೆ:

ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.
ಮಾಡುವ ವಿಧಾನ: ಒಣಮೆಣಸು,ಚಿಕ್ಕದಾಗಿ ಹೆಚ್ಚಿದ ಅನಾನಸ್‌ ಹೋಳು, ತೆಂಗಿನ ತುರಿ, ಬೆಲ್ಲ ,ಸಾಸಿವೆಯನ್ನು ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.ಬಾಣಲೆಯಲ್ಲಿ ಒಗ್ಗರಣೆ ಮಾಡಿ, ಅದನ್ನು ರುಬ್ಬಿದ ಚಟ್ನಿಗೆ ಹಾಕಿ ಮಿಶ್ರಣ ಮಾಡಿ.

2. ಲಿಂಬೆಹಣ್ಣಿನ ಚಟ್ನಿ
ಬೇಕಾಗುವ ಸಾಮಗ್ರಿ: ಲಿಂಬೆಹಣ್ಣು-6, ಒಂದು ಬೆಳ್ಳುಳ್ಳಿ ಗೆಡ್ಡೆ, ಶುಂಠಿ- ಎರಡು ಇಂಚು, ಹುಣಸೆ ಹಣ್ಣಿನ ರಸ- 2 ಚಮಚ,
ಕಾಳುಮೆಣಸು-15, ಅಚ್ಚಖಾರದ ಪುಡಿ- ರುಚಿಗೆ ತಕ್ಕಷ್ಟು, ಬೆಲ್ಲ – 2 ಚಮಚ, ಉಪ್ಪು, ಮೆಂತ್ಯೆ- 1/2 ಚಮಚ,
ಅರಿಶಿನ ಪುಡಿ, ಜೀರಿಗೆ- ಒಂದೂವರೆ ಚಮಚ, ಸಾಸಿವೆ, ಎಣ್ಣೆ -3ಚಮಚ, ಕರಿಬೇವು, ಸ್ವಲ್ಪ ಇಂಗು.

ತಯಾರಿಸುವ ವಿಧಾನ: ಕುಕ್ಕರ್‌ಗೆ ನೀರು ಹಾಕಿ ಒಂದು ಬಟ್ಟಲಿನಲ್ಲಿ ಲಿಂಬೆಹಣ್ಣುಗಳನ್ನು ಹಾಕಿ ಐದಾರು ವಿಷಲ್‌ವರೆಗೆ ಬೇಯಿಸಿ. ಕುಕ್ಕರ್‌ ತಣ್ಣಗಾದ ನಂತರ ಲಿಂಬೆಹಣ್ಣಿನಿಂದ ಬೀಜಗಳನ್ನು ತೆಗೆಯಿರಿ. ಬೀಜ ಇದ್ದರೆ ಕಹಿಯಾಗುತ್ತದೆ. ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಮೆಂತ್ಯೆ, ಕಾಳುಮೆಣಸನ್ನು ಹಾಕಿ, ಸಾಸಿವೆ ಸಿಡಿಯುವವರೆಗೆ ಸಣ್ಣ ಉರಿಯಲ್ಲಿ ಹುರಿದು, ಆರಿದ ನಂತರ ಮಿಕ್ಸಿಯಲ್ಲಿ ಪುಡಿಮಾಡಿ. ನಂತರ ಈ ಪುಡಿಯೊಂದಿಗೆ ಬೇಯಿಸಿದ ಲಿಂಬೆ ಹಣ್ಣು, ಅಚ್ಚಖಾರದ ಪುಡಿ, ಬೆಲ್ಲ,ಬೆಳ್ಳುಳ್ಳಿ, ಶುಂಠಿ, ಹುಣಸೆ ರಸ, ಅರಿಶಿನದ ಪುಡಿ,ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನೂ ಹಾಕಿ ನುಣ್ಣಗೆ ರುಬ್ಬಿ. ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಅದರಲ್ಲಿ ಸಾಸಿವೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿ. ಈ ಒಗ್ಗರಣೆಗೆ ರುಬ್ಬಿದ ಮಿಶ್ರಣ ಹಾಕಿ, ಸಣ್ಣ ಉರಿಯಲ್ಲಿ ಬೇಯಿಸಿ.

Advertisement

3. ಹುಣಸೆ ಹಣ್ಣು- ಖರ್ಜೂರದ ಚಟ್ನಿ
ಬೇಕಾಗುವ ಸಾಮಗ್ರಿ: ಬೀಜ ತೆಗೆದ ಖರ್ಜೂರ- 1ಕಪ್‌, ಬೀಜ ತೆಗೆದ ಹುಣಸೆ ಹಣ್ಣು -1ಕಪ್‌, ನೀರು- 4 ಕಪ್‌,
ಬೆಲ್ಲ-1ಕಪ್‌, ಸೋಂಪು ಪುಡಿ-1 ಚಮಚ, ಧನಿಯಾ ಪುಡಿ-2 ಚಮಚ, ಜೀರಿಗೆ- 1 ಚಮಚ, ಅಚ್ಚ ಖಾರದ ಪುಡಿ- 2 ಚಮಚ,
ಶುಂಠಿ ಪುಡಿ- 1 ಚಮಚ,ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಹುಣಸೆ ಹಣ್ಣು, ಖರ್ಜೂರ ಮತ್ತು ಬೆಲ್ಲವನ್ನು ಹಾಕಿ, ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಬೆಂದ ಮಿಶ್ರಣಕ್ಕೆ ಸೋಂಪು ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಚ್ಚಖಾರದ ಪುಡಿ ಸೇರಿಸಿ ಮಿಶ್ರಣ ಮಾಡಿ. ಎಲ್ಲಾ ಮಿಶ್ರಣಗಳು ಮೃದುವಾಗಿ ಬೆಂದ ನಂತರ ಒಲೆಯಿಂದ ಇಳಿಸಿ, ಪೂರ್ತಿ ಅರಿದ ನಂತರ ಸ್ವಲ್ಪ ಸ್ವಲ್ಪವೇ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಜರಡಿಯಲ್ಲಿ ಹಾಕಿ ಸೋಸಿ, ಬಾಟಲಿಯಲ್ಲಿ ಹಾಕಿ ಮುಚ್ಚಿಡಿ. ಫ್ರಿಡ್ಜ್ ನಲ್ಲಿ ಇಟ್ಟರೆ ಒಂದು ತಿಂಗಳು ಉಪಯೋಗಿಸಬಹುದು. ಚಪಾತಿ, ಪರೋಟ, ಸಮೋಸಗಳಿಗೆ ನೆಂಚಿಕೊಂಡು ತಿನ್ನಲು ರುಚಿಯಾಗಿರುತ್ತದೆ..

4.ಕ್ಯಾರೆಟ್‌ ಚಟ್ನಿ
ಬೇಕಾಗುವ ಸಾಮಗ್ರಿ: ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿದ ಕ್ಯಾರೆಟ್‌- 1ಕಪ್‌, ಎಣ್ಣೆ -3 ಚಮಚ, ಉದ್ದಿನ ಬೇಳೆ, ಕಡಲೆಬೇಳೆ- ತಲಾ 1 ಚಮಚ, ಬೆಳ್ಳುಳ್ಳಿ -3ಎಸಳು, ಒಣಮೆಣಸು-5, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ-2, ತೆಂಗಿನ ತುರಿ-ಸ್ವಲ್ಪ, ಹುಣಸೆ ಹಣ್ಣು ಸ್ವಲ್ಪ,
ಉಪ್ಪು ರುಚಿಗೆ, ಕೊತ್ತಂಬರಿ ಸೊಪ್ಪು. ಒಗ್ಗರಣೆಗೆ:ಎಣ್ಣೆ, ಸಾಸಿವೆ, ಕರಿಬೇವು ಸ್ವಲ್ಪ.

ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಒಣಮೆಣಸನ್ನು ಹುರಿಯಿರಿ. ನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ, ಮೆತ್ತಗಾಗುವರೆಗೆ ಹುರಿಯಿರಿ. ಆಮೇಲೆ ಕ್ಯಾರೆಟ್‌ ಸೇರಿಸಿ ಬಣ್ಣ ಬದಲಾಗುವರೆಗೆ ಹುರಿದುಕೊಳ್ಳಿ.

ಹುರಿದ ಪದಾರ್ಥಗಳು ಪೂರ್ತಿ ಆರಿದ ನಂತರ ಅದಕ್ಕೆ, ತೆಂಗಿನ ತುರಿ,ಹುಣಸೆ ಹಣ್ಣು, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಆ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಬಾಣಲೆಯಲ್ಲಿ ಒಗ್ಗರಣೆ ಸಿದ್ಧಪಡಿಸಿ, ಮಿಶ್ರಣಕ್ಕೆ ಬೆರೆಸಿ.

-ವೇದಾವತಿ ಎಚ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next