ಹದಿನೇಳು ವರ್ಷಗಳ ಹಿಂದಿನ ಮಾತು.. ಅದು, ಲಂಕೇಶರ ಅಂತ್ಯ ಸಂಸ್ಕಾರದ ದಿನ… ಆವತ್ತು ಲಿಂಗಾಯತ ಸಮುದಾಯ ಪದ್ಧತಿಯಲ್ಲೇ ಅಂತ್ಯ ಸಂಸ್ಕಾರ ನಡೆಸಲು ಲಂಕೇಶರ ಬಂಧುಗಳು ಸಮಯದಲ್ಲಿ ನಿರ್ಧರಿಸಿಬಿಟ್ಟರು. ಸ್ಥಳದಲ್ಲೇ ಇದ್ದ ಗೌರಿ ತಕ್ಷಣವೇ ‘ಏನ್ರಿ ಇದೆಲ್ಲ’?. ನಮ್ಮ ಅಪ್ಪ ಎಲ್ಲಾ ತರಹದ ಮೌಡ್ಯ ಮತ್ತು ಕಂದಾಚಾರವನ್ನು ವಿರೋಧಿಸಿದವರು. ಅಂಥವರ ಅಂತ್ಯ ಸಂಸ್ಕಾರವನ್ನು ಸಂಪ್ರದಾಯದ ಪ್ರಕಾರ ನಡೆಸುವುದಾ? ನಿಲ್ಲಿಸಿ ಇದನ್ನು…. ಎಂದು ಅಬ್ಬರಿಸಿದ್ದರು. ಅವತ್ತು ಸ್ಥಳದಲ್ಲಿ ಇದ್ದವರು ಓಹ್.. ಈ ಹುಡುಗಿ ಅಪ್ಪನ ತರನೇ ಘಾಟಿ ಎಂದು ಮೆಚ್ಚುಗೆ ಮತ್ತು ಬೆರಗಿನಿಂದ ನೋಡಿದ್ದರು.
ಗೌರಿ ಲಂಕೇಶ್ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಇದ್ದವರು. ಲಂಕೇಶರ ಅನಿರೀಕ್ಷಿತ ನಿಧನದ ನಂತರ ತೀರ ಆಕಸ್ಮಿಕವಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಬಂದರು. ಆರಂಭದಲ್ಲಿ ಲಂಕೇಶ್ ಪತ್ರಿಕೆಗೆ ಸಂಪಾದಕಿಯಾಗಿದ್ದರು ನಿಜ. ಆದರೆ, ನಂತರದ ಕೆಲವೇ ದಿನದಲ್ಲಿ ಅಲ್ಲಿಂದ ಹೊರ ಬಂದರು. ಅಲ್ಲಿನ ವಾತಾವರಣ ನನಗೆ ಹೊಂದಿಕೆ ಆಗಿರಲಿಲ್ಲ. ಹಾಗಾಗಿ ಹೋರಬಂದೆ. ನನ್ನದೇ ಸ್ವಂತ ಪತ್ರಿಕೆ ಮಾಡುತ್ತೇನೆ. ನಮ್ಮಪ್ಪ ಲಂಕೇಶ್ ನಂಬಿದ್ದರಲ್ಲ. ಆ ತತ್ವ, ಸಿದ್ಧಾಂತ ಹಾದಿಯಲ್ಲೇ ನಡೆಯುತ್ತೇನೆ ಎಂದು ಘೋಷಿಸಿದರು. ಅಷ್ಟೆ ಅಲ್ಲ ಲಂಕೇಶ್ ಪತ್ರಿಕೆ ವೈಭವದಿಂದ ಮೆರೆದಿದ್ದ ಕಟ್ಟಡದಲ್ಲಿಯೇ ಗೌರಿ ಲಂಕೇಶ್ ಹೆಸರಿನ ಪತ್ರಿಕೆಯನ್ನೂ ಆರಂಭಿಸಿದರು.
ಕನ್ನಡ ಪತ್ರಿಕೋದ್ಯಮದಲ್ಲಿ ಅನುಭವ ಇಲ್ಲದ, ಕನ್ನಡದಲ್ಲಿ ಬರೆಯಲೂ ಗೊತ್ತಿಲ್ಲದಿದ್ದ ಗೌರಿ, ಸಂಪಾದಕಿಯಾಗಿ ಯಶಸ್ವಿಯಾಗುವುದು ಸಾಧ್ಯವೇ ಇಲ್ಲ ಎಂಬುದು ಹಲವರ ನಂಬಿಕೆಯಾಗಿತ್ತು. ಆದರೆ, ಅದನ್ನೆಲ್ಲ ಸುಳ್ಳು ಮಾಡಿದ್ದು ಗೌರಿಯ ಹೆಚ್ಚುಗಾರಿಕೆ. ಲಂಕೇಶರು ಇದ್ದಾಗ ಬರೆಯುತ್ತಿದ್ದ ಅವರ ಎಲ್ಲ ಶಿಷ್ಯರೊಂದಿಗೂ ಸಂಪರ್ಕ ಇಟ್ಟುಕೊಂಡು ಎಲ್ಲರಿಂದಲೂ ಬರೆಸಿದರು. ಕಡಿದಾಳು ಶಾಮಣ್ಣ, ಎಚ್.ಎಲ್.ಕೇಶವಮೂರ್ತಿಯವರ ಸಲಹೆ ಕೇಳಿದ್ದು, ಗೌರಿಯ ಜಾಣ ನಡೆಯಾಗಿತ್ತು. ಕಡೆ ಕಡೆಗೆ, ಲಂಕೇಶರೊಂದಿಗೆ ಅಷ್ಟಕಷ್ಟೇ ಎಂಬಂತಿದ್ದ ಯು.ಆರ್.ಅನಂತಮೂರ್ತಿ ಮತ್ತು ಚಂದ್ರಶೇಖರ ಪಾಟೀಲರು ಮಾತ್ರವಲ್ಲ, ಲಂಕೇಶರೊಂದಿಗೆ ಠೂ ಬಿಟ್ಟಿದ್ದ ಪೂರ್ಣಚಂದ್ರ ತೇಜಸ್ವಿಯವರು ಗೌರಿಯನ್ನು ಅಪಾರ ಪ್ರೀತಿ ಗೌರವದಿಂದ ನೋಡಿಕೊಂಡರು.
ಥೇಟ್ ಲಂಕೇಶರಂತೆಯೇ ಶೋಷಿತರು, ನಿರ್ಗತಿಕರ ಬಗ್ಗೆ ಗೌರಿಗೆ ಅಪಾರ ಅನುಕಂಪ ಇತ್ತು. ಕಮ್ಯೂನಿಸ್ಟ್ ಸಿದ್ಧಾಂತದಿಂದ ಪ್ರಭಾವಿತರಾಗಿದ್ದ ಅವರು, ಸಣ್ಣದೊಂದು ಅನ್ಯಾಯವನ್ನೂ ಗಟ್ಟಿಯಾಗಿ ಪ್ರತಿಭಟಿಸುತ್ತಿದ್ದರು. ಯಾರಾದರೂ ಈ ಕುರಿತು ಪ್ರಶ್ನಿಸಿದರೆ, ಹೌದು. ನಾನು ಸದಾ ನಕ್ಸಲೀಯರ ಪರ, ಏನಿವಾಗ ಎಂದು ಪುನರ್ ಪ್ರಶ್ನಿಸುತ್ತಿದ್ದರು. ನಮ್ಮನ್ನು ಮುತ್ತಿಕೊಂಡಿರುವ ಹಲವು ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳೇ ಕಾರಣ ಎಂದು ಅಬ್ಬರಿಸುತ್ತಿದ್ದರು. ಪತ್ರಕರ್ತ ಚಿದಾನಂದ ರಾಜಘಟ್ಟ ಅವರಿಂದ ವಿಚ್ಛೇದನ ಪಡೆದಿದ್ದ ಗೌರಿ, ಜನವಿರೋಧಿ ನೀತಿಯ ವಿರುದ್ಧ ಹೋರಾಡುವ ಹುಡುಗರೆಲ್ಲ ನನ್ನ ಮುದ್ದು ಮಕ್ಕಳೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಜೆಎನ್‌ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಮತ್ತು ಅವನ ಗೆಳೆಯರೊಂದಿಗಿನ ಚಿತ್ರಗಳನ್ನು ಫೇಸ್‌ಬುಕ್‌ಗೆ ಹಾಕಿ, ‘ನೋಡಿ, ನನ್ನ ಈ ಮಕ್ಕಳು ಎಷ್ಟು ಮುದ್ದುಮುದ್ದಾಗಿ ಇದ್ದಾರೆ….’ ಎಂದು ಅಡಿಟಿಪ್ಪಣಿ ಬರೆಯುತ್ತಿದ್ದರು.
ನಂಬಿದರೆ ನಂಬಿ ಬಿಟ್ಟರೆ ಬಿಡಿ: ಗೌರಿ ಅವರಿಗೆ ಸಾಕಷ್ಟು ಮಂದಿ ಬೆದರಿಕೆ ಹಾಕಿದ್ದರು. ಇಷ್ಟಾದರೂ, ಅವರ ಆಫೀಸಿನಲ್ಲಿ ಸೆಕ್ಯೂರಿಟಿಯವನು ಇರಲಿಲ್ಲ. ‘ಅಯ್ಯೋ ಇದೇನು? ಯಾರೂ ಇಲ್ಲವಲ್ಲ… ಒಬ್ರು ಸೆಕ್ಯೂರಿಟಿ ಆದ್ರೂ ಬೇಡವಾ?’ ಎಂದು ಕೇಳಿದ್ದಕ್ಕೆ, ‘ನಿಮ್ಗೆ ಗೊತ್ತಿಲ್ವಾ? ಅಪ್ಪ ಇದ್ದಾಗ ಕೂಡ ಸೆಕ್ಯೂರಿಟಿ ಇರಲಿಲ್ಲ. ಈಗಲೂ ಇಲ್ಲ. ಸೆಕ್ಯೂರಿಟಿ ಅಗತ್ಯವಾದರೂ ಏನಿದೆ? ಆಫ್ಟರಾಲ್ ಯಾರಾದರೂ ಬಂದರು ಅಂತ ತಿಳಿದುಕೊಳ್ಳಿ… ನನ್ನ ಹತ್ತಿರ ಏನಿದೇ ಕಿತ್ತುಕೊಂಡು ಹೋಗಲು?’ ಎಂದು ತಿರುಗಿ ಪ್ರಶ್ನಿಸುತ್ತಿದ್ದರು.
ಹೌದು… ಗೌರಿಯ ಬಳಿ ಹಣವಿರಲಿಲ್ಲ. ಒಡವೆಗಳಿರಲಿಲ್ಲ. ಬಾಂಡ್ ಪೇಪರ್‌ಗಳಿರಲಿಲ್ಲ. ರಹಸ್ಯ ಸಿಡಿಗಳಿರಲಿಲ್ಲ. ಆದರೆ, ಅಮೂಲ್ಯವಾದ ಜೀವವಿತ್ತು. ಅಸಮಾನತೆಯನ್ನು ವಿರೋಧಿಸುವ ಗಟ್ಟಿ ಮನಸ್ಸಿತ್ತು. ಎದುರಿಗೆ ಒಬ್ಬಿಬ್ಬರಲ್ಲ. ನೂರು ಮಂದಿ ವಿರೋಧಿಗಳಿರಲಿ, ನನಗೆ ಅನಿಸಿದ್ದನ್ನು ಹೇಳಿಯೇ ತೀರುತ್ತೇನೆ ಎಂಬ ಅದಮ್ಯ ಛಲವಿತ್ತು. ಈಗ, ಅವರ್ಯಾರೋ ಪಾಪಿಗಳು ಗುಂಡು ಹಾರಿಸುವ ಮೂಲಕ ಗುಬ್ಬಚ್ಚಿಯಂತಿದ್ದ ಗೌರಿಯನ್ನು ಕೊಂದು ಹಾಕಿದ್ದಾನೆ. ಆ ಮೂಲಕ ನಾಡಿನ ಎಲ್ಲ ಪ್ರಜ್ಞಾವಂತರ ಉಸಿರಿಗೇ ಕೊಳ್ಳಿ ಇಟ್ಟಿದ್ದಾರೆ.
ಗೌರಿ ಲಂಕೇಶ್… ನಿಮಗೆ ಕಣ್ತುಂಬಿದ ಶುಭವಿದಾಯ…
– ಎ.ಆರ್.ಮಣಿಕಾಂತ್