ಕಲಬುರಗಿ: ಗ್ರಾಮೀಣ ಭಾಗದಲ್ಲಿ ಹಬ್ಬಗಳು ತಮ್ಮ ವೈಶಿಷ್ಟ್ಯತೆ ಉಳಿಸಿಕೊಂಡಿವೆ. ಗ್ರಾಮೀಣರು ಹಬ್ಬ, ಹರಿ ದಿನಗಳನ್ನು ಆಚರಿಸುವ ಪರಿ ಅನನ್ಯವಾದುದ್ದು, ದೀಪಾವಳಿಯಲ್ಲಿ ಕಲಬುರಗಿ ತಾಲೂಕಿನ ಹರಸೂರು ಗ್ರಾಮದಲ್ಲಿ ಹಮ್ಮಿಕೊಳ್ಳುವ ಜನಪದ ಸಂಪ್ರದಾಯ ಅದರಲ್ಲಿ ಒಂದು.
ದೀಪಾವಳಿಯ ಕೊನೆಯ ದಿನ ಗ್ರಾಮದ ಯುವಕರು ಪೌರಾಣಿಕ ಪಾತ್ರಗಳ ವೇಷಭೂಷಣ ಧರಿಸುತ್ತಾರೆ. ಗ್ರಾಮದ ಮಧ್ಯದಲ್ಲಿ ಎಲ್ಲರೂ ಜನಪದ ಹಾಡುಗಳು, ಪುರಾಣ ಗೀತೆಗಳಿಗೆ ಹೆಜ್ಜೆ ಹಾಕುತ್ತಾರೆ. ಇಡೀ ಗ್ರಾಮಸ್ಥರು ಒಂದೆಡೆ ಸೇರಿ ಯುವಕರ ಕುಣಿತ ನೋಡಿ ಸಂಭ್ರಮಿಸುತ್ತಾರೆ.
ಬಲಿಪಾಡ್ಯಮಿ ದಿನದಂದು ಮಾತ್ರವೇ ಈ ಆಚರಣೆ ಇರುತ್ತದೆ. ಈ ಹಿಂದೆ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಯುವಕರು ಸಾಗುತ್ತಿದ್ದಾರೆ. ಈ ಬಾರಿಯ ಬಲಿಪಾಡ್ಯಮಿಯಂದೂ ಯುವಕರು ವೈವಿಧ್ಯಮಯ ಸೋಗು ಹಾಕಿ ಆಚರಣೆಯಲ್ಲಿ ತೊಡಗಿದ್ದರು. ಸೋಮವಾರ ಸಂಜೆ ಪೌರಾಣಿಕ ಪಾತ್ರಗಳಾದ ವಿಷ್ಣು, ಶಿವ, ರಾಮ, ಕೃಷ್ಣ, ಹನುಮ, ರಾವಣ ಹೀಗೆ ವೇಷ ಧರಿಸಿಕೊಂಡು ಕುಣಿದರು. ಮಹಿಳಾ ಪ್ರಧಾನವಾದ ಸೀತೆ, ಲಕ್ಷ್ಮೀ, ಸರಸ್ವತಿ, ಪಾರ್ವತಿ ವೇಷಗಳನ್ನೂ ಯುವಕರೇ ಧರಿಸಿದ್ದರು.
ಸಿದ್ಧಾರ್ಥ, ಶಿವಯೋಗಿ, ಜೈಭೀಮ್, ನವೀನ್, ಪ್ರದೀಪ್, ವಿಠ್ಠಲ್, ಶರಣಕುಮಾರ್, ಜೀವನ್, ಶರಣು ಎಸ್., ಸುಂದರ್, ಗುರುಲಿಂಗಪ್ಪ, ವಿಜಯ್ ಎಂಬ ಯುವಕರು ಧರಿಸಿದ್ದ ವಿವಿಧ ಪಾತ್ರಗಳ ವೇಷಭೂಷಣ ವೈಶಿಷ್ಟ್ಯ ಪೂರ್ಣವಾಗಿತ್ತು. ಬಣ್ಣ-ಬಣ್ಣದ ಪಂಚೆ, ಶಾಲು, ಯುವಕರೇ ತಯಾರಿಸಿದ್ದ ಕಿರೀಟ, ಶಿವನ ತ್ರಿಶೂಲ, ರಾಮನ ಬಿಲ್ಲು, ರಟ್ಟಿನಲ್ಲಿ ಮಾಡಿದ್ದ ರಾವಣನ ಹತ್ತು ತಲೆಗಳು ಧರಿಸಿ ಕುಣಿದರು.
ಸೀತೆ, ಲಕ್ಷ್ಮೀ, ಸರಸ್ವತಿ, ಪಾರ್ವತಿ ಪಾತ್ರಧಾರಿಗಳನ್ನಂತೂ ಹಬ್ಬೇರಿಸಿ ನೋಡುವಂತೆ ಇತ್ತು. ಹೊಸ ಸೀರೆಗಳನ್ನು ಉಟ್ಟುಕೊಂಡು, ಉದ್ದ ಜಡೆ ಕಟ್ಟಿಕೊಂಡು, ಕೈತುಂಬಾ ಬಳೆ ಹಾಕಿಕೊಂಡು, ಹಣೆಗೆ ಕುಂಕುಮ ಇಟ್ಟುಕೊಂಡು, ಕೊರಳಲ್ಲಿ ನಾಲ್ಕೈದು ಹಾರಗಳು ಧರಿಸಿಕೊಂಡು, ಬೈತಲೆ ಬೊಟ್ಟು, ತೋಳು ಬಂದಿ, ಸೊಂಟಪಟ್ಟಿ, ಕಾಲ್ಗೆಜ್ಜೆ ಕಟ್ಟಿಕೊಂಡು ಹೀಗೆ ಪರಿಪೂರ್ಣ ಮಹಿಳೆಯರ ಅಲಂಕಾರದೊಂದಿಗೆ ಗಮನ ಸೆಳೆದರು. ಜತೆಗೆ ಕೈಯಲ್ಲಿ ಕೋಲು ಹಿಡಿದು ಎಲ್ಲರೂ ಒಟ್ಟಿಗೆ ಕುಣಿದರು.
ಕಾರ್ಯಕ್ರಮ ನಡೆಯುವ ಇಡೀ ಅಂಗಳವನ್ನು ರಂಗೋಲಿ ಹಾಕಿ ಸಿಂಗಾರ ಮಾಡಲಾಗಿತ್ತು. ವಿಶಾಲ ರಂಗೋಲಿ ಕಣದ ಮೇಲೆ ಎಲ್ಲರೂ ಕೋಲಾಟವಾಡಿದರು. ಗ್ರಾಮದ ಹಿರಿಯರಾದ ಸದಾನಂದ ನಾರಮರಿ, ಕರಿಬಸಪ್ಪ, ದೇವಪ್ಪ, ನೀಲಕಂಠಪ್ಪ, ರಾಣಪ್ಪ ಸೇರಿಕೊಂಡು ಜನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು.
‘ಬಂದೇನೋ ಗಣಪ ನಿನಗ ವಂದಿಸಾಕ….’, ‘ಹಳ್ಳಿ ಹೆಣ್ಣೋ ಬಾಳಿನ ಕಣ್ಣೋ ಹೋಯ್ ಹೋಯ್…’ ಎನ್ನುತ್ತಾ ಹಾಡುಗಳನ್ನು ಹಾಡುತ್ತಿದ್ದರೆ, ಅದಕ್ಕೆ ತಕ್ಕಂತೆ ಉಳಿದವರು ಡೋಲು, ಮೃದಂಗ, ತಾಳಗನ್ನು ಬಾರಿಸಿದರು. ಇತ್ತ ತಾಳಕ್ಕೆ ತಕ್ಕಂತೆ ಕೋಲು ಬಡಿಯುತ್ತ ರಂಗೋಲಿಯಿಂದ ಬಿಡಿಸಿದ್ದ ಕಣವನ್ನು ಸುತ್ತುತ್ತ ವೇಷಧಾರಿಗಳು ಕುಣಿಯುತ್ತಿದ್ದರು.
ಈ ವೈವಿಧ್ಯಮಯ ಸಂಭ್ರಮ ನೋಡಲು ಸಣ್ಣ ಮಕ್ಕಳಿಂದ ಹಿಡಿದು ಯುವಕ, ಯುವತಿಯರು, ಮಹಿಳೆಯರು, ಹಿರಿಯರೂ ಸೇರಿದ್ದರು. ಸಿಳ್ಳೆ- ಕೇಕೆ ಹಾಕಿ ವೇಷಧಾರಿಗಳನ್ನು ಹುರಿದುಂಬಿಸಲಾಯಿತು. ಕೆಲ ಮಹಿಳೆಯರು ಕುಣಿಯುತ್ತಿದ್ದ ಯುವಕರಿಗೆ ಸ್ವತಃ ತಮ್ಮ ಆಭರಣಗಳನ್ನು ಬಿಚ್ಚಿ ಹಾಕಿ ಸಂಭ್ರಮದ ಕಳೆ ಹೆಚ್ಚಿಸಿದರು.
ದೀಪಾವಳಿ ಸಂದರ್ಭದಲ್ಲಿ ಪ್ರತಿ ವರ್ಷವೂ ಪೌರಾಣಿಕ, ಐತಿಹಾಸಿಕ ಪಾತ್ರಗಳ ವೇಷ ಧರಿಸಿ ಕುಣಿಯುವ ಸಂಪ್ರದಾಯ ನಮ್ಮ ಗ್ರಾಮದಲ್ಲಿ ಇದೆ. ಇದು ನಮ್ಮ ಹಿರಿಯರು ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ನಾವು ಸಣ್ಣವರಾಗಿದ್ದಾಗಲೂ ನಮಗೆ ವೇಷ ಹಾಕುತ್ತಿದ್ದರು ಎನ್ನುತ್ತಾರೆ ಗ್ರಾಮದ ಹಿರಿಯರು.
ಗ್ರಾಮದಲ್ಲಿ ಈ ಸಂಪ್ರದಾಯ ಯಾವಾಗಿನಿಂದ ಆರಂಭವಾಗಿದೆ ಎಂಬುದು ಗೊತ್ತಿಲ್ಲ. ನಾನು 1972 ರಿಂದ ವೇಷ ಹಾಕಿ ಕುಣಿಯುವುದು ಶುರು ಮಾಡಿದೆ. ಈಗ ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ವೇಷ ಹಾಕುವ ಮೂಲಕ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಪ್ರತಿ ಬಲಿಪಾಡ್ಯಮಿ ದಿನ ಸಂಜೆ ನಾಲ್ಕೈದು ಗಂಟೆ ಈ ಸಂಭ್ರಮ ಇದ್ದೇ ಇರುತ್ತದೆ ಎಂದು ಹಿರಿಯರಾದ ದೇವಪ್ಪ ಹೇಳಿದರು.