Advertisement

ನಮ್ಮ ಶಾಲೆ ನಮ್ಮ ಹೆಮ್ಮೆ : ಪೇಟೆ ನಡುವಿನ ಜ್ಞಾನ ದೇಗುಲ ಕಾರ್ಕಳ ಬೋರ್ಡ್‌ ಹೈಸ್ಕೂಲ್‌

01:16 PM Nov 09, 2019 | Hari Prasad |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

— ರಾಮಚಂದ್ರ ಬರೆಪ್ಪಾಡಿ

ಕಾರ್ಕಳ: ತಾಲೂಕಿಗೇ ಹೆಮ್ಮೆಯೆನಿಸಿದ, ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವ ಕಾರ್ಕಳ ಬೋರ್ಡ್‌ ಹೈಸ್ಕೂಲ್‌ ಸ್ಥಾಪನೆಯಾದದ್ದು ಇಂದಿಗೆ 131 ವರ್ಷಗಳಷ್ಟು ಹಿಂದೆ, 1888ರಲ್ಲಿ. ಅನೇಕ ಮಹನೀಯರನ್ನು ಸಮಾಜಕ್ಕೆ ಕೊಟ್ಟ ಹಿರಿಮೆ ಈ ಶಾಲೆಯದ್ದು. ಒಂದು ಕಾಲದಲ್ಲಿ ಸಾವಿರಕ್ಕಿಂತಲೂ ಅಧಿಕ ಚಿಣ್ಣರ ಕಲರವವಿದ್ದ ಈ ಶಾಲೆಯಲ್ಲೀಗ 122 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ರಾಷ್ಟ್ರ ಮಟ್ಟದ ನಾಯಕರನ್ನು ಒದಗಿಸಿಕೊಟ್ಟ ಶಾಲೆಯನ್ನು ಮತ್ತೆ ಉಚ್ಛ್ರಾಯ ಸ್ಥಿತಿಗೆ ತರಬೇಕೆನ್ನುವ ನಿಟ್ಟಿನಲ್ಲಿ ಇಲ್ಲಿನ ಪೂರ್ವ ವಿದ್ಯಾರ್ಥಿಗಳು ಈಗ ನಾನಾ ಯೋಜನೆಗಳನ್ನು ಹಮ್ಮಿಕೊಂಡು ಯಶ ಕಾಣುತ್ತಿದ್ದಾರೆ.

ವಿವಿಧ ಪುನರುಜ್ಜೀವನ ಕಾರ್ಯ
ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸಿ, ಶಾಲೆ ಗತವೈಭವಕ್ಕೆ ಮರಳಬೇಕೆನ್ನುವ ನಿಟ್ಟಿನಲ್ಲಿ ಸುಸಜ್ಜಿತ ಕಂಪ್ಯೂಟರ್‌ ಲ್ಯಾಬ್‌, ವಿಜ್ಞಾನ ಪ್ರಯೋಗಾಲಯ, ಆಂಗ್ಲ ಮಾಧ್ಯಮ ಶಿಕ್ಷಣ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಸುಂದರ ಕ್ರೀಡಾಂಗಣ ನಿರ್ಮಾಣ ಹೀಗೆ ಪುನರುಜ್ಜೀವನ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇಲ್ಲಿರುವ ಕೊಠಡಿಗಳ ಸಂಖ್ಯೆ: 11, 2.50 ಎಕ್ರೆ ಒಟ್ಟು ಜಾಗವಿದ್ದು, 1 ಎಕ್ರೆಯಷ್ಟು ಮೈದಾನ ಇದೆ. ಪ್ರಸ್ತುತ ಇಲ್ಲಿ 6 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಸಾಧಕ ಹಳೆವಿದ್ಯಾರ್ಥಿಗಳು
ಮಾಜಿ ಲೋಕಸಭಾ ಸ್ಪೀಕರ್‌, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಜ| ಕೆ.ಎಸ್‌. ಹೆಗ್ಡೆ, ನಿವೃತ್ತ ಏರ್‌ವೈಸ್‌ ಮಾರ್ಷಲ್‌ ರಮೇಶ್‌ ಕಾರ್ಣಿಕ್‌, ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ನಿಕಟವರ್ತಿಯಾಗಿ ಇಸ್ರೋದಲ್ಲಿದ್ದ ವಿಜ್ಞಾನಿ ಇಡ್ಯ ಜನಾರ್ದನ್‌, ಪಕ್ಷಿ ತಜ್ಞ ಸಲಿಂ ಆಲಿಯವರ ಸಹವರ್ತಿ ಎಸ್‌.ಎ. ಹುಸೇನ್‌, ಲೇಖಕ ಡಾ| ಕೆ. ಪ್ರಭಾಕರ್‌ ಆಚಾರ್‌, ಮುಂಬಯಿಯಲ್ಲಿ ಪೆಸ್ಟ್‌ ಕಂಟ್ರೋಲ್‌ ಪ್ರೈವೇಟ್‌ ಲಿ. ಸ್ಥಾಪಿಸಿರುವ ಎನ್‌.ಎಸ್‌. ರಾವ್‌, ಐಎಎಸ್‌ ಆಫೀಸರ್‌ ವೈ.ವಿ. ಪೈ, ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಸದಸ್ಯ ನಾರಾಯಣ ಪೈ, ಮಾಜಿ ರಕ್ಷಣಾ ಜಾರ್ಜ್‌ ಫೆರ್ನಾಂಡಿಸ್‌ ಅವರಿಗೆ ಸಲಹೆಗಾರರಾಗಿದ್ದ ರಾಂ ಮೋಹನ್‌ ರಾವ್‌ ಹೀಗೆ ಹಲವಾರು ಗಣ್ಯರು ಇಲ್ಲಿಯ ವಿದ್ಯಾರ್ಥಿಗಳಾಗಿದ್ದರು ಎನ್ನುವುದು ಶಾಲೆಗೆ ಮಾತ್ರವಲ್ಲದೆ ಊರಿಗೂ ಹೆಮ್ಮೆ.

ಶಾಲೆಗೆ ವಿವಿಧ ಗಣ್ಯರ ಭೇಟಿ
ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯಿಲಿ ಸೇರಿದಂತೆ ಹಲವಾರು ಗಣ್ಯರು ನಾನಾ ಸಂದರ್ಭಗಳಲ್ಲಿ ಈ ಶಾಲೆಗೆ ಭೇಟಿ ನೀಡಿದ್ದಾರೆ. ಇಲ್ಲಿನ ಪೂರ್ವ ವಿದ್ಯಾರ್ಥಿಗಳನೇಕರು ರಾಷ್ಟ್ರ – ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದವರಾಗಿದ್ದು, ವಿವಿಧ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿ ಕೈಲಾದ ಕೊಡುಗೆ ಸಲ್ಲಿಸಿದ್ದಾರೆ. ಬಜಗೋಳಿ, ಅಜೆಕಾರು, ಬೈಲೂರು, ಮುಂಡ್ಲಿ ಭಾಗದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದರು. ಇಲ್ಲಿನ ನಿವೃತ್ತ ಶಿಕ್ಷಕ ನೆಂಪು ನರಸಿಂಹ ಭಟ್‌ ಅವರಿಗೆ ರಾಷ್ಟ್ರಪ್ರಶಸ್ತಿ ಲಭಿಸಿದೆ.

ಹಲವು ಸಾಧಕರನ್ನು ಸಮಾಜಕ್ಕೆ ನೀಡಿದ ಶಾಲೆಯಿದು. ಕಾರ್ಕಳ ನಗರದ ಮುಖ್ಯಭಾಗದಲ್ಲಿರುವ ಈ ಶಾಲೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದಂತಹ ಕಾರ್ಯಚಟುವಟಿಕೆ ನಡೆಸುತ್ತಿದೆ.
– ಮುರಳೀಧರ ಪ್ರಭು, ಶಾಲಾ ಮುಖ್ಯ ಶಿಕ್ಷಕ

ನಾನಿವತ್ತು ಏನಾಗಿದ್ದೇನೋ ಅದಕ್ಕೆ ಬೋರ್ಡ್‌ ಹೈಸ್ಕೂಲ್‌ ಕಾರಣ. ಶಾಲೆ ನಮ್ಮಬದುಕಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟು ಭವಿಷ್ಯ ರೂಪಿಸಿದ ಸಂಸ್ಥೆ. 1964ರ ವಿದ್ಯಾರ್ಥಿ ನಾನು.
– ಆರ್‌. ಲಕ್ಷ್ಮಣ್‌ ಶೆಣೈ, ಇ ಮರ್ಕ್‌ ಕಂಪೆನಿಯ ನಿವೃತ್ತ ಹಣಕಾಸು ನಿರ್ದೇಶಕ, ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next