Advertisement

ಆರೋಗ್ಯ ತಪಾಸಣೆ, ಲಸಿಕೆಗೆ ವಿಶೇಷ ಅಭಿಯಾನ

02:36 AM Jun 16, 2020 | Sriram |

ಮಂಗಳೂರು/ ಉಡುಪಿ: ಕೋವಿಡ್-19 ಹಿನ್ನೆಲೆಯಲ್ಲಿ ಅಂಗನವಾಡಿ ಮತ್ತು ಶಾಲೆಗಳು ಮುಚ್ಚಿರುವುದರಿಂದ ಮಕ್ಕಳ ನಿಯಮಿತ ಆರೋಗ್ಯ ತಪಾಸಣೆ ಮತ್ತು ಲಸಿಕೆ ಕಾರ್ಯ ಕ್ರಮಗಳು ಸ್ಥಗಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆಗಾಗಿ ವಿಶೇಷ ಅಭಿಯಾನ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

Advertisement

ಅಂಗನವಾಡಿ, 1, 4 ಮತ್ತು 10ನೇ ತರಗತಿಯ ಮಕ್ಕಳಿಗೆ ನೀಡಲಾಗುತ್ತಿದ್ದ ಔಷಧ- ಲಸಿಕೆಗಳನ್ನು ಲಾಕ್‌ಡೌನ್‌ ಹಿನ್ನೆಲೆ ಯಲ್ಲಿ 3 ತಿಂಗಳಲ್ಲಿ ನೀಡಿರಲಿಲ್ಲ. ಹಾಗಾಗಿ ಜೂ.22 ರಿಂದ ಒಂದು ವಾರ ಕಾಲ ವಿಶೇಷ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮನೆ ಮನೆಗೆ ತೆರಳಿ ಮಕ್ಕಳ ಪಟ್ಟಿ ಸಿದ್ಧಪಡಿಸಲಿದ್ದಾರೆ.

ಕಂಟೈನ್‌ಮೆಂಟ್‌ ವಲಯ ಹೊರತುಪಡಿಸಿ ಇತರ ಎಲ್ಲ ಪ್ರದೇಶಗಳ ಮಕ್ಕಳನ್ನು ಅಂಗನವಾಡಿ ಕೇಂದ್ರಗಳು ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆತರಲು ವ್ಯವಸ್ಥೆ ಮಾಡಲಾಗುತ್ತದೆ. ಮನೆ ಭೇಟಿ ಮಾಡಿದಾಗ ಮಕ್ಕಳಿಗೆ ಅಥವಾ ಪೋಷಕರಿಗೆ ಜ್ವರ, ಕೆಮ್ಮು, ಶೀತ ಮೊದಲಾದ ತೊಂದರೆ ಇರುವುದು ಕಂಡುಬಂದರೆ ತತ್‌ಕ್ಷಣವೇ ಕೋವಿಡ್‌ ಪರೀಕ್ಷೆಗೆ ಕಳುಹಿಸಬೇಕು ಎಂದು ಸೂಚನೆ ನೀಡಲಾಗಿದೆ.

ಮೂರು ಹಂತಗಳ ಸಮೀಕ್ಷೆ ಪೂರ್ಣ
ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ಆರೋಗ್ಯ ಮಾಹಿತಿ ಸಂಗ್ರಹದ ಸಮೀಕ್ಷಾ ಕಾರ್ಯವನ್ನು ಮೂರು ಹಂತಗಳಲ್ಲಿ ನಡೆಸಲಾಗಿದೆ. ಇದರಲ್ಲಿಯೂ 10 ವರ್ಷದ ಕೆಳಗಿನ ವಯಸ್ಸಿನ ಮಕ್ಕಳ ಮತ್ತು 60 ವರ್ಷ ಮೇಲ್ಪಟ್ಟವರ ಆರೋಗ್ಯದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ.

ಅಂಗನವಾಡಿ, ಪಿಎಚ್‌ಸಿಗಳಲ್ಲಿ ಲಸಿಕೆ
0ಯಿಂದ 6 ವರ್ಷ, 10 ವರ್ಷ ಮತ್ತು 16 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. 0-6 ವರ್ಷ ವಯಸ್ಸಿನ ಮಕ್ಕಳಿಗೆ ಅಂಗನವಾಡಿಗಳಲ್ಲಿಯೇ ಲಸಿಕೆ ಹಾಕಬಹುದು. ಅಂಗನವಾಡಿಗಳನ್ನು ನಿರ್ದಿಷ್ಟ ದಿನದಂದು ತೆರೆದು ಅಂದು ಲಸಿಕೆ, ಔಷಧ ನೀಡಬಹುದು. ಆದರೆ ಇತರ ಮಕ್ಕಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಅಥವಾ ಅಂಗನವಾಡಿಗಳಲ್ಲಿ ಲಸಿಕೆ ಹಾಕಬೇಕಾಗುತ್ತದೆ. ಈ ಬಗ್ಗೆ ಇನ್ನಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳ ಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಲಾಕ್‌ಡೌನ್‌ನಿಂದಾಗಿ
ಎಪ್ರಿಲ್‌, ಮೇ ಮತ್ತು ಜೂನ್‌ ತಿಂಗಳುಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕದಿರುವ ಹಿನ್ನೆಲೆಯಲ್ಲಿ ಜೂ.22ರಿಂದ ವಿಶೇಷ ತಪಾಸಣೆ ಅಭಿಯಾನ ನಡೆಸಲು ಸರಕಾರದಿಂದ ಸೂಚನೆ ಬಂದಿದೆ. ಇದಕ್ಕೆ ಅಗತ್ಯ ಯೋಜನೆ ಹಾಕಿಕೊಳ್ಳಲಾಗುತ್ತಿದೆ.
-ಡಾ| ಸುಧೀರ್‌ಚಂದ್ರ ಸೂಡ
-ಡಾ| ರಾಮಚಂದ್ರ ಬಾಯರಿ
ಉಡುಪಿ ಹಾಗೂ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next