ಹಾವೇರಿ: ‘ಕೇಳ್ರಪ್ಪೋ ಕೇಳ್ರಿ… ನಿಮ್ಮ ಮಕ್ಕಳನ್ನ ನಮ್ ಸರ್ಕಾರಿ ಶಾಲಿಗೆ ಕಳಸ್ರಿ. ನಮ್ಮ ಶಾಲೆಲಿ ಗುಣಮಟ್ಟದ ಶಿಕ್ಷಣ ಕೊಡ್ತೇವಿ.. ಉಚಿತವಾಗಿ ವಿವಿಧ ಸೌಲಭ್ಯ ಕೊಡ್ತೇವಿ..’ ಹೀಗೆ ಊರಲ್ಲಿ ಡಂಗುರ ಸಾರಿ ಮಕ್ಕಳನ್ನು ತಮ್ಮ ಶಾಲೆಗೇ ಬರುವಂತೆ ಕೋರುತ್ತಿರುವವರು ಯಾವುದೇ ಖಾಸಗಿ ಶಾಲೆಯವರಲ್ಲ; ಸರ್ಕಾರಿ ಶಾಲೆಯವರು!
‘ಗುಣಾತ್ಮಕ ಶಿಕ್ಷಣದತ್ತ ಕಳ್ಳಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ತ’ ಎಂಬ ಘೋಷವಾಕ್ಯದೊಂದಿಗೆ ಡಂಗುರ ಸಾರಲಾಗುತ್ತಿದೆ. ಗ್ರಾಮದ ಮನೆಮನೆಗೆ ಹೋಗಿ ಕರಪತ್ರ ಹಂಚಲಾಗುತ್ತಿದೆ. ಜತೆಗೆ ಮಕ್ಕಳನ್ನು ಸರ್ಕಾರಿ ಶಾಲೆಗೇ ಕಳುಹಿಸುವಂತೆ ಪಾಲಕರಲ್ಲಿ ಮನವೊಲಿಸುತ್ತಿರುವ ಕಳ್ಳಿಹಾಳ ಸರ್ಕಾರಿ ಶಾಲೆ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.
ಕರಪತ್ರ ಪ್ರಚಾರ: ಖಾಸಗಿ ಶಾಲೆಗಳು ಪತ್ರಿಕೆಗಳಲ್ಲಿ ಜಾಹೀರಾತು ಹಾಗೂ ಕರಪತ್ರಗಳ ಮೂಲಕ ತಮ್ಮ ಶಾಲೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಿ, ಆಹ್ವಾನಿಸುವ ಮಾದರಿಯಲ್ಲಿಯೇ ಈ ಕಳ್ಳಿಹಾಳ ಸರ್ಕಾರಿ ಶಾಲೆಯವರು ಸಹ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸಲು ವಿಶೇಷ ಮಾಹಿತಿ ಇರುವ ಕರಪತ್ರ ಸಹ ಸಿದ್ಧಪಡಿಸಿದ್ದಾರೆ. ‘ಕಳ್ಳಿಹಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20ನೇ ಸಾಲಿನ ಪ್ರವೇಶ ಪ್ರಾರಂಭವಾಗಿದೆ. ಜೂನ್ 1ರಿಂದ 30ವರೆಗೆ ಸಾಮಾನ್ಯ ದಾಖಲಾತಿ ಆಂದೋಲನ ನಡೆಯಲಿದೆ. 1-8-2018ಕ್ಕೆ ಐದು ವರ್ಷ 10 ತಿಂಗಳು ಪೂರ್ಣಗೊಳ್ಳುವ ನಿಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಒಂದನೇ ತರಗತಿಗೆ ಈಗಲೇ ಉಚಿತವಾಗಿ ದಾಖಲಾತಿ ಮಾಡಿರಿ’ ಎಂದು ಕರಪತ್ರದಲ್ಲಿ ಮುದ್ರಿಸಲಾಗಿದೆ.
ಉಚಿತ ಸೌಲಭ್ಯಗಳು: ‘ಸ್ಮಾರ್ಟ್ ಕ್ಲಾಸ್, ನಲಿ-ಕಲಿ ಮೂಲಕ ಗುಣಾತ್ಮಕ ಬೋಧನೆ, ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ಸಮಗ್ರ ಮಾಹಿತಿ ದಾಖಲು, ಉಚಿತ ಕಂಪ್ಯೂಟರ್ ತರಬೇತಿ, ಉಚಿತ ಪಠ್ಯಪುಸ್ತಕ, ಉಚಿತ ಶೂ ಮತ್ತು ಸಾಕ್ಸ್, ಉಚಿತ ಸಮವಸ್ತ್ರ, ಉಚಿತ ಬಿಸಿಯೂಟ, ಉಚಿತ ಹಾಲು, ಉಚಿತ ಯೋಗ ಶಿಕ್ಷಣ, ಉಚಿತ ಶುಚಿ ಪ್ಯಾಡ್, ಹಾಜರಾತಿ ಪ್ರೋತ್ಸಾಹಧನ, ವಿದ್ಯಾರ್ಥಿ ವೇತನ, ಗ್ರಂಥಾಲಯ ವ್ಯವಸ್ಥೆ, ವಿಶೇಷ ಕ್ರೀಡಾ ತರಬೇತಿ, ಉಚಿತ ವಿಟಮಿನ್ ಹಾಗೂ ಜಂತುನಾಶಕ ಮಾತ್ರೆ ವಿತರಣೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ಮತ್ತು ನೋಟ್ಬುಕ್, ಉಚಿತ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಚಿಕಿತ್ಸೆ, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಸೌಲಭ್ಯ, ಬೇಸಿಗೆಯಲ್ಲಿ ‘ಬೇಸಿಗೆ ಸಂಭ್ರಮ’ ಶಿಬಿರ ಕರ್ನಾಟಕ ದರ್ಶನ ಪ್ರವಾಸ ಸೇರಿ ಒಟ್ಟು 20 ಸೌಲಭ್ಯಗಳು ಸರ್ಕಾರಿ ಶಾಲೆಯಲ್ಲಿ ಮಗುವಿಗೆ ಸಿಗುತ್ತವೆ’ ಎಂದು ಕರಪತ್ರದಲ್ಲಿ ಉಲ್ಲೇಖೀಸಲಾಗಿದೆ.
Advertisement
ಹೌದು, ಇದು ಆಶ್ಚರ್ಯವಾದರೂ ಸತ್ಯ. ಸರ್ಕಾರ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ತಾಲೂಕಿನ ಕಳ್ಳಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಮಕ್ಕಳ ಪ್ರವೇಶ ಸಂಖ್ಯೆ ಹೆಚ್ಚಿಸಲು ಈ ರೀತಿ ವಿಶೇಷ ಅಭಿಯಾನ ಆರಂಭಿಸಿರುವುದು ಎಲ್ಲರ ಗಮನಸೆಳೆದಿದೆ.
Related Articles
Advertisement
ಪ್ರವೇಶ ದಾಖಲೆಗಳು: ಮಗುವಿನ ಜನನ ಪ್ರಮಾಣ ಪತ್ರ, ಮಗು, ಮಗುವಿನ ತಂದೆ, ತಾಯಿ ಆಧಾರ ಕಾರ್ಡ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಮಗುವಿನ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಮಗುವಿನ ಬ್ಯಾಂಕ್ ಪಾಸ್‌ಬುಕ್, ಹೆಣ್ಣುಮಗುವಿನ ಭಾಗ್ಯಲಕ್ಷ್ಮೀಬಾಂಡ್ ಶಾಲಾ ದಾಖಲಾತಿ ಸಂದರ್ಭದಲ್ಲಿ ಕೊಡಬೇಕು ಎಂದು ಕರಪತ್ರದಲ್ಲಿ ತಿಳಿಸುವ ಮೂಲಕ ಸರ್ಕಾರಿ ಶಾಲಾ ಪ್ರವೇಶಕ್ಕೆ ಬೇಕಾಗುವ ಅವಶ್ಯ ಮಾಹಿತಿಯನ್ನೂ ಪಾಲಕರಿಗೆ ತಿಳಿಸುವ ಕಾರ್ಯ ಮಾಡಿದ್ದಾರೆ. ಒಟ್ಟಾರೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿಯೂ ಮಕ್ಕಳ ಪ್ರವೇಶಾತಿ ಹೆಚ್ಚಿಸಿಕೊಳ್ಳುವ ಚಟುವಟಿಕೆ ನಡೆದಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಸರ್ಕಾರಿ ಶಾಲೆಗಳಿಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಹಾಗೂ ಸರ್ಕಾರಿ ಶಾಲೆಯಲ್ಲಿ ಆಧುನಿಕ ಸೌಲಭ್ಯ ಅಳವಡಿಸಬೇಕು ಎಂಬ ಉದ್ದೇಶದಿಂದ ಶಾಲಾಭಿವೃದ್ಧಿ ಸಮಿತಿಯವರು, ಶಿಕ್ಷಕರು ಹಾಗೂ ಗ್ರಾಮದ ದಾನಿಗಳಿಂದ ಹಣ ಸಂಗ್ರಹಿಸಿ 85,000ರೂ. ವೆಚ್ಚದಲ್ಲಿ ಸ್ಮಾರ್ಟ್‌ಕ್ಲಾಸ್ ಸೌಲಭ್ಯ ಕಲ್ಪಿಸಿದ್ದು 2019-20ನೇ ಸಾಲಿನಿಂದ ಸ್ಮಾರ್ಟ್ ಕ್ಲಾಸ್ ಆರಂಭವಾಗಲಿದೆ. ಇಂಗ್ಲೀಷ್ ಭಾಷೆಯ ವಿಶೇಷ ಬೋಧನೆಗಾಗಿ ಖಾಸಗಿಯಾಗಿ ಶಿಕ್ಷಕರನ್ನು ನೇಮಿಸಿಕೊಂಡು ಅವರಿಗೆ ಶಾಲಾಭಿವೃದ್ಧಿ ಸಮಿತಿಯಿಂದ ಗೌರವಧನ ನೀಡುತ್ತ ಬರಲಾಗಿದೆ.
ಫಕ್ಕೀರೇಶ ಕಾಳಿ,ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ, ಕಳ್ಳಿಹಾಳ
ಫಕ್ಕೀರೇಶ ಕಾಳಿ,ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ, ಕಳ್ಳಿಹಾಳ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆಯ ಎಲ್ಲ ಶಿಕ್ಷಕರು, ಸಿಬ್ಬಂದಿ ಹಾಗೂ ಶಾಲಾಭಿವೃದ್ಧಿ ಸಮಿತಿಯವರು, ಗ್ರಾಮದ ಗಣ್ಯರು ಸೇರಿ ಗ್ರಾಮದಲ್ಲಿ ಡಂಗುರು ಸಾರಿ, ಕರಪತ್ರ ಹಂಚಿ ವಿಶೇಷ ಆಂದೋಲನದ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುವಂತೆ ಪಾಲಕರನ್ನು ಕೋರಲಾಗುತ್ತಿದೆ.
ಎಚ್.ಎನ್. ಪಾಟೀಲ, ಪ್ರಧಾನ ಗುರುಗಳು, ಹಿ.ಪ್ರಾ. ಶಾಲೆ, ಕಳ್ಳಿಹಾಳ
ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಿಗುವ ಉಚಿತ ಸೌಲಭ್ಯಗಳ ಬಗ್ಗೆ ಕರಪತ್ರದಲ್ಲಿ ಮಾಹಿತಿ ಮುದ್ರಿಸಿ, ಮನೆಮನೆಗೆ ಭೇಟಿ ನೀಡಿ ಹಂಚಲಾಗಿದೆ. ಮಕ್ಕಳ ಪಾಲಕರೊಂದಿಗೆ ಸಮಾಲೋಚಿಸಿ, ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಮನವೊಲಿಸಲಾಗುತ್ತಿದೆ. ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಿಂಗಪ್ಪ ಡಿ.ಎನ್., ದೈಹಿಕ ಶಿಕ್ಷಣ ಶಿಕ್ಷಕರು, ಹಿ.ಪ್ರಾ. ಶಾಲೆ, ಕಳ್ಳಿಹಾಳ