Advertisement
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
ಕುಂದಾಪುರ: ಸುತ್ತಲಿನ ಹತ್ತೂರಿಗೆ ಇದೊಂದೇ ಪ್ರೌಢಶಾಲೆ – ಕುಂದಾಪುರದ ಬೋರ್ಡ್ ಹೈಸ್ಕೂಲ್. ಕವಿ ಮುದ್ದಣ ಶಾರೀರಿಕ ಶಿಕ್ಷಕರಾಗಿದ್ದ, ಕವಿ ಗೋಪಾಲಕೃಷ್ಣ ಅಡಿಗರು, ಕೋಟ ಶಿವರಾಮ ಕಾರಂತರು ಕಲಿತ ಶಾಲೆ ಇದು. ಇಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಬಂಟ್ವಾಳ ರಘುನಾಥ ರಾಯರ ಹೆಸರಿನಲ್ಲೇ ಎದುರು ಇನ್ನೊಂದು ಶಾಲೆಯಿದೆ. ಇಂಥ ಭವ್ಯ ಇತಿಹಾಸದ ಶಾಲೆ 1865ರಲ್ಲಿ ಸ್ಥಾಪನೆಯಾಯಿತು. ಬೋರ್ಡ್ ಹೈಸ್ಕೂಲ್
ಕುಂದಾಪುರ ಸಬ್ ಕಲೆಕ್ಟರ್ ಮೇಲ್ವಿಚಾರಣೆಯಲ್ಲಿ 1874ರಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಅತಿ ಪುರಾತನ ಶಾಲೆಯಾಗಿ ಯೂನಿಯನ್ ಶಾಲೆ ಎಂಬ ನಾಮಧೇಯದಲ್ಲಿ ಇಲ್ಲಿ ಪಾಠ ಪ್ರವಚನ ಆರಂಭವಾಯಿತು. ಬೋರ್ಡ್ ಹೈಸ್ಕೂಲ್ ಆಗಿ ಮೇಲ್ದರ್ಜೆಗೇರಿದ್ದು 1887ರಲ್ಲಿ, ಪ.ಪೂ. ಕಾಲೇಜು ಆರಂಭವಾದ್ದು 1972ರಲ್ಲಿ. 1955ರಲ್ಲಿ ಶಿಕ್ಷಣ ಸಚಿವರಾಗಿದ್ದ ಸಿ. ಸುಬ್ರಹ್ಮಣ್ಯಮ್ ಅವರು ಕಲಾಮಂದಿರಕ್ಕೆ, 1987ರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರು ಶತಮಾನೋತ್ಸವ ಭವನಕ್ಕೆ ಶಿಲಾನ್ಯಾಸಗೈದಿದ್ದರು. ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಯೋಜನೆಗಳಿಗೆ ಚಾಲನೆ ನೀಡಿದ್ದರು. ಶಾಸಕರಾಗಿದ್ದ ಎಸ್.ಎಸ್. ಕೊಳ್ಕೆಬೈಲು, ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಕೂಡ ಇಲ್ಲಿನ ಹಳೆ ವಿದ್ಯಾರ್ಥಿಗಳು.
Related Articles
ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಇರುವ ಶಾಲೆ ಎಂಬ ಹೆಗ್ಗಳಿಕೆ ಇದರದ್ದು. ಪ್ರೌಢಶಾಲೆ ಮತ್ತು ಪ.ಪೂ.ವಿನಲ್ಲಿ ಒಟ್ಟು 2,058 ವಿದ್ಯಾರ್ಥಿಗಳಿದ್ದಾರೆ. ಸರಕಾರದ ಎಲ್ಲ ಸೌಲಭ್ಯಗಳು, ವಿದ್ಯಾರ್ಥಿವೇತನ ಅಲ್ಲದೆ ಎರಡೂವರೆ ದಶಕಕ್ಕೂ ಹೆಚ್ಚು ಬೋಧನಾನುಭವ ಹೊಂದಿದ ಶಿಕ್ಷಕರು ಇಲ್ಲಿನ ಸಂಪನ್ಮೂಲವೇ ಸರಿ. ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಮತ್ತು ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳೇ ತಯಾರಿಸಿದ ತರಕಾರಿ ತೋಟದಿಂದ ಬಿಸಿಯೂಟಕ್ಕಾಗಿ ತರಕಾರಿ ದೊರೆಯುತ್ತದೆ.
Advertisement
ಬೇಡಿಕೆ125ನೇ ವರ್ಷದ ನೆನಪಿನಲ್ಲಿ ಮುದ್ದಣ, ಕಾರಂತ, ಅಡಿಗರ ಸ್ಮಾರಕ ರಚನೆ, ಪುತ್ಥಳಿ ಸ್ಥಾಪನೆ, ಸಮಗ್ರ ಕೃತಿಗಳ ಸಂಗ್ರಹ ಯೋಜನೆಗೆ ನೆರವು ನಿರೀಕ್ಷಿಸಲಾಗಿದೆ. ಕಂಪ್ಯೂಟರ್‌ಗಳನ್ನು ದಾನಿಗಳಿಂದ ಅಪೇಕ್ಷಿಸಲಾಗಿದ್ದು ಮೈದಾನ ಅಭಿವೃದ್ಧಿಗೆ ಯೋಜನೆಯಿದೆ. ವಿಶೇಷ
ಪಠ್ಯದ ಜತೆಗೆ ರಾಷ್ಟ್ರೀಯ ಕೌಶಲ ಆಧಾರಿತ ಶಿಕ್ಷಣ ಯೋಜನೆಯಲ್ಲಿ 9, 10ನೇ ತರಗತಿಯವರಿಗೆ ಮಾಹಿತಿ ತಂತ್ರಜ್ಞಾನ ಮತ್ತು ಅಟೊಮೊಬೈಲ್ ವಿಷಯಗಳಲ್ಲಿ ಕಲಿಯುತ್ತಿದ್ದಾರೆ. ಕರಾಟೆ, ಯಕ್ಷಗಾನ ಶಿಕ್ಷಣ ನೀಡಲಾಗುತ್ತಿದೆ. 200 ಕಾಲೇಜು ವಿದ್ಯಾರ್ಥಿಗಳಿಗೆ ದಾನಿಗಳು ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಿದ್ದಾರೆ. ದಾನಿಗಳ ಮೂಲಕ ಶಾಲೆಗೆ ಅಗತ್ಯವಿರುವ ಕಟ್ಟಡ, ಕಂಪ್ಯೂಟರ್ ಪ್ರಯೋಗಾಲಯವೂ ನಿರ್ಮಾಣವಾಗಿದೆ. ಸ್ವತ್ಛಭಾರತ ಅಭಿಯಾನದಿಂದ 1.25 ಲಕ್ಷ ರೂ. ವೆಚ್ಚದ ಶೌಚಾಲಯ ನಿರ್ಮಾಣವಾಗಿದ್ದು, 1.5 ಲಕ್ಷ ರೂ. ವೆಚ್ಚದಲ್ಲಿ ಮೈದಾನದಲ್ಲಿ ಪ್ರೇಕ್ಷಕರ ಗ್ಯಾಲರಿಯಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಬೇರೆ ಬೇರೆ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಅದರ ಪ್ರಭಾವ ಈಗಿನ ವಿದ್ಯಾರ್ಥಿಗಳ ಮೇಲೆ ಕೂಡ ಆಗುತ್ತಿದೆ. ಜಿಲ್ಲೆಯಲ್ಲಿ ಹೆಸರು ಪಡೆದ ಶಿಕ್ಷಣ ಸಂಸ್ಥೆ ಇದು.
– ಮೋಹನ್ ರಾವ್ ಎಂ.ಜೆ., ಉಪಪ್ರಾಂಶುಪಾಲರು 9ನೇ ತರಗತಿಯಲ್ಲಿ ಉಪನಾಯಕ, 10ರಲ್ಲಿ ಶಾಲಾ ನಾಯಕನಾಗಿದ್ದೆ. ಸದಾ ಸ್ಮರಣೀಯರಾದ ಅಧ್ಯಾಪಕ ರಾಜೀವ ಶೆಟ್ಟಿ, ಮುಖ್ಯೋಪಾಧ್ಯಾಯ ಪಿ.ಎಸ್. ಕಾರಂತರು ನಮಗಿದ್ದರು. ಆಗ 1 ಸಾವಿರ ವಿದ್ಯಾರ್ಥಿಗಳಿದ್ದರು, ಶಿಸ್ತು ಕಲಿಸಿದ ನನ್ನ ಪ್ರೀತಿಯ ಪ್ರೌಢಶಾಲೆಯಿದು. ನಾನು ರಾಜಕೀಯದಲ್ಲಿ ಈ ಹಂತಕ್ಕೇರಲು ಅಲ್ಲಿನ ಶಿಕ್ಷಣ ಬುನಾದಿಯಾಗಿದೆ.
– ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕರು, ಹಳೆ ವಿದ್ಯಾರ್ಥಿ