Advertisement

ಸಾಲದ ಕಾರ್ಡಿನ ಎಚ್ಚರಿಕೆಗಳು : ಸ್ವೈಪ್‌ ಮಾಡೋ ಮುನ್ನ ಯೋಚಿಸಿ

10:06 PM May 29, 2017 | Team Udayavani |

ಬ್ಯಾಂಕಿನವರು ಕನಿಷ್ಠ ಮೊತ್ತ ಕಟ್ಟಿದರೆ ಸಾಕು ಅನ್ನುವುದು ನಿಮ್ಮ ಮೇಲೆ ‘ಲೇಟ್‌ ಫೀಸ್‌’ ಹಾಕದೆ ಇರುವ ಸೌಲಭ್ಯಕ್ಕೆ ಮಾತ್ರ. ಕಟ್ಟದೆ ಉಳಿಸಿದ ಬಾಕಿಯ ಮೇಲೆ ಬಡ್ಡಿ ಖಂಡಿತವಾಗಿ ಬೀಳುತ್ತದೆ. ಮಿನಿಮಮ್‌ ಡ್ಯೂ ಕಟ್ಟಿದರೆ ಬಾಕಿ ಮೊತ್ತದ ಮೇಲೆ ಬಡ್ಡಿಯೂ ತಗಲುವುದಿಲ್ಲ ಎಂಬ ಮಿಥ್ಯಾಸ್ವರ್ಗದಲ್ಲಿ ಹಲವು ಕಾರ್ಡ್‌ದಾರರು ಇರುತ್ತಾರೆ.!

Advertisement

ನೀವು ಒಂದು ಬ್ಯಾಂಕಿನ ಮೂಲಕ ನಿಮ್ಮ ಎಲ್ಲಾ ಆದಾಯದ, ಆರ್ಥಿಕ ಸ್ಥಿತಿಗತಿಗಳ ವಿವರಗಳನ್ನು ನೀಡಿ ಅದಕ್ಕಿರುವ ಪ್ರವೇಶ, ವಾರ್ಷಿಕ ಶುಲ್ಕ ನೀಡಿ ಒಂದು ಕ್ರೆಡಿಟ್‌ ಕಾರ್ಡ್‌ ತೆಗೆದುಕೊಳ್ಳುತ್ತೀರಿ. ಅಂತಹ ಕಾರ್ಡ್‌ಗಳನ್ನು ಸ್ವೀಕರಿಸುವ ಅಂಗಡಿಗಳಲ್ಲಿ ಬೇಕಾದ ವಸ್ತುಗಳನ್ನು ಖರೀದಿಸಿ ನಿಮ್ಮ ಕಾರ್ಡ್‌ ಅನ್ನು ಕೌಂಟರಿನಲ್ಲಿ ಕೊಡುತ್ತೀರಿ. ಕೌಂಟರಿನಲ್ಲಿ ಕುಳಿತ ವ್ಯಕ್ತಿ ನಿಮ್ಮ ಕಾರ್ಡ್‌ ಅನ್ನು ಒಂದು ಮೆಶೀನಿನಲ್ಲಿ ಉಜ್ಜಿ ಬ್ಯಾಂಕಿಂಗ್‌ ವ್ಯವಸ್ಥೆಯ ಕಂಪ್ಯೂಟರಿಗೆ ಡಯಲ್‌ ಮಾಡುತ್ತಾನೆ. ಆ ಕಂಪ್ಯೂಟರ್‌ ನೀವು ಕೊಡಬೇಕಾದ ದುಡ್ಡನ್ನು ಆ ಅಂಗಡಿಯವರ ಖಾತೆಗೆ ನೀಡಿ ಅಷ್ಟು ದುಡ್ಡನ್ನು ಬ್ಯಾಂಕು ನಿಮಗೆ ಕೊಟ್ಟ ಸಾಲ ಎಂದು ನಿಮ್ಮ ಖಾತೆಯಲ್ಲಿ ನಮೂದಿಸುತ್ತದೆ. ಅಷ್ಟು ದುಡ್ಡನ್ನು ನೀವು ಅದರ ಮಾಸಿಕ ಬಿಲ್‌ ದಿನಾಂಕದಿಂದ ಸುಮಾರು 20 ದಿನಗಳಲ್ಲಿ ಕೊಡಬೇಕಾಗುತ್ತದೆ. ಅಂದರೆ ಯಾವುದೇ ತಿಂಗಳಿನುದ್ದಕ್ಕೂ ಮಾಡಿದ ಖರ್ಚಿನ ಮರುಪಾವತಿಗೆ ಒಟ್ಟು 20-50 ದಿನಗಳವರೆಗೆ ಫ್ರೀ ಸಮಯ ಸಿಕ್ಕಂತಾಯಿತು. ಆ ಅವಧಿಯೊಳಗೆ ಪಾವತಿ ಮಾಡಿದಲ್ಲಿ ನಿಮ್ಮಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ವಸೂಲು ಮಾಡಲಾಗುವುದಿಲ್ಲ. ಬದಲಿಗೆ ಅಂಗಡಿಯವನಿಂದ ಈ ಸೇವೆಗಾಗಿ ಸ್ವಲ್ಪ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ. ಆ ಫ್ರೀ ಅವಧಿಯನ್ನು ಮೀರಿದರೆ ಮಾತ್ರ ಅದಕ್ಕೆ ಹೇರಳವಾದ ತಡಪಾವತಿಯ ಶುಲ್ಕ, ಬಡ್ಡಿದರ, ತೆರಿಗೆಗಳು ಇತ್ಯಾದಿ ಚಾರ್ಜುಗಳು ಬೀಳುತ್ತವೆ.

ಇಲ್ಲಿದೆ ಬೀಳುವ ಶುಲ್ಕಗಳು
1. ಲೇಟ್‌ ಫೀಸ್‌ – ಇದು ಡ್ಯೂ ದಿನಾಂಕದಂದು ಕನಿಷ್ಠ ಮೊತ್ತವನ್ನಾದರೂ ಪಾವತಿಸದಿದ್ದರೆ ಬೀಳುವ ಶುಲ್ಕ. ಇದು ಪ್ರತಿ ಸಲಕ್ಕೆ ಕನಿಷ್ಟ 400-600 ರೂಗಳಷ್ಟು ಆದೀತು.

2. ಬಡ್ಡಿ – ನಿಗದಿತ ದಿನಾಂಕದೊಳಗೆ ಪಾವತಿಸದೆ ಉಳಿದ ಮೊತ್ತದ ಮೇಲೆ ತಿಂಗಳೊಂದರ ಶೇ.3-3.5ರಂತೆ ಶೇ.36-42 ರಷ್ಟು ವಾರ್ಷಿಕದ ಅಂದಾಜಿಗೆ ಬಡ್ಡಿ ತಗಲುತ್ತದೆ. ಈ ತೆರನಾದ ಬಡ್ಡಿಯು ಕ್ರೆಡಿಟ್‌ ಕಾರ್ಡುಗಳನ್ನು ಅತ್ಯಂತ ದುಬಾರಿ ಸಾಲವನ್ನಾಗಿಸಿದೆ. ATM ಮೂಲಕ ನಗದು ದುಡ್ಡು ಸಾಲ ಪಡೆದುಕೊಂಡಿದ್ದಲ್ಲಿ ಅದಕ್ಕೆ ಇನ್ನೂ ಸುಮಾರು ಶೇ.6ರಷ್ಟು ಹೆಚ್ಚುವರಿ ಬಡ್ಡಿ ತಗಲುತ್ತದೆ.

3. ಸೇವಾ ತೆರಿಗೆ – ಸರ್ವಿಸ್‌ ಚಾರ್ಜ್‌ ಮತ್ತು ಸರಕಾರದ ನಿಯಮದ ಪ್ರಕಾರ ಅದರ ಮೇಲಿನ ಸರ್ವಿಸ್‌ ಟ್ಯಾಕ್ಸ್‌.  

Advertisement

4. ಸರ್ಚಾರ್ಜ್‌ – ರೈಲ್ವೇ, ಪೆಟ್ರೋಲ್‌ ಬಂಕ್‌ ಮತ್ತಿತರ ಕೆಲವೆಡೆಗಳಲ್ಲಿ ಕ್ರೆಡಿಟ್‌ ಕಾರ್ಡ್‌ ಉಪಯೋಗದ ಮೇಲೆ ಸುಮಾರು 2.5% ನಷ್ಟು ಸರ್ಚಾರ್ಜ್‌ ವಿಧಿಸುತ್ತಾರೆ. 

5. ಇವಲ್ಲದೆ ಬಹಳಷ್ಟು ಬಾರಿ Overlimit charges, Card replacement fee, Pin replacement, Charge slip retrival, Returned cheque, Duplicate statement, Rewards handling, Cash advance fee, Overseas transaction, Cheque/cash pick up fee ಮುಂತಾದ ಶುಲ್ಕಗಳನ್ನು ವಿಧಿಸಲಾಗುತ್ತದೆ.

ಕನಿಷ್ಠ ಬಾಕಿ ಮೊತ್ತ
ಪ್ರತಿ ಮಾಸದ ಕ್ರೆಡಿಟ್‌ ಅವಧಿಯಲ್ಲೂ ಮಾಡಿಕೊಂಡ ಸಾಲ ‘ಒಟ್ಟು ಬಾಕಿ’ ಎಂದಾದರೆ ಅದರ ಸುಮಾರು ಶೇ.5ರಷ್ಟು ಮೊತ್ತವನ್ನು ‘ಮಿನಿಮಮ್‌ ಬಾಕಿ’ ಅಥವಾ ‘ಕನಿಷ್ಠ ಬಾಕಿ’ ಎಂದು ಸ್ಟೇಟ್‌ಮೆಂಟಿನಲ್ಲಿ ಘೋಷಿಸಿ ಬಿಡುತ್ತಾರೆ. ಉದಾಹರಣೆಗೆ ಮೇಲೆ ತಿಳಿಸಿದ ಅವಧಿಯಲ್ಲಿ ಒಟ್ಟು ಖರೀದಿ ರೂ 2,000 ಇದ್ದರೆ ಮಿನಿಮಮ್‌ ಡ್ಯೂ 100ರೂ. ಆಗಿರುತ್ತದೆ. ಅಂದರೆ ಡ್ಯೂ ಡೇಟ್‌ ಒಳಗೆ ಕನಿಷ್ಠ 100ರೂ. ಆದರೂ ಕಟ್ಟಲೇಬೇಕು. ಸಂಪೂರ್ಣ ಮೊತ್ತವಾದ ರೂ 2000 ಕಟ್ಟಿದರೆ ಉತ್ತಮವೇ. ಆದರೆ ಬ್ಯಾಂಕ್‌ ಪ್ರಕಾರ ಅದು ಕಡ್ಡಾಯವಲ್ಲ. ಬ್ಯಾಂಕ್‌ ಪ್ರಕಾರ ಕಡ್ಡಾಯ ಪಾವತಿ ಇರುವುದು ಕನಿಷ್ಠ ಮೊತ್ತದ ಮೇಲೆ ಮಾತ್ರವೇ.

ನಾವೆಲ್ಲಾ ಇಲ್ಲೇ ಎಡವುದು. ಬ್ಯಾಂಕಿನವರು ಕನಿಷ್ಠ ಮೊತ್ತ ಕಟ್ಟಿದರೆ ಸಾಕು ಅನ್ನುವುದು ನಿಮ್ಮ ಮೇಲೆ ‘ಲೇಟ್‌ ಫೀಸ್‌’ ಹಾಕದೆ ಇರುವ ಸೌಲಭ್ಯಕ್ಕೆ ಮಾತ್ರ. ಕಟ್ಟದೆ ಉಳಿಸಿದ ಬಾಕಿಯ ಮೇಲೆ ಬಡ್ಡಿ ಖಂಡಿತವಾಗಿ ಬೀಳುತ್ತದೆ. ಮಿನಿಮಮ್‌ ಡ್ನೂ ಕಟ್ಟಿದರೆ ಬಾಕಿ ಮೊತ್ತದ ಮೇಲೆ ಬಡ್ಡಿಯೂ ತಗಲುವುದಿಲ್ಲ ಎಂಬ ಮಿಥ್ಯಾಸ್ವರ್ಗದಲ್ಲಿ ಹಲವು ಕಾರ್ಡ್‌ದಾರರು ಇರುತ್ತಾರೆ. ಇದನ್ನು ಸರಿಯಾಗಿ  ಅರ್ಥ ಮಾಡಿಕೊಳ್ಳಬೇಕು. ಮಿನಿಮಮ್‌ ಮೊತ್ತ ಕಟ್ಟಿದರೆ ಉಳಿದ ಮೊತ್ತದ ಮೇಲೆ ಬಡ್ಡಿ ತಗಲುತ್ತದೆ. ಲೇಟ್‌ ಫೀಸ್‌ ಮಾತ್ರ ಇರುವುದಿಲ್ಲ. 

ಲೇಟ್‌ ಫೀಸ್‌-ಬಡ್ಡಿ
ಇದು ಬ್ಯಾಂಕಾನುಸಾರ ಮಿನಿಮಮ್‌ ಮೊತ್ತದ ಸುಮಾರು ಶೇ.30ರಷ್ಟು ಲೇಟ್‌ ಫೀಸ್‌ ತಗಲುತ್ತದೆ. ಇದು ಕನಿಷ್ಠ ರೂ 400 ಮತ್ತು ಗರಿಷ್ಟ ರೂ 700ರೂ. ಮಿತಿಯೊಳಗೆ ಇರುತ್ತದೆ. ಅಲ್ಲದೆ ಈ ಮೊತ್ತಕ್ಕೆ ಸರ್ವಿಸ್‌ ಟಾಕ್ಸ್‌ 12% + 3% ಸೆಸ್‌ ಕೂಡಾ ತಗಲುತ್ತದೆ. ಮಿನಿಮಮ್‌ ಡ್ಯೂ ಕಟ್ಟದವರಿಗೆ ಪೂರ್ಣ ಮೊತ್ತದ ಮೇಲೆ ಹಾಗೂ ಕಟ್ಟಿದವರಿಗೆ ಬಾಕಿ ಮೊತ್ತದ ಮೇಲೆ ಬಡ್ಡಿ ತಗಲುತ್ತದೆ. ಎಲ್ಲಾ ಖರೀದಿಗಳ ಮೇಲೆ ಬಡ್ಡಿಯನ್ನು ಯಾವುದೇ ಇಂಟರೆಸ್ಟ್‌ – ಫ್ರೀ ಅವಧಿ ಇಲ್ಲದೆ ಖರೀದಿಯ ದಿನಾಂಕಗಳಿಂದಲೇ ಹೇರಲಾಗುತ್ತದೆ. ಇದರ ವಿವರ ಮುಂಬರುವ ಸ್ಟೇಟ್‌ಮೆಂಟಿನಲ್ಲಿ ನಮೂದಾಗುತ್ತದೆ. ಬಡ್ಡಿ ದರ ಸಾಮಾನ್ಯವಾಗಿ ಬ್ಯಾಂಕ್‌ ಮತ್ತು ಕಾರ್ಡಿನ ಪ್ರಭೇದವನ್ನು ಹೊಂದಿಕೊಂಡು ಸುಮಾರು ಶೇ.25-45ರಷ್ಟು ವಾರ್ಷಿಕ ಇರಬಹುದು. ಈ ಬಡ್ಡಿಯನ್ನು ಸಾಲದ ಮೊತ್ತದ ಮೇಲೆ ದೈನಂದಿನ ಲೆಕ್ಕದಲ್ಲಿ ಹೇರಲಾಗುತ್ತದೆ. ಹಾಗೂ ಪ್ರತೀ ಮಾಸದ ಅವಧಿಯ ಕೊನೆಗೂ ಇದು ಚಕ್ರೀಕೃತವಾಗುತ್ತದೆ. ಇದು ಅತಿಯಾದ ಬಡ್ಡಿ. ಹಾಗಾಗಿ ಕ್ರೆಡಿಟ್‌ ಕಾರ್ಡಿನಲ್ಲಿ ಯಾವತ್ತೂ ಸಾಲ ಇಟ್ಟುಕೊಳ್ಳಬೇಡಿ.

ಅದೂ ಅಲ್ಲದೆ, ಪೂರ್ಣ ಮೊತ್ತ ಕಟ್ಟದೆ ಬಾಕಿ ಇಟ್ಟುಕೊಂಡಲ್ಲಿ ಮುಂದಿನ ಅವಧಿಯಲ್ಲಿ ಮಾಡಿದ ಖರೀದಿಗಳ ಮೇಲೂ ಯಾವುದೇ ಬಡ್ಡಿಯ ಗ್ರೇಸ್‌ ಪೀರಿಯಡ್‌ ಇಲ್ಲದೆ ಅದೇ ದಿನಾಂಕಗಳಿಂದ ಪೂರ್ಣ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಈ ಪದ್ಧತಿ ಹಳೆಯ ಬಾಕಿಯನ್ನು ಸಂಪೂರ್ಣವಾಗಿ ತೀರಿಸುವವರೆಗೂ ಜಾರಿಯಲ್ಲಿರುತ್ತದೆ. ಇದನ್ನು ಐಸಿಐಸಿಐ ಬ್ಯಾಂಕು ನೀಡಿದ ಈ ಕೆಳಗಿನ ಉದಾಹರಣೆಯೊಂದಿಗೆ ವಿಮರ್ಶಿಸಬಹುದು. ಇತರ ಕಾರ್ಡ್‌ ಕಂಪೆನಿಗಳ ಬಡ್ಡಿದರ ವ್ಯತ್ಯಾಸವಾಗಿದ್ದರೂ ಲೆಕ್ಕಾಚಾರದ ರೀತಿ ನೀತಿಗಳು ಹೀಗೆಯೇ ಇರುತ್ತವೆ.

– ಖರೀದಿ ಏಪ್ರಿಲ್‌ 10 ರೂ 2000
– ಬಿಲ್‌ ದಿನಾಂಕ ಏಪ್ರಿಲ್‌ 15
– ಕನಿಷ್ಠ ಮೊತ್ತ ರೂ 100
– ಡ್ಯೂ ದಿನಾಂಕ ಮೇ 3

ಈ ಸಂದರ್ಭದಲ್ಲಿ ಮೇ 3 ರ ಒಳಗೆ ಕನಿಷ್ಠ ಮೊತ್ತ ಕಟ್ಟಿದರೆ ಸರಿ. ಇಲ್ಲದಿದ್ದರೆ ಲೇಟ್‌ ಶುಲ್ಕ ರೂ 400 ( ಶೇ. 100 x 30 ಆದರೆ ಮಿನಿಮಮ್‌ ರೂ 400- ಗರಿಷ್ಠ ರೂ. 700) ಮತ್ತು ಅದರ ಮೇಲಿನ ಸರ್ವಿಸ್‌ ಟಾಕ್ಸ್‌ ಶೇ.12.36ರಷ್ಟು ಅನ್ವಯವಾಗುತ್ತದೆ. ಇದು ಮುಂದಿನ ಬಿಲ್‌ನಲ್ಲಿ ಬರುತ್ತದೆ. ಇದೀಗ ಮುಂದಿನ ವ್ಯವಹಾರಗಳನ್ನು ನೋಡೋಣ:
– ಖರೀದಿ ಮೇ 7 ರೂ.800
– ಕಾರ್ಡ್‌ ಖಾತೆಗೆ ಪಾವತಿ ಮೇ 10 ರೂ 1500

ಈಗ ಮೇ 15 ರಂದು ಬಿಡುಗಡೆಯಾಗುವ ಎರಡನೆಯ ಸ್ಟೇಟ್‌ಮೆಂಟಿನಲ್ಲಿ ಬಡ್ಡಿ ಲೆಕ್ಕ ಈ ರೀತಿ ಇರುತ್ತದೆ:

ವಾರ್ಷಿಕ ಬಡ್ಡಿ  40.80% 
– ರೂ 2000 ದ ಮೇಲೆ 30 ದಿನಗಳ (ಏಪ್ರಿಲ್‌10-ಮೇ 9) ಬಡ್ಡಿ ರೂ 67.07
– ರೂ 500 ರ ಮೇಲೆ 6 ದಿನಗಳ (ಮೇ10-ಮೇ15)        ಬಡ್ಡಿ ರೂ 3.35
– ರೂ 800 ರ ಮೇಲೆ 9 ದಿನಗಳ (ಮೇ7-ಮೇ15) ಬಡ್ಡಿ    ರೂ 8.05
ಒಟ್ಟು ಬಡ್ಡಿ ರೂ 78.47
ಮಿನಿಮಮ್‌ ಡ್ಯೂ ಕಟ್ಟಿದರೆ ಲೇಟ್‌ ಫೀಸ್‌+ಸರ್ವಿಸ್‌ ಟಾಕ್ಸ್‌ ಇರುವುದಿಲ್ಲ. ಆದರೆ ಬಡ್ಡಿ ಲಾಗೂ ಆಗುತ್ತದೆ. ಹಾಗಾಗಿ, ಕ್ರೆಡಿಟ್‌ ಕಾರ್ಡಿನ ಮೇಲೆ ಅತಿಯಾದ ಪ್ರತಿ ಮಾಸವೂ ಚಕ್ರೀಕೃತಗೊಳ್ಳುವ ಅತಿ ಜಾಸ್ತಿ (ಶೇ.25-45ರಷ್ಟು ವಾರ್ಷಿಕ) ಬಡ್ಡಿ ದರ ಇದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಮಿನಿಮಮ್‌ ಡ್ನೂ ಮಾತ್ರ ಕಟ್ಟಿದರೆ ಲೇಟ್‌ ಫೀಸ್‌ ಮಾತ್ರ ಉಳಿದೀತು. ಬಡ್ಡಿ ಕೊಡಲೇ ಬೇಕು. ಅಲ್ಲದೆ ಹೊಸ ಖರೀದಿಗಳಿಗೆ ಬಡ್ಡಿರಹಿತ ಗ್ರೇಸ್‌ ಅವಧಿ ಇರುವುದಿಲ್ಲ. ಬಡ್ಡಿಯಿಂದ ತಪ್ಪಿಸಿಕೊಳ್ಳುವ ಏಕೈಕ ಉಪಾಯವೆಂದರೆ ಸಾಲ ತೆಗೆದುಕೊಳ್ಳದೇ ಇರುವುದು (ಬಾಕಿ ಉಳಿಸಿಕೊಳ್ಳದೇ ಇರುವುದು). ಕಾಲ ಕಾಲಕ್ಕೆ ತಕ್ಕಂತೆ ಪೂರ್ತಿಯಾಗಿ ಡ್ಯೂ ಮೊತ್ತವನ್ನು ಕಟ್ಟಿ ಬಿಡಬೇಕು. ಇಲ್ಲದಿದ್ದರೆ ಕ್ರೆಡಿಟ್‌ ಕಾರ್ಡ್‌ ಒಂದು ಸೌಲಭ್ಯ ಬಿಟ್ಟು ಒಂದು ದೊಡ್ಡ ಪೀಡೆಯಾಗಿ ಪರಿವರ್ತನೆಗೊಂಡೀತು. 

ಕ್ರೆಡಿಟ್‌ ಸೈಕಲ್‌, ಬಡ್ಡಿ ಹೇಗೆ ?
ಒಂದು ಕ್ರೆಡಿಟ್‌ ಕಾರ್ಡ್‌ ಕೊಂಡು ಅದನ್ನು ಬೇಕಾದಂತೆ ಉಜ್ಜಿ ಸರಕುಗಳ ಖರೀದಿಗಾಗಿ ಸಾಲ ಮಾಡಿಕೊಂಡರೆ ಅದರ ಮರು ಪಾವತಿ ಹೇಗೆ? ಬಡ್ಡಿ ಲೆಕ್ಕ ಹೇಗೆ? ಇದು ಬಹಳ ಮುಖ್ಯ ವಿಚಾರ.  ಒಂದು ತಿಂಗಳ ಅವಧಿಯ ಒಂದು ಮಂತ್ಲಿ ಕ್ರೆಡಿಟ್‌ ಸೈಕಲ್‌ ಅಥವಾ ಮಾಸಿಕ ಸಾಲದ ಅವಧಿಯನ್ನು ತೆಗೆದುಕೊಳ್ಳಿ. ಉದಾ: ಪ್ರತಿ ತಿಂಗಳ 16 ರಿಂದ ಮುಂದಿನ ತಿಂಗಳ 15 ರವರೆಗೆ ಎಂದಿಟ್ಟುಕೊಳ್ಳಿ. ಈ ಮಾಸಿಕ ಅವಧಿಯ ಎಲ್ಲಾ ವ್ಯವಹಾರಗಳನ್ನೂ 15 ನೆಯ ದಿನಾಂಕದ ಸ್ಟೇಟ್‌ಮೆಂಟ್‌ನಲ್ಲಿ ತುಂಬುತ್ತಾರೆ. ಈ ಸ್ಟೇಟ್‌ಮೆಂಟ್‌ ಪ್ರಕಾರ ಆಗುವ ಬಾಕಿ ಮೊತ್ತವನ್ನು (ಡ್ಯೂ ಅಮೌಂಟ್‌) ಮುಂದಿನ ತಿಂಗಳ 3 ನೆಯ ತಾರೀಕಿನ ಒಳಗಾಗಿ ಪಾವತಿ ಮಾಡತಕ್ಕದ್ದು. ಇದು ಪಾವತಿಯ ನಿಯಮ. ಅದರೊಳಗೆ ಎಲ್ಲಾ ಮೊತ್ತ ಪಾವತಿ ಮಾಡಿದರೆ ಯಾವುದೇ ಬಡ್ಡಿಯೂ ಇರುವುದಿಲ್ಲ. ಅಂದರೆ ನಿಮಗೆ ಸುಮಾರು 18 ರಿಂದ 48 ದಿನಗಳ ಬಡ್ಡಿರಹಿತ ಸಾಲ ಸೌಲಭ್ಯ ಕ್ರೆಡಿಟ್‌ ಕಾರ್ಡ್‌ಗಳಲ್ಲಿ ದೊರಕುತ್ತದೆ. ಇದೇ ರೀತಿಯ ಸಾಲದ ಚಕ್ರ ಪ್ರತಿ ಮಾಸವೂ ಮುಂದುವರಿಯುತ್ತಾ ಹೋಗುತ್ತದೆ. ಬಡ್ಡಿ ದರ ಸಾಮಾನ್ಯವಾಗಿ ಬ್ಯಾಂಕ್‌ ಮತ್ತು ಕಾರ್ಡಿನ ಪ್ರಭೇದವನ್ನು ಹೊಂದಿಕೊಂಡು ಸುಮಾರು ಶೇ.25-45ರಷ್ಟು ವಾರ್ಷಿಕ ಇರಬಹುದು. ಈ ಬಡ್ಡಿಯನ್ನು ಸಾಲದ ಮೊತ್ತದ ಮೇಲೆ ದೈನಂದಿನ ಲೆಕ್ಕದಲ್ಲಿ ಹೇರಲಾಗುತ್ತದೆ. ಹಾಗೂ ಪ್ರತೀ ಮಾಸದ ಅವಧಿಯ ಕೊನೆಗೂ ಇದು ಚಕ್ರೀಕೃತವಾಗುತ್ತದೆ.

ಇಎಂಐ ಪಾವತಿ ಮಾಡೋದೂ ಒಂದು ಕಲೆ
ಒಂದು ಕ್ರೆಡಿಟ್‌ ಕಾರ್ಡ್‌ ಸೌಲಭ್ಯ ಅನನ್ಯವಾದುದು ಹಾಗೂ ಅದು ಸುಮಾರು 50 ದಿನಗಳ ಫ್ರೀ ಸಾಲವನ್ನು ನೀಡುತ್ತದೆ ಎನ್ನುವುದನ್ನು ಅರಿತುಕೊಂಡಿದ್ದೇವೆ. ಅಲ್ಲದೆ ಆ ಅವಧಿ ದಾಟಿ ಸಮಯಕ್ಕೆ ಸರಿಯಾಗಿ ದುಡ್ಡು ಪಾವತಿ ಮಾಡದಿದ್ದಲ್ಲಿ ಸುಮಾರು ಮಾಸಿಕ ಸುಮಾರು ಶೇ.3-3.5 ಅಂದರೆ ವಾರ್ಷಿಕ ಶೇ.36-44ರಷ್ಟು ಬಡ್ಡಿಯ ಹೊಣೆ ತಲೆ ಮೇಲೆ ಬೀಳುತ್ತದೆ ಅನ್ನುವುದನ್ನೂ ತಿಳಿದುಕೊಂಡಿದ್ದೇವೆ. ಕೆಲವೊಂದು ಸಂದರ್ಭಗಳಲ್ಲಿ ಕ್ರೆಡಿಟ್‌ ಕಾರ್ಡ್‌ ಸಂಸ್ಥೆಗಳು ಕಾರ್ಡ್‌ ಸಾಲವನ್ನು ಇಎಂಐ ಆಗಿ ಪರಿವರ್ತಿಸುವ ಸೌಲಭ್ಯವನ್ನೂ ನೀಡುತ್ತದೆ. ಇದರಿಂದ ಬಡ್ಡಿದರದಲ್ಲಿ ಕಡಿತವನ್ನು ಪಡೆಯಬಹುದು. ಕ್ರೆಡಿಟ್‌ ಕಾರ್ಡ್‌ ಪಾವತಿಯನ್ನು ಸಮಯಕ್ಕೆ ಸರಿಯಾಗಿ ಮಾಡಲಾರದ ಸಂದರ್ಭದಲ್ಲಿ ಇಂತಹ ಇಎಂಐ ಸೌಲಭ್ಯಕ್ಕಾಗಿ ಕಾರ್ಡ್‌ ಸಂಸ್ಥೆಯನ್ನು ಕೇಳಿಕೊಳ್ಳಿ. ಮೊತ್ತವನ್ನು ಹೊಂದಿಕೊಂಡು ಬಹುತೇಕ 6, 12 ಅಥವಾ 24 ತಿಂಗಳುಗಳ ಅವಧಿಯ ಇಎಂಐ ಲಭಿಸೀತು. ಅಲ್ಲದೆ ಈ ಇಎಂಐ ಸೌಲಭ್ಯಕ್ಕೆ ಕ್ರೆಡಿಟ್‌ ಕಾರ್ಡ್‌ ಸಾಲದಷ್ಟು ಬಡ್ಡಿ ಇರುವುದಿಲ್ಲ. ಸುಲಭದ ಬಡ್ಡಿ ದರಗಳಲ್ಲಿ ಸಂದರ್ಭಾನುಸಾರ ಈ ಸೌಲಭ್ಯ ಲಭಿಸೀತು. 

ಅದಲ್ಲದೆ ಖರೀದಿಯ ವೇಳೆ ಹಲವಾರು ಮಳಿಗೆಗಳು ಕ್ರೆಡಿಟ್‌ ಕಾರ್ಡ್‌ ಸಂಸ್ಥೆಗಳೊಂದಿಗೆ ಯಾ ಬ್ಯಾಂಕೇತರ ವಿತ್ತೀಯ ಸಂಸ್ಥೆಗಳೊಂದಿಗೆ (ಎನ್‌ಬಿಎಫ್ಸಿ) ಒಡಂಬಡಿಕೆ ಮಾಡಿಕೊಂಡು ಸುಲಭ ಕಂತಿನ ಇಎಂಐಗಳ ಮೂಲಕ ತಮ್ಮ ಸರಕುಗಳನ್ನು ಮಾರುವ ಪ್ರಯತ್ನವನ್ನು ಮಾಡುತ್ತಾ ಇರುತ್ತವೆ. ಒಂದಿಷ್ಟು ಡೌನ್‌ ಪೇಮೆಂಟ್‌ ಹಾಗೂ ಉಳಿದ ಮೊತ್ತವನ್ನು ಸುಲಭ ಇಎಂಐ ಕಂತುಗಳಾಗಿ ಪರಿವರ್ತಿಸುವ ಸ್ಕೀಮುಗಳು ಇಂದು ಜನಪ್ರಿಯವಾಗಿವೆ. ವಾಶಿಂಗ್‌ ಮೆಶೀನ್‌, ಫಿಜ್‌ ಇತ್ಯಾದಿ ವೈಟ್‌ ಗೂಡ್ಸ್‌ ಮಾರಾಟಗಾರರು ಬಹುತೇಕ ಇಂತಹ ಯೋಜನೆಗಳನ್ನು ಹಾಕಿ ಭರ್ಜರಿ ಪ್ರಚಾರ ಮಾಡುವುದನ್ನು ನಾವುಗಳು ನೋಡುತ್ತಿರುತ್ತೇವೆ. ಇಂತಹ ಪ್ರಚಾರಗಳನ್ನು ತುಸು ಆಳವಾಗಿ ಅಧ್ಯಯನ ಮಾಡುವುದು ಸೂಕ್ತ. ಕೆಲವೊಮ್ಮೆ ಬಡ್ಡಿ ಇಲ್ಲದಿದ್ದರೂ ಸಂಸ್ಕರಣಾ ಶುಲ್ಕವೆಂದು ಒಂದಿಷ್ಟು ದುಡ್ಡು ತೆಗೆದು ಕೊಳ್ಳುವುದನ್ನು ಕಾಣಬಹುದು ಅಥವಾ ಇನ್ನೂ ಕೆಲವೊಮ್ಮೆ ಇಂತಹ ಸ್ಕೀಮುಗಳನ್ನು ಪಡಕೊಂಡರೆ ಇತರರಿಗೆ ನೀಡುವ ಡಿಸ್ಕೌಂಟ್‌ ಅನ್ನು ನೀವು ಪಡೆಯಲಾರಿರಿ. ಅಂದರೆ ಶೂನ್ಯ ಬಡ್ಡಿ ದರ ಇತ್ಯಾದಿ ಆಕರ್ಷಕ ಕೊಡುಗೆ ಡಿಸ್ಕೌಂಟಿನ ಬದಲಿಗೆ ಮಾತ್ರವೇ ನೀಡಲಾಗಿದೆ ಎಂದರ್ಥ. ಪರೀಶೀಲನೆಯ ಬಳಿಕ ನೈಜವಾಗಿಯೂ ಕಡಿಮೆ ಬಡ್ಡಿದರದಲ್ಲಿ ಉತ್ತಮ ಸಾಲ ಲಭಿಸುವುದಾದರೆ ಅವನ್ನು ಪಡೆದುಕೊಳ್ಳಬಹುದು. ಸುಮಾರಾಗಿ ಬ್ಯಾಂಕುಗಳು ಇಂತಹ ಸ್ಕೀಮುಗಳಲ್ಲಿ 12-15% ಬಡ್ಡಿ ದರಗಳನ್ನು ವಿಧಿಸುವುದನ್ನು ಕಾಣಬಹುದು. ಜೊತೆಗೆ ಇಂತಹ ಇಎಂಐ ಸಾಲಗಳನ್ನು ಮುಂಪಾವತಿ ಮಾಡಲು ಯಾವುದಾದರೂ ದಂಡದೆಯೇ ಎಂದು ತಿಳಿದುಕೊಳ್ಳಿ. ಕ್ರೆಡಿಟ್‌ ಕಾರ್ಡ್‌ ಸಾಲಗಳು ಫ್ಲೋ ರೇಟ್‌ ಗೃಹಸಾಲಗಳಂತಲ್ಲ. ಇಲ್ಲಿ ಪೆನಾಲ್ಟಿಗಳು ಇರುತ್ತವೆ. ಹಲವು ಬ್ಯಾಂಕುಗಳು ಶೇ.2-4 ಪೆನಾಲ್ಟಿ ವಿಧಿಸುವುದನ್ನು ಕಾಣಬಹುದು. ಅಂಥ ಸಂದರ್ಭಗಳಲ್ಲಿಬಾಕಿ ಉಳಿದ ಬಡ್ಡಿ ಮೊತ್ತ ಹಾಗೂ ದಂಡದ ಮೊತ್ತವನ್ನು ತುಲನೆಮಾಡಿ ನೋಡಿ ಮುಂಪಾವತಿ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.  

ಬೇರೆ ಸಾಲಗಳಿಂದ ತುಂಬಿ
ಕ್ರೆಡಿಟ್‌ ಕಾರ್ಡ್‌ ಸಾಲ ಅತ್ಯಂತ ದುಬಾರಿ ಸಾಲವಾದ ಕಾರಣ, ಆ ಸಾಲಕ್ಕೆ ಬೀಳುವ ಬದಲು ಬೇರೆ ಸಸ್ತಾ ಸಾಲಗಳಿಂದ ಅದನ್ನು ತುಂಬಿ ಬಿಡುವುದು ಒಳ್ಳೆಯದು. ಎಲ್ಲೈಸಿ ಸಾಲ, ಪ್ರಾಪರ್ಟಿ ಸಾಲ ಅಥವಾ ಪರ್ಸನಲ್‌ ಸಾಲಗಳೂ ಸಹ ಕ್ರೆಡಿಟ್‌ ಕಾರ್ಡ್‌ ಸಾಲಗಳಿಗಿಂತ ಕಡಿಮೆ ಬಡ್ಡಿಯದ್ದಾಗಿರುತ್ತದೆ. ಯಾವುದಾದರೂ ಎಫ್ಡಿ ಅಥವಾ ಇತರ ಡೆಪಾಸಿಟ್‌ಗಳಿದ್ದರೆ ಅವನ್ನು ಹಿಂಪಡೆದು ಕ್ರೆಡಿಟ್‌ ಕಾರ್ಡ್‌ ಸಾಲವನ್ನು ತುಂಬುವುದು ಲೇಸು.

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next