Advertisement

ಸ್ವಯಂಭೂ ಮಹಾಲಿಂಗೇಶ್ವರ : ಭವ್ಯ ದೇಗುಲದೊಳಗೆ ದಿವ್ಯ ಮೂರುತಿ

07:15 AM Apr 17, 2018 | Karthik A |

ದಿನ ಬೆಳಗಾದರೆ ಭಕ್ತರು ಭಕ್ತಿಯಿಂದ ನೆನೆಯುವ ಪುತ್ತೂರು ಸೀಮೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸ ಹಾಗೂ ಪೌರಾಣಿಕ ಹಿನ್ನೆಲೆ ಇದೆ. ದೇಗುಲದ ಕಲಾತ್ಮಕ ಕೆತ್ತನೆಗಳೂ ಅವರ್ಣನೀಯ. ನಂಬಿಕೆಯ ಶಕ್ತಿ ಅಮೋಘ. ಮಹಾಲಿಂಗೇಶ್ವರನ್ನು ಭಕ್ತಿಪೂರ್ವಕ ಪೂಜಿಸಿ ಬಂದಿರುವ ಭಕ್ತರೆಲ್ಲರೂ ಒಳಿತಿನ ಜತೆಗೆ ಅಭಿವೃದ್ಧಿ ಕಂಡಿದ್ದಾರೆ. ಸ್ವಯಂಭೂ ಎನಿಸಿ ಮೆರೆಯುವ ಶ್ರೀ ಮಹಾಲಿಂಗೇಶ್ವರನು ದೇವಸ್ಥಾನದ ಗರ್ಭಗೃಹದಲ್ಲಿ ಲಿಂಗರೂಪದಲ್ಲಿ ವಿರಾಜಮಾನವಾಗಿದ್ದಾನೆ. ಒಳಾಂಗಣದಲ್ಲಿ ಶ್ರೀ ಸುಬ್ರಹ್ಮಣ್ಯ ಗುಡಿ, ಶ್ರೀ ಗಣಪತಿ ಗುಡಿ, ಶ್ರೀ ಶಾಸ್ತವು ಗುಡಿ, ಶ್ರೀದೇವಿ ಗುಡಿ, ದೈವಗಳ ಗುಡಿಗಳಿವೆ. ಒಳಾಂಗಣದ ದಕ್ಷಿಣದಲ್ಲಿ ಸಪ್ತ ಮಾತೃಕೆಯರನ್ನು ಹಾಗೂ ಗಣಪತಿ ಮತ್ತು ವೀರಭದ್ರನನ್ನು ಒಳಾಂಗಣದ ಸುತ್ತಲೂ ಅಷ್ಟದಿಕ್ಪಾಲಕರನ್ನು ಸ್ಥಾಪಿಸಲಾಗಿದೆ. ಈಶಾನ್ಯದಲ್ಲಿ ಚೆಂಡೇಶ್ವರ, ಕ್ಷೇತ್ರಪಾಲಕನನ್ನು ಹಾಗೂ ನಂದಿಯ ಹಿಂಭಾಗದಲ್ಲಿ ಬಲಿಕಲ್ಲು ಸ್ಥಾಪಿಸಲಾಗಿದೆ. ದೇವಸ್ಥಾನದ ಒಳಾಂಗಣದ ದಕ್ಷಿಣದಲ್ಲಿ ಬ್ರಾಹ್ಮೀ, ಮಾಹೇಶ್ವರಿ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣಿ, ಚಾಮುಂಡಾ ಎಂಬ ಸಪ್ತ ಮಾತೃಕೆಯರನ್ನು, ಗಣಪತಿ ಮತ್ತು ವೀರಭದ್ರನನ್ನು ಒಂದೇ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿದೆ.

Advertisement

ಆಕರ್ಷಕ ಕೆತ್ತನೆ


ಪುನರ್‌ ನಿರ್ಮಾಣಗೊಂಡು 2013ರಲ್ಲಿ ವೈಭವದ ಬ್ರಹ್ಮಕಲಶೋತ್ಸವಕ್ಕೆ ಸಾಕ್ಷಿಯಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಹೊರಾಂಗಣದ ಸುತ್ತಲ ಕೆಳ ಭಾಗದಲ್ಲಿ ಧರ್ಮದ ಸಂಕೇತವಾಗಿ 192 ನಂದಿಯನ್ನೂ, ಮೇಲ್ಭಾಗದಲ್ಲಿ ಶೌರ್ಯದ ಸಂಕೇತವಾಗಿ 108 ಸಿಂಹಗಳನ್ನು ಶಿಲೆಯಲ್ಲಿ ಕೆತ್ತಲಾಗಿದೆ. ಅದರ ಮೇಲ್ಭಾಗದಲ್ಲಿ ಸ್ಥಳ ಪುರಾಣ ಹಾಗೂ ಶಿವ ಪುರಾಣದ ವರ್ಣನೆಯನ್ನು ಸುಂದರವಾಗಿ ಕಾಷ್ಟಶಿಲ್ಪದಲ್ಲಿ ಮಾಡಲಾಗಿದೆ.

‘ಸ್ವಯಂ ಭೂ’ ಲಕ್ಷಣಗಳಿರುವ ದೇವಾಲಯವಾದ್ದರಿಂದ ಈ ಬಾರಿ ಜೀರ್ಣೋದ್ಧಾರ ಮಾಡುವಾಗ ‘ಪಂಜರ’ ಪದ್ಧತಿಯನ್ನು ಅನುಸರಿಸಲಾಗಿದೆ. (ಶ್ರೀ ಕ್ಷೇತ್ರ ಧರ್ಮಸ್ಥಳದ ಎರಡು ಗರ್ಭಗೃಹಗಳು, ಬಪ್ಪನಾಡು, ಎಲ್ಲೂರು, ನಳೀಲು, ವಳಲಂಬೆಯಲ್ಲಿ ಇದ್ದಂತೆ) ಎಂದು ವಾಸ್ತು ತಜ್ಞ ಎಸ್‌.ಎಂ. ಪ್ರಸಾದ್‌ ಮುನಿಯಂಗಳ ಹೇಳುತ್ತಾರೆ. ಮಹಾಲಿಂಗೇಶ್ವರ ದೇವಾಲಯವು ಮಹಾಪ್ರಾಸಾದವಾಗಿದ್ದು, ದ್ವಿತಲವನ್ನು ಹೊಂದಿದೆ (15 ಕೋಲು 10 ಅಂಗುಲದಿಂದ ಹೆಚ್ಚು ಹೊಂದಿರುವುದು – ಮಹಾಪ್ರಾಸಾದ, 2 ಕೋಲು 8 ಅಂಗುಲ ವ್ಯಾಸದಿಂದ 15 ಕೋಲು 10 ಅಂಗುಲದವರೆಗೆ ಅಲ್ಪ ಪ್ರಾಸಾದವೂ ಆಗಿರುತ್ತದೆ). ಆಕಾರದಲ್ಲಿ ಗಜಪೃಷ್ಟ ಪ್ರಾಸಾದವಾಗಿರುವುದು (ದೇವಾಲಯಗಳ ಆಕಾರ -ವೃತ್ತ, ದೀರ್ಘ‌ವೃತ್ತ, ದೀರ್ಘ‌ ಚತುರಶ್ರ; ಷಡಶ್ರ; ಅಷ್ಟಾಶ್ರ, ಗಜಪೃಷ್ಟ; ಚತುರಶ್ರ) ಪ್ರಾಸಾದವು ಮೂರು ಗೋಡೆ ಹಾಗೂ ದೀಪದಳಿಯನ್ನು ಹೊಂದಿದ್ದು, ಷಡಂಗಗಳಿಂದ ಕೂಡಿದೆ. ಹಳೆಯ ಪ್ರಾಸಾದವನ್ನು ತೆಗೆದು ಒಂದು ಪುರುಷ ಪ್ರಮಾಣ ಆಳದವರೆಗೆ ಹಳೆಯ ಮಣ್ಣನ್ನು ತೆಗೆದು ಶಿಲಾಕಲ್ಲುಗಳನ್ನು ತುಂಬಿಸಿ, ಉತ್ತಮವಾದ ಪ್ರತಿಕ್ರಮ ಅಧಿಷ್ಠಾನವನ್ನು ರಚಿಸಿ ಅದರ ಮೇಲೆ ದೀಪದಳಿಯನ್ನು ರಚಿಸಲಾಗಿದೆ. ಅನಂತರ ಮೂರು ಭಿತ್ತಿಗಳಲ್ಲಿ ಸುಂದರವಾದ ಕೆತ್ತನೆಗಳನ್ನು ಹಿಂದಿನಂತೆ ರಚಿಸಲಾಗಿದೆ.


ಅಧಿಷ್ಠಾನದ ಆರಂಭದ ಜಗತಿಯಲ್ಲಿ ಧರ್ಮದ ಸಂಕೇತವೂ ಪರಶಿವನ ವಾಹನವಾದ ನಂದಿಯನ್ನು ಕೆತ್ತಲಾಗಿದೆ. ಧರ್ಮದ ರಕ್ಷಣೆಗೆ ನಾವು ಶೌರ್ಯವಂತರಾಗಬೇಕೆಂಬ ಸಂಕಲ್ಪದಲ್ಲಿ ಮೇಲಿನ ಪ್ರತಿಯಲ್ಲಿ ಶೌರ್ಯದ ಸಂಕೇತವಾಗಿರುವ ಸಿಂಹವನ್ನು ಕೆತ್ತಲಾಗಿದೆ. ಮೇಲೆ ದಳಿಯಲ್ಲಿ ಪುತ್ತೂರು ಕ್ಷೇತ್ರಪುರಾಣ ಹಾಗೂ ತ್ರಿಶೂಲ ಕಂಬಗಳು ಮೂಲೆ ಕಂಬಗಳಲ್ಲಿ ಚೆಂಡುಗಳು ತಿರುಗುವಂತಹ ಶಿಲ್ಪಿಗಳ ಕೈ ಚಳಕ, ಪ್ರಕೃತಿಯಲ್ಲಿ ಎಲ್ಲದರಲ್ಲೂ ಈಶ್ವರನ ಅಸ್ತಿತ್ವ ಸಾರುವ ಉದ್ದೇಶದಿಂದ ಪುಷ್ಪಗಳಲ್ಲಿ, ಪತ್ರಗಳಲ್ಲಿ ಲಿಂಗವನ್ನು ಕೆತ್ತಲಾಗಿದೆ. ದ್ವಿತಲದಲ್ಲಿ ಎಲ್ಲ ಭಿತ್ತಿ ಅಲಂಕಾರಗಳಾದ ಶಾಲಾ, ಕೋಷ್ಟ, ನಾಸಿಕಾ, ಪಂಜರಗಳನ್ನು ರಚಿಸಲಾಗಿದೆ. ಇಲ್ಲಿ ಎರಡು ದೇವ ಕೋಷ್ಟಕಗಳಿದ್ದು ನಟರಾಜ ಹಾಗೂ ದಕ್ಷಿಣಾಮೂರ್ತಿ ವಿಗ್ರಹಗಳನ್ನು ಕೆತ್ತಲಾಗಿದೆ. ಪರಿವಾರ ದೇವತಾ ಗುಡಿಗಳು, ನಂದಿ ಮಂಟಪದಲ್ಲಿನ ದಳಿ ಹಾಗೂ ಕಲಾತ್ಮಕವಾದ ನಕ್ಷತ್ರ ಮುಚ್ಚಿಗೆ ಕಲ್ಲಿನ ಸರಪಳಿ, ಮಹಾಬಲಿ ಪೀಠ, ಧ್ವಜಸ್ತಂಭ ಗೋಪುರದ ಮುಖಾಯಾಮದ ಸ್ತಂಭದಲ್ಲಿನ ಸಿಂಹಗಳ ಬಾಯಲ್ಲೂ ತಿರುಗುವಂತಹ ಚೆಂಡುಗಳು ಮೂಡಿ ಬಂದಿದೆ.


ಶಿಷ್ಟ ಸಂಪ್ರದಾಯವೇ ಪುತ್ತೂರು ಜಾತ್ರೆಯ ವಿಶೇಷ

ಸೀಮೆಯ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯಲ್ಲಿ ಪೂರ್ವಶಿಷ್ಟ ಸಂಪ್ರದಾಯಗಳ ಆಚರಣೆಯೇ ಪ್ರಮುಖ ವಿಶೇಷ.

Advertisement

ಬಟ್ಟಲು ಕಾಣಿಕೆ ಒಮ್ಮೆ ಮಾತ್ರ
ಬ್ರಹ್ಮರಥೋತ್ಸವದ ಎ. 17ರಂದು ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ ಸೇವೆಯ ಬಳಿಕ ಭಕ್ತರಿಂದ ಬಟ್ಟಲು ಕಾಣಿಕೆ ಸಮರ್ಪಣೆ ನಡೆಯುತ್ತದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ದೇವರಿಗೆ ಬಟ್ಟಲು ಕಾಣಿಕೆ ಸಮರ್ಪಿಸುವ ಸಂಪ್ರದಾಯ ಇಲ್ಲಿದೆ. ದರ್ಶನ ಬಲಿಯೊಂದಿಗೆ ದೇವರ ಜತೆ ಇರುವ ಬಲ್ನಾಡು ದಂಡನಾಯಕ ಉಳ್ಳಾಳ್ತಿ ಭಂಡಾರದ ಉಳ್ಳಾಳ್ತಿ ದೈವದ ಪಾತ್ರಿ ಅಪ್ಪಣೆ ನೀಡಿದ ಬಳಿಕವಷ್ಟೇ ಬಟ್ಟಲು ಕಾಣಿಕೆ ಸಮರ್ಪಣೆಯಾಗಬೇಕು.

ಭೂತ ಬಲಿ ನೋಡಲು ಅವಕಾಶವಿಲ್ಲ
ಎ. 17ರಂದು ತಡರಾತ್ರಿ ಶ್ರೀ ದೇವಾಲಯದ ಒಳಾಂಗಣದಲ್ಲಿ ನಡೆಯುವ ಶ್ರೀ ಭೂತ ಬಲಿಯನ್ನು ದೇವರ ಸೇವಕರ ಹೊರತು ಯಾರೂ ನೋಡಬಾರದು ಎಂಬ ಶಿಷ್ಟ ಪದ್ಧತಿ ಇಲ್ಲಿದೆ. ಭೂತ ಬಲಿ ಮುಗಿಯದೇ ದೇವರ ಶಯನೋತ್ಸವಕ್ಕೆ ತೆರಳುವಂತಿಲ್ಲ. ಭೇರಿ ಪೂಜೆ ಮತ್ತು ಭಕ್ತರು ನೋಡಬಾರದ ಭೂತ ಬಲಿ ನಡೆಯುವುದು ಈ ದೇವಾಲಯದಲ್ಲಿ ಮಾತ್ರ.

ಪುತ್ತೂರು ಜಾತ್ರೆ
ಪೂರ್ವಶಿಷ್ಟ ಸಂಪ್ರದಾಯದಂತೆ ವರ್ಷಂಪ್ರತಿ ಎ. 1ರಂದು ಗೊನೆ ಮುಹೂರ್ತ ನಡೆದು ಎ. 10ರಂದು ಧ್ವಜಾರೋಹಣ, ಎ. 17ರಂದು ಬ್ರಹ್ಮರಥೋತ್ಸವ, ಎ.18ರಂದು ವೀರಮಂಗಲ ಕುಮಾರಧಾರಾ ನದಿಗೆ ಅವಭೃಥ ಸ್ನಾನ, ಎ. 19ರಂದು ಮುಂಜಾನೆ ಧ್ವಜಾವರೋಹಣ ಕಾರ್ಯಕ್ರಮಗಳೊಂದಿಗೆ ನಡೆಯುವ ಪುತ್ತೂರು ಜಾತ್ರೆ ಹತ್ತೂರುಗಳಲ್ಲಿ ಪ್ರಸಿದ್ಧಿ.

ಸೀಮೆಗೆ ಒಡತಿ ಉಳ್ಳಾಲ್ತಿ ತಾಯಿ
ಮಲ್ಲಿಗೆ ಪ್ರಿಯೆ ಉಳ್ಳಾಲ್ತಿ ಪುತ್ತೂರು ಸೀಮೆಗೆ ತಾಯಿ. ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಎ. 16ರಂದು ದಂಡನಾಯಕ, ಮಲರಾಯ, ಕಾಳರಾಹು ಜತೆಗೆ ಉಳ್ಳಾಲ್ತಿ ಭಂಡಾರವೇರಿ ಬರುತ್ತಾಳೆ. ಈ ದಿನ ಪುತ್ತೂರು ಪೇಟೆ ತುಂಬಾ ಮಲ್ಲಿಗೆಯ ಘಮ.

ಸೈನಿಕನ ದೇಶ – ಈಶ ಸೇವೆ


ದೇಶ ಸೇವೆ ಮಾಡುವ ಮನಸ್ಸು ಈಶ ಸೇವೆಗೂ ಹಾತೊರೆಯುತ್ತವೆ. ಬಂದೂಕು ಹಿಡಿಯುವ ಕೈಗಳು ದೇವರ ಪರಿಚಾರಿಕೆ ನಡೆಸುತ್ತವೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಸಂದರ್ಭ ಕೆಲಸಕ್ಕೆ ರಜೆ ಪಡೆದು, ಪರಿಚಾರಿಕೆ ನಡೆಸುವವರು ಭೂಸೇನೆಯ ಹವಾಲ್ದಾರ್‌ ಮೋಹನ್‌ದಾಸ್‌ ಟಿ. ಮೋಹನ್‌ದಾಸ್‌ ತೆಂಕಿಲದ ಕಟ್ಟತ್ತಾರು ನಿವಾಸಿ. ಅಜ್ಜ ಹಾಗೂ ಅಪ್ಪ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೆಲಸಕ್ಕಿದ್ದರು. ಮಹಾಲಿಂಗೇಶ್ವರನ ಅಂಗಳದಲ್ಲೇ ಆಟವಾಡುತ್ತಾ ಬೆಳೆದ ಮೋಹನ್‌ದಾಸ್‌. ಸೈನಿಕನಾದರೂ ದೇವರ ಸೇವೆ ಬಿಟ್ಟಿಲ್ಲ. ಇಡೀ ಕುಟುಂಬವೇ ಮಹಾಲಿಂಗೇಶ್ವರನ ಪರಿಚಾರಿಕೆ ಮಾಡುತ್ತಿದೆ. ಅಣ್ಣಂದಿರಾದ ಸೀತಾರಾಮ ಹಾಗೂ ಚಂದ್ರಶೇಖರ್‌ ಪೊಲೀಸ್‌, ಸೈನ್ಯದ ಕೆಲಸ ಬಿಟ್ಟು ದೇವರ ಸೇವೆ ಮಾಡುತ್ತಿದ್ದಾರೆ. ಸಣ್ಣ ಅಣ್ಣ ವಸಂತ, ದೇವಸ್ಥಾನದಲ್ಲಿ ಬಸವ ಸಾಕುತ್ತಿದ್ದಾರೆ. ತಮ್ಮ ಲಕ್ಷ್ಮಣ ಪರಿಚಾರಿಕೆ ನಡೆಸುತ್ತಿದ್ದಾರೆ. ಮೋಹನ್‌ದಾಸ್‌ 1996ರಿಂದ ಭೂಸೇನೆಯಲ್ಲಿದ್ದು, ಸದ್ಯ ಹವಾಲ್ದಾರ್‌ ಆಗಿ ಜಮ್ಮುವಿನ ಮಿರಾನ್‌ಸಾಬ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರ್ಷಕ್ಕೆ ಮೂರು ಸಲ ರಜೆ ಪಡೆದು ಪುತ್ತೂರಿಗೆ ಆಗಮಿಸುತ್ತಾರೆ. ಒಂದು ರಜೆ ಪುತ್ತೂರು ಜಾತ್ರೆಗೆ ಮೀಸಲು. ಬೇರೆ ಸಂದರ್ಭಗಳಲ್ಲಿ ಬಂದಾಗಲೂ ಅಣ್ಣ – ತಮ್ಮನ ಜತೆ ದೇವಸ್ಥಾನದ ಪರಿಚಾರಿಕೆ ಮಾಡುತ್ತಾರೆ.

ಸೇವೆ ನಿರಂತರ 
ಇದೇ ದೇವಸ್ಥಾನದ ಅನ್ನ ತಿಂದು ನಾವು ದೊಡ್ಡವರಾದೆವು. ಉತ್ತಮ ಕೆಲಸವೂ ಸಿಕ್ಕಿತು. ದೇವರ ಆಶೀರ್ವಾದದಿಂದ ನಾವು ಇಷ್ಟು ಎತ್ತರಕ್ಕೆ ಬೆಳೆದೆವು. ಆದ್ದರಿಂದ ದೇವಸ್ಥಾನದಲ್ಲಿ ಸೇವೆ ಮುಂದುವರಿಸುತ್ತಿದ್ದೇವೆ.
– ಮೋಹನ್‌ದಾಸ್‌ ಟಿ., ಹವಾಲ್ದಾರ್‌, ಭೂಸೇನೆ

ಪುತ್ತೂರು ಬೆಡಿ


ಎ. 17ರಂದು ನಡೆಯುವ ಸುಡುಮದ್ದು ಪ್ರದರ್ಶನ ‘ಪುತ್ತೂರು ಬೆಡಿ’ ಎಂದೇ ಪ್ರಸಿದ್ಧ.  ಎರಡು ದಶಕಗಳ ಹಿಂದೆ ಕೇವಲ 60 ಸಾವಿರ ರೂ. ಸಾಲುತ್ತಿತ್ತು. ಈಗ 6 -7 ಲಕ್ಷ ರೂ.ಗಳ ವೆಚ್ಚದಲ್ಲಿ ಅದ್ದೂರಿಯಾಗಿ ನಡೆಯುತ್ತದೆ. 15 ವರ್ಷಗಳಿಂದ ಎ. 17ರಂದು ನಡೆಯುವ ಸುಡುಮದ್ದು ಪ್ರದರ್ಶನ ಪುತ್ತೂರು ಬೆಡಿಯನ್ನು ವೀಕ್ಷಿಸಲು ಕಾಸರಗೋಡು, ಸಕಲೇಶಪುರ ಹಾಗೂ ದ.ಕ. ಜಿಲ್ಲೆಯ ವಿವಿಧ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಎ. 16ರಂದು ಬಲ್ನಾಡು ಶ್ರೀ ದಂಡನಾಯಕ – ಉಳ್ಳಾಲ್ತಿ ದೈವಗಳ ಭಂಡಾರ ದೇವಳಕ್ಕೆ ಆಗಮಿಸಿದ ಬಳಿಕ ಪುತ್ತೂರು ಜಾತ್ರೆಗದ್ದೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಯುತ್ತದೆ. ಇದನ್ನು ‘ಸಣ್ಣ ಬೆಡಿ’ ಎಂದು ಕರೆಯುತ್ತಾರೆ. ಎ. 17ರಂದು ಶ್ರೀ ಮಹಾಲಿಂಗೇಶ್ವರ ದೇವರು ಬ್ರಹ್ಮರಥಾರೋಹಣವಾದ ಬಳಿಕ ನಡೆಯುವ ಸುಡು ಪ್ರದರ್ಶನವನ್ನು ‘ದೊಡ್ಡ ಬೆಡಿ’ ಎಂದು ಕರೆಯತ್ತಾರೆ. ಎ. 16ರಂದು ನಡೆಯುವ ಸುಡುಮದ್ದು ಪ್ರದರ್ಶನ 7 ವರ್ಷಗಳ ಹಿಂದೆ ಭಕ್ತರ ಕೋರಿಕೆಯಂತೆ ಆರಂಭವಾಗಿತ್ತು.

ಮುತ್ತು ಬೆಳೆದ ಪುಷ್ಕರಣಿ


ದೇವಸ್ಥಾನದ ಪಶ್ಚಿಮ ಭಾಗದಲ್ಲಿರುವ ಕೆರೆ ಮುತ್ತು ಬೆಳೆದ ಕೆರೆ ಎಂಬ ಪ್ರತೀತಿ ಇದೆ. ಕೆರೆಯನ್ನು ಎಷ್ಟು ಆಳವಾಗಿ ತೋಡಿದರೂ ನೀರು ಸಿಗಲಿಲ್ಲ. ರಾಜನು ಕೆರೆಯ ಮಧ್ಯಭಾಗದಲ್ಲಿ ವರುಣ ದೇವರ ಕಲ್ಲಿನ ವಿಗ್ರಹ ಸ್ಥಾಪಿಸಿ ವರುಣ ಪೂಜೆ ಹಾಗೂ ಋತ್ವಿಜರಿಗೆ ಕೆರೆಯ ತಳ ಭಾಗದಲ್ಲಿ ಅನ್ನಸಂತರ್ಪಣೆ ಮಾಡಿಸಿದನು. ಭೋಜನದ ಕೊನೆಯ ಹಂತದಲ್ಲಿ ಕೆರೆಯಲ್ಲಿ ನೀರುಕ್ಕಿತು. ಊಟ ಮಾಡುತ್ತಿದ್ದ ಋತ್ವಿಜರು ಎಲೆಯನ್ನು ಬಿಟ್ಟು ಓಡಿದ್ದು, ಅನ್ನದ ಅಗಳುಗಳು ಮುತ್ತುಗಳಾದವು, ಎಲೆಯು ಅದರ ಚಿಪ್ಪಾಯಿತು ಎಂಬ ಪ್ರತೀತಿ ಇದೆ.

ಕಲ್ಲಾದ ನಂದಿ!
ಗದ್ದೆಯ ಪೈರು ತಿನ್ನುತ್ತಿದ್ದ ಬಸವನನ್ನು ರೈತರು ಓಡಿಸುತ್ತಾ ಹಿಂಗಾಲನ್ನು ಕಡಿದೇ ಬಿಟ್ಟರು. ನೋವಿನಿಂದ ಬಳಲಿದ ಬಸವ, ಮಹಾಲಿಂಗೇಶ್ವರ ದೇವರ ಎದುರು ಮಂಡಿಯೂರಿತು. ಶಿವನ ಅನುಗ್ರಹದಿಂದ ಅಲ್ಲೇ ಕಲ್ಲಾಯಿತು. ಇಂದಿಗೂ ಗರ್ಭಗುಡಿಯ ಎದುರಿನ ನಂದಿ ಮಂಟಪದಲ್ಲಿ ಹಿಂಗಾಲು ಊನಗೊಂಡ ಕಲ್ಲಿನ ಬಸವನನ್ನು ಕಾಣಬಹುದು. ತುಂಡಾದ ನಂದಿಯ ಕಾಲು ದೇವರ ಗದ್ದೆಯಲ್ಲಿ ಇಂದಿಗೂ ಕಾಣಸಿಗುತ್ತದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲೇ ಶ್ರೀ ಶಾರದಾ ಭಜನ ಮಂದಿರವೂ ಇದೆ.

ಬ್ರಹ್ಮರಥ


ಶ್ರೀ ಮಹಾಲಿಂಗೇಶ್ವರ ದೇವರಿಗೆ ಭಕ್ತ ಮುತ್ತಪ್ಪ ರೈ ಅವರು 2010ರಲ್ಲಿ ಸುಂದರವಾದ ಕಲಾತ್ಮಕ ಕೆತ್ತನೆಗಳಿರುವ 71 ಅಡಿ ಎತ್ತರದ 20 ಅಡಿ ಅಗಲದ ಬ್ರಹ್ಮರಥವನ್ನು ಸೇವಾ ರೂಪದಲ್ಲಿ ನೀಡಿದ್ದಾರೆ. ಹೊಯ್ಸಳ ಶೈಲಿ ಕಾಷ್ಟ ಶಿಲ್ಪದಲ್ಲಿರುವ ಈ ರಥವನ್ನು ನಿರ್ಮಿಸಲು ಎರಡು ವರ್ಷ ತಗುಲಿದ್ದು, 7,200 ಮಾನವ ದಿನಗಳು ಬಳಕೆಯಾಗಿವೆ. ಅನಂತರ ರಥಬೀದಿಯನ್ನು ರಚಿಸಲಾಗಿದೆ.

ನೆಚ್ಚಿನ ಬಂಟ ಅಂಙಣತ್ತಾಯ


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಂಪೂರ್ಣ ರಕ್ಷಣೆಯ ಹೊಣೆ ಹೊತ್ತು ಬಡಗು ದಿಕ್ಕಿನಲ್ಲಿ ನೆಲೆನಿಂತ ದೈವ ಅಂಙಣತ್ತಾಯ. ಪೊಸಲಕ್ಕೆತ್ತಾಯ, ಬೊಟ್ಟಿ ಜುಮಾದಿ, ಬೊಟ್ಟಿ ಪಂಜುರ್ಲಿ ಎಂಬ ಹೆಸರುಗಳಿಂದ ಕರೆಸಿಕೊಳ್ಳುವ ಈ ದೈವ, ಪುತ್ತೂರಿನ ಮಹಾಲಿಂಗೇಶ್ವರ ದೇವರ ಅಂಗಣದಲ್ಲಿ ನೆಲೆನಿಂತು ಅಂಙಣತ್ತಾಯ ಎಂಬ ಹೆಸರು ಪಡೆದುಕೊಳ್ಳುತ್ತದೆ.

ಬಲ್ಲಾಳರು ಕೇಪಾಡಿಯಲ್ಲಿ ಪುಣ್ಯಸ್ನಾನ ಮಾಡಿ ಬರುವಾಗ ದೇವಸ್ಥಾನದ ಗಂಟೆ ನಿನಾದ ಕೇಳಿಬರುತ್ತದೆ. ತನ್ನ ಊರಿನಲ್ಲಿ ದೇವರು, ದೈವಗಳು ಇಲ್ಲವಲ್ಲ ಎಂಬ ಆಲೋಚನೆ ಮನಸ್ಸಿನಲ್ಲಿ ಸುಳಿಯುತ್ತದೆ. ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆಯುತ್ತಾರೆ. ಹಿಂದಿರುಗುವಾಗ ದೇವರನ್ನು ತಲೆಯ ಮೇಲೂ, ದೈವಗಳನ್ನು ಹೆಗಲ ಮೇಲೂ ಇಟ್ಟುಕೊಂಡು ಬರುತ್ತಾರೆ. ಬೊಳ್ಳಾರ ಬಾಕಿತ್ತಿಮಾರು ಗದ್ದೆಗೆ ತಲುಪುವಾಗ, ಭತ್ತದ ಗದ್ದೆಯಲ್ಲಿ ಬಂಗಾರದ ತೆನೆ ಮೂಡಿರುತ್ತದೆ. ಸಂಜೆ ವೇಳೆ ಪುತ್ತೂರಿಗೆ ತಲುಪಿದ ಬಲ್ಲಾಳರು, ಮುತ್ತು ಬೆಳೆದ ಕೆರೆ ಬಳಿ ದೇವರನ್ನು ಇಟ್ಟು ಸ್ನಾನಕ್ಕೆ ತೆರಳುತ್ತಾರೆ. ಮೂರ್ತಿ ಅಲ್ಲೇ ಪ್ರತಿಷ್ಠೆ ಆಗಿರುತ್ತದೆ. ಆನೆ ತಂದರೂ ಕದಲುವುದಿಲ್ಲ. ಕೆರೆಯ ಬಳಿಯಲ್ಲಿ ಅಂದರೆ ದೇವಸ್ಥಾನದ ಬಡಗು ಬಾಗಿಲಲ್ಲಿ ಅಂಙಣತ್ತಾಯ ನೆಲೆ ಕಂಡುಕೊಳ್ಳುತ್ತದೆ. ಇದೇ ಜಾಗದಲ್ಲಿ ಪ್ರತಿವರ್ಷ ನೇಮ ನಡೆಯುತ್ತದೆ. ಇದರ ನೇಮ ಮಲಗಿಕೊಂಡು ಮುಕ್ತಾಯ ಆಗುತ್ತದೆ.

ಧಾರ್ಮಿಕ ಸಂಬಂಧ


ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವರಿಗೂ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನಕ್ಕೂ ನೇರ ಧಾರ್ಮಿಕ ಸಂಬಂಧವಿದೆ. ಎ. 16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ವಿವಿಧ ಬಿರುದಾವಳಿಗಳೊಂದಿಗೆ ರಾತ್ರಿ ಶ್ರೀ ದೈವಗಳ ಭಂಡಾರ ದೇವಳಕ್ಕೆ ಆಗಮಿಸುತ್ತದೆ. ದೇವಳದ ಹೊರಾಂಗಣದಲ್ಲಿ ದೇವ – ದೈವ ಭೇಟಿ ನಡೆದು ಸಾಂಪ್ರದಾಯಿಕ ನುಡಿಕಟ್ಟು ನಡೆದ ಬಳಿಕ ದೈವಗಳ ಭಂಡಾರದ ಜತೆಗೆ ಶ್ರೀ ದೇವರ ಉತ್ಸವ ನಡೆಯುತ್ತದೆ. ಎ. 17ರಂದು ಬ್ರಹ್ಮರಥೋತ್ಸವ ಮುಗಿದ ಬಳಿಕ ಶ್ರೀ ದೈವಗಳ ಭಂಡಾರವನ್ನು ಬಂಗಾರ ಕಾಯರ್‌ಕಟ್ಟೆಯ ಬಳಿ ದೇವರ ಪೇಟೆ ಸವಾರಿಯೊಂದಿಗೆ ಬೀಳ್ಕೊಡಲಾಗುತ್ತದೆ.

ರಾಜಗಾಂಭೀರ್ಯದ ರಾಜಗೋಪುರ
ತೌಳವ – ದ್ರಾವಿಡ ಸಮ್ಮಿಶ್ರಣ ಶೈಲಿಯ ರಾಜಗೋಪುರ ಪುತ್ತೂರ ಒಡೆಯನಿಗೆ ಸಮರ್ಪಣೆಯಾಗಿದೆ. 19 ಅಡಿ ಸುತ್ತಳತೆ, 47 ಅಡಿ ಎತ್ತರದ ರಾಜಗೋಪುರ, ಮೇಲ್ಮುಖವಾಗಿ ಕಿರಿದಾಗುತ್ತಾ ಸಾಗುತ್ತದೆ. 120 ಮೂರ್ತಿಗಳಿಂದ ಅಲಂಕರಿಸಲಾಗಿದೆ. ತುತ್ತತುದಿಯಲ್ಲಿ ಪಂಚಕಲಶಗಳು ಶೋಭಾಯ ಮಾನವಾಗಿವೆ. ಇಕ್ಕೆಲಗಳಲ್ಲಿ ಸೋಭಾನೆ ಮಂಟಪವಿದೆ.

ನಲ್ಕುರಿ ಸಂಪ್ರದಾಯ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ತುಳು ಪಂಚಾಂಗದಂತೆ ಹಿಂದಿನಿಂದಲೂ ನಿಗದಿತ ದಿನಗಳಂದೇ ನಡೆಯುತ್ತದೆ. ತುಳು ಧಾರ್ಮಿಕ ಸಂದರ್ಭದಲ್ಲಿ ಇದನ್ನು ನಲ್ಕುರಿ ಎಂದು ಕರೆಯಲಾಗುತ್ತದೆ. ನಲ್ಕುರಿ ಎಂದರೆ ವರ್ಷದ ನಿಗದಿತ ದಿನಗಳಂದೇ ಧಾರ್ಮಿಕ ಉತ್ಸವ ನಡೆಯುವ ಸಂಪ್ರದಾಯ ಎಂದರ್ಥ.


ವಿಶೇಷತೆಗಳು

– ಪುತ್ತೂರು ಮಹಾಲಿಂಗೇಶ್ವರ ದೇವಾಲಯ ಗಜಪೃಷ್ಠ ಆಯದ 12 ನೇ ಶತಮಾನದ ವಾಸ್ತು ಶೈಲಿಯಲ್ಲಿದೆ.

– ಬ್ರಹ್ಮರಥ ರಾಜ್ಯದಲ್ಲಿಯೇ ಅತೀ ಎತ್ತರವಾಗಿದೆ.

– 10 ಎಕ್ರೆ ವಿಶಾಲವಾದ ಮುಂಭಾಗದ ಬಯಲು ಹೊಂದಿರುವ, ಸ್ಮಶಾನದ ಮುಂದಿರುವ ಏಕೈಕ ದೇವಾಲಯ.

– 1 ಲಕ್ಷಕ್ಕೂ ಮಿಕ್ಕಿ ಜನ ಸೇರುವ ಬೃಹತ್‌ ಜಾತ್ರೆ, ರಥೋತ್ಸವ.

– ಜಿಲ್ಲೆಯಲ್ಲಿಯೇ ಪ್ರಸಿದ್ಧವಾದ ಸುಡುಮದ್ದು ಪ್ರದರ್ಶನ.

– ದಶ ದಿಕ್ಕುಗಳಿಗೆ ದೇವರ ಪೇಟೆ ಸವಾರಿ ಉತ್ಸವ ಮತ್ತು ಕಟ್ಟೆಪೂಜೆ, 13 ಕಿ.ಮೀ. ದೂರದ ವೀರಮಂಗಲಕ್ಕೆ ಅವಭೃಥ ಸವಾರಿ.

- ಬಲ್ನಾಡು ದಂಡನಾಯಕ ಉಳ್ಳಾಳ್ತಿ ದೈವಗಳ ಅಪ್ಪಣೆಯಾಗದೆ ಬಟ್ಟಲು ಕಾಣಿಕೆ ಸಮರ್ಪಣೆಯಿಲ್ಲ.

– ಅವಭೃಥ ಸವಾರಿಯಂದು ಮಾತ್ರ ತುಲಾಭಾರ ಸೇವೆ.

– ಪ್ರತಿ ಸೋಮವಾರ ದಾಖಲೆ ಸಂಖ್ಯೆಯಲ್ಲಿ ರುದ್ರಾಭಿಷೇಕ

– ಮಹಾಗಣಪತಿ ದೇವರಿಗೆ ನಿತ್ಯವೂ ಗಣಹೋಮ.

– ಮಕರ ಸಂಕ್ರಮಣದ ದಿನ ದೇವರ ಉತ್ಸವ ಮೂರ್ತಿಗೆ ವಿಜಯದ ಸಂಕೇತವಾಗಿ ಕನಕಾಭಿಷೇಕ ನಡೆಯುತ್ತದೆ.


ಪುತ್ತೂರು ನನ್ನ ತವರೂರು. ಈಗ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ವಾಸವಾಗಿದ್ದೇವೆ. ಪ್ರತಿವರ್ಷ ಪುತ್ತೂರು ಜಾತ್ರೆಗೆ ತಪ್ಪದೆ ಬರುತ್ತೇನೆ. ದೇವಸ್ಥಾನದ ಧ್ವಜಾರೋಹಣಕ್ಕೆ ಬಂದರೆ, ಧ್ವಜಾವರೋಹಣ ಮುಗಿಸಿಯೇ ಹಿಂದಿರುಗುವುದು. ಆರೋಗ್ಯ ಮೊದಲಾದ ಯಾವುದೇ ಕಷ್ಟ ಎದುರಾದಾಗಲೂ ಮಹಾಲಿಂಗೇಶ್ವರ ದೇವರನ್ನೇ ಬೇಡಿಕೊಳ್ಳುತ್ತೇವೆ.
– ಶಾಂತಾ, ಮಂಗಳೂರು ಪುತ್ತೂರು ಶ್ರೀ ಮಹಾಲಿಂಗೇಶ್ವರ 

ದೇವರನ್ನು ತುಂಬಾ ನಂಬುತ್ತೇವೆ. ಯಾವುದೇ ಕಷ್ಟ ಬಂದಾಗಲೂ ದೇವರ ಮೊರೆ ಹೋಗುತ್ತೇವೆ. ಜಾತ್ರೆಯ ದಿನಗಳಲ್ಲಿ ತಪ್ಪದೇ ಹೋಗುತ್ತೇವೆ. ತಾಯಿ ದೇವಸ್ಥಾನದಲ್ಲಿ ಕೆಲಸಕ್ಕೆ ಹೋಗುತ್ತಾರೆ.
– ಅವಿನಾಶ್‌ ಆಚಾರ್ಯ, ಜಿಡೆಕಲ್ಲು

ನಾವು ಎಲ್ಲೆ ಇದ್ದರೂ ಪುತ್ತೂರು ಜಾತ್ರೆಯನ್ನು ತಪ್ಪಿಸಿಕೊಳ್ಳುವುದಿಲ್ಲ. ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಎಂದರೆ ಅದು ಪುತ್ತೂರಿಗೇ ಹಬ್ಬ. ಪರವೂರಿನಲ್ಲೂ ಮಹಾಲಿಂಗೇಶ್ವರ ದೇವರು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಜಾತ್ರೆಯ ದಿನ ಬಂದು ಹೋಗುವವರಿದ್ದಾರೆ.
– ಶಿವಪ್ರಸಾದ್‌, ಚಂದುಕೂಡ್ಲು

ಸಂಯೋಜನೆ, ಲೇಖನ: ಗಣೇಶ ಎನ್‌., ಕಲ್ಲರ್ಪೆ / ರಾಜೇಶ್‌ ಪಟ್ಟೆ
ವಿನ್ಯಾಸ: ರಾಕೇಶ್‌ ಸುವರ್ಣ

Advertisement

Udayavani is now on Telegram. Click here to join our channel and stay updated with the latest news.

Next