Advertisement
ಉರಿ ಉರಿ ಬಿಸಿಲು ಏರಿದಾಗ, ಕೊಂಚ ದಣಿವಾರಿಸಿಕೊಳ್ಳೋಣವೆಂದು ಅಲ್ಲೇ ಇರುವ ಮಾವಿನ ಮರವೊಂದರ ನೆರಳ ಕೆಳಗೆ ಕೂತಾಗ, ಒಮ್ಮೆ “ಕಿಣಿ ಕಿಣಿ’ ಎಂದೂ, ಮತ್ತೂಮ್ಮೆ “ಪೋಂ ಪೋಂ’ ಎಂದೂ ದೂರದಿಂದ ಸ್ವರವೊಂದು ಕೇಳಿಬಂತು. ನಮ್ಮ ಕರಾವಳಿ ಕಡೆ “ಪೋಂ ಪೋಂ’ ಎಂದು ಮೀನಿನ ಗಾಡಿ ಬರೋದು, ಅದು ಬಂದಾಗ ಮೀನು ಪ್ರಿಯರು, ಬೆಕ್ಕುಗಳು- ಕೆಂಜಿರುವೆಗಳಂತೆ ಆ ಗಾಡಿಗೆ ಮುತ್ತಿಕೊಳ್ಳೋದು ಮಾಮೂಲಾದ್ದರಿಂದ ಇದ್ಯಾವ ಮೀನೋ? ನೋಡೇ ಬಿಡೋಣ ಅಂತ ಕಾಯುತ್ತಾ ಕೂತರೆ, ಎಂಥಾ ನೋಡೋದು, ದೂರದಿಂದ ಎಂ80 ಓಡಿಸಿಕೊಂಡು, ಅಜ್ಜನಂಥ ವ್ಯಕ್ತಿಯೊಬ್ಬ ಬರುತ್ತಿದ್ದ.
Related Articles
ಮೈಯಲ್ಲಿ ಬೆವರು ಧುಮುಕುತ್ತಿರುವಾಗ, ನೆತ್ತಿಗೆ ಸೂರ್ಯ ಲೇಸರ್ ಲೈಟ್ ಬಿಟ್ಟು ಸುಸ್ತು ಮಾಡುತ್ತಿರುವಾಗ, “ಅಯ್ಯಬ್ಟಾ… ಹಾಳಾದ್ ಬಿಸಿಲು…’ ಎಂದು ಬಾಯಿ ಇಡೀ ಬೇಸಿಗೆಕಾಲಕ್ಕೆ ಮಂಗಳಾರತಿ ಮಾಡುತ್ತಿರುವಾಗ, ಬಾಯಿಗೊಂದು ತಂಪಾದ ಐಸ್ ಕ್ಯಾಂಡಿ ಸಿಗಬೇಕು, ಆಹಾ ಸ್ವರ್ಗವೇ ನಾಲಗೆಯೇ ಬರುವ ಅಸಲಿ ಮಜಾ ಸಿಗೋದು ಆಗ ಮಾರಾಯ್ರೆ.
Advertisement
ಐಸ್ ಕ್ಯಾಂಡಿಯೆಂದರೆ ಅದೊಂದು ಸಿಹಿಯಲ್ಲಿ ಅದ್ದಿದ ಬರೀ ಐಸ್ ಪೀಸ್ ಅಲ್ಲ. ಐಸ್ ಕ್ಯಾಂಡಿಯೆಂದರೆ ಇಡೀ ಹೂವೇ ಮಕರಂದವಾಗಿ ಬಾಯೊಳಗಿಳಿಯುವ ಅಚ್ಚರಿ. ಹಲ್ಲನ್ನು ಜುಮ್ಮೆನ್ನಿಸಿ, ಎಲ್ಲೆಲ್ಲೋ ತಂಪು ಮಾಡಿ, ದೇಹವನ್ನು ಪುಟ್ಟ ಹಿಮಾಲಯ ಮಾಡುವ, ಸೋಜಿಗ ಅದು. ಅದರ ಸೇವನೆಯೇ ಒಂದು ತಪಸ್ಸು. ತಣ್ಣನೆಯ ಅಧ್ಯಾತ್ಮ. ಕ್ಯಾಂಡಿಯನ್ನು ಆಕೆ ಚೀಪುವಾಗ, ಅವಳ ತುಟಿಯ ಬಣ್ಣವೂ ಕೆಂಪಾಗಿ, ತಂಪಾದಾಗ, “ತಂಪಾದವೋ ಎಲ್ಲಾ ತಂಪಾದವೋ’ ಎನ್ನುವ ಹಾಡೊಂದು ಹುಡುಗರ ಎದೆಯೊಳಗೆ ಕೇಳುತ್ತದೆ.
ಆಸೆಯೇ ಭಾವ, ಕ್ಯಾಂಡಿಯೇ ಜೀವಐಸ್ ಕ್ಯಾಂಡಿಯ ತಾಜಾ ತಂಪಿನ ಹಿಂದೆ, ಸ್ವಾದದ ಹಿಂದೆ ನಿಮಗೂ ಸಾವಿರ ನೆನಪುಗಳಿರಬಹುದು. ಬಾಲ್ಯದಲ್ಲಿ ಕಿಣಿ ಕಿಣಿ ಸೈಕಲ್ ಗಂಟೆ ಅಲ್ಲಾಡಿಸುತ್ತಾ, ಊರು ತುಂಬಾ ಸುತ್ತಿ ಐಸ್ ಕ್ಯಾಂಡಿ ಮಾರುವವರ ಮುಖಗಳು ಈಗಲೂ ನಿಮ್ಮ ಕಣ್ಣಾಲಿಯಲ್ಲಿ ತೇಲುತ್ತಿರಬಹುದು. ಹೇಳಿದೆನಲ್ಲಾ, ಐಸ್ ಕ್ಯಾಂಡಿ ಅಂದರೇನೇ ನೆನಪುಗಳ ದೊಡ್ಡ ತುಂಡು. ಸಾಯಂಕಾಲ ಸ್ಕೂಲು ಬಿಟ್ಟ ಕೂಡಲೇ ಶಾಲೆಯ ಗಂಟೆಗಿಂತಲೂ ಆಕರ್ಷಕವಾಗಿ ಕೇಳುತ್ತಿದ್ದ ಐಸ್ ಕ್ಯಾಂಡಿ ಗಾಡಿಯ ಸದ್ದೇ ಆ ದಿನದ ಮಧುರ ಸುಪ್ರಭಾತ. ಸದ್ದೇ ಇಷ್ಟು ಚೆಂದ ಇರಬೇಕಾದರೆ, ಇನ್ನು ಐಸ್ ಕ್ಯಾಂಡಿಯ ರುಚಿ ಎಂಥದ್ದೋ ಎನ್ನುವ ಆಸೆ ಹುಟ್ಟಿಸಿಬಿಡುತ್ತಿತ್ತು ಆ ಗಾಡಿ. ಎಲ್ಲಿದ್ದರೂ ಆ ಗಾಡಿ ಹಿಂದೆ ಓಡಿ, ಒಂದ್ರುಪಾಯಿ ಹಿಡ್ಕೊಂಡು ಐಸ್ ಕ್ಯಾಂಡಿ ಡಬ್ಬದಿಂದ ಐಸ್ ಕ್ಯಾಂಡಿ ಹೊರಬರುವ ಮೊದಲೇ ಆಸೆಯಿಂದ ಬಾಯಿ ಅಗಲಿಸಿ ನಿಲ್ಲುವುದು, ಐಸ್ ಕ್ಯಾಂಡಿ ಸಿಕ್ಕ ಕೂಡಲೇ ಕಣ್ಣು ಮುಚ್ಚಿ ಚೀಪಿ ಐಸ್ ಕ್ಯಾಂಡಿಯ ಐಸ್ ಗುಡ್ಡೆಯನ್ನು ಹಲ್ಲಿನಿಂದ ಹಗುರನೇ ಕಡಿದಾಗ, ಅವೆಲ್ಲಾ ನೀರಾಗಿ ಹೊಟ್ಟೆಗಿಳಿದರೂ ಮೂತಿಯೆಲ್ಲಾ ಐಸ್ ಕ್ಯಾಂಡಿಯ ಚಿನ್ನದ ಬಣ್ಣವೋ, ಗುಲಾಬಿ ಬಣ್ಣವೋ ಆಗುತ್ತಿತ್ತು. ಕೆಲವೊಮ್ಮೆ ಐಸ್‌ಕ್ಯಾಂಡಿ ನೀರಾಗಿ ಮೈಗೆಲ್ಲಾ ಚೆಲ್ಲಿ, ಬಟ್ಟೆಗೆಲ್ಲಾ ಐಸ್ ಕ್ಯಾಂಡಿಯ ಬಣ್ಣ, ಸ್ವಾದ ರಂಗೇರುತ್ತಿತ್ತು. ಐಸ್ ಕ್ಯಾಂಡಿ ತಿಂದೂ ತಿಂದು ಸರ್ವೀಸು ಆಗಿದ್ದವರಿಗೆ ಐಸ್ ಕ್ಯಾಂಡಿ ತಿನ್ನೋದು, ನಾವು ಐಸ್ ಕ್ಯಾಂಡಿ ತಿಂದು ಅದರ ಕಡ್ಡಿ ಬಿಸಾಡಿದಷ್ಟೇ ಸಲೀಸಾಗಿತ್ತು. ದೊಡ್ಡ ಹೊಟ್ಟೆ ಬಕಾಸುರರಿಗಂತೂ ಐಸ್ ಕ್ಯಾಂಡಿಯ ಇಷ್ಟೇ ಇಷ್ಟು ಸಣ್ಣ ಗಾತ್ರ ಲೆಕ್ಕಕ್ಕೇ ಇರುತ್ತಿರಲಿಲ್ಲ. ಅಲ್ಲೇ ನಿಂತು ಇಡೀ ಗಾಡಿ ಕೊಟ್ಟರೂ ನಾವು ನುಂಗೇ ಬಿಡ್ತೇವೆ ಅನ್ನುವ ಹಾಗೇ ಈ “ಕ್ಯಾಂಡಿ’ಡೇಟ್‌ಗಳು ಮತ್ತೆ ಮತ್ತೆ ಐಸ್ ಕ್ಯಾಂಡಿ ಡಬ್ಬವನ್ನೇ ದುರುಗುಟ್ಟಿ ನೋಡುತ್ತಿದ್ದರು. ಆದರೆ, ನಯಾಪೈಸೆಯೂ ಇಲ್ಲದಿದ್ದ ಪುಟಾಣಿಗಳು ಪಾಪ, “ನಮಗ್ಯಾರಾದರೂ ಐಸ್‌ಕ್ಯಾಂಡಿ ತೆಗಿಸಿಕೊಡ್ತಾರಾ?’ ಅಂತ ಆಸೆಯಿಂದ ಡಬ್ಬದ ಮೇಲೆ ಜುಂ ಜುಂ ಕ್ಯಾಂಡಿ, ಬೆಲ್ಲ ಕ್ಯಾಂಡಿ, ದೂಧ್ ಕ್ಯಾಂಡಿ ಅಂತೆಲ್ಲ ಬರೆದಿದ್ದನ್ನು, ಓದುತ್ತಾ, ದಯೆ ತೋರುವ ದೇವರನ್ನು ಕಾಯುತ್ತಿದ್ದರು. ಕ್ಯಾಂಡಿ ಸಿಕ್ಕರೆ ವರ್ಲ್ಡ್ ಕಪ್ ಸಿಕ್ಕಂತೆ…
ಸೈಕಲ್ ಕ್ಯಾರಿಯರ್‌ನಲ್ಲಿ ತಮಗಿಂತಲೂ ಎತ್ತರದಲ್ಲಿ ಕೂತಿದ್ದ ಆ ಡಬ್ಬದ ಒಳ ಜಗತ್ತು ತಮಗೆ ಕಾಣದಿದ್ದರೂ ಬಾವಿ ಇಣುಕುವಂತೆ ಡಬ್ಬದೊಳಗೆ ಇಣುಕಿ ನೋಡುತ್ತಿದ್ದ ಹುಡುಗರು, ಗಾಡಿಯವನು ಐಸ್ ಕ್ಯಾಂಡಿ ಕೊಟ್ಟಾಗ ತಾವು ಕಂಡ ಕನಸೆಲ್ಲಾ ಒಂದೇ ಸಲ ನನಸಾಗಿ, ವರ್ಲ್x ಕಪ್ ಗೆದ್ದಷ್ಟು ಖುಷಿಯಾಗಿ ಆ ಐಸ್ ಕ್ಯಾಂಡಿಯನ್ನು ತೆಗೆದುಕೊಳ್ಳುತ್ತಿದ್ದ ರೀತಿ, ನಿಜಕ್ಕೂ ಅದ್ಭುತ. ಐಸ್ ಕ್ಯಾಂಡಿ ತಿನ್ನುವ ಆನಂದವೇ ಬೇರೆ, ಅದನ್ನು ಮೊಟ್ಟ ಮೊದಲು ತೆಗೆದುಕೊಳ್ಳುವ ಆನಂದದ ಥ್ರಿಲ್ಲೇ ಬೇರೆ, ಅಲ್ಲವೇ? ಸೈಕಲ್‌ನಲ್ಲಿ ಬರುತ್ತಿದ್ದ ಕ್ಯಾಂಡಿ ದೇವರು
ಎಷ್ಟೋ ದೂರದ ಊರುಗಳನ್ನು ಸುತ್ತಿ ಸೈಕಲ್ ಕ್ಯಾರಿಯರ್‌ನಲ್ಲಿ ಬೆಲ್ಲಕ್ಯಾಂಡಿ, ದೂಧ್ ಕ್ಯಾಂಡಿ, ಆರೆಂಜ್, ಫೈನಾಪಲ್, ಚುಕ್ಕು, ಮ್ಯಾಂಗೋ ಮೊದಲಾದ ಘಮಘಮ ಕ್ಯಾಂಡಿಗಳನ್ನು ಮಾರಿಕೊಂಡು, ಅಷ್ಟೇ ಆಕರ್ಷಕವಾಗಿ ಅದನ್ನು ಡಬ್ಬದಿಂದ ತೆಗೆಯುತ್ತಾ ಮಕ್ಕಳ ಆಸೆ ತೀರಿಸುತ್ತಿದ್ದ ಕ್ಯಾಂಡಿ ಮಾಮ, ಕೆಲವೊಮ್ಮೆ ಮಕ್ಕಳಿಗೆ ಕ್ಯಾಂಡಿಗಳನ್ನು ಪುಕ್ಕಟೆ ಕೊಡುತ್ತಿದ್ದದ್ದೂ ಇತ್ತು. ಕ್ಯಾಂಡಿಯ ಸಾಲವೂ ಸಿಗುತ್ತಿತ್ತು. ಕ್ಯಾಂಡಿ ಮಾರುವುದೇ ಅವನಿಗೆ ವ್ಯಾಪಾರವಾದರೂ ಅವನು ಮಕ್ಕಳ ಮುಗ್ಧತೆ, ಪ್ರೀತಿಯನ್ನು ಯಾವಾಗಲೂ ಹಣದಿಂದಲೇ ಅಳೆಯುತ್ತಿರಲಿಲ್ಲ, ಎಷ್ಟು ಚೆಂದಾಗಿ ಕ್ಯಾಂಡಿ ಹಂಚುತ್ತಿದ್ದನೋ ಅಷ್ಟೇ ಚೆಂದಾಗಿ ಪ್ರೀತಿಯನ್ನೂ, ಕ್ಯಾಂಡಿಗಿಂತ ಮಿಗಿಲಾದ ಬೆಲ್ಲ ಮಿಶ್ರಿತ ಸ್ನೇಹದ ಮಾತುಗಳನ್ನೂ ಹಂಚುತ್ತಿದ್ದ. ಹಾಗಾಗಿ, ಮಕ್ಕಳಿಗೆ ಅವನು ಬರೀ ವ್ಯಾಪಾರಿ ಆಗಿರಲಿಲ್ಲ, ಸಿಹಿ ಹಂಚುತ್ತಿದ್ದ ದೇವರೂ ಆಗಿದ್ದ. ಈಗ ಯಾಕೋ ಕ್ಯಾಂಡಿ ಮಾಮಂದಿರೂ ಕಾಣೆಯಾಗಿದ್ದಾರೆ. ಅಲ್ಲಲ್ಲಿ ಕಂಡರೂ, ಅಪರೂಪಕ್ಕೆ ಇಷ್ಟು ವರ್ಷ ಅದನ್ನೇ ನೆಚ್ಚಿಕೊಂಡ ಅಜ್ಜನಂಥ ಕ್ಯಾಂಡಿ ಮಾಮ ಸ್ಕೂಟರ್‌ನಲ್ಲಿ ಮಕ್ಕಳಿಗಾಗಿ ಕಾಯುತ್ತಿರುತ್ತಾನೆ. ಅವನ ಐಸ್ ಕ್ಯಾಂಡಿ ಪೆಟ್ಟಿಗೆ ಇಣುಕುತ್ತಿದ್ದ, ಡಬ್ಬ ನೋಡಿ ಜೊಲ್ಲು ಸುರಿಸುತ್ತಿದ್ದ, ಅದೂ ಇದೂ ಮಾತಾಡುತ್ತಿದ್ದ, ಶಾಲೆ ಬಿಟ್ಟ ಕೂಡಲೇ ಅವನಿಗಾಗೇ ಕಾದು ಕುಳಿತ ಪುಟ್ಟ ಪುಟ್ಟಿಯರು ಈಗ ಒಳಗೆ ಕುಳಿತು ಟಿವಿ ನೋಡುತ್ತಿದ್ದಾರೆ. ಮೊಬೈಲೊಳಗೆ ಮುಳುಕು ಹೊಡೆಯುತ್ತಿದ್ದಾರೆ. ಹೊರಗೆ ಮಾಮ, “ಪೋಂ ಪೋಂ’ಗುಟ್ಟಿದರೂ, ಅದು ಅವರಿಗೆ ಕೇಳುತ್ತಿಲ್ಲ. ಒಂದು ಕಾಲಘಟ್ಟದ ಮಂದಿಗೆ ಐಸ್ ಕ್ಯಾಂಡಿ ಎಂದರೆ ಅದೊಂದು ಭಾವನೆ, ಕೌತುಕ, ಆಸೆ, ಪ್ರೀತಿ, ನೆನಪು ಎಲ್ಲವೂ ಆಗಿತ್ತು. ಈಗಲೂ ಐಸ್ ಕ್ಯಾಂಡಿ ಚೀಪಿದಾಗೆಲ್ಲಾ ಅವರು ನೆನಪುಗಳ ಸಿಹಿಯಿಂದ ತಣ್ಣಗಾಗುತ್ತಾರೆ, ಬಾಲ್ಯದಲ್ಲಿ ಕಳೆದುಹೋಗುತ್ತಾರೆ. ಮೊದ ಮೊದಲು ತಿಂದ ಐಸ್ ಕ್ಯಾಂಡಿಯ ಸಿಹಿ ಈಗಲೂ ಅವರ ನಾಲಗೆಗೆ ಅಂಟಿಕೊಂಡೇ ಇರುತ್ತದೆ. ಅದೇ ಐಸ್ ಕ್ಯಾಂಡಿಯ ಕ್ರಶ್ಯು…
— ಪ್ರಸಾದ್ ಶೆಣೈ ಆರ್.ಕೆ.