ಸತತವಾಗಿ ಒಂದು ತಿಂಗಳ ಶ್ರಾವಣ, ಯಾವಾಗಲು ಸಸ್ಯಹಾರಿ ಆದವರಿಗೆ ಇದರಲ್ಲಿ ಯಾವ ಬದಲಾವಣೆಯು ಆಗದೇ ದಿನನಿತ್ಯದಂತೆ ದಿನ ಸಾಗುತ್ತಲಿರುತ್ತದೆ, ಆದರೇ ನಿಜವಾದ ವಿಷಯ ಒಂದು ರೀತಿಯಲ್ಲಿ ಕೈ ಕಟ್ಟಿಟಂತೆ ಆಗುವುದು ಮಾಂಸಹಾರಿಗಳಿಗೆ,ಅದರಲ್ಲೂ ಕಷ್ಟ ಪಟ್ಟು ಹೇಗೊ ಬೆಳೆಸಾರಲ್ಲೇ ವಾರಕಳೆದು, ವರಮಹಾಲಕ್ಷ್ಮಿ ಪೂಜೆ ಮುಗಿಸಿ ಪುನಃ ತವೆಗೆ ಜಾರುವಾಗ ಒಂದು ಸಂತಸ-ಸಡಗರದ ಹಬ್ಬ,108 ಕ್ಕೂ ಹೆಚ್ಚು ಹೆಸರುಗಳನ್ನು ಹೊಂದಿರುವ ಲಂಬೋದರನ ಗಣೇಶ ಚತುರ್ಥಿ ಅಥವಾ ಚೌತಿ ಎಂದು ಕರೆಯುವ ಹಿಂದೂಗಳು ಬಹಳ ವಿಜೃಂಭಣೆಯಿಂದ ಆಚರಿಸುವ ಒಂದು ಹಬ್ಬವು ಬರುತ್ತಿದೆ ಎಂದಾಗ ಜನರಲ್ಲಿ ಎಲ್ಲಿಲದ ಉತ್ಸಾಹವು ತುಂಬಿ ತುಳುಕುತ್ತದೆ. ಹಿಂದೂ ಪುರಾಣಗಳ ಆಧಾರದ ಮೇಲೆ ಗಣೇಶನನ್ನು ಶಿವ ಮತ್ತು ಪಾರ್ವತಿ ದೇವಿಯ ಮಗ ಎಂದು ನಂಬಲಾಗಿದೆ. ದಂತಕಥೆಯ ಪ್ರಕಾರ, ಶಿವನು ಕೋಪಗೊಂಡಾಗ ಅವನು ಗಣೇಶನ ತಲೆಯನ್ನು ಕತ್ತರಿಸಿ ದುಃಖಿಸುತ್ತಿದ್ದ ಪಾರ್ವತಿ ದೇವಿಯನ್ನು ಸಾಂತ್ವನಗೊಳಿಸಲು ಆನೆಯ ತಲೆಯನ್ನು ಅದಕ್ಕೆ ಬದಲಾಯಿಸಿದನು. ಆದ್ದರಿಂದ ಗಣೇಶನನ್ನು ಯಾವಾಗಲೂ ಆನೆಯ ತಲೆಯಿಂದ ಚಿತ್ರಿಸಲಾಗುತ್ತದೆ.
ಇನ್ನು ಗಣೇಶನ ಹಬ್ಬಕ್ಕೆ ಮುಂಚಿತ ತಯ್ಯಾರಿಯಾಗಿ ಒಂದು ತಿಂಗಳ ಮೊದಲೇ ಮಣ್ಣಿನ ಅಥವಾ ಬೆಳ್ಳಿಯ ಗಣೇಶನ ಮೂರ್ತಿಯನ್ನು ಮಾಡುವಲ್ಲಿ ತೊಡಗುತ್ತಾರೆ, ಅದಲ್ಲದೆ,ವಿಭಿನ್ನ ರೀತಿಯ ಮಂಟಪ,ಬ್ಯಾನರ್ಗಳು, ದೇಣಿಗೆಗಳು,ರಸ್ತೆಯುದ್ಧಕ್ಕೂ ತೋರಣಗಳು ಎಲ್ಲವೂ ಕೂಡಾ ಸುಂದರವಾದಂತ ರೀತಿಯಲ್ಲಿ ಸಜ್ಜುಗೊಳ್ಳುತ್ತದೆ. ಮೊದಲನೇ ದಿನ ತಾಯಿ ಗೌರಿಯ ಪೂಜೆ ನಡೆಸಿ ತದನಂತರವಾಗಿ ವಿನಾಯಕನನ್ನು ಚಂದದ ಮಂಟಪದಲ್ಲಿ ಕೂರಿಸಿ,ಬಣ್ಣ- ಬಣ್ಣದ ಹೂವುವಿನಿಂದ ಅಲಂಕರಿಸಿ, ಮೋದಕ, ಚಕ್ಕುಲಿ, ಹೋಳಿಗೆ, ಸಿಹಿ ಕಡುಬು,ಕರಚಿಕಾಯಿ,ಪಂಚಗಜ್ಜಾಯ,ಕಜ್ಜಾಯ, ಏಳ್ಳುಉಂಡೆ,ಬೊಂದಿ ಲಡ್ಡು,ನಿಪ್ಪಟ್ಟು, ಮೋತಿಚೂರ್ ಲಡ್ಡು,ಶೇಂಗಾ ಉಂಡೆ,ರವೆ ಉಂಡೆ ಹೀಗೆ ಹಲವಷ್ಟು ಸಿಹಿ ತಿಂಡಿಗಳನ್ನು ಗಣಪತಿಯಗೆ ನೈವೇದ್ಯವಿಟ್ಟು ಜನರು ನಮಗಿರುವ ವಿಘ್ನಗಳನ್ನು ಬಗೆಹರಿಸು ಎಂದು ಬೇಡುತ್ತಾರೆ. ಯಾರು ಚಂದ್ರನನ್ನು ನೋಡದೆ ಎಲ್ಲರೂ ಕೂಡಾ ಗಣಪನ ಒಂದು ಆರಾಧನೆಯಲ್ಲಿ ತಲ್ಲಿನರಾಗುತ್ತಾರೆ.
ಸಾರ್ವಜನಿಕವಾಗಿ ಗಣೇಶ್ ಚತುರ್ಥಿಯನ್ನು ಒಂದೇ ಆಚರಿಸುವುದಲ್ಲದೆ ಮನೆಯಲ್ಲೂ ಕೂಡ ಕುಟುಂಬ ಸದಸ್ಯರೆಲ್ಲರೂ ಸೇರಿ ಗಣೇಶನ ವಿಗ್ರಹವನ್ನಿಟ್ಟು ಪೂಜಿಸುತ್ತಾರೆ. ನಾಲ್ಕೈದು ದಿನವಾಗಿ ಗಣೇಶನು ಪ್ರತಿಯೊಂದು ಮಂಟಪದಲ್ಲಿ ಮತ್ತು ಮನೆಯಲ್ಲಿ ರಾರಾಜಿಸುತ್ತಿರುತ್ತಾನೆ. ಬಹಳ ಮುದ್ದಿನಿಂದ ಮುದ್ದು ಸೊಂಡಿಲಿನ ಗಣಪತಿಯನ್ನು ಕಂಡು ಮಕ್ಕಳು ಖುಷಿಪಡುತ್ತಾರೆ. ರಾತ್ರಿ ವೇಳೆಯಲ್ಲಿ ಲೈಟಿನ ಸರದ ಮಧ್ಯದಲ್ಲಿ ನಮ್ಮ ಮುದ್ದು ಗಣಪತಿಯು ಚಂದದಾಲಂಕಾರದೊಂದಿಗೆ ಮಿಂಚುವುದನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು.
ಇನ್ನು ಗಣೇಶನನ್ನು 10 ಅಥವಾ 11 ನೆ ದಿನಕ್ಕೆ ಎಲ್ಲರೂ ಕೂಡಾ ಗಣೇಶನ್ನು ಮೆರವಣಿಗೆಯಲ್ಲಿ ಬಹಳ ಒಂದು ಸಂತಸದಿಂದ ಹಾಡು -ನೃತ್ಯ ಮಾಡಿ ಎಲ್ಲರೂ ಗಣೇಶನನ್ನು ಖುಷಿಯಿಂದ ನೀರಲ್ಲಿ ಮುಳುಗಿಸುತ್ತಾರೆ.
ಈ ಮುಳುಗಿಸುವಿಕೆಯು ತನ್ನ ಭಕ್ತರ ಎಲ್ಲಾ ದುರದೃಷ್ಟಗಳನ್ನು ವಶಪಡಿಸಿಕೊಳ್ಳುವುದರಿಂದ ಗಣೇಶನನ್ನು ಕೈಲಾಸಕ್ಕೆ ತನ್ನ ನಿವಾಸದ ಕಡೆಗೆ ಬೀಳ್ಕೊಡುವುದನ್ನು ಸಂಕೇತಿಸುತ್ತದೆ.ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಆಚರಣೆಗಳು ಭವ್ಯ ಮತ್ತು ವಿಜೃಂಭಣೆಯಿಂದ ಕೂಡಿದ್ದರೂ ಸಹ , ಕರ್ನಾಟಕ ಮತ್ತು ಮಹಾರಾಷ್ಟ್ರಗಳು ತಮ್ಮ ಗಣೇಶ ಹಬ್ಬಕ್ಕೆ ಇಡೀ ದೇಶಾದ್ಯಂತ ಜನಪ್ರಿಯವಾಗಿವೆ. ಪ್ರತಿ ವರ್ಷ, ಕರ್ನಾಟಕ ಸರ್ಕಾರವು ಬೃಹತ್ ಗಣೇಶ ಮೂರ್ತಿಗಳನ್ನು ವರ್ಣಮಯವಾಗಿ ಅಲಂಕರಿಸಿದ ತಾತ್ಕಾಲಿಕ ಮಂಟಪಗಳಲ್ಲಿ ಅಥವಾ ಪೆಂಡಾಲ್ಗಳಲ್ಲಿ ಸ್ಥಾಪಿಸುತ್ತದೆ. ಈ ಅಲಂಕಾರಿಕ ಗಣಪಗಳು ಸಾರ್ವಜನಿಕರ ಕಣ್ಮನಗಳನ್ನು ಸೆಳೆಯುತ್ತದೆ.
ಎಷ್ಟೇ ಹೇಳಿದರು ಕಡಿಮೆ ಎನ್ನಿಸುವ ಗಣೇಶನ ಹಬ್ಬವು ಮುಗಿದನಂತರವಾಗಿ ಗಣೇಶನ ವಾಹನ ಆತನ ಸಹೋದರನಾದ ಇಲಿ ಪಂಚಮಿ ಯನ್ನು ಮಾಡಲಾಗುತ್ತದೆ ಆದಿನದಂದು ಎಲ್ಲರೂ ತಮ್ಮ ಮನೆಗಳಲ್ಲಿ ಮಾಂಸಹಾರಿಗಳಿಗೆ ಅಂದು ಶುಭದಿನ ವಾ -ದ್ದರಿಂದ ಅಂದು ಇನ್ನಿತರ ಅಡುಗೆಗಳನ್ನು ಮಾಡಿ ಸಂಪೂರ್ಣವಾಗಿ ಎಲ್ಲರೂ ಕೂಡಾ ಮನಸ್ಸಿಗೆ ಮತ್ತು ದೇಹಕ್ಕೆ ತೃಪ್ತಿಯನ್ನು ಪಡೆಯುತ್ತಾರೆ.
ವಿದ್ಯಾ – ( ಎಂ. ಜಿ. ಎಂ ಕಾಲೇಜು ಉಡುಪಿ )