Advertisement

‘ಪರ್ಯಾಯ’ವೇ ಇಲ್ಲದಂತೆ ಪರಿಸಮಾಪ್ತಿಯಾಯಿತು ‘ಪಲಿಮಾರು ಪರ್ಯಾಯ’

10:58 AM Jan 18, 2020 | Hari Prasad |

ಸಂನ್ಯಾಸ ಎಂಬುವುದು ಯಾವ ತಲೆಬಿಸಿಯೂ ಇಲ್ಲದೆ ತಿಂದುಂಡು ಆರಾಮವಾಗಿ ಇರುವ ಒಂದು ವ್ಯವಸ್ಥೆ ಎಂದು ವಿಮರ್ಶಿಸುವ ವಿಚಾರ ಹೀನರು ಒಮ್ಮೆ ಪಲಿಮಾರು  ವಿದ್ಯಾಧೀಶತೀರ್ಥ ಶ್ರೀಗಳ ದಿನಚರಿಯನ್ನೊಮ್ಮೆ ನೋಡಲೇಬೇಕು. ಶ್ರೀಗಳ ಒಂದು ದಿನದ ದಿನಚರಿ ಬರೋಬ್ಬರಿ ಒಂದು ವರ್ಷಕ್ಕೆ ಸಾಕಾಗುವಷ್ಟು ಇರುತ್ತದೆ. ಅಂಥದ್ದರಲ್ಲಿ ಎರಡು ವರ್ಷದ ಪರ್ಯಾಯ ಮುಗಿಸುವುದು ಸುಲಭದ ಮಾತಲ್ಲ.

Advertisement

ಸಂತೋಷ್ ಕುಮಾರ್ ಭಟ್, ಭಕ್ರೇಮಠ

ಎಲ್ಲಾ ಸುಲಭವಾಗುವ ಸಲಕರಣೆಗಳು ಇದ್ದರೂ ಬಿಡುವಿಲ್ಲದ ಸಮಯದ ಕಾಲಘಟ್ಟದಲ್ಲಿ ನಾವಿದ್ದೇವೆ. ಅಂತದ್ದರಲ್ಲಿ ಸಮಾಜಕ್ಕಂಟಿದ್ದೂ ನಂಟಿಲ್ಲದಂತಿರುವ ಸ್ವಾಮಿಗಳ ದಿನಚರಿಯೂ ಕಡಮೆಯೇನಲ್ಲ. ಬೆಳಗ್ಗೆ ಎರಡೂವರೆಗೆ ಎದ್ದು ನಾಕು ಗಂಟೆಯ ತನಕ  ಪಾಠ, ಹಾಗೆಯೇ ನಾಲ್ಕರಿಂದ ಏಳರ ತನಕ ಪೂಜೆ ಪುನಃ ಒಂಬತ್ತು ಗಂಟೆಯ ತನಕ ಪಾಠ ಅನಂತರ ಮಧ್ಯಾಹ್ನ ಎರಡೂವರೆ ಗಂಟೆಗಳವರೆಗೆ ಪೂಜೆ ಹಾಗೂ ಭಿಕ್ಷೆ. ಬಳಿಕ ಎರಡೂವರೆಯ ನಂತರ ಐದು ಗಂಟೆಯ ತನಕ ಪಾಠ. ಐದರಿಂದ ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ, ಏಳರಿಂದ ಹತ್ತು ಗಂಟೆಯ ತನಕ ಪೂಜೆ -ಮಂತ್ರಾಕ್ಷತೆ, ಶಿಷ್ಯ ಸ್ವೀಕಾರವಾದಂದಿಂದ ಪುನಃ ರಾತ್ರಿ ಒಂದು ಗಂಟೆ ಪಾಠ ಹೀಗೆ ಸಾಗುತ್ತದೆ ಪಲಿಮಾರು ಶ್ರೀಗಳ ದಿನಚರಿ.


ಇವೆಲ್ಲದರ ನಡುವೆ ಮರು ದಿವಸದ ಪಾಠ ಪ್ರವಚನಕ್ಕೆ ಬೇಕಾಗುವ ವಿಷಯ ಸಂಗ್ರಹವು ಸೇರುತ್ತದೆ. ಇವೆಲ್ಲ ವಿಶೇಷತೆಗಳ ನಡುವೆ ವಿದ್ಯಾಧೀಶತೀರ್ಥರ ಮೂಲಕ ನಡೆದ ಈ ಪರ್ಯಾಯ ಅನೇಕ ಸಾಧನೆಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ತನ್ನ ಕಲ್ಪನೆಗಳನ್ನೆಲ್ಲ ಸಾಕಾರಗೊಳಿಸಿ ಸಾಧನೆಯ ವಿಶ್ವರೂಪವನ್ನು ತೋರಿಸಿಕೊಟ್ಟಿದ್ದಾರೆ.

ಇಂತಹ ಅಭೂತಪೂರ್ವ ಪರ್ಯಾಯ ಮುಗಿಯಲು ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಮೊದ ಮೊದಲು ಅವರ ಕಲ್ಪನೆಗಳನ್ನು ಕೇಳಿದವರು, ಇದು ಕೇವಲ ಭ್ರಮಾಲೋಕದ ಯೋಜನೆಗಳು ಎಂದು ಮೂದಲಿಸಿದರೂ ಈಗ ಮೂಗಿನ ಮೇಲೆ ಕೈಯಿಡುವಂತಾಗಿದೆ. ಒಬ್ಬ ಸಾಧಕನಿಗೆ ತನ್ನ ಸಾಧನೆಯನ್ನು ಸಾಧಿಸಲು ಬೇಕಾಗುವುದು ಮೂರು ಶಕ್ತಿಗಳು ಇಚ್ಛಾ, ಜ್ಞಾನ, ಕ್ರಿಯಾ.

ಯಾವ ಸಾಧನೆಯೇ ಆಗಲಿ ಮೊದಲು ಅದರ ಕಲ್ಪನೆಯನ್ನು ನಾವು ಕಾಣಬೇಕು. ಅದರ ಬಗ್ಗೆ ಚೆನ್ನಾದ ತಿಳುವಳಿಕೆ ಇರಬೇಕು, ಹಾಗೆಯೇ ಅದನ್ನು ಸಾಧಿಸಲು ತನ್ನೆಲ್ಲಾ ತಾಕತ್ತನ್ನು ಪ್ರಯೋಗಿಸಬೇಕು. ಹೀಗೆ ಇಚ್ಛಾ, ಜ್ಞಾನ, ಕ್ರಿಯಾಗಳ ಮೂಲಕ ಸಾಗಿದ ಸಾಧನೆ ಗುರಿ ಮುಟ್ಟುತ್ತದೆ ,ಪೂರ್ಣತೆಯನ್ನು ಪಡೆಯುತ್ತದೆ. ಈ ಶಕ್ತಿ ತ್ರಯದ ಪ್ರಯೋಗದ ಪರಿಕಲ್ಪನೆಯ ರೂಪಕವನ್ನು ತೋರಿಸಿಕೊಟ್ಟಿದ್ದಾರೆ ಮಠಾಧೀಶರು.

Advertisement


ಪರ್ಯಾಯ ಪೀಠವನ್ನು ಏರುವ ಮುಂಚೆ ಅಚಿಂತ್ಯವಾದ ಕೆಲವು ಕಲ್ಪನೆಯನ್ನು ಕಟ್ಟಿಕೊಂಡಿದ್ದರು. ಅವುಗಳಲ್ಲಿ ಪ್ರಧಾನವಾಗಿ, ಅಖಂಡ ಭಜನೆ, ನಿತ್ಯ ಲಕ್ಷಾರ್ಚನೆ, ಕೃಷ್ಣನಿಗೆ ಬಂಗಾರದ ಗೋಪುರ – ಮಹಾಭಾರತದ ಲಕ್ಷ ಶ್ಲೋಕಗಳ ಪುಸ್ತಕ ಬಿಡುಗಡೆ ಈ ಎಲ್ಲವೂ  ಕಲ್ಪನೆಗೂ ಮೀರಿದ್ದು. ಆದರೆ ಆಶ್ಚರ್ಯದ ವಿಷಯವೆಂದರೆ ನಿರೀಕ್ಷೆಗೂ ಮೀರಿ ಸಾಕಾರವಾಗಿದೆ. ದೈವಾನುಗ್ರಹದ ಬಲ ಇವರಲ್ಲಿ ಪರಿಪೂರ್ಣವಾಗಿ ಕೆಲಸ ಮಾಡಿದೆ.

ಈ ಕಾಲದಲ್ಲಿ ಒಂದು ದಿವಸದ ಏಕಾಹ ಭಜನೆಯಿಂದಲೇ ದೇವಸ್ಥಾನದವರಿಗೆ ಸುಸ್ತಾಗುತ್ತದೆ. ಅಂತದ್ದರಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆ ಸತತ ಏಳುನೂರು ದಿವಸಕ್ಕೂ ಮಿಕ್ಕಿ ನಡೆಸುವುದೆಂದರೆ ಸುಮ್ಮನೆಯಲ್ಲ. ಇಲ್ಲಿ ಎಲ್ಲಕ್ಕೂ ಮಿಗಿಲಾಗಿ ಉಡುಪಿಯವರು ಕಣ್ಣಾರೆ ಕಂಡು ಮುದಗೊಂಡ ವಿಷಯ ಅಷ್ಟ ಮಠಾಧೀಶರ ಭಜನೆ. ಉಡುಪಿಯಲ್ಲಿ ಇಲ್ಲಿತನಕ ನಡೆಯದ ಅದ್ಭುತ ಕಾರ್ಯ. ‘ಬಾಲ ಸನ್ಯಾಸಿಗಳು ನಿನ್ನ ಭಜಿಸಲು” ಎಂಬ ಮಾತು ಕೇವಲ ದಾಸವಾಣಿಯಲ್ಲಿ ಕೇಳಿದ್ದೆವು. ಆದರೆ ನೋಡಿದ್ದು ಈ ಪರ್ಯಾಯದಲ್ಲಿ. ದೇಶದ ಎಲ್ಲಾ ಮೂಲೆಯಿಂದಲೂ ಬಂದು ಪೊಡವಿಗೊಡೆಯನ ಮುಂದೆ ಭಜಿಸಿ ಹೋದವರನ್ನು ಈ ಸಮಯದಲ್ಲಿ ಮರೆಯಲಾಗುವುದಿಲ್ಲ.


ಇನ್ನು ಎರಡನೆಯದಾಗಿ ಕೃಷ್ಣನಿಗೆ ನಿತ್ಯವೂ ಲಕ್ಷಾರ್ಚನೆ. ಒಂದು ದಿವಸದಲ್ಲಿ ಸಹಸ್ರನಾಮಾವಳಿ ಬೇಡ ಕೇವಲ ಸಹಸ್ರನಾಮ ಓದುವುದೇ ಕಷ್ಟ. ಅಂಥದ್ದರಲ್ಲಿ ನಿತ್ಯವೂ ಲಕ್ಷಾರ್ಚನೆ ನಡೆಸಬೇಕು ಎನ್ನುವುದು ಸುಲಭ ಮಾತಲ್ಲ. ಅಷ್ಟಲ್ಲದೆ ಅದಕ್ಕೆ ಬೇಕಾಗುವಷ್ಟು ತುಳಸಿ, ಹಾಗೆ ಅರ್ಚಿಸಿದ ನಿರ್ಮಾಲ್ಯ ತುಳಸಿಗಳಿಗೆ ಗೌರವಯುತವಾದ ವ್ಯವಸ್ಥೆಯನ್ನು ಕಲ್ಪಿಸುವುದು ಇಲ್ಲಿ ಮುಖ್ಯವಾದ ವಿಷಯ.

ಸ್ವಲ್ಪ ಎಡವಿದರೂ ಕೂಡ ಕೇಡು ಕಟ್ಟಿಟ್ಟ ಬುತ್ತಿ. ಅಷ್ಟು ಜಾಗರೂಕತೆಯಿಂದ ಸುವ್ಯವಸ್ಥಿತವಾಗಿ ರೂಪಿಸಿಕೊಂಡು ಅದನ್ನು ಕಾರ್ಯಗತಗೊಳಿಸಿ ಅದರ ಕೃಷ್ಣಾರ್ಪಣಕ್ಕೆ ಕೆಲವೇ ದಿವಸ ಬಾಕಿ ಇದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ, ಒಂದು ದಿವಸವೂ ತಪ್ಪದಂತೆ ಇವರ ಆರೋಗ್ಯವೂ ಕೂಡ ಸ್ಪಂದಿಸಿದ್ದು ಆಶ್ಚರ್ಯವೇ. ಇಲ್ಲಿ ದೈವಾನುಗ್ರಹ ವಲ್ಲದೆ ಬೇರೇನನ್ನು ಕಾಣಲು ಸಾಧ್ಯ?


ಇಷ್ಟಲ್ಲದೆ ಕೃಷ್ಣ ಮಂದಿರಕ್ಕೆ ಬಂಗಾರದ ಮುಚ್ಚಿಗೆ. ಆ ಮೂಲಕ ಉಡುಪಿಯನ್ನು ಬಂಗಾರದಲ್ಲಿ ಮುಚ್ಚಿದಂತೆ ಎನ್ನುವ ತನ್ನ ಕಲ್ಪನೆ ಅದ್ಭುತ. ಕೃಷ್ಣನಿಂದಲೇ ತಾನೆ ಉಡುಪಿಗೆ ಹೆಸರು, ಕೃಷ್ಣ ಇಲ್ಲದಿದ್ದರೆ ಉಡುಪಿಗೆ ಅಸ್ತಿತ್ವವೇ ಇಲ್ಲ. ಈಗಿನ ಕಾಲದಲ್ಲಿ ದೇವರಿಗೆ ಬಂಗಾರದ ಕವಚ ಮಾಡುವುದಕ್ಕಾಗಿ ದೇವಸ್ಥಾನದವರು ಎಷ್ಟು ತಿರುಗಿದರೂ ಕಡಿಮೆ. ಅಂತದ್ದರಲ್ಲಿ ಎಲ್ಲೂ ತಿರುಗದೆ ಇದ್ದಲ್ಲೇ ಇದ್ದು ಎಲ್ಲೆಂದರಲ್ಲಿ೦ದ ಬಂಗಾರವನ್ನು ತರಿಸಿ ಹೊಂದಿಸಬೇಕಾದರೆ ಅದಕ್ಕೆ ಅದಮ್ಯವಾದ ಆತ್ಮವಿಶ್ವಾಸ ಬೇಕು. ತನ್ನ ನಿರೀಕ್ಷೆಗೂ ಮೀರಿ ದೇವರು ತರಿಸಿಕೊಟ್ಟು ಶ್ರೀಗಳ ಮೂಲಕ ಪಡೆದುಕೊಂಡಿದ್ದು ಈಗ ಉಡುಪಿಯ ಮಟ್ಟಿಗೆ ಇತಿಹಾಸವಾಗಿ ನಿಂತಿದೆ.

ಅಷ್ಟಲ್ಲದೆ ಇದನ್ನು ಮೀರಿ ಮುಖ್ಯಪ್ರಾಣನ ಸನ್ನಿಧಿಗೂ ಬಂಗಾರದ ಮುಚ್ಚಗೆ ಆಗುತ್ತಿದೆ ಎಂದರೆ ಯಾರಿಗೂ ಆಶ್ಚರ್ಯವಾದೀತು. ಇದರೊಂದಿಗೆ ಮಹಾಭಾರತದ ಮೂಲ ಶ್ಲೋಕಗಳ ಸಂಗ್ರಹ- ಅನುವಾದ- ಪುಸ್ತಕ ರೂಪದಲ್ಲಿ ಬಿಡುಗಡೆ- ಈ ಮೂರು ಪ್ರಕ್ರಿಯೆ ಅವರ ಇಚ್ಛೆಯಾಗಿತ್ತು. ದೇಶಕ್ಕೆ ಇದಕ್ಕಿಂತ ಉತ್ತಮ ಕೊಡುಗೆ ಬೇರೆ ಇಲ್ಲ. ಅದಕ್ಕಾಗಿ ವಿದ್ವಾಂಸರುಗಳ ಮೂಲಕ ಅದನ್ನೆಲ್ಲಾ ಸಂಗ್ರಹಿಸಿ ಅದರ ಅನುವಾದವನ್ನು ಕನ್ನಡದಲ್ಲಿ ಹಾಗೂ ಸಂಸ್ಕೃತದಲ್ಲಿ ಬರೆಯಿಸಿ ಸುಮಾರು ಹದಿನೈದು ಸಂಪುಟಗಳ ಮೂಲಕ ಬಿಡುಗಡೆ ಮಾಡಿದ್ದಾರೆ.

ಅಷ್ಟಲ್ಲದೆ ಹಿಂದೂಗಳ ಕಣಕಣದಲ್ಲಿ ಅಚ್ಚಳಿಯದೆ ಉಳಿದ ಮಹಾಭಾರತ ಹಾಗೂ  ಭಾಗವತದ ಮೂಲ ಕಥೆಗಳನ್ನು ಪೂರ್ತಿಯಾಗಿ ಪ್ರವಚನ ಮಾಡಿಸಿ ಇಷ್ಟರತನಕ ಎಂದು ಆಗದ ಅತಿ ವಿನೂತನ ಕಾರ್ಯದ ಮೂಲಕ ಭಾರತದ ಭವ್ಯ ಇತಿಹಾಸವನ್ನು ಮುಂದಿನವರು ಸುಲಭವಾಗಿ ತಿಳಿಯುವಂತೆ ಮಾಡಿದ ಕಾರ್ಯ ಅತ್ಯಂತ ಶ್ಲಾಘನೀಯ.


ಇಷ್ಟೇ ಅಲ್ಲದೆ ಅಖಂಡ ಜ್ಞಾನ ಯಜ್ಞ- ಪ್ರತೀ ಏಕಾದಶಿಯಂದು ಮೈಸೂರು ರಾಮಚಂದ್ರ ಆಚಾರ್ಯರಿಂದ ರಾತ್ರಿಯಿಂದ ಬೆಳಗಿನವರೆಗೆ ದಾಸವಾಣಿಯ ಮೂಲಕ ಕೇಳುಗರನ್ನು ಸಂಗೀತ ಪ್ರಪಂಚಕ್ಕೆ ಸಾಗಿಸಿ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ದದ್ದು ಹೋದವರಿಗಷ್ಟೇ ಗೊತ್ತಾದೀತು. ಕೃಷ್ಣ ಮಠದ ಪರಂಪರೆಯಲ್ಲಿಯೇ ಈ ತನಕ ನಡೆಯದ ಪಟ್ಟಾಭಿಷೇಕದ ವೈಭವ, ಸರ್ವಜ್ಞ ಸಿಂಹಾಸನದಲ್ಲಿ ಕಾಷ್ಠ ಶಿಲ್ಪಗಳ ಮೂಲಕ ಅದ್ಭುತವಾದ ದಶಾವತಾರವೇ ಮೊದಲಾದ ಶಿಲ್ಪಗಳ ಕೆತ್ತನೆಯ ಮೂಲಕ ಅದರ ಜೀರ್ಣೋದ್ಧಾರ, ತೀರ್ಥ ಮಂಟಪಕ್ಕೆ ಬೆಳ್ಳಿಯ ಹೊದಿಕೆ ಹಾಗೂ ಅದರ ನವೀಕರಣ ಹೀಗೆ ಹೇಳುತ್ತಾ ಹೋದರೆ ಸಾಧನೆಗಳ ಸಾಲು ಸಾಲು ಕಣ್ಣ ಮುಂದೆ ಬಂದು ನಿಲ್ಲುತ್ತದೆ.

ನಿತ್ಯವೂ  ಹೊಸ ಹೊಸ ಲೇಖನ ಪ್ರವಚನದ ಮೂಲಕ ಹೊಸ ಹೊಸ ಚಿಂತನೆಯ ಹೊಳಹನ್ನು, ಹಾಗೂ ಅದರ ಹಿಂದಿರುವ ತನ್ನ ನಿತ್ಯ ಅಧ್ಯಯನದ ಆಸಕ್ತಿಯನ್ನು ಹಾಗೂ ಪ್ರಯತ್ನಶೀಲತೆಯನ್ನು ನಮ್ಮ ಕಣ್ಣ ಮುಂದೆ ತರುವ ಶೈಲಿಯಂತೂ ಅದ್ಭುತ ಅನ್ಯಾದೃಶ. ಈ ವಾಕ್ ಸುಧೆಯನ್ನು ಸೇವಿಸಿದವರೇ ಬಲ್ಲರು ಅದರ ಸವಿಯ…! ಶ್ರೀರಾಮನ ನಿತ್ಯ ಆರಾಧಕರಾಗಿದ್ದರಿಂದಲೇನೋ ಹನುಮನ ಅನುಗ್ರಹ ಶಕ್ತಿಗಳಾದ ಬುದ್ಧಿ – ಬಲ – ಯಶಸ್ಸು- ಧೈರ್ಯ – ನಿರ್ಭಯತೆ – ಆರೋಗ್ಯ – ಅಜಾಢ್ಯತೆ – ವಾಕ್ಪಟುತ್ವ ಈ ಎಂಟು ಗುಣಗಳ ಪೂರ್ಣತೆಯು ಇವರಲ್ಲಿ ಎದ್ದು ಕಾಣುತ್ತದೆ.


ಒಬ್ಬ ಸಾಧಕ  ತನ್ನ ಸಾಧನೆಯ ಮೆಟ್ಟಿಲು ಏರುವಾಗ ದಾರಿಗೆ ಅಡ್ಡವಾಗಿರುವ, ನಿದ್ರೆ –ತೂಕಡಿಕೆ – ಹೆದರಿಕೆ – ಕೋಪ – ಆಲಸ್ಯ ಹಾಗು ಇವತ್ತಿನ ಕೆಲಸವನ್ನು ನಾಳೆ ಮಾಡೋಣ ಎಂಬ ದೀರ್ಘಸೂತ್ರತಾ ಎಂಬ ಆರು ದುರ್ಗುಣಗಳನ್ನು ಆತ ನಿವಾರಿಸಿಕೊಳ್ಳಲು ಸಮರ್ಥನಾಗಬೇಕು. ಅದೆಲ್ಲವನ್ನೂ ಲೀಲಾಜಾಲವಾಗಿ ದಾಟಿ ತನ್ನೆಲ್ಲಾ ಆಶಾ ಸಾಧನೆಗಳನ್ನು ಸಾಧಿಸಿ ನಿಸ್ಪೃಹತೆಯ ಭಾವನೆಯಿಂದ ಕೃಷ್ಣಾರ್ಪಣ ಗೊಳಿಸಿ ಅಭೂತಪೂರ್ವವಾಗಿ  ತನ್ನ ಎರಡು ವರ್ಷದ  ಪರ್ಯಾಯವನ್ನು ಮುಗಿಸಿದ್ದಾರೆ.

ಯಾವ ಪರ್ಯಾಯ ಪದವೇ ಸಿಗದಂತೆ ಪರ್ಯಾಯ ಮಾಡಿ ಮುಗಿಸಿದ ಫಲಿಮಾರು ಗುರುಗಳು ಇನ್ನು ಸರ್ವಜ್ಞ ಪೀಠವನ್ನೇರಲು ಹದಿನಾಲ್ಕು ವರ್ಷಗಳುಂಟು. ಇನ್ನೇನು ಆರಾಮ ಜೀವನವೇನಲ್ಲ. ಮತ್ತೆ ಹದಿನಾಲ್ಕು ವರ್ಷಗಳ ಕಾಲ ನಿತ್ಯವೂ ಸಂಚಾರ – ಪಾಠ – ಪ್ರವಚನ – ಭಿಕ್ಷೆ, ಹೀಗೆ ಬಿಡುವಿಲ್ಲದ ಸಮಯವೇ ಆಗಿದೆ. ಅಂತೂ ಇನ್ನು ಹದಿನಾಲ್ಕು ವರ್ಷ ಕಾಯಬೇಕು ಮತ್ತೆ ಪಲಿಮಾರಿನ ಪರ್ಯಾಯ ಕಾಣಲು. ಹದಿನಾಲ್ಕು ವರ್ಷ ವನವಾಸ ಮುಗಿಸಿ ಮತ್ತೆ ರಾಮ ಪಟ್ಟಾಭಿಷೇಕವಾದಂತೆ ವಾದಿರಾಜರ ಮೂಲಕ ಒದಗಿದ ಈ ಕಲ್ಪನೆ ರೋಚಕವಾಗಿದೆ. ಪೇಜಾವರದ ಅನಂತರದಲ್ಲಿ ನಮ್ಮ ಸಮಾಜಕ್ಕೆ ಒಂದು ಆಶಾಕಿರಣವಾಗಿ ಇರುವುದಾದರೆ ಅದು ಪಲಿಮಾರು ಶ್ರೀಗಳೇ ಸರಿ….

ವಿ-ದ್ಯಾ ವಿನಯದ ಮೂರ್ತರೂಪ  ವಿ

ದ್ಯಾ-ಮಾನ್ಯರ ಕರಕಮಲದಿಂ ಬಂದ

ಧೀ-ಮಂತಿಕೆಯ ಶ್ರೀಮಂತ ರೂಪ….||

ಶ-ರಧಿಗೆ ಸೇತುಬಿಗಿದ ರಾಮನಂತಿರ್ಪ

ತೀ-ರ ದಾಟಿಸುವ ಈ ಗುರುಪಾದ ತೀ

ರ್ಥ-ಗಳಲ್ಲಿ ಮಿಂದು ಪಾವನವಾಗಲಿ ಜೀವ.||..

ಫೊಟೋ ಕೃಪೆ: ಪರ್ಯಾಯ ಶ್ರೀ ಪಲಿಮಾರು ಮಠದ ಅಧಿಕೃತ ವೆಬ್ ಸೈಟ್


ಮತ್ತೆ ಕಾಣಲಿ ನಿಮ್ಮವಧಿ
ರಾಮನ ವೈಭವ ಇಲ್ಲಿಗೆ ಬರಲಿ ||

ಮಧ್ವರಿಂ ಬಂತು ಓಂ ಕಾರ ನಾದ
( ಪ್ರಣವ ಮಂತ್ರ)
ಅರಳಿತು ಇಲ್ಲಿ ಹೂಂ ಕಾರ ವಾಗಿ
(ಹಯಗ್ರೀವ ಮಂತ್ರ )
ರಾಮ ಮಂತ್ರವು ತಾನೆ ಕೂಡಿತು
ರಾಮಮಂದಿರ ಪರಿಯ ಕಂಡಿತು ||

ಮತ್ತೆ ಕಾಣಲಿ ನಿಮ್ಮ ಅವಧಿ
ರಾಮನ ವೈಭವ ಇಲ್ಲಿಗೆ ಬರಲಿ ||

ವಿದ್ಯಾಮಾನ್ಯರ ಶಿಷ್ಯರು ತಾವು
ಗುರುಮಾನ್ಯತಾಧೀಶರೇ ನಿಜವು
ರಾಜರಾಜೇಶ್ವರರ ಪಟ್ಟವು ಇಲ್ಲಿ
ರಾಮರಾಜ್ಯವೇ ಮೊಳೆಯಿತು ಅಲ್ಲಿ ||

ಮತ್ತೆ ಕಾಣಲಿ ನಿಮ್ಮ ಅವಧಿ
ರಾಮನ ವೈಭವ ಇಲ್ಲಿಗೆ ಬರಲಿ ||

ಭಜನೆಯ ತಪವು ಅನುದಿನವು
ಕರಗಳು ತಾಳವ ತಟ್ಟಿದವು
ಮಧುಕರ ಸೇವೆಯು ನಡೆಯಿತು ಇಲ್ಲಿ
ರಾಮಮಂದಿರ ಮೊಳೆಯಿತು ಅಲ್ಲಿ ||

ಮತ್ತೆ ಕಾಣಲಿ ನಿಮ್ಮ ಅವಧಿ
ರಾಮನ ವೈಭವ ಇಲ್ಲಿಗೆ ಬರಲಿ ||

ಕೃಷ್ಣಗೆ ಸಂದಿತು ಲಕ್ಷಾರ್ಚನೆಯು
ರಾಮಬಾಣವು ಲಕ್ಷ್ಯಭೇದವು
ಲಕ್ಷತುಳಸಿಯು ಸಂದಿತು ಇಲ್ಲಿ
ರಾಮಮಂದಿರ ಮೊಳೆಯಿತು ಅಲ್ಲಿ ||

ಮತ್ತೆ ಕಾಣಲಿ ನಿಮ್ಮ ಅವಧಿ
ರಾಮನ ವೈಭವ ಇಲ್ಲಿಗೆ ಬರಲಿ ||

ನಿಂತಿದೆಯಿಲ್ಲಿ ಸ್ವರ್ಣ ಗೋಪುರ
ಬೆಳ್ಳಿಯ ನಾಡು ಬಂಗಾರವಾಯಿತು
ಕೃಷ್ಣ ಮಂದಿರದ ವೈಭವವಿಲ್ಲಿ
ರಾಮಮಂದಿರ ಮೊಳೆಯಿತು ಅಲ್ಲಿ ||

ಮತ್ತೆ ಕಾಣಲಿ ನಿಮ್ಮ ಅವಧಿ
ರಾಮನ ವೈಭವ ಇಲ್ಲಿಗೆ ಬರಲಿ ||

ಸಂತೋಷ್ ಕುಮಾರ್ ಭಟ್, ಭಕ್ರೇಮಠ, ಮುದ್ರಾಡಿ

Advertisement

Udayavani is now on Telegram. Click here to join our channel and stay updated with the latest news.

Next