ಮಂಗಳೂರು: ವೈದ್ಯ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ಭಾರತ ಸರಕಾರ ನೀಡುವ ಅತ್ಯುನ್ನತ ಪದವಿಗಳಲ್ಲಿ ಒಂದಾಗಿರುವ “ಪದ್ಮ ವಿಭೂಷಣ’ ಪ್ರಶಸ್ತಿಯು ಖ್ಯಾತ ಹೃದ್ರೋಗ ತಜ್ಞ ಮಂಗಳೂರಿನ ಡಾ| ಬಿ.ಎಂ. ಹೆಗ್ಡೆ ಖ್ಯಾತಿಯ ಡಾ| ಬೆಳ್ಳೆ ಮೋನಪ್ಪ ಹೆಗ್ಡೆ ಅವರಿಗೆ ಲಭಿಸಿದ್ದು, ಇಂದು(ನವೆಂಬರ್ 09) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹೆಗ್ಡೆ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.
ಇದನ್ನೂ ಓದಿ:ವೀಲ್ ಚೇರ್ ನಲ್ಲೆ ಕುಳಿತು ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಡಾ|ಬಿ.ಎಂ.ಹೆಗ್ಡೆ
ಡಾ| ಹೆಗ್ಡೆ ಅವರಿಗೆ 2010ರಲ್ಲಿ ಭಾರತ ಸರಕಾರದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯೂ ಲಭಿಸಿತ್ತು. 83 ವರ್ಷದ ಅವರು ಹೃದ್ರೋಗ ತಜ್ಞರಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದ ಕೆಲವೇ ಭಾರತೀಯ ವೈದ್ಯರಲ್ಲಿ ಅಗ್ರಗಣ್ಯರು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಅವರು ಸುಲಭ ಆರೋಗ್ಯ ಚಿಕಿತ್ಸೆ ಮತ್ತು ಅನಾವಶ್ಯಕ ಚಿಕಿತ್ಸೆಗಳ ಬಗ್ಗೆ ಮಾಹಿತಿಯನ್ನು ಒಳಗೊಂಡ ಉಪನ್ಯಾಸಗಳ ಮೂಲಕ ಜನಸಾಮಾನ್ಯರಲ್ಲೂ ಜನಪ್ರಿಯತೆಯನ್ನು ಗಳಿಸಿದ್ದಾರೆ.
ಉಡುಪಿಯ ಬೆಳ್ಳೆ ಗ್ರಾಮದಲ್ಲಿ 1938ರ ಆ. 18ರಂದು ಜನಿಸಿದ ಹೆಗ್ಡೆಯವರು ಉಡುಪಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮದ್ರಾಸು ವಿ.ವಿ.ಯಿಂದ ಎಂಬಿಬಿಎಸ್., ಲಕ್ನೋ ವಿ.ವಿ.ಯಿಂದ ಎಂಡಿ ಪದವಿ ಗಳಿಸಿದರು. ಬಳಿಕ ಉನ್ನತ ಶಿಕ್ಷಣಕ್ಕೆ ಇಂಗ್ಲೆಂಡ್ ತೆರಳಿದ್ದರು. ಅಲ್ಲಿರುವ ಎಲ್ಲ ರಾಯಲ್ ಕಾಲೇಜುಗಳ ಫೆಲೋ ಆದ ಪ್ರಥಮ ಹಾಗೂ ಏಕೈಕ ಕನ್ನಡಿಗ ಮತ್ತು ಭಾರತೀಯ ಎನಿಸಿಕೊಂಡರು. ನೋಬಲ್ ಪ್ರಶಸ್ತಿ ಪುರಸ್ಕೃತ ಬೆರ್ನಾರ್ಡ್ ಲೋವ್° ಸೇರಿದಂತೆ ವಿಶ್ವವಿಖ್ಯಾತ ವೈದ್ಯರ ಜತೆ ಕೆಲಸ ಮಾಡಿರುವ ಹೆಗ್ಗಳಿಕೆ ಅವರದ್ದು. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಪ್ರಾಚಾರ್ಯರಾಗಿ, ಡೀನ್ ಆಗಿ, ಮಾಹೆ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ದೇಶದ ಅನೇಕ ರಾಜ್ಯಗಳು ಆರೋಗ್ಯ ಸೇವೆ ವಿಸ್ತರಣೆ ಬಗ್ಗೆ ಅವರ ಸಲಹೆಗಳನ್ನು ಪಡೆದಿವೆ.
ವೈದ್ಯರಾಗಿ, ಅಧ್ಯಾಪಕರಾಗಿ, ಪರೀಕ್ಷಕರಾಗಿ, ಸಂಶೋಧಕರಾಗಿ, ಬರಹಗಾರರಾಗಿ ಶಿಕ್ಷಣ ತಜ್ಞರಾಗಿ, ಆರೋಗ್ಯ ಸಲಹೆಗಾರರಾಗಿ, ವಾಗ್ಮಿಯಾಗಿ ತನ್ನದೇ ಆದ ಛಾಪು ಮೂಡಿಸಿರುವ ಡಾ| ಹೆಗ್ಡೆಯವರು ಪಾದರಸದಂತೆ ಸದಾ ಕ್ರಿಯಾಶೀಲರು. ಇಳಿ ವಯಸ್ಸಿನಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿದ್ದರೂ ಶೀಘ್ರ ಚೇತರಿಸಿಕೊಂಡು ಮತ್ತೆ ದೇಶ ಮತ್ತು ವಿದೇಶಗಳಲ್ಲಿ ಸಂಚರಿಸಿ ಉಪನ್ಯಾಸಗಳನ್ನು ನೀಡುತ್ತಿದ್ದಾರೆ. ಉತ್ತಮ ಲೇಖಕರಾಗಿರುವ ಅವರು ಆಂಗ್ಲ, ಕನ್ನಡದಲ್ಲಿ 35ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ.
ವಿದೇಶಗಳಲ್ಲೂ ಚಿರಪರಿಚಿತ :
ಡಾ| ಬಿ.ಎಂ. ಹೆಗ್ಡೆ ಅವರ ಹೆಸರು ಜಗತ್ತಿನ ಅನೇಕ ರಾಷ್ಟ್ರಗಳ ವೈದ್ಯಕೀಯ ಸಮುದಾಯದಲ್ಲಿ ಚಿರಪರಿಚಿತ. ಅನೇಕ ವೈದ್ಯಕೀಯ ಸಂಶೋಧನೆಗಳನ್ನು ಪ್ರಕಟಿಸಿರುವ ಅವರು ಬ್ರಿಟನ್, ಅಮೆರಿಕ, ಜರ್ಮನಿ, ಕುವೈಟ್, ಚೀನ ಮುಂತಾದ ದೇಶಗಳು ಸೇರಿದಂತೆ ಅಂತಾರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಕಗಳ ಸಂಪಾದಕ ಮಂಡಳಿ ಹಾಗೂ ಸಲಹಾ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಪ್ರತಿಷ್ಠಿತ ಬ್ರಿಟನ್ ಮೆಡಿಕಲ್ ಜರ್ನಲ್‌ನ ರೆಫ್ರೀ ಆಗಿದ್ದಾರೆ. ಲಂಡನ್‌ನ ಕಾಲೇಜುಗಳ ಎಂಆರ್‌ಸಿಪಿ ಪರೀಕ್ಷಕರಾಗಿ ಆಯ್ಕೆಯಾದ ಪ್ರಥಮ ಭಾರತೀಯ. ಪಿಎಚ್‌ಡಿ ಪರೀಕ್ಷಕರಾಗಿ ದಕ್ಷಿಣ ಅಮೆರಿಕ ಹೊರತು ಪಡಿಸಿ ಉಳಿದ ಎಲ್ಲ ಖಂಡ ಗಳ ಪ್ರಮುಖ ವಿವಿಗಳಿಗೆ ಹೋಗಿ ದ್ದಾರೆ. 100ಕ್ಕೂ ಅಧಿಕ ಜಾಗತಿಕ ದತ್ತಿ ಉಪನ್ಯಾಸಗಳನ್ನು ನೀಡಿದ್ದಾರೆ.
ಆರೋಗ್ಯ ಮತ್ತು ಅಧ್ಯಾತ್ಮ :
ಡಾ| ಹೆಗ್ಡೆ ಅವರು ಆರೋಗ್ಯದಲ್ಲಿ ಅಧ್ಯಾತ್ಮದ ಮಹತ್ವ, ಅದರ ವೈಜ್ಞಾನಿಕ ಸತ್ವಗಳು ಹಾಗೂ ಭಾರತೀಯ ಸನಾತನ ಸಂಸ್ಕೃತಿಯ ಹಿರಿಮೆಯ ಬಗ್ಗೆ ತನ್ನ ಉಪನ್ಯಾಸಗಳಲ್ಲಿ ಮನ ಮುಟ್ಟುವಂತೆ ವಿವರಿಸುತ್ತಾರೆ. ಅಲೋಪತಿ ವೈದ್ಯರಾಗಿದ್ದರೂ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗಕ್ಕೆ ಆದ್ಯತೆ ನೀಡುವ ಅವರು 8ಕ್ಕೂ ಹೆಚ್ಚು ಭಾಷೆಗಳಲ್ಲಿ ವ್ಯವಹರಿಸಬಲ್ಲವರಾಗಿದ್ದಾರೆ.
ಪ್ರಮುಖ ಪ್ರಶಸ್ತಿಗಳು :
ಡಾ| ಬಿ.ಎಂ. ಹೆಗ್ಡೆ ಸಾಧನೆ ಹಾಗೂ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ, ಪುರಸ್ಕಾರಗಳು ನೀಡಲಾಗಿದೆ. ಭಾರತ ಸರಕಾರದ ಪದ್ಮಭೂಷಣ, ಡಾ| ಬಿ.ಸಿ. ರಾಯ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಇದರಲ್ಲಿ ಪ್ರಮುಖವಾದವು.
ತುಂಬಾ ಖುಷಿಯಾಗಿದೆ :
ಭಾರತ ಸರಕಾರವು ನನ್ನ ಸೇವೆಯನ್ನು ಗುರುತಿಸಿ ಇಷ್ಟೊಂದು ದೊಡ್ಡ ಪುರಸ್ಕಾರ ನೀಡಿರುವುದು ಖುಷಿ ತಂದಿದೆ. ಈ ಸಂದರ್ಭದಲ್ಲಿ ದೇಶಕ್ಕೆ ಹಾಗೂ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ನಾನು ಹಾರೈಸುತ್ತೇನೆ.
– ಡಾ| ಬಿ.ಎಂ. ಹೆಗ್ಡೆ