Advertisement

ಅಮೇರಿಕಾದಲ್ಲಿ ಮಾತು ಕೊಟ್ಟು, ಬೆಂಗಳೂರಲ್ಲಿ ಈಡೇರಿಸಿದ್ರು

06:00 AM Nov 17, 2017 | Team Udayavani |

ಕಳೆದ ವರ್ಷ ಅಮೇರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನಕ್ಕೆ ಹೋದ ಸಂದರ್ಭದಲ್ಲೇ ನೃತ್ಯ ನಿರ್ದೇಶಕ ಇಮ್ರಾನ್‌ ಸರ್ದಾರಿಯಾ, ತಾವು ನಿರ್ದೇಶಿಸುತ್ತಿರುವ ಹೊಸ ಚಿತ್ರದ ಬಗ್ಗೆ ಅಂಬರೀಶ್‌ಗೆ ಹೇಳಿದ್ದರಂತೆ. ಆಗಲೇ ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಬರಬೇಕು ಎಂದು ಆಹ್ವಾನಿಸಿದ್ದರಂತೆ. “ಆಯ್ತು ಹೋಗ್ಲಾ …’ ಎಂದು ಪ್ರಾಮಿಸ್‌ ಮಾಡಿದ್ದ ಅಂಬರೀಶ್‌, ಈಗ ಅದನ್ನು ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ “ಉಪ್ಪು ಹುಳಿ ಖಾರ’ ಚಿತ್ರದ ಪಾತ್ರಗಳ ಟೀಸರ್‌ ಬಿಡುಗಡೆ ಸಮಾರಂಭ ನಡೆಯಿತು. ಆ ಸಮಾರಂಭಕ್ಕೆ ಅಂಬರೀಶ್‌ ಅವರೇ ಮುಖ್ಯ ಅತಿಥಿಯಾಗಿ ಬಂದಿದ್ದರು. ಅವರ ಜೊತೆಗೆ ಇನ್‌ಫೋಸಿಸ್‌ನ ಉಪಾಧ್ಯಕ್ಷರಾದ ರಾಮ್‌ದಾಸ್‌ ಕಾಮತ್‌ ಸಹ ಇದ್ದರು. ಅಂದು ಒಟ್ಟು ನಾಲ್ಕು ಟೀಸರ್‌ಗಳು ಬಿಡುಗಡೆಯಾದವು.

Advertisement

ಮೊದಲು ಚಿತ್ರದ ಮೂವರು ನಾಯಕರು ಮತ್ತು ನಾಯಕಿಯರನ್ನು ಪರಿಚಯಿಸುವ ಮೂವರು ಟೀಸರ್‌ಗಳು ಬಿಡುಗಡೆಗೊಂಡವು. ನಂತರ ಮಾಲಾಶ್ರೀ ಅವರ ಇನ್ನೊಂದು ಟೀಸರ್‌ ಬಿಡುಗಡೆಯಾಯಿತು. ನಂತರ ಮಾತನಾಡಿದ ಮಾಲಾಶ್ರೀ, ತಮ್ಮನ್ನು ಈ ಚಿತ್ರದಲ್ಲಿ ಬಹಳ ವಿಭಿನ್ನವಾಗಿ ತೋರಿಸಿದ್ದಾರೆ ಎಂದು ಹೇಳಿದರು. “ನಾನು ಇದುವರೆಗೂ ಹಲವು ಚಿತ್ರಗಳಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದಲ್ಲೂ ಪೊಲೀಸ್‌ ಅಧಿಕಾರಿಯ ಪಾತ್ರವಾದರೂ, ವಿಭಿನ್ನವಾದ ಪಾತ್ರವಿದೆ. ಇಮ್ರಾನ್‌ ಹೇಳಿದಂಗೆ ಮಾಡಿದ್ದೀನಿ. ನಾನು ಈ ಚಿತ್ರದಲ್ಲಿ ಹೇಗೆ ಮಾಡಿದ್ದೀನಿ ಅಂತ ನೀವೆಲ್ಲಾ ಹೇಳಬೇಕು. ಹೊಸಬರ ಜೊತೆಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿತು. ಇನ್ನು ಈ ಚಿತ್ರದಲ್ಲಿ ಇಮ್ರಾನ್‌ ನನ್ನಿಂದ ಎರಡು ಸ್ಟೆಪ್‌ ಹಾಕಿಸಿದ್ದಾರೆ. ಹೇಗಿದೆ ಎಂಬುದು ನೀವೇ ನೋಡಿ’ ಎಂದು ಮಾಲಾಶ್ರೀ ಅವರು ಮೈಕು ಕೆಳಗಿಟ್ಟರು.

ಟೀಸರ್‌ ನೋಡಿ ನೀರು ಕುಡಿಬೇಕು ಎಂದೇ ಮಾತು ಶುರು ಮಾಡಿದರು ಅಂಬರೀಶ್‌. “ಟೀಸರ್‌ ನೋಡಿ ಖುಷಿಯಾಯಿತು. ಅಮೇರಿಕಾಗೆ ಹೋದಾಗ ಇಮ್ರಾನ್‌ ಹೇಳಿದ್ದರು. ಅದರಂತೆ ಬಂದೆ. ಅನುಶ್ರೀ ಟಿವಿಗಿಂಥ ಹತ್ತುಪಟ್ಟು ಚೆನ್ನಾಗಿ ಕಾಣಿಸುತ್ತಾರೆ. ಕನ್ನಡ ಚಿತ್ರರಂಗಕ್ಕೆ ತುಂಬಾ ಹೊಸಬರು ಬರುತ್ತಿದ್ದಾರೆ. ಹೊಸಬರು ಬರಬೇಕು. ಚಿತ್ರರಂಗವನ್ನು ಬೆಳೆಸಬೇಕು’ ಎಂದು ಅಂಬರೀಶ್‌ ಹಾರೈಸಿದರು.

ಅದಕ್ಕೂ ಮುನ್ನ ಶರತ್‌, ಅನುಶ್ರೀ, ಶಶಿ, ಜಯಶ್ರೀ, ಧನು ಮುಂತಾದವರು ಮಾತಾಡಿ ತಮ್ಮ ಪ್ರಯತ್ನಕ್ಕೆ ಶುಭ ಕೋರಿದರು. ಇಮ್ರಾನ್‌ ಮತ್ತು ನಿರ್ಮಾಪಕ ರಮೇಶ್‌ ರೆಡ್ಡಿ ಸಹ ಚಿತ್ರಕ್ಕೆ ಹಾರೈಸಿ ಎಂದು ಕೇಳುತ್ತಾ ಮಾತು ಮುಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next