Advertisement

“ವ್ಯವಸ್ಥೆ ಬದಲಾಯಿಸಿ ಮನೆಗೆ ಆಹಾರ ತಲುಪಿಸಿ’; ಅಧಿಕಾರಿಗಳ ವಿರುದ್ಧ ಸ್ಪೀಕರ್‌ ಗರಂ

12:10 AM Mar 26, 2022 | Team Udayavani |

ಬೆಂಗಳೂರು: ಮಾತೃಪೂರ್ಣ ಯೋಜನೆ ಅಡಿಯಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರು ಅಂಗನವಾಡಿಗೆ ಬಂದು ಊಟ ಮಾಡಬೇಕೆನ್ನುವ ಸರಕಾರದ ಯೋಜನೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದ್ದು, ಮನುಷ್ಯರಾದವರು ಯಾರಾದರೂ ಈ ರೀತಿಯ ಯೋಜನೆ ಮಾಡುತ್ತಾರಾ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದರು.

Advertisement

ವಿಧಾನಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಟಿ.ಡಿ. ರಾಜೇಗೌಡ ಪ್ರಶ್ನೆ ಕೇಳಿ, ಮಾತೃಪೂರ್ಣ ಯೋಜನೆ ಯಡಿ ಅಂಗನವಾಡಿ ಕೇಂದ್ರದಲ್ಲೇ ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುತ್ತಿರುವುದರಿಂದ ಮಲೆ ನಾಡು ಭಾಗದಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಸಮಸ್ಯೆ ಆಗುತ್ತಿದೆ. ಅದರ ಬದಲು ಅವರ ಮನೆಗಳಿಗೆ ಆಹಾರ ವಿತರಣೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ದುರ್ಬಳಕೆಯಾಗುತ್ತದೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಮಾತನಾಡಿ, 2017ರ ವರೆಗೂ ಗರ್ಭಿಣಿಯರು ಮತ್ತು ಬಾಣಂತಿಯರ ಮನೆಗಳಿಗೆ ಆಹಾರದ ಕಿಟ್‌ಗಳನ್ನು ಒದಗಿಸಲಾಗುತ್ತಿತ್ತು. ಅವರಿಗೆ ನೀಡುವ ಪೌಷ್ಟಿಕ ಆಹಾರವನ್ನು ಅವರ ಕುಟುಂಬದವರೇ ಹೆಚ್ಚಾಗಿ ತಿನ್ನುತ್ತಾರೆ, ಇದರಿಂದ ಅವರಿಗೆ ಸಿಗಬೇಕಾದ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ ಎನ್ನುವ ಕಾರಣಕ್ಕೆ ಗರ್ಭಿಣಿಯರು ಮತ್ತು ಬಾಣಂತಿಯರು ಅಂಗನವಾಡಿಗೆ ಬಂದು ಊಟ ಮಾಡಿಕೊಂಡು ಹೋಗು ವ್ಯವಸ್ಥೆ ಮಾಡಲಾಗಿದೆ ಎಂದ‌ರು. ಇದೊಂದು ಅಮಾನವೀಯ ನಡೆ ಎಂದು ಕಾಂಗ್ರೆಸ್‌ ಶಾಸಕ ರಮೇಶ್‌ ಕುಮಾರ್‌ ಹೇಳಿದರು.

ಗರ್ಭಿಣಿಯರು ಬರುವುದಾದರೂ ಹೇಗೆ?
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಮನ್‌ ಸೆನ್ಸ್‌ ಇರುವವರು 2017ರಲ್ಲಿ ಇಂತಹ ಆದೇಶ ಮಾಡುತ್ತಿರಲಿಲ್ಲ. ಗರ್ಭಿಣಿಯರು, ಬಾಣಂತಿಯರು ಅಂಗನವಾಡಿಗೆ ಹೋಗಿ ಊಟ ಮಾಡಿಕೊಂಡು ಬರಬೇಕು ಎಂಬುದು ಸಾಮಾನ್ಯ ಜ್ಞಾನಕ್ಕೂ ಬರಲ್ಲ ಅಂದರೆ ಹೇಗೆ? ಯಾವ ವರದಿ ಯಾವ ಕಾರಣಕ್ಕಾಗಿ ಕೊಟ್ಟಿ¨ªಾರೋ ಗೊತ್ತಿಲ್ಲ. ಬಾಣಂತಿಯರು ಹಾಸಿಗೆಯಿಂದ ಏಳಲು ಎಷ್ಟು ಸಮಯ ಬೇಕು ಎಂದು ನಮಗೆಲ್ಲ ಗೊತ್ತಿದೆ. ಅವರು ಅಂಗನವಾಡಿಗೆ ಬಂದು ಊಟ ಮಾಡಿ ಹೋಗಿ ಎಂದರೆ ಹೇಗೆ? ಇದು ಯಾರದೋ ಸ್ವಾರ್ಥಕ್ಕಾಗಿ ನೀಡಿರುವ ವರದಿಯಂತಿದೆ. ಕೇಂದ್ರ ಸರಕಾರದ ಅಧಿಕಾರಿಗಳು ಈ ವರದಿ ನೀಡಿದ್ದರೆ ಅವರೇನು ಎಲ್ಲವೂ ಗೊತ್ತಿರುವವರಲ್ಲ. ಅವರಿಗೇ ಪತ್ರ ಬರೆದು ಈ ವ್ಯವಸ್ಥೆಯನ್ನು ಬದಲಾಯಿಸಿ ಎಂದು ಖಾರವಾಗಿ ಸಲಹೆ ನೀಡಿದರು.

ಚರ್ಚಿಸಿ ತೀರ್ಮಾನ: ಹಾಲಪ್ಪ ಆಚಾರ್‌
ಕಾಂಗ್ರೆಸ್‌ನ ಡಾ| ಅಂಜಲಿ ನಿಂಬಾಳ್ಕರ್‌, ಬಾಣಂತಿಯರು ಮತ್ತು ಗರ್ಭಿಣಿಯರಿಗೆ ನೀಡುವ ಆಹಾರವನ್ನು ಒಂದೊಂದು ವಾರ ಒಂದೊಂದು ಪದಾರ್ಥ ನೀಡುತ್ತಾರೆ. ಒಂದು ವಾರ ಅಡುಗೆ ಎಣ್ಣೆ ಕೊಟ್ಟರೆ, ಒಂದು ವಾರ ಬೇಳೆ ಕಾಳು ಕೊಡುತ್ತಾರೆ. ಅದು ಹೇಗೆ ಪೌಷ್ಟಿಕ ಆಹಾರ ನೀಡಿದಂತಾಗುತ್ತದೆ. ಎಲ್ಲವನ್ನೂ ಒಮ್ಮೆಯೇ ಕೊಡಬೇಕು ಎಂದು ಆಗ್ರಹಿಸಿದರು. ಸದನದಲ್ಲಿ ಬಹುತೇಕ ಸದಸ್ಯರು ಗರ್ಭಿಣಿಯರು ಮತ್ತು ಬಾಣಂತಿಯರ ಮನೆಗಳಿಗೆ ಆಹಾರ ತಲುಪಿಸುವ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು. ಎಲ್ಲ ಸದಸ್ಯರ ಭಾವನೆಯಂತೆ ಈ ವ್ಯವಸ್ಥೆ ಬದಲಾಯಿಸುವ ಕುರಿತು ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಸಚಿವ ಹಾಲಪ್ಪ ಆಚಾರ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next