ಬೆಂಗಳೂರು: ‘ಸ್ಪೀಕರ್ ಅವರ ಅಧಿಕಾರವನ್ನು ಪ್ರಶ್ನೆ ಮಾಡುವ ಹಾಗಿಲ್ಲ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಭಾನುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್ ಹಮ್ಮಿಕೊಂಡಿದ್ದ ‘ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಶಾಸಕರ ಅನರ್ಹತೆ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಸ್ಪೀಕರ್ ತೀರ್ಪಿನ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡಲಾರೆ ಎಂದು ತಿಳಿಸಿದರು.
ವಿಧಾನ ಸಭಾಧ್ಯಕ್ಷರಿಗೆ ಅವರದ್ದೇ ಆದಂತಹ ಅಧಿಕಾರವಿದೆ. ಅವರೇ ಸುಪ್ರೀಂ. ಅವರು ಆದೇಶ ಮಾಡಿದ್ದಾರೆ. ಅದು ಸಮಂಜಸ ಹೌದೋ ಅಥವಾ ಇಲ್ಲವೋ ಎಂಬುವುದನ್ನು ಪ್ರಶ್ನಿಸಲು ಸರ್ವೋಚ್ಚ ನ್ಯಾಯಾಲಯ ಅಥವಾ ಹೈಕೋರ್ಟ್‌ಗೆ ಹೋಗುವ ಸಾಧ್ಯತೆ ಇವೆ ಎಂದರು.
ವಿಚಾರಣೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗಿತ್ತು: ಶಾಸಕರ ಅನರ್ಹತೆ ಕುರಿತು ಸ್ಪೀಕರ್ ನೀಡಿದ ತೀರ್ಪಿನ ಬಗ್ಗೆ ಪ್ರಶ್ನೆ ಮಾಡಬೇಕಾದ ಜಾಗ ಬೇರೆ ಇರುವ ಕಾರಣ ಈ ಬಗ್ಗೆ ಮಾತಾನಾಡುವುದು ಸಮಂಜಸವಲ್ಲ. ಆದರೆ ಅತೃಪ್ತ ಶಾಸಕರನ್ನು ವಿಚಾರಣೆ ಮಾಡಿ, ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು. ಆ ಕೆಲಸವಾಗಿಲ್ಲ ಎಂದು ದೂರಿದರು.
ಶಾಸಕರ ಅನರ್ಹತೆ ವಿಚಾರದಲ್ಲಿ ‘ಜೆಡಿಎಸ್-ಕಾಂಗ್ರೆಸ್’ ಸಮಿಶ್ರ ಸರ್ಕಾರದ ಪ್ರಭಾವ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅತೃಪ್ತ ಶಾಸಕರನ್ನು ವಿಚಾರಣೆ ಮಾಡಿ ಬೇಗ ಒಂದು ನಿರ್ಧಾರವನ್ನು ತೆಗೆದು ಕೊಳ್ಳಬೇಕಾಗಿತ್ತು. ಮೇಲ್ನೋಟಕ್ಕೆ ಸಣ್ಣ-ಪುಟ್ಟ ಸಂಶಯಗಳು ಕಾಣುತ್ತಿವೆ. ಆದರೆ ಸ್ಪೀಕರ್ ಅವರು ನೀಡಿರುವ ತೀರ್ಪಿನ ಬಗ್ಗೆ ಯಾವುದೇ ರೀತಿಯ ಆರೋಪ ಮಾಡಲಾರೆ ಎಂದರು.