Advertisement

ತರಾತುರಿಯಲ್ಲಿ ಸದನಕ್ಕೆ ವಿಧೇಯಕ ತಂದ್ರೆ ಒಪ್ಪಲ್ಲ

06:00 AM Feb 04, 2018 | Team Udayavani |

ಬೆಂಗಳೂರು: “ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ, ತರಾತುರಿಯಲ್ಲಿ ವಿಧೇಯಕ ಮಂಡಿಸಲು ಅವಕಾಶ ಕೊಡುವುದಿಲ್ಲ’ ಎಂದು ಸ್ಪೀಕರ್‌ ಕೆ.ಬಿ.ಕೋಳಿವಾಡ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಅಧಿವೇಶನ ಸಂದರ್ಭದಲ್ಲಿ ದಿನದ ಕೊನೆಯಲ್ಲಿ ಅಥವಾ ಅಧಿವೇಶನ ಮುಗಿಯುವ ದಿನ ವಿಧೇಯಕ ಮಂಡಿಸಿ ಅಂಗೀಕಾರ ಮಾಡಿಕೊಳ್ಳುವ ಪ್ರವೃತ್ತಿ ಸರಿಯಲ್ಲ. ಹೀಗಾಗಿ, ಈ ಬಾರಿ 
ಅದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.

ಸದನ ಸಮಿತಿಗಳು ಸಲ್ಲಿಸುವ ವರದಿಗಳ ಬಗ್ಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ಕಾಲಮಿತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು. ವರದಿಗಳನ್ನು ಕೋಲ್ಡ್‌ ಸ್ಟೋರೇಜ್‌ನಲ್ಲಿಟ್ಟು ಸುಮ್ಮನಿರಬಾರದು. ಕೆರೆ ಒತ್ತುವರಿ ಸಂಬಂಧ ವರದಿ ಕೊಟ್ಟಿದ್ದೇನೆ. ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ  ಮಾಹಿತಿ ಇಲ್ಲ. ನೈಸ್‌ ವರದಿ, ವಿದ್ಯುತ್‌ ಖರೀದಿ ಹಗರಣ ವರದಿ ಸೇರಿ ಸಾಕಷ್ಟು ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ಲಂಡನ್‌ನ ಹೌಸ್‌ ಆಫ್ ಕಾಮನ್ಸ್‌ನಲ್ಲಿ ಸಮಿತಿಗಳು ಸಲ್ಲಿಸಿದ ವರದಿಗಳ ಬಗ್ಗೆಯೇ ಅಧಿವೇಶನ ಸಂದರ್ಭದಲ್ಲಿ ಒಂದೆರಡು ದಿನ ಚರ್ಚೆ ಮಾಡಿ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಪ್ರಕಟಿಸಲಾಗುತ್ತದೆ. ಅದೇ ಮಾದರಿ ಇಲ್ಲೂ ಬರಬೇಕು. ಆ ಬಗ್ಗೆ ನಾನು ಹಲವು ಬಾರಿ ಸದನ ಸಮಿತಿ  ಸದಸ್ಯರ ಜತೆ ಚರ್ಚಿಸಿದ್ದೇನೆ. ಸರ್ಕಾರ ಇದಕ್ಕೆ ಸ್ಪಂದಿಸಬೇಕು ಎಂದರು. 

ಅಧಿವೇಶನ ಸಂದರ್ಭದಲ್ಲಿ ಶಾಸಕರು ಹೆಚ್ಚು ಚರ್ಚೆಗಳಲ್ಲಿ ಭಾಗವಹಿಸಬೇಕು. ಕೆಲವು ಸದಸ್ಯರು ಆ ವಿಚಾರದಲ್ಲಿ ಬದ್ಧತೆ ತೋರುತ್ತಿದ್ದಾರೆ. ಆದರೆ, ಎಲ್ಲರೂ ಪಾಲ್ಗೊಳ್ಳಬೇಕು ಎಂಬುದು ನನ್ನ ಸಲಹೆ. ಉತ್ತರ ಕರ್ನಾಟಕ ಭಾಗದಲ್ಲಿ ಅಧಿವೇಶನ ನಡೆದರೆ ಆ ಭಾಗದವರೇ ಸದನಕ್ಕೆ ಹಾಜರಾಗದ ಬಗ್ಗೆಯೂ ಗಮನಿಸಿದ್ದೇನೆ. ಅಧಿವೇಶನ ಸಂದರ್ಭದಲ್ಲಿ ಕಲಾಪಗಳಲ್ಲಿ ಪಾಲ್ಗೊಂಡು ಪ್ರಮುಖ ತೀರ್ಮಾನಗಳ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

Advertisement

60 ದಿನ ಅಧಿವೇಶನ ನಡೆದೇ ಇಲ್ಲ: ವರ್ಷಕ್ಕೆ 60 ದಿನ ಅಧಿವೇಶನ ನಡೆಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಸರ್ಕಾರದ ಅವಧಿಯಲ್ಲಿ ಒಂದು ವರ್ಷವೂ 60 ದಿನ ಅಧಿವೇಶನ ನಡೆದಿಲ್ಲ. 2013ರಲ್ಲಿ 35 ದಿನ, 2014ರಲ್ಲಿ 53 ದಿನ, 2015ರಲ್ಲಿ 58,  2016ರಲ್ಲಿ 35, 2017ರಲ್ಲಿ 40 ದಿನ ನಡೆದಿದೆ. ಒಟ್ಟು 221 ದಿನ ಅಧಿವೇಶನ ನಡೆದಿದೆ ಎಂದು ಸ್ಪೀಕರ್‌ ವಿವರಿಸಿದರು.

12 ದಿನ ಪ್ರಶ್ನೋತ್ತರ
ಫೆ.5ರಿಂದ 9 ರವರೆಗೆ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ನಡೆಯಲಿದ್ದು, ನಂತರ ಫೆ.16 ರಿಂದ 28 ರವರೆಗೆ ಬಜೆಟ್‌ ಅಧಿವೇಶನ ನಡೆಯಲಿದೆ. ಫೆ.16ರಂದು ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  2018-19ನೇ ಸಾಲಿನ ಬಜೆಟ್‌ ಮಂಡಿಸ‌ಲಿದ್ದಾರೆ. ಒಟ್ಟು 12 ದಿನಗಳ ಕಾಲ ಪ್ರಶ್ನೋತ್ತರ ನಿಗದಿಪಡಿಸಲಾಗಿದೆ. ಒಟ್ಟು 900 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ ಎಂದು ಸ್ಪೀಕರ್‌ ಕೆ.ಬಿ.ಕೋಳಿವಾಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next