ಶಿರಸಿ: ಸೃಷ್ಟಿಯ ಸತ್ಯದ ಶಿಕ್ಷಣವನ್ನು ಇಂದಿನ ಮಕ್ಕಳಿಗೆ ನೀಡುವಂತೆ ಆಗಬೇಕಿದೆ ಎಂದು ಸ್ಪೀಕರ್, ರಾಜಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಮಂತ್ರಾಲಯದ ಶ್ರೀಗುರು ರಾಘವೇಂದ್ರ ಮಹಾಸ್ವಾಮಿಜಿಗಳ ವೃಂದಾವನ ದರ್ಶನ ಪಡೆದು, ಮಠದಿಂದ ನೀಡಲಾದ ಸಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಭಾರತೀಯ ಮಕ್ಕಳಿಗೆ ಈವರೆಗೂ ಸೃಷ್ಟಿಯ ಸತ್ಯದ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಇದು ಮಕ್ಕಳಿಗೆ ಸಿಗಬೇಕು. ಸನಾತನ ಸಂಸ್ಕೃತಿ ಸಿಗಲು ಸೃಷ್ಟಿ ಸತ್ಯದ ಅರಿವು ಬೇಕು. ಇದು ಈ ಜ್ಞಾನದ ಬೆಳಕಿನಿಂದ ಸಾಧ್ಯ. ಜ್ಞಾನದ ಬೆಳಕು ಹಿಂದಿನಂತೇ ಮುಂದೆ ಕೂಡ ಮುಂದಿನ ತಲೆಮಾರಿಗೆ ಸಿಗಬೇಕು. ಮಂತ್ರಾಲಯದಂತಹ ಕೇಂದ್ರದಲ್ಲಿ ಇಂಥ ಸೃಷ್ಟಿ ಸತ್ಯದ ಬೆಳಕು ಸಿಗಲಿ. ಈ ಮೂಲಕ ಈ ಕೊರತೆ ನೀಗಿಸಬೇಕು ಎಂದು ಕಾಗೇರಿ ಮನವಿ ಮಾಡಿದರು.
ಭಕ್ತಿ ಮಾರ್ಗದಲ್ಲಿ ಮುನ್ನಡೆದರೆ ಜ್ಞಾನದ ಬೆಳಕು ಸಿಗುತ್ತದೆ. ಅದಕ್ಕಾಗಿ ಗುರು, ಹಿರಿಯರು ಹಾಗೂ ದೇವರಿಗೆ ಗೌರವ ನೀಡಬೇಕು. ಅದಾದಾಗ ರಾಮ ರಾಜ್ಯ ಕನಸು ನನಸಾಗುತ್ತದೆ ಎಂದರು.
ಇಂದು ಭಾರತೀಯರ ನಂಬಿಕೆಗೆ ಧಕ್ಕೆ ಆಗುವ ಅನೇಕ ಸಂಗತಿ ಮತ್ತು ಸವಾಲುಗಳಿವೆ. ಈ ಸವಾಲುಗಳಿಗೆ ಪ್ರತಿ ಸವಾಲು ಹಾಕಿ ನಡೆಯಬೇಕಾದ ಕಾಲ ಘಟ್ಟದಲ್ಲಿ ಇದ್ದೇವೆ. ರಾಮ, ಕೃಷ್ಣ, ಗೀತೆ, ಗೋವು ನಮ್ಮ ನಂಬಿಕೆ. ಈ ನಂಬಿಕೆಗೆ ಘಾಸಿ ಮಾಡುವ ಶಕ್ತಿಗಳೂ ಇದೆ ಎಂದೂ ಆತಂಕಿಸಿದರು. ಸನಾತನ ಸಂಸ್ಕ್ರತಿ ರಕ್ಷಣೆ ಮಾಡಬೇಕು. ಸ್ವಾರ್ಥದ ದುರಾಸೆ ಕೆಲಸ ಮಾಡುವವ ರಿಗೂ ಜ್ಞಾನದ ಬೆಳಕು ಹರಿಸಿ ಸಂಸ್ಕೃತಿಗಳ ರಕ್ಷಣೆಯ ದಾರಿಗೆ ಕರೆತರಬೇಕು ಎಂದರು..
ಇದನ್ನೂ ಓದಿ : ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ 5 ಕೋಟಿ ರೂ. ಕಳ್ಳತನ
ಸಾನ್ನಿಧ್ಯ ನೀಡಿದ್ದ ಪೀಠಾಧೀಶ್ವರರ ಡಾ.ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದಗಳು ಕಾಗೇರಿ ಅವರನ್ನು ಗೌರವಿಸಿ, ಸರಳತೆ, ಬದ್ಧತೆಯಲ್ಲಿ ಕೆಲಸ ಮಾಡುವ ಮೂಲಕ ಕಾಗೇರಿ ಅವರು ಗಮನ ಸೆಳೆದಿದ್ದಾರೆ. ಅವರ ಮೂಲಕ ಸಮಾಜದ ಸಮಗ್ರ ಏಳ್ಗೆಗೆ ಇನ್ನಷ್ಟು ಸೇವೆ ಸಿಗಲು ಗುರು ರಾಘವೇಂದ್ರರ ಆಶೀರ್ವಾದ ಇರಲಿ. ಅಂಥ ನಾಯಕರ ಸಂಖ್ಯೆ ಹೆಚ್ಚಲಿ ಎಂದರು.
ಜಸ್ಟೀಸ್ ಕೃಷ್ಣಮೋಹನ, ಗಝಲ್ ಶ್ರೀನಿವಾಸ ಸೇರಿದಂತೆ ಕರ್ನಾಟಕ, ಆಂದ್ರಪ್ರದೇಶ, ತೇಲಂಗಾಣದ ತಜ್ಞರನ್ನು ಗೌರವಿಸಲಾಯಿತು.