ಸಕಲೇಶಪುರ: ತೀವ್ರ ಬರಪೀಡಿತ ಕೋಲಾರ ಜಿಲ್ಲೆಯ ಜನರಿಗೆ ಎತ್ತಿನಹೊಳೆ ಕಾಮಗಾರಿ ಬಗ್ಗೆ ಮನವರಿಕೆ ಮಾಡಿಸಲು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜನರೊಂದಿಗೆ ಖಾಸಗಿಯಾಗಿ ಆಗಮಿಸಿ ಪರಿಶೀಲನೆ ನಡೆಸಿದ್ದೇನೆ ಎಂದು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.
ತಾಲೂಕಿನಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿರುವ ಹೆಬ್ಬನಹಳ್ಳಿ, ಹೆಬ್ಬಸಾಲೆ, ಮತ್ತಿತರ ಕಡೆಗಳಿಗೆ ಶುಕ್ರವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದ್ದು, ಜನ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳ ಜನತೆಗೆ ನೀರು ಹರಿಸುವ ದೃಷ್ಟಿಯಿಂದ ಎತ್ತಿನಹೊಳೆ ಯೋಜನೆ ಆರಂಭಿಸ ಲಾಗಿದೆ. ಈ ನಿಟ್ಟಿನಲ್ಲಿ ತನ್ನ ಕ್ಷೇತ್ರವಾದ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಜನತೆಗೆ ಕಾಮಗಾರಿ ಬಗ್ಗೆ ಖುದ್ದಾಗಿ ಮನವರಿಕೆ ಮಾಡಿಸಲು ಕ್ಷೇತ್ರದ 3 ಹೋಬಳಿ ಗಳ ಪ್ರತಿ ಗ್ರಾಪಂಗೆ 8 ಜನರಂತೆ 3 ಬಸ್‌ಗಳಲ್ಲಿ ಒಟ್ಟು 150ಕ್ಕೂ ಹೆಚ್ಚು ಜನರನ್ನು ಕರೆ ತಂದು ಕಾಮಗಾರಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಜನರಲ್ಲಿ ನೀರು ದೊರಕುವ ಬಗ್ಗೆ ಒಂದು ಆಶಾಭಾವನೆ ಹುಟ್ಟಿದೆ. ಯಾವುದೇ ರೀತಿಯ ರಾಜಕೀಯ ಗಿಮಿಕ್ ಮಾಡಲು ಜನರನ್ನು ಇಲ್ಲಿಗೆ ಕರೆತಂದಿಲ್ಲ ಎಂದರು.
ಸಂಕಷ್ಟದಲ್ಲಿರುವ ಜನರಿಗೆ ಕೂಡಲೇ ನೀರು ಹರಿಯಬೇಕಾಗಿದೆ. ಇಲ್ಲಿನ ಜನರಿಗೂ ಯಾವುದೇ ಅನ್ಯಾ ಯವಾಗಬಾರದು. ಮಲೆನಾಡಿನ ಅಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಹನಿ ನೀರಿಗೂ ಸಮಸ್ಯೆ: ಶ್ರೀನಿವಾಸಪುರದಿಂದ ಆಗಮಿಸಿದ್ದ ತಾಪಂ ಸದಸ್ಯ ಕೆ.ಕೆ.ಮಂಜು, ಕೋಲಾರ ಭಾಗದ ಜನ ಹನಿ ಕುಡಿವ ನೀರಿಗಾಗಿ ಪರದಾಡು ತ್ತಿದ್ದಾರೆ. ಜಾನುವಾರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ನೀರಿಲ್ಲ. 1000 ಅಡಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಜನ ಪ್ರೇಕ್ಷಣಿಯ ಸ್ಥಳಗಳಿಗೆ ಸಂತೋಷಕ್ಕಾಗಿ ಹೋದರೆ ನಾವು ನೀರಿಗಾಗಿ ಇಲ್ಲಿಗೆ ಬಂದಿದ್ದೇವೆ. ಇಲ್ಲಿನ ಕಾಮಗಾರಿ ನೋಡಿ ನಮಗೆ ಸಂತೋಷವಾಗಿದೆ. ರಮೇಶ್ ಕುಮಾರ್ ನಮ್ಮ ಭಾಗಕ್ಕೆ ನೀರು ಹರಿಸಲು ವ್ಯಾಪಕ ಶ್ರಮ ಪಡುತ್ತಿದ್ದಾರೆ. ಇಲ್ಲಿಂದ ನೀರು ದೊರಕು ವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಎತ್ತಿನಹೊಳೆ ಯೋಜನೆ ಭೂಸ್ವಾಧೀನ ಅಧಿಕಾರಿ ಗಿರೀಶ್ ನಂದನ್, ಎತ್ತಿನಹೊಳೆ ಯೋಜನೆ ಅಧೀಕ್ಷಕ ಗುರುದತ್, ಕಾರ್ಯಪಾಲಕ ಅಭಿಯಂತರ ಜಯಣ್ಣ, ಸಹಾಯಕ ಶಶಿಧರ್, ಸತೀಶ್ ಇದ್ದರು. ಪತ್ರಕರ್ತರು ಸೇರಿದಂತೆ ತಾಲೂಕು ಆಡಳಿತಕ್ಕೆ ಮಾಹಿತಿ ಇಲ್ಲ: ರಮೇಶ್ ಕುಮಾರ್ ಅವರು ಕ್ಷೇತ್ರದ ಜನರೊಡನೆ ಖಾಸಗಿಯಾಗಿ ಬಂದಿದ್ದರಿಂದ ಸ್ಥಳೀಯ ಆಡಳಿತಕ್ಕೆ ರಮೇಶ್‌ಕುಮಾರ್ ಅವರು ಇಲ್ಲಿಗೆ ಬರುವ ಯಾವುದೇ ಮಾಹಿತಿ ಇರಲಿಲ್ಲ. ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಚಾಮರಾಜನಗರ ಗುಂಡ್ಲುಪೇಟೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಯುವಕನನ್ನು ಭೇಟಿ ಮಾಡಲು ಹೋಗಿದ್ದು, ಖುದ್ದು ಶಾಸಕರಿಗೂ ಈ ಬಗ್ಗೆ ಮಾಹಿತಿಯಿರಲಿಲ್ಲ.
ಸ್ಥಳೀಯ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಈ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದರು. ಎತ್ತಿನಹೊಳೆ ಯೋಜನೆ ಅಧಿಕಾರಿಗಳಿಗೂ ಸರಿಯಾದ ಮಾಹಿತಿ ಇಲ್ಲದೆ ಅಂತಿಮವಾಗಿ ತರಾತುರಿಯಲ್ಲಿ ಸಿದ್ಧತೆ ನಡೆಸಿದರು. ಎತ್ತಿನಹೊಳೆ ಕಾಮಗಾರಿ ವ್ಯಾಪ್ತಿಯ ಬೆಳಗೋಡು ಹೋಬಳಿಯ ಹೆಬ್ಬನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಟನಲ್ ವೀಕ್ಷಿಸಲು ಶ್ರೀನಿವಾಸಪುರದ ಜನತೆ ಶಿಸ್ತಿನ ಸಿಪಾಯಿಗಳಂತೆ ನಡೆದು ಸಾಗಿದರು.