ಬೆಂಗಳೂರು: ಸ್ಪೀಕರ್ ಪೀಠದ ಬಗ್ಗೆ ಜೆಡಿಎಸ್‌ನ ಎಚ್.ಡಿ.ರೇವಣ್ಣ ಅವರು ಆಡಿದ ಮಾತಿಗೆ ಸದನದಲ್ಲಿ ಆಕ್ಷೇಪವುಂಟಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತೀವ್ರ ಸಿಟ್ಟಾದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಸಾರ್ವಜನಿಕ ಮಹತ್ವದ ವಿಷಯಸಂಬಂಧ ಅಲ್ಪ ಕಾಲಾವಧಿ ಚರ್ಚೆಗೆಅವಕಾಶ ಪಡೆದು 2 ಗಂಟೆ ಮಾತನಾಡಿದರೂ ಮತ್ತೆ ಕಾಲಾವಕಾಶ ಕೋರಿ ಪಟ್ಟು ಹಿಡಿದ ಜೆಡಿಎಸ್ ಸದಸ್ಯರ ವರ್ತನೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೋಪಕ್ಕೆ ಕಾರಣವಾಯಿತು.
ಹತ್ತು ಸದಸ್ಯರು ಮಾತನಾಡಿದ ನಂತರವೂ ಇನ್ನೂ ಮೂರು ಸದಸ್ಯರಿಗೆ ಅವಕಾಶ ಕೊಡಿ ಎಂಬ ಬೇಡಿಕೆಗೆ ಸುತಾರಾಂ ಒಪ್ಪದ ಸ್ಪೀಕರ್ ಸಾಧ್ಯವೇ ಇಲ್ಲ ಎಂದರು. ಆಗ ಜೆಡಿಎಸ್‌ನ ಶಿವಲಿಂಗೇಗೌಡ ನನಗೆ ಮಾತನಾಡಲು ಅವಕಾಶ ಕೊಡದಿದ್ದರೆ ಧರಣಿ ಕೂರುತ್ತೇನೆಂದು ಸದನದ ಬಾವಿಗೆ ಬಂದು ಕುಳಿತರು. ಈ ವರ್ತನೆಗೆ ಸ್ಪೀಕರ್ ಅಸಮಾಧಾನಗೊಂಡು, ನಿಮಗೆ ಯಾವ ಭಾಷೆಯಲ್ಲಿ ಹೇಳಬೇಕು. ನಾನೂ ನೋಡುತ್ತಿದ್ದೇನೆ, ನಿಮಗೆ ಇಷ್ಟ ಬಂದಂತೆ ವರ್ತಿಸುತ್ತಿದ್ದೀರಿ, ಇದೆಲ್ಲ ಸಹಿಸಲು ಆಗುವುದಿಲ್ಲ, ಕುಳಿತುಕೊಳ್ಳಿ, ಯಾವುದೇ ಕಾರಣಕ್ಕೂ ನಿಮಗೆ ಮಾತನಾಡಲು ಅವಕಾಶ ಕೊಡುವುದಿಲ್ಲ ಎಂದು ಖಾರವಾಗಿ ಹೇಳಿದರು.
ಇದರಿಂದ ಕೋಪಗೊಂಡ ರೇವಣ್ಣ,ಸಭಾಧ್ಯಕ್ಷರ ಪೀಠದ ಬಗ್ಗೆ ಮಾತನಾಡಿದರು. ಇದು ಕಾಗೇರಿ ಅವರ ಸಿಟ್ಟು ಹೆಚ್ಚಾಗಲು ಕಾರಣವಾಯಿತು. ಬಿಜೆಪಿ ಸದಸ್ಯರು, ಸ್ಪೀಕರ್ ಪೀಠದ ಬಗ್ಗೆ ಅಗೌರವವಾಗಿ ಮಾತನಾಡಿದ ರೇವಣ್ಣ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು.