Advertisement

ಅಧಿವೇಶನದಲ್ಲಿ ಕಾಂಗ್ರೆಸ್‌ ವರ್ತನೆ ಬೇಸರ ತರಿಸಿದೆ: ಸ್ಪೀಕರ್‌

12:36 AM Mar 26, 2021 | Team Udayavani |

ಬೆಂಗಳೂರು: ವಿಧಾನಸಭೆ ಅಧಿವೇಶನ ಸುಸೂತ್ರವಾಗಿ ನಡೆಯಲು ಆಡಳಿತ ಪಕ್ಷದಷ್ಟೇ ಜವಾಬ್ದಾರಿ ವಿಪಕ್ಷಕ್ಕೂ ಇದ್ದು, ಕಲಾಪ ಮೊಟಕುಗೊಳಿಸುವ ಸ್ಥಿತಿ ನಿರ್ಮಾಣ ಮಾಡಿದ ಕಾಂಗ್ರೆಸ್‌ ವರ್ತನೆ ಬಗ್ಗೆ ಬೇಸರವಿದೆ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವಿಷಯದಲ್ಲೂ ಸದನವನ್ನು ರಾಜಕೀಯ ವೇದಿಕೆ ಮಾಡಿಕೊಳ್ಳುವ ಮನಸ್ಥಿತಿಗೆ ಹೋಗಬಾರದಿತ್ತು. ಅಂತಹ ವಾತಾವರಣ ನಿರ್ಮಾಣವಾಗಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

“ಒಂದು ರಾಷ್ಟ್ರ – ಒಂದು ಚುನಾವಣೆ’ ವಿಚಾರದಲ್ಲೂ ಕಾಂಗ್ರೆಸ್‌ನವರು ಚರ್ಚೆಗೆ ಸಿದ್ಧರಿಲ್ಲ. ಈ ವಿಚಾರದಲ್ಲಿ ಆರೆಸ್ಸೆಸ್‌ ಅಜೆಂಡಾ ಏನೆಂಬುದು ಅರ್ಥವಾಗಲಿಲ್ಲ ಎಂದರು.

ಸೂತ್ರವಾಗಿ ನಡೆಯುವ ವಿಚಾರದಲ್ಲಿ ನಾನು ಕರೆದ ಕಲಾಪ ಸಲಹಾ ಸಮಿತಿಗೂ ಕಾಂಗ್ರೆಸ್‌ ಪಕ್ಷದ ನಾಯಕರು ಗೈರಾಗಿದ್ದರು. ರಾಜಕೀಯ ವಿಚಾರಗಳನ್ನು ಸದನದ ಒಳಗೆ ತರಬಾರದು ಎಂದು ಹೇಳಿದರು.

ಆಡಳಿತ ಪಕ್ಷ ಹಾಗೂ ವಿಪಕ್ಷದ ನಡುವೆ ಭಿನ್ನಾಭಿಪ್ರಾಯ ಸಹಜ. ಆದರೆ, ಅದನ್ನು ನಿವಾರಿಸುವ ಅಥವಾ ಸರಿಪಡಿಸಲು ನಾನು ಮಧ್ಯಸ್ಥಿಕೆದಾರನಾಗಲಾರೆ. ಸಭಾಧ್ಯಕ್ಷನಾಗಿ ನನ್ನ ಇತಿಮಿತಿಯಲ್ಲಿ ಎಷ್ಟು ಮಾಡಬಹುದೋ ಅಷ್ಟನ್ನು ಮಾಡಿದ್ದೇನೆ. ಆದರೆ, ಪ್ರತಿಯೊಂದು ವಿಚಾರಕ್ಕೂ ಧರಣಿ, ಪ್ರತಿಭಟನೆಯೇ ದಾರಿ ಎಂದರೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ, ಮೌಲ್ಯ, ಸದನದ ಘನತೆ, ಗೌರವ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

Advertisement

ಸುಧಾಕರ್‌ ಕ್ರಮದ ಚರ್ಚೆ :

ಸಚಿವ ಡಾ| ಕೆ. ಸುಧಾಕರ್‌ ಹೇಳಿಕೆ ಸಂಬಂಧ  ತನ್ನ ವ್ಯಾಪ್ತಿಯಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚಿಸಲಾಗುವುದು ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಆ ವಿಚಾರದ ಬಗ್ಗೆ ಸದನದಲ್ಲೂ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಬಳಿಕ ಸುಧಾಕರ್‌  ಪತ್ರ ಬರೆದು ವಿಷಾದ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ನನಗೆ ದೂರು ನೀಡಲಾಗಿದೆ. ಆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸುಧಾಕರ್‌  ವಿಷಾದ ವ್ಯಕ್ತಪಡಿಸಿರುವುದರಿಂದ ವಿಷಯಕ್ಕೆ ತೆರೆ ಎಳೆಯುವುದು ಸೂಕ್ತ. ಆದರೆ, ಸದಸ್ಯರ ಭಾವನೆ ಗಮನದಲ್ಲಿಟ್ಟುಕೊಂಡು ಏನು ಮಾಡಬಹುದು ಎಂಬ ಬಗ್ಗೆ ಚರ್ಚಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next