Advertisement

‘ಕೈ’ನಲ್ಲೂ ಅಧ್ಯಕ್ಷರ ಬದಲಾವಣೆ ಮಾತು ಶುರು

08:57 AM May 23, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಫ‌ಲಿತಾಂಶ ಹೊರ ಬೀಳುವ ಮೊದಲೇ ಕಾಂಗ್ರೆಸ್‌ನಲ್ಲಿ ಸ್ಥಾನ ಪಲ್ಲಟದ ಗಾಳಿ ಬೀಸತೊಡಗಿದೆ. ಕಾಂಗ್ರೆಸ್‌ನಲ್ಲೂ ಫ‌ಲಿತಾಂಶ ಆಧರಿಸಿ ಅಧ್ಯಕ್ಷರ ಬದಲಾವಣೆಯ ಧ್ವನಿ ಮೊಳಗುವ ಬಗ್ಗೆ ಪಕ್ಷದ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.

Advertisement

ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳ ಫ‌ಲಿತಾಂಶ ಹೊರ ಬಿದ್ದಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಪಕ್ಷಗಳು ಸಾಧನೆ ತೃಪ್ತಿಕರವಾಗಿಲ್ಲದಿರುವುದು ಪಕ್ಷದ ಅನೇಕ ನಾಯಕರ ಬೇಸರಕ್ಕೆ ಕಾರಣವಾಗಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್‌ ಮುಂದೆ ಬೇಡಿಕೆ ಇಡುವ ಬಗ್ಗೆಯೂ ಪಕ್ಷದ ಒಂದು ವರ್ಗ ಆಲೋಚನೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆಂಬ ಆರೋಪ ಅವರ ವಿರುದ್ಧ ಕೇಳಿ ಬರುತ್ತಿದೆ. ಅಲ್ಲದೇ ರಾಜ್ಯಾಧ್ಯಕ್ಷರಾಗಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿಲ್ಲ ಎಂಬ ಮಾತುಗಳು ಪಕ್ಷದ ಸಿದ್ದರಾಮಯ್ಯ ವಿರೋಧಿ ಬಣದಲ್ಲಿ ಕೇಳಿ ಬರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಹತ್ತಕ್ಕಿಂತ ಕಡಿಮೆ ಸ್ಥಾನ ತೆಗೆದುಕೊಂಡರೆ, ಅದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿ, ಚುನಾವಣಾ ಫ‌ಲಿತಾಂಶ ಬಂದ ನಂತರ ಅವರ ಬದಲಾವಣೆಗೆ ಕೂಗು ಕೇಳುವ ಸಾಧ್ಯತೆಯಿದೆ.

ಕಳೆದ ಬಾರಿಯೇ ಅಧ್ಯಕ್ಷರ ಬದಲಾವಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದವರಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಇಡಲಾಗಿತ್ತು. ಆದರೆ, ಹೈಕಮಾಂಡ್‌ ಸಿದ್ದರಾಮಯ್ಯ ಆಸೆಯಂತೆ ದಿನೇಶ್‌ ಗುಂಡೂರಾವ್‌ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದ್ದರು.

ಈಗ ಬಿಜೆಪಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ಅಧ್ಯಕ್ಷ ಸ್ಥಾನದ ಅವಧಿ ಮುಕ್ತಾಯವಾಗಿರುವುದರಿಂದ ಅವರ ಬದಲಾವಣೆ ಮಾಡಿದರೆ, ಬಿಜೆಪಿಯಲ್ಲಿ ಲಿಂಗಾಯತ ಸಮುದಾಯವನ್ನು ಹಿಡಿದಿಟ್ಟುಕೊಳ್ಳುವ ನಾಯಕತ್ವ ಇಲ್ಲ ಎನ್ನುವುದನ್ನೇ ಮುಂದಿಟ್ಟು ಈ ಬಾರಿ ಕಾಂಗ್ರೆಸ್‌ನಿಂದ ಲಿಂಗಾಯತ ಸಮುದಾಯದವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ, ಪಕ್ಷವನ್ನು ಬಲಗೊಳಿಸಲು ಅನುಕೂಲವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೇ ಕಾರಣಕ್ಕೆ ಈ ಬಾರಿ ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆ ಮುಂಚೂಣಿಗೆ ಬರುವ ಸಾಧ್ಯತೆ ಇದೆ.

Advertisement

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯ ಕೂಗು ಕೇಳಿ ಬಂದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್, ಗೃಹ ಸಚಿವ ಎಂ.ಬಿ. ಪಾಟೀಲ್ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೆಸರು ಮುಂಚೂಣಿಯಲ್ಲಿ ಕೇಳಿ ಬರುವ ಸಾಧ್ಯತೆಯಿದೆ.

ಆದರೆ, ಚುನಾವಣಾ ಫ‌ಲಿತಾಂಶ ಬಂದ ತಕ್ಷಣ ಅಧ್ಯಕ್ಷರ ಸ್ಥಾನ ಬದಲಾವಣೆ ಮಾಡುವುದು ಅನುಮಾನ ಎಂಬ ಮಾತುಗಳು ದಿನೇಶ್‌ ಗುಂಡೂರಾವ್‌ ಆಪ್ತ ವಲಯದಲ್ಲಿ ಕೇಳಿ ಬರುತ್ತಿವೆ. ಮೇ 23ರ ಲೋಕಸಭಾ ಫ‌ಲಿತಾಂಶ ಬಂದ ನಂತರ ಅಧಿಕೃತ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದ್ದು, ಈ ಬೆಳವಣಿಗೆಗೆ ಕಾಂಗ್ರೆಸ್‌ ಹೈಕಮಾಂಡ್‌ ಹೇಗೆ ಸ್ಪಂದಿಸುತ್ತದೆ ಎನ್ನುವುದು ಕೂಡ ಮುಖ್ಯವಾಗಿದೆ.

— ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next