Advertisement

ರಾಜ್ಯದ ಶಾಲೆಗಳಲ್ಲಿ ಕನ್ನಡವೇ ಮಾತಾಗಿರಲಿ…

09:57 AM Dec 06, 2019 | mahesh |

ಬೆಂಗಳೂರು: ಕನ್ನಡದ ನೆಲದಲ್ಲಿ ಕನ್ನಡ ಪರಿಸರ ಭಾಷೆಯಾಗಬೇಕು. ಮನೆಯಲ್ಲಿ ಮಾತೃ ಭಾಷೆ ಯಾವುದೇ ಇರಲಿ, ಆದರೆ ಶಾಲೆಗಳಲ್ಲಿ ಕನ್ನಡ ಮಾತಿರಲಿ. ಇಲ್ಲದೆ ಇದ್ದಲ್ಲಿ ನಮ್ಮ ಮಕ್ಕಳು ನಮ್ಮಿಂದ ದೂರವಾಗುವ ಅಪಾಯ ಇದೆ.

Advertisement

– ಇದು ಹಿರಿಯ ಕವಿ, ಕಲಬುರಗಿ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ
ಡಾ| ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ಕಳಕಳಿ ಮತ್ತು ಆತಂಕ.

ಶರಣರ ನಗರಿ ಕಲಬುರಗಿಯಲ್ಲಿ ಫೆ. 5ರಂದು ನಡೆಯಲಿರುವ 85ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಆಗಿರುವ ಸಂದರ್ಭ ವೆಂಕಟೇಶ ಮೂರ್ತಿ ಅವರು ಕನ್ನಡದ ಕುರಿತ ತಮ್ಮ ಆಶಯಗಳನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

 ”ಕನ್ನಡದ ಕಣ್ವ’ ಖ್ಯಾತಿಯ ಸಾಹಿತಿ ಬಿಎಂಶ್ರೀ, ಉತ್ತಂಗಿ ಚನ್ನಪ್ಪ, ಸಿದ್ಧಯ್ಯ ಪುರಾಣಿಕ ಅವರ ಬಳಿಕ ನೀವು ಕಲಬುರಗಿ ಸಾಹಿತ್ಯ ಸಮ್ಮೇಳನದ ತೇರು ಎಳೆಯಲಿದ್ದೀರಿ. ಈ ಕ್ಷಣ ಹೇಗೆ ಎನಿಸುತ್ತಿದೆ?

– ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಹಲವು ಮಹನೀಯರು ಸಾಹಿತ್ಯ ಸಮ್ಮೇಳನದ ಸಾರಥ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈಗ ನನಗೆ ಆ ಸೌಭಾಗ್ಯ ದೊರೆತಿರುವುದು ಖುಷಿ ಕೊಟ್ಟಿದೆ. ಕನ್ನಡ ಕಾವ್ಯಲೋಕದಲ್ಲಿ ಕೆಲಸ ಮಾಡಿಕೊಂಡು ಬಂದ ಹಿನ್ನೆಲೆಯಲ್ಲಿ ಕನ್ನಡ ಭಾಷೆ ಕೊಟ್ಟಂತಹ ಬಹಳ ದೊಡ್ಡ ಆಶೀರ್ವಾದ ಇದು ಎಂದೆನಿಸುತ್ತದೆ.

 ಇತ್ತೀಚಿನ ದಿನಗಳಲ್ಲಿ ಕನ್ನಡ ಶಾಲೆಗಳಲ್ಲಿ ಸರಕಾರ ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್‌ ಭಾಷೆ ಕಲಿಸಬೇಕು ಅಂತ ಹೊರಟಿತ್ತು. ಈ ಬಗ್ಗೆ 85ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಏನು ಹೇಳುತ್ತೀರಿ?
– ಬಹಳ ಮುಖ್ಯವಾಗಿ ಶಾಲೆಗಳಲ್ಲಿ ನಾವು ಕನ್ನಡ ಮಾಧ್ಯಮಕ್ಕೆ ಆದ್ಯತೆ ನೀಡದಿದ್ದರೆ ಕನ್ನಡ ಭಾಷೆ ಮಕ್ಕಳಿಂದ ಕೈತಪ್ಪಿ ಹೋಗುತ್ತದೆ. ನಮ್ಮ ಮಕ್ಕಳು ನಮ್ಮಿಂದ ದೂರವಾಗಿ ಬಿಡುತ್ತಾರೆ. ಆ ಹಿನ್ನೆಲೆಯಲ್ಲಿ ಕನ್ನಡ ಭಾಷೆಯನ್ನು ಪ್ರಾಥಮಿಕ ಹಂತದಿಂದ ಪ್ರೌಢಶಾಲೆಯ ಹಂತದವರೆಗೆ ಕಲಿಸ ಬೇಕು. ಪರಿಸರ ಭಾಷೆಯಾಗಿ ಪ್ರತಿ ಯೊಂದು ಮಗು ಕನ್ನಡ ಓದಬೇಕು. ಆಗ ಮನೆಮಾತು ಯಾವುದೇ ಆಗಿರಲಿ ಕನ್ನಡ ಅಕ್ಷರ ಲೋಕ ದಲ್ಲಿ ಮತ್ತೂಬ್ಬ ಬೇಂದ್ರೆ, ಮಾಸ್ತಿ, ಪುತಿನ, ನಾ. ಕಸ್ತೂರಿ ಅಂತಹ ಲೇಖಕರು ಹುಟ್ಟುತ್ತಾರೆ. ಪ್ರಾಥ ಮಿಕ ಹಂತದಲ್ಲಿಯೇ ಮಕ್ಕಳಿಗೆ ಕನ್ನಡ ಕಲಿಸುವುದನ್ನು ಕಡ್ಡಾಯ ಮಾಡಬೇಕು. ಕನ್ನಡ ಕೈಬಿಟ್ಟರೆ ನಾವು ನಮ್ಮ ಸಂಸ್ಕೃತಿ ಕಳೆದುಕೊಂಡ ಹಾಗೆ.

Advertisement

 ಮಕ್ಕಳ ಸಾಲು, ಹೂವಿನ ಶಾಲೆ, ಸೋನಿ ಪದ್ಯಗಳು.. ಸಹಿತ ಹಲವು ಕೃತಿ ರಚನೆ ಮೂಲಕ ಪುಟಾಣಿಗಳ ಮನಸು ಸೆಳೆದಿದ್ದೀರಿ. ಈಗ ಮಕ್ಕಳ ಸಾಹಿತ್ಯ ಸಹಿತ ಇಡೀ ಕನ್ನಡ ಸಾಹಿತ್ಯದ ವಾತಾವರಣ ಹೇಗಿದೆ?
-ಸಾಹಿತ್ಯ ಬರವಣಿಗೆ ವಿಚಾರದಲ್ಲಿ ಯಾವತ್ತೂ ಅತೃಪ್ತಿ ಇದ್ದೇ ಇರುತ್ತದೆ. ಈಗ ಆಗಿರುವುದು ಸಾಲದು ಇನ್ನೂ ಆಗಬೇಕೆಂಬುದು ಸೇರಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಕಾವ್ಯಲೋಕಕ್ಕೆ ಅದ್ಭುತ ಯುವ ಬರಹಗಾರರು ಬರುತ್ತಿದ್ದಾರೆ. ಇದು ಕನ್ನಡ ಸಾಹಿತ್ಯಾಸಕ್ತರು ಖುಷಿ ಪಡುವಂತಹ ವಿಚಾರವಾಗಿದೆ.

ಯುವ ಮನಸುಗಳಿಗೆ ನಿಮ್ಮ ಸಂದೇಶವೇನು?
ನಮ್ಮ ಯುವಕರ ಗಮನ ನಮ್ಮ ಬೇರುಗಳ ಕಡೆಗೆ ಹೋಗಬೇಕು. ಭಾರತದ ಸಂಸ್ಕೃತಿಯ ಬೇರುಗಳತ್ತ ಅವರನ್ನು ಸೆಳೆಯುವ ಕಾರ್ಯ ಮತ್ತಷ್ಟು ಆಗಬೇಕು. ಪಾಶ್ಚಾತ್ಯ ಮೋಹ ಬಿಟ್ಟು ಮಣ್ಣಿನ ಗುಣ, ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವತ್ತ ಯುವ ಸಮುದಾಯ ಮನಸು ಮಾಡಬೇಕು. ಅಧ್ಯಾಪಕರು, ಲೇಖಕರು ಹಾಗೂ ಮನೆಯ ಹಿರಿಯರು ಇದನ್ನು ನೆನಪಿಸುವ ಕೆಲಸ ಮಾಡಬೇಕು.

 ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next