Advertisement
ಬೆಳಕು, ಬೆರಗು, ದೇವರು!
Related Articles
Advertisement
*************************************************************************************************
ಹಸಿದವರಿಗೆ ನೆರವಾಗಬೇಕು…
ನನ್ನ ಅಮ್ಮನಲ್ಲಿ ನಾನು ಕಂಡಿದ್ದು ಹಸಿವು, ದಾಹ ಎಂದು ಬಳಲಿ ಬಂದವರಿಗೆ ಅನ್ನ-ನೀರು ಕೊಡುವ ವಿಶೇಷ ಗುಣ. ಮೊದಮೊದಲು ನನಗಿದು ಇಷ್ಟವಾಗುತ್ತಿರಲಿಲ್ಲ. “ಬಂದವರಿಗೆಲ್ಲ ಹೊಟ್ಟೆ ತುಂಬಿಸುವ ಹೊರೆ ನಮಗೇಕೆ?’ ಎಂದು ಅಮ್ಮನ ಮೇಲೆ ಎಷ್ಟೋ ಸಲ ಕೋಪಿಸಿಕೊಂಡಿರುವೆ. ನಾನು ಚಿಕ್ಕವಳಿದ್ದಾಗ ಹೇರ್‌ಪಿನ್, ಸೇಫ್ಟಿ ಪಿನ್ ಮಾರಲು ದೂರದ ಊರಿನಿಂದ ಬರುತ್ತಿದ್ದ ಹೆಣ್ಣುಮಕ್ಕಳು ಕಂಕುಳಲ್ಲಿ ಪುಟ್ಟ ಹಸುಳೆಗಳನ್ನು ಬಟ್ಟೆಯಿಂದ ಸೊಂಟಕ್ಕೆ ಕಟ್ಟಿಕೊಂಡು ಬಿಸಿಲು, ಮಳೆ ಎನ್ನದೇ ಹೊಟ್ಟೆಪಾಡಿಗಾಗಿ ಪುಡಿಗಾಸು ಸಂಪಾದಿಸಲು ಅಲೆೆದಾಡುವುದನ್ನು ನೋಡಿ ಅಮ್ಮ ಪೇಚಾಡುತ್ತಿದ್ದಳು.
“ಅದು ಅವರ ಹಣೆಬರಹ, ಹೋಗಲಿ ಬಿಡಮ್ಮ. ನೀನ್ಯಾಕೆ ಅವರ ಚಿಂತೆ ಮಾಡುವೆ?’ ಎಂದರೆ- “ಇಲ್ಲ ಮಗಳೆ, ಪರಿಸ್ಥಿತಿ ಒಂದೇ ತೆರನಾಗಿ ಇರುವುದಿಲ್ಲ. ಹಸಿವು ಅಂತ ಬಂದವರಿಗೆ ಅನ್ನ ನೀರು ಕೊಟ್ಟ ಪುಣ್ಯ ಇಂದಲ್ಲ ನಾಳೆ ನಮಗೆ ಮರಳಿ ದಕ್ಕುವುದು’ ಎಂದು ತಿಳಿ ಹೇಳಿದಳು.
ಒಂದು ದಿನ ನಾನು- ಅಮ್ಮ, ಚಿಕ್ಕಪ್ಪನನ್ನು ಭೇಟಿ ಮಾಡಲು ಹೊರರಾಜ್ಯಕ್ಕೆ ಹೋದಾಗ ರಾತ್ರಿ ಹೊತ್ತು ಬಸ್ಸು ತಪ್ಪಿ ಹೋಗಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದೆವು. ಕೈಯಲ್ಲಿ ದುಡ್ಡಿತ್ತು. ಆದರೆ ಹಸಿವು ತೀರಿಸಿಕೊಳ್ಳಲು ಒಂದು ಅಂಗಡಿಯೂ ತೆರೆದಿರಲಿಲ್ಲ. ತಿನ್ನಲು ಏನೂ ಸಿಗಲಿಲ್ಲ. ಆಗ, ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದ ಹೆಣ್ಣು ಮಗಳೊಬ್ಬಳು ನಮ್ಮ ಸಂಕಟ ನೋಡಲಾರದೆ, ತನ್ನ ಡಬ್ಬಿಯ ಊಟ ತೆಗೆದು ನಮಗೆ ತಿನ್ನಿಸಿದ ಘಟನೆ ನನ್ನ ಮನದಲ್ಲಿ ಕಥೆಯಂತೆ ಅಚ್ಚಾಗಿ ಉಳಿದಿದೆ.
ಮನುಷ್ಯನಿಗೆ ಮೈಮುಚ್ಚಲು ತುಂಡು ಬಟ್ಟೆ, ಹಸಿದಾಗ ತುತ್ತು ಅನ್ನ ನೀಡಬೇಕೆಂಬ ಅಮ್ಮನ ಗುಣ ಕೋಟಿ ಸಂಪತ್ತನ್ನು ಮೀರಿಸುವಂಥದ್ದು.
-ಸುಜಾತಾ ಮಣ್ಣಿಕೇರಿ, ನಾಗಪೂರ
*************************************************************************************************
ನಮ್ಮಮ್ಮ ಅಂದ್ರೆ ನಂಗಿಷ್ಟ : ಆಕಾಶಕ್ಕಿಂತ ಮಿಗಿಲು…
ನನ್ನ ತಾಯಿ ಶಕುಂತಲಾ, ಮಮತೆ, ನಿಸ್ವಾರ್ಥ ಸೇವೆ, ಅಂತಃಕರಣ, ಭೂಮಿ ತೂಕದ ಪ್ರೀತಿಗೆ ಅತ್ಯುತ್ತಮ ಉದಾಹರಣೆ. ನನಗೆ ಜೀವನದ ಪ್ರತಿ ಹಂತದಲ್ಲೂ ಕೈ ಹಿಡಿದು ಕಲಿಸಿದ ಮೊದಲ ಗುರು ಅಮ್ಮನೇ. ಮಗಳು ಪ್ರತಿ ವಿಷಯದಲ್ಲೂ ತುಂಬಾನೇ ವಿಶೇಷ ಎನ್ನಿಸಬೇಕು ಎನ್ನುವ ಕಾರಣಕ್ಕೆ ಅಮ್ಮ ಸಾಕಷ್ಟು ಮುತುವರ್ಜಿ ವಹಿಸಿದವರು. ಅದರಲ್ಲೂ ನನ್ನ ಹೆಸರು, ಇವತ್ತಿಗೂ ನನ್ನನ್ನು ತಕ್ಷಣ ಜನರು ನೆನಪಿನಲ್ಲಿಟ್ಟುಕೊಳ್ಳಲು ಕಾರಣ ನನ್ನ ಹೆಸರೇ. ಅಂದಹಾಗೆ ನನ್ನ ಹೆಸರು ಆಕಸ್ಮಿತ. ಇದೇ ಹೆಸರಿನ ಮತ್ತೂಬ್ಬರು ಈವರೆಗೂ ನನಗೆ ಸಿಕ್ಕಿಲ್ಲ. ಇದು ನನಗಿಟ್ಟ ಮೊದಲ ಹೆಸರಲ್ಲ. ತುಳಸಿ, ತುಷಾರ, ಅಮೋಘ, ಎಂದೆಲ್ಲಾ ಹೆಸರಿಟ್ಟು ಕರೆದ ನಂತರವೂ ನನ್ನ ತಾಯಿಗೆ ಏನೋ ಅಸಮಾಧಾನ. ಇವೆಲ್ಲಾ ಕಾಮನ್ ಹೆಸರುಗಳು ಅನ್ನೋ ಫೀಲ್. ಆಗ ಅವರಿಗೆ ಅಕಸ್ಮಾತ್ತಾಗಿ ಹೊಳೆದಧ್ದೋ ಏನೋ ಗೊತ್ತಿಲ್ಲ; ನಂತರ “ಆಕಸ್ಮಿತ’ ಅಂತ ನಾಮಕರಣ ಮಾಡಿದರು. ಎಷ್ಟೋ ಸಲ ತುಂಬಾ ಜನ ನನ್ನ ಹೆಸರನ್ನ “ಆಕಸ್ಮಿಕ’ ಎಂದಾಗ, ನನ್ನ ತಾಯಿ ಅವರಿಗೆ ಸರಿಯಾಗಿ ಉಚ್ಚಾರಣೆ ಮಾಡುವಂತೆ ಕರೆಕ್ಷನ್ ಮಾಡಿದ್ದುಂಟು! ತುಂಬಾ ಜನಕ್ಕೆ ನನ್ನ ಹೆಸರೇ ಸಖತ್ ಕುತೂಹಲದ ಸಂಗತಿಯಾಗಿತ್ತು.
ಮೊದಮೊದಲು ನನಗೆ ಅಮ್ಮ ಇಟ್ಟ ಹೆಸರಿನಿಂದ ಬೇಸರವಾಗಿತ್ತು. ಎಷ್ಟೆಲ್ಲ ಹೆಸರುಗಳಿರುವಾಗ ಇದೆಂತ ಹೆಸರಿಟ್ಟೆ ಮಮ್ಮಿ ಅಂದಿದ್ದೆ. ಆದರೆ, ಆ ಹೆಸರೇ ನನ್ನ ಜೀವನದಲ್ಲೀಗ ಬಹು ವಿಶೇಷ. ಆ ಹೆಸರನ್ನು ಕರೆದಾಗ ನನ್ನಮ್ಮನಿಗೂ ಬೆಟ್ಟದಷ್ಟು ಖುಷಿಯಾಗಿತ್ತು. ಆದರೆ, ನನ್ನ ಈ ಹೆಸರಿನ ಅರ್ಥ ತಿಳಿದುಕೊಳ್ಳುವ ಪ್ರಯತ್ನವನ್ನು ಅವರು ಮಾಡಿರಲಿಲ್ಲ. ಅಂದಹಾಗೆ, ಅವರು ಅರ್ಥ ತಿಳಿಯದೆ ಇಟ್ಟಿದ್ದ ಆ ಹೆಸರಿನ ಅರ್ಥವಿದು; ಆಕ- ಎಂದರೆ ಹುವಿಯಾ ದ್ವೀಪದಲ್ಲಿ ಮಗುವಿಗೆ ಕರೆಯುವುದು! ನಾವು ಕಂದ, ಮಗು, ಪಾಪು ಎನ್ನುತ್ತೀವಲ್ಲ ಹಾಗೆ… ಸ್ಮಿತ ಎಂದರೆ ನಗು. ಹೀಗಾಗಿ, ನನ್ನ ಹೆಸರಿನ ಅರ್ಥ “ಮಗುವಿನಂಥ ನಗು!’ ನನ್ನ ಹೆಸರು ಹೇಳಿದಾಗ ನನ್ನ ಮುಖದಲ್ಲಿ ಮೂಡುವ ನಗುವನ್ನು ಕೇಳುವವರ ಮುಖದಲ್ಲೂ ನಾನು ಕಂಡಾಗ ನಮ್ಮಮ್ಮ ಕಣ್ಮುಂದೆ ಬರುತ್ತಾರೆ. ಏಕೆಂದರೆ ಅವರಿಟ್ಟ ಈ ಹೆಸರು ಒಬ್ಬರ ಮುಖದಲ್ಲಿ ನಗು ತರಿಸುವಂತಾದರೆ ಅದೇ ನನಗೆ ದೊಡ್ಡ ವಿಷಯ. ಆ ಕಾರಣದಿಂದ ನನ್ನ ಪಾಲಿಗೆ ಅಮ್ಮ ಅಂದ್ರೆ ಆಕಾಶಕ್ಕಿಂತ ಮಿಗಿಲು.
-ಆಕಸ್ಮಿತ, ಬೆಂಗಳೂರು
******************************************************************************************************
ಅವ್ವನಿಗೆ ಆಸೆಗಳೇ ಇಲ್ಲ!
ಯಾವಾಗ ಊರಿಗೆ ಹೋದರೂ -“ಊಟಕ್ಕೆ, ನಾಷ್ಟಕ್ಕೆ ಏನು ಮಾಡಬೇಕು ಮಗ? ಚಿಕನ್ ತರುಸ್ಲಾ’ ಅಂತ ಕೇಳಿದ ನಂತರವೇ ಅವ್ವ ಒಲೆ ಹಚ್ಚುವುದು. ಹಬ್ಬಕ್ಕೆ ಬಟ್ಟೆ ತರುವಾಗಲೂ “ನಿನಗೆ ಯಾವ ಥರದ ಬಟ್ಟೆ ಬೇಕು? ನೀನು ಒಪ್ಪಿಕೊಂಡದ್ದೇ ಫೈನಲ…’ ಅಂತೆಲ್ಲ ಹೇಳಿ ತನ್ನ ನಿರ್ಧಾರಗಳನ್ನ ಬದಿಗಿರಿಸಿ ಸಣ್ಣದಾಗಿ ನಗುವ ಅವ್ವ, ಮಕ್ಕಳ ಮುಂದೆ ತನ್ನ ಆಸೆಗಳನ್ನು ಎಂದೂ ಹೇಳಿಕೊಳ್ಳುವುದೇ ಇಲ್ಲ! ಅದಾಗಿಯೂ ಪದೇಪದೆ ಕೇಳಿದರೆ-“ಒಂದ್ಸಲ ತಿರುಪತಿ ನೋಡ್ಬೇಕು, ಅಯ್ಯಪ್ಪ ಸ್ವಾಮಿಗೆ ನಾವು ಹೋಗೋಕ್ಕಾಗಲ್ವಾ? ಧರ್ಮಸ್ಥಳಕ್ಕೆ ಒಂದು ದಿನದಲ್ಲಿ ಹೋಗಿ ಬರ್ಬೂದಾ?’- ಇವೇ ಅವಳ ದೊಡ್ಡ ಆಸೆಗಳು ಎಂಬಂತೆ ಮುಖ ಅರಳಿಸಿಕೊಂಡು ಹೇಳ್ತಾಳೆ. ಆದರೆ, ಅವು ಎಂದಿಗೂ ಅವಳ ಆಸೆ ಅಲ್ಲವೇ ಅಲ್ಲ! ದೇವರ ಫೋಟೋಗೂ ಸರಿಯಾಗಿ ಕೈಮುಗಿಯದ ಮಕ್ಕಳ ನಾಸ್ತಿಕ ಸ್ಥಿತಿಯ ಕುರಿತು ಆಕೆಗಿರುವ ಭಯ ಅದು! ಒಮ್ಮೆಯಾದರೂ ಈ ಸ್ಥಳಗಳಿಗೆಲ್ಲ ಹೋಗಿ ಮಕ್ಕಳ ಪರವಾಗಿ ದೇವರಲ್ಲಿ ಕ್ಷಮೆ ಕೇಳಿ ಬರಬೇಕೆಂಬ ಆಸೆ ಅವಳದು.
ಯಾರಾದರೂ ಹುಡುಗರು ಪೋಲಿ ಬೀಳ್ಳೋದು ಕಂಡ್ರೆ, ಚಿಕ್ಕ ವಯಸ್ಸಿಗೇ ಹಾರ್ಟ್ ಅಟ್ಯಾಕ್ ಆಗಿ ಸತ್ತೋಗೋ ವಿಷಯಗಳು ಕಿವಿಗೆ ಬಿದ್ರೆ ಸಪ್ಪಗಾಗಿ ಬಿಡ್ತಾಳೆ. ಮೊದ್ಲಿನ ಥರ ನಾವೆಲ್ಲ ಅಷ್ಟು ವರ್ಷ ಇಷ್ಟು ವರ್ಷ ಅಂತ ಬದ್ಕಿರೋಕ್ಕಾಗಲ್ಲ. ಬೇಗ ಮದ್ವೆ ಮಕ್ಳು ಅಂತ ಮಾಡ್ಕೊಂಡು ನನ್ ಕಣ್ಮುಂದೆ ಒಂದು ಮನೆ ಕಟ್ಕೋಬಿಡ್ರಪ್ಪಾ.. ನನ್ ಬಗ್ಗೆ ನೀವೇನೂ ತಲೆ ಕೆಡ್ಸ್ಕೊàಬೇಡಿ, ಹೆಂಗೋ ಈ ಹಳೇ ಮನೇಲೆ ನಡ್ದೋಗುತ್ತೆ…ಅಂತಾಳೆ.
ಯಾಕೆ ಊಟ ಮಾಡಿಲ್ಲ? ಯಾಕೆ ಮಾತ್ರೆ ತಗೊಂಡಿಲ್ಲ? ಇಷ್ಟೊತ್ತಾದರೂ ಯಾಕೆ ಮಲಗಿಲ್ಲ? ಅಂತ ಬೈಯ್ಯುವ ನೆಪದಲ್ಲಾದರೂ ಆಕೆಯೊಂದಿಗೆ ಮಾತನಾಡಬೇಕು, ಇಲ್ಲವಾದರೆ ಮುನಿಸಿಕೊಂಡು ಬಿಡ್ತಾಳೆ. ಮದ್ವೆ, ಮಕ್ಳು, ದೇವಸ್ಥಾನ ಅಂತೆಲ್ಲ ಮಾತಾಡ್ತಿದ್ದ ಅವ್ವ ಈಗ ಸೊರಗಿದ್ದಾಳೆ. ಮಕ್ಕಳ ಏಳ್ಗೆಗಾಗಿ ಏನೆಲ್ಲ ತ್ಯಾಗ ಮಾಡಿದ, ಮಕ್ಕಳು ಚೆನ್ನಾಗಿರಲೆಂದು ಬಯಸುವ ಅವ್ವ ನನಗೆ ದೇಶದ ಗಡಿ ಕಾಯುವ ಸೈನಿಕನಂತೆ ಕಾಣ್ತಾಳೆ. ಆಕೆಗೆ ಹಗಲು ರಾತ್ರಿಗಳ ವ್ಯತ್ಯಾಸ ಗೊತ್ತಿಲ್ಲ. ಎರಡು ತುತ್ತು ಹೆಚ್ಚಿಗೆ ಉಣಿಸಿದ, ಎರಡು ತಾಸು ಹೆಚ್ಚಿಗೆ ನಿದ್ರೆ ಮಾಡಲು ಬಿಟ್ಟ, ತನ್ನ ಖುಷಿಯನ್ನು ಮಕ್ಕಳಿಗಾಗಿಯೇ ಧಾರೆ ಎರೆದು, ಒಬ್ಬಂಟಿಯಾಗಿಯೇ ಉಳಿದುಬಿಟ್ಟ ಅವ್ವನಿಗೆ- ಅಮ್ಮಂದಿರ ದಿನದ ವಿಶೇಷತೆಯ ಬಗ್ಗೆ ಗೊತ್ತಿಲ್ಲ, ಆದರೆ ಮಕ್ಕಳ ದಿನದ ವಿಶೇಷ ಚೆನ್ನಾಗಿಯೇ ಗೊತ್ತಿರುತ್ತೆ!
-ಅನಂತ ಕುಣಿಗಲ್