Advertisement
ಕುಂದಾಪ್ರ ಭಾಷಿ ಚೆಂದ, ಕುಂದಾಪ್ರ ಬದ್ಕ್ ಚೆಂದ, ಕುಂದಾಪ್ರದ್ ಜನ ಇನ್ನೂ ಚೆಂದ… ಹೌದ್… ಹೆತ್ ಅಬ್ಬಿ, ಹುಟ್ಟಿದ್ ಊರ್ ಬಿಟ್ ಪರ ಊರಿಗೆ ಬಂದ್ ಹೊಟ್ಟಿ ಹೊರಕಂಬು ಮಕ್ಕಳಿಗೆ ಕುಂದಾಪ್ರ ಭಾಷಿ ಕೆಮಿ ತುದಿಗೆ ಬಿದ್ರೆ ಸಾಕ್, ಕೆಮಿ ಚುಳ್ ಅಂಬುದ್ ಸುಳ್ಳಲ್ಲ. ಹಾಗಂತ ನಮಗೆ ಕುಂದಕನ್ನಡ ಮೇಲಿಪ್ದ್ ವ್ಯಾಮೋಹ ಅಲ್ಲ, ಆರೆ, ಅದು ಪ್ರೀತಿ, ಅಭಿಮಾನ. ನಮ್ ಭಾಷಿ, ನಮ್ಮವರಿಗೆ ಮಾತ್ರ ಎಂಬುವುದು ವ್ಯಾಮೋಹ. ಆದರೆ ಅಬ್ಬಿ ಭಾಷಿಯಲ್ಲಿ ಹಾಗಲ್ಲ.
Related Articles
Advertisement
ವೈವಿಧ್ಯತೆ, ಭಿನ್ನತೆ ಇದೆ… ಕುಂದಾಪುರ ತಾಲೂಕಿನ ಭೌಗೋಳಿಕ ವ್ಯಾಪ್ತಿಗಿಂತ ವಿಸ್ತಾರವಾಗಿ ಕುಂದಾಪುರ ಕನ್ನಡ ಮಾತನಾಡುವ ಜನರ ವ್ಯಾಪ್ತಿ ಹರಡಿದೆ. ಬ್ರಹ್ಮಾವರದಿಂದ ಶಿರೂರಿನ ತನಕ ಕುಂದಾಪ್ರ ಕನ್ನಡ ಮಾತನಾಡುವ ಜನರಿದ್ದಾರೆ. ಭೌಗೋಳಿಕವಾಗಿ ಕುಂದಾಪುರ ತಾಲೂಕಿನಲ್ಲಿ ಇಲ್ಲದಿದ್ದರೂ ಕೂಡ ಬೈಂದೂರು, ಬಾರ್ಕೂರು, ಕೋಟ, ಹೆಬ್ರಿ, ಬ್ರಹ್ಮಾವರ ಕಡೆಗಳಲ್ಲಿ ಜನರ ಮನೆ ಭಾಷೆ ಕುಂದಾಪ್ರ ಕನ್ನಡ. ಕುಂದಾಪುರ ಕನ್ನಡ ಭಾಷೆಯಲ್ಲೂ ವೈವಿಧ್ಯತೆ, ಭಿನ್ನತೆ ಇದೆ. ಕೋಟ ಕನ್ನಡ,ಬಾಕೂìರು ಕನ್ನಡ, ಸಿದ್ದಾಪುರ ಕನ್ನಡ…ಹೀಗೆ ಕೆಲವು ಕಡೆ ಮಾತನಾಡುವ ಭಾಷೆಗಳಲ್ಲಿ ಕೊಂಚ ಭೌಗೋಳಿಕ ಭಿನ್ನತೆ ಇದೆ.
ಭಾಷೆ ಬಳಕೆಯಲ್ಲಿದೆ ಸ್ವಾರಸ್ಯ…
ಕುಂದಾಪ್ರ ಕನ್ನಡದಲ್ಲಿ ಮಹಾಪ್ರಾಣಗಳ ಬಳಕೆ ಇಲ್ಲವೇ ಇಲ್ಲ ಅನ್ನುವಷ್ಟು ವಿರಳ. ಶಬ್ದಗಳನ್ನು ಸಂಕ್ಷಿಪ್ತಗೊಳಿಸುವುದು ಕುಂದಾಪುರ ಕನ್ನಡದ ಒಂದು ವಿಶೇಷ. ಸಂಕ್ಷಿಪ್ತ ಪದವನ್ನು ದೀರ್ಘಗೊಳಿಸುವ ವಿರುದ್ಧ ಲಕ್ಷಣವೂ ಈ ಭಾಷೆಗೆ ಇದೆ. ಉದಾ: ಹೋಗುತ್ತೇನೆ-ಹೋತೆ, ಉಣ್ಣುತ್ತೇನೆ-ಉಂತೆ, ಮಾಡುತ್ತೇನೆ- ಮಾಡ್ತೆ. ಕೊನೆಯ ಅಕ್ಷರ ಲೋಪವಾಗಿ ಪದಗಳು ಸಂಕ್ಷಿಪ್ತಗೊಳ್ಳುವುದು ಇನ್ನೊಂದು ವಿಶೇಷ. ಉದಾ: “ಗೆಲುವು’- “ಗೆಲು’ ಆಗುತ್ತದೆ. “ಕಳುವು’-“ಕಳು’ ಆದರೆ, ಹಾಳಾಗುವುದು -ಲಾಗಾಡಿ ಎಂದಾಗುತ್ತದೆ. ಜನಸಾಮಾನ್ಯರ ಆಡು ಭಾಷೆಯಾಗಿರುವ ಕಾರಣ ಕುಂದಾಪ್ರ ಕನ್ನಡದಲ್ಲಿ ಮಹಾಪ್ರಾಣದ ಬಳಕೆ ಇಲ್ಲವೇ ಇಲ್ಲ ಅನ್ನುವಷ್ಟು ವಿರಳ. ಹಳಗನ್ನಡದ ಬಿಂದು ಸಹಿತ ಶಬ್ದಗಳು ಇಂದಿಗೂ ಇದರಲ್ಲಿರುವುದು ಸ್ವಾರಸ್ಯಕರ ಅಂಶ. ಉದಾ: ದಾಟು-ದಾಂಟ…, ಬೇಟೆ-ಬೇಂಟೆ, ಹುತ್ತ-ಹುಂತ, ಹೀಗೆ-ಹೀಂಗೆ. ಇಷ್ಟೇ ಸ್ವಾರಸ್ಯಕರವಾದುದೆಂದರೆ ವಿಶಿಷ್ಟ ಕನ್ನಡದ ಬಿಂದು ಸಹಿತ ಪದಗಳು ಇಲ್ಲಿ ಬಿಂದು ರಹಿತವಾಗಿ ಹೊಸ ರೂಪ ಪಡೆದಿರುವುದು. ಉದಾ: ಮೆಂತೆ-ಮೆತ್ತಿ.
ಹಬ್ಬದ ನೆಪದಲ್ಲಿ ಒಗ್ಗಟ್ಟು… ಕುಂದಾಪ್ರ ಕನ್ನಡ ಹಬ್ಬವನ್ನು ಆಯೋಜಿಸಿ ರುವ ಸಂಘಟಕರಲ್ಲಿ ಒಬ್ಬರಾದ ಭಾಸ್ಕರ ಬಂಗೇರ ಅವರ ಮಾತುಗಳಿವು: “ಅನ್ನ ಕೊಟ್ಟ ಬೆಂಗಳೂರಿನಲ್ಲಿ ಕುಂದಾಪುರದವರು ಎಲ್ಲರಿಗಾಗಿ ಆಯೋಜಿಸುತ್ತಿರುವ ಕಾರ್ಯಕ್ರಮವಿದು. ನಮ್ಮದು ಬಯಲಷ್ಟೇ ಇರುವ ಊರೇನಲ್ಲ. ಗೋಡೆಗಳು, ಪರದೆಗಳು, ಕಂದಕಗಳು ಎಲ್ಲವೂ ಇದೆ. ಇದೆಲ್ಲವನ್ನು ಒಡೆದುಕೊಂಡು, ಸರಿಸಿಕೊಂಡು, ದಾಟಿಕೊಂಡು ನಮ್ಮೆಲ್ಲರದು ಒಂದೇ ಕಡಲು ಎನ್ನುವ ಒಕ್ಕೊರಲಿನ ಲಾಲಿ ಹಾಡು ಕೇಳುವ ಸದಾಶಯದಿಂದ ಕಳೆದ ಕೆಲವು ವರ್ಷಗಳಿಂದ ಕುಂದಾಪ್ರ ಕನ್ನಡ ಹಬ್ಬವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಈ ಹಬ್ಬವನ್ನು ಮುಂದೆ ಮಾಡಿಕೊಂಡು ನಾವೆಲ್ಲರೂ ಜೊತೆಯಾಗುತ್ತಿದ್ದೇವೆ. ಎಲ್ಲರ ಶುಭ ಹಾರೈಕೆ ಕನ್ನಡ ತಾಯಿಯ ಕುಂದಾಪ್ರದ ಮಗಳ ಮೇಲೆ ಇರಲಿ
-ತೃಪ್ತಿ ಕುಮ್ರಗೋಡು