Advertisement

Father’s Day: ಏನೂ ಹೇಳದೆಯೇ ಕಲಿಸಿದೆಯಲ್ಲ ಅಪ್ಪಾಜೀ…

02:00 PM Jun 16, 2024 | Team Udayavani |

ಅಪ್ಪ ಓದಿದ್ದು ನಾಲ್ಕನೇ ಕ್ಲಾಸು, ಅಷ್ಟೇ. ಆದರೂ 3 ಭಾಷೆಗಳ ಮಾತನಾಡಬಲ್ಲ, ಓದಬಲ್ಲ. ಅಪ್ಪನ ಇಂಗ್ಲೀಷ್‌ ಸಹಿ ನೋಡಿದ ಯಾರಾದರೂ ಆತ ನಾಲ್ಕನೇ ಕ್ಲಾಸ್‌ ಎಂದರೆ ನಂಬಲಾರರು. ಅಪ್ಪ ಓಡಾಡಿದ್ದು ಅವಕಾಶ ಸಿಕ್ಕಿದಾಗಲಷ್ಟೇ. ಆದರೂ ಇಂದಿಗೂ ಆತ ಸುತ್ತಾಡಿದ ರಾಜ್ಯಗಳ ಎಲ್ಲ ಮಾರ್ಗಗಳು ಬಾಯಿಪಾಠವಾಗಿವೆ.

Advertisement

ಇಂದು ನನಗೆ ಗೂಗಲ್‌ ಮ್ಯಾಪ್‌ ಹಾಕಿಕೊಂಡು ಒಮ್ಮೆ ಹೋದ ಜಾಗಕ್ಕೆ ಮತ್ತೆ ಹೋಗಲು ಅದೇ ಮ್ಯಾಪ್‌ ಬೇಕು. ದೇಹದ ಕಸುವಿರುವತನಕ ಅಪ್ಪ ಭೂಮ್ತಾಯಿಯನ್ನು ನಂಬಿಕೊಂಡೇ ನಡೆದ. ಲಾಭ ನಷ್ಟ ಲೆಕ್ಕ ಹಾಕಲಿಲ್ಲ. ಕಾಯಕ ಮಾತ್ರ ನಮ್ಮದು. ಕೊಟ್ಟರೆ ಅದೇ ಅವಳ ವರ. ಅರ್ಧ ಕೊಟ್ಟರೂ ಅದೇ ಅವಳ ಆಶೀರ್ವಾದ. ಆದರೆ ಬಿತ್ತಿದ ಬೀಜಕ್ಕೆ ಆಕೆ ಮೋಸ ಮಾಡಲಾರಳು ಎಂಬ ದುಡಿಮೆಯ ನಂಬಿಕೆ ತೋರಿಸಿಕೊಟ್ಟ.

ಅಪ್ಪನಿಗೆ ಕಷ್ಟ ಹಲವಾರು. ಆದರೆ ಒಮ್ಮೆಯೂ ಆತ ತನ್ನ ಪರಿಸ್ಥಿತಿಯನ್ನು ಹಲುಬುತ್ತಾ ಕೂರಲಿಲ್ಲ. ಇಂದಿಗೂ ನಗುನಗುತ್ತಲೇ ಮುಂದೆ ಸಾಗುತ್ತಿದ್ದಾನೆ. ಅವನ ನಗು ನೋಡಿದಾಗೆಲ್ಲ, ಕಷ್ಟ ಅನ್ನುವುದು ಇಲ್ಯಾರಿಗೂ ಇಲ್ಲ ಅನ್ನಿಸುತ್ತದೆ.

ಅಪ್ಪ ನೋಡಿದ ಹಣವೇ ಕೊಂಚ. ಅದರೆ ಮೊದಲ ಚಿಲ್ಲರೆ ನೋಡಿದ ದಿನವೇ ಹಣ ನೋಡಿಕೊಳ್ಳುವ ಜವಾಬ್ದಾರಿ ನನಗೆ ಕೊಟ್ಟುಬಿಟ್ಟ. ಇಂದಿನ ನನ್ನ ಏಳಿಗೆಗೆ ಅವ ಕೊಟ್ಟ ವಿಶ್ವಾಸವೇ ಕಾರಣ.

ಬಡತನದ ದೆಸೆಯಿಂದ ಅಪ್ಪ ಸೈಕಲ್ಲನ್ನೂಕೊಂಡವನಲ್ಲ. ಯಾರ ಬೈಕಿಗೂ ಆಸೆಪಟ್ಟವನಲ್ಲ. ನಡೆದು ಬರುತ್ತಿದ್ದನೇ ಹೊರತು, ಯಾರ ನೋಡಿಯೂ ಹೊಟ್ಟೆಕಿಚ್ಚುಪಡಲಿಲ್ಲ. ಮಕ್ಕಳ ಸಂಬಳದಲ್ಲಿ ಮೊದಲ ಬೈಕು ಕೊಡಿಸಿದಾಗ ಚಿಕ್ಕ ಮಕ್ಕಳಂತೆ ಕುಣಿದಾಡಿದ್ದ.

Advertisement

ಎಲ್ಲರೆದುರು ಎದೆ ಸೆಟೆಸಿ ಬೈಕು ಚಲಾಯಿಸಿದ್ದ. ಮೊದಲ ಬಾರಿಗೆ ವಿಮಾನವೇರಿದಾಗ ಊರರೆಲ್ಲ ಅದನ್ನೇ ಹೇಳಿಕೊಂಡು ಬಂದಿದ್ದ. ಅಪ್ಪ ಜವಾಬ್ದಾರಿ ಹೊತ್ತು ಪ್ರೈಮರಿ ಸ್ಕೂಲನ್ನೇ ಅರ್ಧಕ್ಕೆ ಬಿಟ್ಟವ. ಆತ ಸೋಲನ್ನು ಒಪ್ಪಿಕೊಳ್ಳಲೇ ಇಲ್ಲ. ಮಕ್ಕಳಿಗೆ, ನಿಮ್ಮಿಷ್ಟ ಬಂದ ದಾರಿಯಲ್ಲಿ ಮುನ್ನಡೆಯಿರಿ, ನಾನಿದ್ದೇನೆ ಅಂದ. ಇಂಜಿನಿಯರಿಂಗ್‌ ಸೇರಿದಂತೆ ಬೇರೆ ಬೇರೆ ಓದಿಸಿದ. ಎಲ್ಲರೂ ತಮ್ಮ ಕಾಲ ಮೇಲೆ ತಾವು ನಿಂತಾಗ ಅಲ್ಲೆಲ್ಲೋ ಮರೆಯಲ್ಲಿ ನಿಂತು ಮೀಸೆ ತಿರುವಿಕೊಂಡ.

ಆನಂದಬಾಷ್ಪ ಸುರಿಸಿದನಾ? ನಮಗೆ ಗೊತ್ತಾಗಲಿಲ್ಲ… ಅಪ್ಪನೆಂದರೆ ಹಾಗೇ! ಯಾರದೋ ವಿಷಯ ಹೇಳುತ್ತಿದ್ದರೂ ನಮ್ಮ ಅಪ್ಪನ ಚಿತ್ರವೇ ಕಣ್ಮುಂದೆ ಬರುತ್ತದೆ.

-ಸಂತೋಷ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next