Advertisement
ಕೆಲ ವರ್ಷಗಳ ಹಿಂದೆ ದೃಶ್ಯ ಮಾಧ್ಯಮ ಇಷ್ಟೊಂದು ವ್ಯಾಪಕವಾಗಿರಲಿಲ್ಲ. ಆಗ ಓದು ಎಲ್ಲರ ಅಭ್ಯಾಸವಾಗಿತ್ತು. ಈಗ ಓದಿನ ಹವ್ಯಾಸ ಕಡಿಮೆ ಆಗಿದೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
Related Articles
Advertisement
ಬಹಳಷ್ಟು ಕಾದಂಬರಿಗಳನ್ನು ಬರೆದು ಓದು ಗರನ್ನು ತಲುಪಿದವರು ನೀವು. ಇಂದಿನ ಬರಹಗಾರರಿಗೆ ಏನು ಹೇಳ್ಳೋದಕ್ಕೆ ಇಷ್ಟ ಪಡ್ತೀರಾ?
ದಯವಿಟ್ಟು ಹೆಚ್ಚು ಓದಿ. ಲೇಖಕ ಯಾವ ವಿಷಯದ ಬಗ್ಗೆ ಹೇಳುವುದಕ್ಕೆ ಹೊರಟಿ¨ªಾರೆ ಅನ್ನುವುದನ್ನ ಅರ್ಥ ಮಾಡಿಕೊಳ್ಳಿ. ಒಂದು ಕೃತಿ ಕೇವಲ ಕೃತಿ ಮಾತ್ರ ಅಲ್ಲ, ಅದೊಂದು ಅನುಭವವೂ ಆಗುವ ರೀತಿಯಲ್ಲಿ ಓದುವುದನ್ನು ಬೆಳೆಸಿಕೊಳ್ಳಬೇಕು. ಒಬ್ಬ ಒಳ್ಳೆಯ ಓದುಗ ಮಾತ್ರ ಒಂದೊಳ್ಳೆ ಕಾದಂಬರಿ ಬರೆಯಲಿಕ್ಕೆ ಸಾಧ್ಯ.
ಹಲವಾರು ಕೃತಿಗಳು ಬಿಡುಗಡೆಯಾಗುತ್ತಿರುವ ಕಾಲವಿದು. ಓದು ಅಥವಾ ವಿಷಯದ ಆಯ್ಕೆಯ ಪ್ರಶ್ನೆ ಬಂದಾಗ ಯಾವುದನ್ನು ಓದಬೇಕು, ಯಾವುದನ್ನ ಬಿಡಬಾರದು ಅಂತ ಹೇಗೆ ಆಯ್ಕೆ ಮಾಡಿಕೊಳ್ಳಬಹುದು?
ಆಯ್ಕೆ ಅನ್ನೋದು ಯಾವಾಗಲೂ ಕಷ್ಟದ ಕೆಲಸ. ಒಬ್ಬ ಲೇಖಕನ ಅಷ್ಟೂ ಕೃತಿಗಳನ್ನ ಓದಿದಾಗ ಮಾತ್ರ ನಮಗೆ ಆ ಲೇಖಕ ಅರ್ಥವಾಗ್ತಾನೆ ಅಥವಾ ಅರಿವಿಗೆ ದಕ್ಕುತ್ತಾನೆ. ಓದುತ್ತಾ ಓದುತ್ತ ನಾವು ಬೆಳೆಸಿಕೊಳ್ಳುವ ಅನುಭವ, ದೃಷ್ಟಿಕೋನಗಳೇ ನಮಗೆ ಮುಂದಿನ ದಾರಿಯನ್ನ ತೋರಿಸುತ್ತಾ ಹೋಗುತ್ತವೆ.
ನೀವು ಮಕ್ಕಳ ಸಾಹಿತ್ಯ ಸೇರಿದಂತೆ ಹಲವಾರು ಸಾಹಿತ್ಯ ಕೃತಿಗಳನ್ನ ರಚಿಸಿದ್ದೀರ. ಅವುಗಳಲ್ಲಿ ನಿಮಗೆ ಅತ್ಯಂತ ಸಂತೋಷ, ಸಮಾಧಾನ ನೀಡಿದ ಕೃತಿ ಯಾವುದು ಹಾಗೂ ಯಾವ ಕಾರಣಕ್ಕೆ?
“ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು’ ಎನ್ನುವ ನನ್ನ ಕಥೆ ಈ ಬಾರಿಯ ಏಳನೇ ತರಗತಿಯ ಪಠ್ಯದಲ್ಲಿದೆ. ಅದನ್ನ ಬಹಳಷ್ಟು ಮಕ್ಕಳು ಓದಿಕೊಂಡಿದ್ದಾರೆ ಹಾಗೂ ಮೆಚ್ಚಿಕೊಂಡಿದ್ದಾರೆ. ಎಲ್ಲಿ ಹೋದರೂ ಬಂದು ಮಾತಾಡಿಸುತ್ತಾರೆ. ಅದು ನಾಟಕವಾಗಿಯೂ ಬಂದಿದೆ. ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿರೋ ಹಲವಾರು ಕೃತಿಗಳನ್ನ ಬರೆಯೋದು ಸಾಧ್ಯವಾಗಿದೆ. ಇದು ಯಾವತ್ತಿಗೂ ನನಗೆ ಸಮಾಧಾನ, ಸಂತೋಷ ನೀಡುವಂತಹಾ ಒಂದು ಸಂಗತಿ. ಹಾಗಾಗಿ ಮಕ್ಕಳ ಸಾಹಿತ್ಯ ರಚನೆ ವೈಯಕ್ತಿಕವಾಗಿ ನನಗೆ ಇಷ್ಟ. ಅದನ್ನೇ ಹೆಚ್ಚು ಹೆಚ್ಚು ಮಾಡಲು ಪ್ರಯತ್ನಿಸುತ್ತೇನೆ.
ಲೇಖಕನಿಗೆ ಸಾಮಾಜಿಕ ಜವಾಬ್ದಾರಿ ಇರಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು ಬರೆದವರು ನೀವು. ಈ ಹೊತ್ತಿನ ತರುಣ ಪೀಳಿಗೆಯ ಜನರಿಗೆ ನೀವು ಏನನ್ನ ಹೇಳ್ಳೋದಕ್ಕೆ ಬಯಸುತ್ತೀರಿ?
ಸಾಹಿತ್ಯದಿಂದ ನಮಗೆ ಒಳ್ಳೆಯದಾಗುತ್ತೆ, ಸಾಹಿತ್ಯದಿಂದ ನಾವು ಪ್ರೌಢರಾಗ್ತೀವೆ ಅನ್ನೋ ಐಡಿಯಾಲಜಿಯನ್ನಿಟ್ಕೊಂಡು ಸಾಹಿತ್ಯ ರಚಿಸುವವರಿಗೆ ಹೆಚ್ಚು ಬೆಲೆ ಕೊಡುವವನು ನಾನು. ಸಾಹಿತ್ಯ ಕೇವಲ ಕಾಲ ಕಳೆಯೋದಕ್ಕೋ ಅಥವಾ ಮನೋರಂಜನೆಗೋ ಅಲ್ಲ ಅನ್ನುವುದು ನನ್ನ ನಂಬಿಕೆ. ಸಂಗೀತ ಅಥವಾ ಇನ್ಯಾವುದೇ ಕಲೆಯ ಹಾಗೆ ಸಾಹಿತ್ಯ ಸಹಾ ನಮ್ಮ ವ್ಯಕ್ತಿತ್ವವನ್ನ ಬದಲಾಯಿಸಬೇಕು. ಇದೊಂದು ಆದರ್ಶವೂ ಹೌದು, ಉದ್ದೇಶವೂ ಹೌದು. ಓದು ಅಂದರೆ ಬರಿದೆ ಓದಲ್ಲ. ಹಾಗಾಗಿ ಏನನ್ನೇ ಬರೆಯುವಾಗಲೂ ನಾನು ‘ಇದು ಎಲ್ಲಿಗೆ ಮುಟ್ಟುತ್ತದೆ?’ ಎಂದು ಯೋಚಿಸುತ್ತೇನೆ. ಈ ನಿಟ್ಟಿನಲ್ಲೇ ನಮ್ಮ ಲೇಖಕರು ಸಾಗಬೇಕು ಅನ್ನೋದು ನನ್ನ ಸಲಹೆ.
ನಿಮ್ಮ ಕಾದಂಬರಿಗಳು ಸಿನಿಮಾಗಳಾಗಿ ಸಹ ಪ್ರದರ್ಶನಗೊಂಡಿವೆ. ಕಾದಂಬರಿಗಳಲ್ಲಿ ನೀವು ಹೇಳಿರುವ ಅಂಶ ಹಾಗೂ ಸಂಗತಿಗಳನ್ನು ಅಷ್ಟೇ ಸೂಕ್ಷ್ಮವಾಗಿ, ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸಲು ಸಿನಿಮಾಕ್ಕೆ ಸಾಧ್ಯವಾಗಿದೆಯಾ?
ಇಲ್ಲ. ಸಿನಿಮಾಗಳು ನನಗೆ ಸಂಪೂರ್ಣ ತೃಪ್ತಿಯನ್ನು ಕೊಟ್ಟಿಲ್ಲ. ಏಕೆಂದರೆ ಒಂದು ಸಿನಿಮಾ ಹಲವಾರು ನಿಟ್ಟಿನಲ್ಲಿ ಯೋಚನೆ ಮಾಡುತ್ತದೆ. ಅದು ನೃತ್ಯ, ಹಾಸ್ಯ, ಬಡಿದಾಟ ಮುಂತಾದ ಹಲವಾರು ಅಂಶಗಳನ್ನ ಒಳಗೊಂಡಿರುತ್ತದೆ. ಹೀಗಾಗಿ ಒಂದು ಕಾದಂಬರಿ ಓದುಗನ ಮೇಲೆ ಉಂಟುಮಾಡುವ ಪರಿಣಾಮವು ಚಲನಚಿತ್ರ ಉಂಟುಮಾಡುವ ಪರಿಣಾಮಕ್ಕಿಂತ ಬೇರೆಯೇ ಆಗುತ್ತದೆ. ಇದು ನನ್ನ ಕಾದಂಬರಿಗಳ ವಿಷಯದಲ್ಲೂ ಆಗಿದೆ. ಕಾದಂಬರಿ ಓದುಗನನ್ನು ಸಂಪೂರ್ಣವಾಗಿ ಒಳಗೊಳ್ಳುತ್ತಾ ಹೋಗುತ್ತದೆ. ಆದರೆ ಸಿನಿಮಾ ಹಲವಾರು ಅಂಶಗಳಲ್ಲಿ ಹಂಚಿ ಹೋಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಈ ವಿಷಯದಲ್ಲಿ ಹಲವಾರು ಅಭಿಪ್ರಾಯಗಳಿರಬಹುದು. ಇದು ಒಬ್ಬ ಲೇಖಕನಾಗಿ ನನ್ನ ಅಭಿಪ್ರಾಯ ಅಷ್ಟೇ.
ಕಾದಂಬರಿ ಮತ್ತು ಸಿನಿಮಾ- ಇವರೆಡರ ಪೈಕಿ ಓದುಗನ ಅಥವಾ ವೀಕ್ಷಕನ ಕಲ್ಪನಾ ಶಕ್ತಿಯನ್ನು, ಹರವನ್ನು ಹಿಗ್ಗಿಸುವುದು ಯಾವುದು?
ಓದುತ್ತಾ ಓದುತ್ತಾ ಓದುಗ ಕಾದಂಬರಿಯಲ್ಲಿ ಲೀನವಾಗುತ್ತಾನೆ. ಇಲ್ಲಿ ‘ಲೀನ’ ಎನ್ನುವುದು ಅತ್ಯಂತ ಪರಿಣಾಮಕಾರಿ ಪದ. ಕಥೆಯ ಸನ್ನಿವೇಶ, ಭಾವಗಳು ಅವನ ಮನದಲ್ಲೇ ಸೃಷ್ಟಿಯಾಗುತ್ತವೆ. ಇದು ಸಿನಿಮಾದ ವಿಷಯದಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ಸಾಧ್ಯವಾಗುವುದಿಲ್ಲ.
ಸಮಾಜದ ಸಾಮರಸ್ಯ ಹಾಗೂ ಸಹಿಷ್ಣುತೆಯನ್ನು ಕಾಪಾಡುವುದರಲ್ಲಿ ಸಾಹಿತ್ಯದ ಪಾತ್ರ ಏನು?
ಈ ವಿಷಯದಲ್ಲಿ ಸಾಹಿತ್ಯದ ಜವಾಬ್ದಾರಿ ದೊಡ್ಡದಿದೆ. ಸುಮ್ಮನೆ ಬರೆಯುವುದು ಸರಿಯಲ್ಲ. ತಾನು ಬರೆದ ಕೃತಿ ಸಮಾಜದ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನೂ ಲೇಖಕರು ಚಿಂತಿಸಬೇಕು. ಇಂದು ಸಾಮಾಜಿಕ ವೈಪರೀತ್ಯಗಳು ವಿಪರೀತವಾಗಿವೆ. ಧರ್ಮಗಳ ವಿಷಯದಲ್ಲಿ ಜನ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸೃಷ್ಟಿಯಾಗಬೇಕಾದ ಗುರುತರ ಜವಾಬ್ದಾರಿ ಸಾಹಿತ್ಯದ ಮೇಲಿದೆ.
ಅನುಭವವನ್ನು ವ್ಯಕ್ತಪಡಿಸುವಾಗ ಭಾಷೆ ಸೋಲುತ್ತಿದೆ ಅಂತ ನಿಮಗೆಂದಾದರೂ ಅನ್ನಿಸಿದ್ದಿದೆಯಾ?:
ಖಂಡಿತ ಇಲ್ಲ. ಭಾಷೆ ಯಾವತ್ತಿಗೂ ಸೋಲುವುದಿಲ್ಲ. ಭಾಷೆಯನ್ನು ಬಳಸುವ ವ್ಯಕ್ತಿ ಸಾಕಷ್ಟು ಪ್ರಬುದ್ಧನಾಗಿದ್ದರೆ, ಪದಗಳನ್ನು ಸರಿಯಾಗಿ ದುಡಿಸಿಕೊಂಡರೆ ಅದು ತನ್ನ ಗುರಿ ಮುಟ್ಟಿಯೇ
ಮುಟ್ಟುತ್ತದೆ. ಆ ಶಕ್ತಿ ಭಾಷೆಗಿದೆ. ಶಿವರಾಮ ಕಾರಂತರಂಥವರು ಭಾಷೆಯನ್ನು ಬಹಳ ಸಶಕ್ತವಾಗಿ ಬಳಸಿದಾರೆ. ಸಡಿಲವಾಗಿ ಅಥವಾ ಜಾಳುಜಾಳಾಗಿ ಹೇಳಿದಾಗ ಕೃತಿ ಕಾಡುವುದಿಲ್ಲ. ಅದು ಲೇಖಕನ ಸೋಲೇ ಹೊರತು ಭಾಷೆಯ ಸೋಲು ಖಂಡಿತ ಅಲ್ಲ. ಗಾಢವಾಗಿ ಬಳಸಿದ ಭಾಷೆಯ ಮೂಲಕ ಸೃಷ್ಟಿಯಾದ ಕೃತಿ ಖಂಡಿತ ಗುರಿ ಮುಟ್ಟುತ್ತದೆ.
ಪ್ರತಿಷ್ಠಿತ ಪಂಪ ಪ್ರಶಸ್ತಿ ನಿಮಗೆ ಬಂದಿದೆ. ಇದು ನಮಗೆಲ್ಲ ಸಂತೋಷದ ವಿಷಯ. ಈ ಸಮಯದಲ್ಲಿ ನಿಮಗೇನನ್ನಿಸುತ್ತದೆ?
ಪಂಪ ಕನ್ನಡದ ಆದಿಕವಿ. ಕನ್ನಡದ ಮೇಲೆ ಅತ್ಯಂತ ಪ್ರೀತಿಯನ್ನಿಟ್ಟುಕೊಂಡು ಬರೆದವನು. ಆ ಪ್ರಶಸ್ತಿ ನನಗೆ ಬಂದಿರುವುದು ಅತ್ಯಂತ ಸಂತಸವನ್ನುಂಟುಮಾಡಿದೆ.
ಸಂದರ್ಶನ:
ವಿನಾಯಕ ಅರಳಸುರಳಿ
ಕ್ಯಾರಿಕೇಚರ್: ಸಂಕೇತ್ ಗುರುದತ್ತ