Advertisement
ಮೂರು ದಶಕಗಳ ಕಾಲ ಕನ್ನಡ ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯಳಾಗಿ ಕೆಲಸ ಮಾಡಿದ ನಂತರ 2015ರಲ್ಲಿ ನಿವೃತ್ತಿಯಾದೆ. ನಿವೃತ್ತಿಯ ನಂತರ ಕ್ರಿಯಾಶೀಲವಾಗಿರಬೇಕು ಎಂದೆನಿಸಿತು. ಆಗ, ನನ್ನನ್ನು ಕೈ ಬೀಸಿ ಕರೆದಿದ್ದೇ ಫೋಟೋಗ್ರಫಿ ಹವ್ಯಾಸ. ಅಲ್ಲಿಯವರೆಗೂ ಕಾಲೇಜಿನ ಸಭೆ, ಸಮಾರಂಭಗಳಲ್ಲಿ ಫೋಟೋ ತೆಗೆದಿದ್ದೆನಾದರೂ, ಪೂರ್ಣ ಪ್ರಮಾಣದಲ್ಲಿ ಈ ಕ್ಷೇತ್ರಕ್ಕೆ ಬಂದಿರಲಿಲ್ಲ. ಅರವತ್ತರ ನಂತರ ನಾವು ಮಕ್ಕಳಂತೆ… ಹೊಸ ಆಸೆಗಳು ಹುಟ್ಟಿಕೊಳ್ತವೆ. ಹೀಗೆ ಪಕ್ಷಿ ಪ್ರಪಂಚ ನನ್ನನ್ನು ಸೆಳೆಯಿತು. ಅವುಗಳ ಫೋಟೋ ತೆಗೆಯುವುದೇ ನನ್ನ ಹವ್ಯಾಸವಾಯಿತು. ಇಲ್ಲಿ ಕ್ರಿಯಾಶೀಲತೆಯೂ ಇದೆ, ಸೃಜನಶೀಲತೆಯೂ ಇದೆ.
Related Articles
Advertisement
ಅನುಭವದಿಂದಲೇ ಕಲಿತೆ!
ಕಾಡು, ಕಡಲು, ಬೆಟ್ಟ-ಗುಡ್ಡ, ಹಿಮದಲ್ಲಿ, ದೋಣಿಯಲ್ಲಿ, ತೆಪ್ಪದಲ್ಲಿ ನಿಂತು, ನೆಲದ ಮೇಲೆ ಕುಳಿತು, ಕಾಡಿನಲ್ಲಿ ಅಡ್ಡಾಡುತ್ತಾ, ಜೀಪಿನಲ್ಲಿ ಕುಳಿತು ಫೋಟೋ ತೆಗೆದ ವಿಚಿತ್ರ, ವಿಶಿಷ್ಟ ಅನುಭವಗಳು ನನ್ನ ನೆನಪಿನ ಮೂಟೆಯಲ್ಲಿವೆ. ಛಾಯಾಚಿತ್ರ ತೆಗೆಯಲು ನಾನು ಯಾವುದೇ ತರಬೇತಿ ಪಡೆದಿಲ್ಲ. ಬಹುತೇಕ ಅನುಭವದಿಂದಲೇ ಕಲಿತೆ. ಯು ಟ್ಯೂಬ್‌ನಲ್ಲೂ ಸಾಕಷ್ಟು ವಿಡಿಯೋಗಳನ್ನು ನೋಡಿ, ಬ್ಯಾಕ್‌ಗ್ರೌಂಡ್, ಫೋಕಸಿಂಗ್ ಪಾಯಿಂಟ್, ಅಪಾರ್ಚರ್, ಶಟರ್ ಸ್ಪೀಡ್ ಇವುಗಳ ಬಗ್ಗೆಯೆಲ್ಲ ಕಲಿತಿದ್ದೇನೆ. ಫೋಟೋ ತೆಗೆಯುವುದಲ್ಲದೇ ಕೆಲವು ಅಪರೂಪದ ಫೋಟೋ ಸಂಗ್ರಹವನ್ನೂ ಮಾಡಿರುವೆ. ಮಹಾತ್ಮ ಗಾಂಧಿ, ಕುವೆಂಪು ಅವರೆಂದರೆ ನನಗೆ ಬಹಳ ಇಷ್ಟ. ಅವರ ಸಾವಿ ರಾರು ಅಪರೂಪದ ಫೋಟೋಗಳನ್ನು ಸಂಗ್ರ ಹಿಸಿದ್ದೇನೆ. ಜತೆಗೆ ರವೀಂದ್ರನಾಥ್‌ಟ್ಯಾಗೋರ್ ಅವರ ಫೋಟೋಗಳೂ ಇವೆ. 2000 ಅಡಿ ಕೆಳಗೆ ಇಳಿದಾಗ… ದಟ್ಟ ಅಡವಿಯಲ್ಲಿ ಪಕ್ಷಿಗಳನ್ನು ಹುಡುಕಿಕೊಂಡು ಹೋಗುವುದೇ ಒಂದು ರೋಚಕ ಅನುಭವ. ಪಶ್ಚಿಮ ಬಂಗಾಳದ ಲಾಟ್ ಪಂಚರ್ ಪ್ರದೇಶದಲ್ಲಿ ಹಕ್ಕಿಗಳ ಫೋಟೋ ತೆಗೆಯಲು ಕಾಡಿನಲ್ಲಿ 2000 ಅಡಿ ಕೆಳಗೆ ಇಳಿದು ಹೋಗಿಬಂದಿದ್ದೆ. ಇದು ಎಂದೂ ಮಾಸದ ನೆನಪು. ಈವರೆಗೆ 900 ಬೇರೆ ಬೇರೆ ಬಗೆಯ ಹಕ್ಕಿಗಳ ಫೋಟೋ ತೆಗೆದಿರುವೆ. ಇನ್ನೂ 300 ಹಕ್ಕಿಗಳು ನನ್ನ ಪಟ್ಟಿಯಲ್ಲಿವೆ. ಅವುಗಳ ಫೋಟೋ ತೆಗೆಯಲು ಸೂಕ್ತ ಸಮಯಕ್ಕಾಗಿ ಕಾಯುತ್ತಿರುವೆ.
ಹಕ್ಕಿ ಹುಡುಕಿ ಹೋದವಳಿಗೆ ಚಿರತೆ ಸಿಕ್ಕಿತ್ತು! : ಒಮ್ಮೆ ಊಟಿಯಲ್ಲಿ ಪಕ್ಷಿಗಳ ಫೋಟೋ ತೆಗೆದು ವಾಪಸ್ ಬರುತ್ತಿದ್ದೆ. ದಾರಿಯುದ್ದಕ್ಕೂ ಬಂಡೀಪುರ ಕಾಡು. ರಸ್ತೆ ಪಕ್ಕದ ಪೊದೆಯಲ್ಲಿ ಚಿರತೆ ಕುಳಿತಿತ್ತು. ಕೂಡಲೇ ಕ್ಯಾಮರಾ ತೆಗೆದು ಒಂದೆರಡು ಫೋಟೋ ಕ್ಲಿಕ್ ಮಾಡಿದೆ. ಅದು ಕೆಲಕಾಲ ಹಾಗೇ ಕುಳಿತು, ನಂತರ ಹೋಗಿತ್ತು. ಇನ್ನೊಮ್ಮೆ ಕಬಿನಿಯಲ್ಲಿ ಸಫಾರಿಗೆಂದು ಹೋದಾಗ ಹುಲಿ ಎದುರಾಗಿತ್ತು. ಅದರ ಫೋಟೋವನ್ನೂ ತೆಗೆದಿದ್ದೆ. ಯಾವುದೇ ಕಾಡಿಗೆ ಹೋದರೂ ಹಕ್ಕಿಗಳ ಫೋಟೋ ಮಾತ್ರ ತೆಗೆಯುತ್ತೇನೆ. ಒಮ್ಮೊಮ್ಮೆ ಈ ರೀತಿ ಚಿರತೆ, ಆನೆ, ಹುಲಿ ಎದುರಾದ ಪ್ರಸಂಗಗಳಿವೆ.
-ಲೀಲಾ ಅಪ್ಪಾಜಿ, ಮಂಡ್ಯ