Advertisement
ಒಂದೂವರೆ ವರ್ಷಗಳ ಹಿಂದೆ…113 ಕೆ.ಜಿ.ಗಳ ದೇಹ ತೂಕವನ್ನು ಹೊತ್ತುಕೊಂಡು ವಿಧವಿಧವಾಗಿ ಬವಣೆಪಡುತ್ತಿದ್ದ ರಜತ್ ಅವರಿಗೆ ಎಲ್ಲರಂತೆಯೇ ಸ್ಲಿಮ್ ಆ್ಯಂಡ್ ಟ್ರಿಮ್ ಆಗಿರಬೇಕು ಎಂಬ ಕನಸಿದ್ದುದು ಸುಳ್ಳಲ್ಲ. ಆದರೆ ಆ ಸಮಯದಲ್ಲಿ ಅವರ ದೇಹದಲ್ಲಿದ್ದ ಕೊಬ್ಬಿನಾಂಶ 52 ರಿಂದ 55%! ಇಷ್ಟು ಅಗಾಧ ಪ್ರಮಾಣದ ಕೊಬ್ಬನ್ನು ಕರಗಿಸುವ ವಿಧಾನವಾದರೂ ಯಾವುದು? ಜಿಮ್ ಗೆ ಹೋಗುವುದೇ, ತಿನ್ನುವುದನ್ನು ಬಿಡುವುದೇ ಅಥವಾ ಕೊಬ್ಬನ್ನು ಕರಗಿಸುವ ಔಷಧಿಗಳನ್ನ ತೆಗೆದುಕೊಳ್ಳುವುದೇ… ಹೀಗೆ ಗೊಂದಲದಲ್ಲಿದ್ದ ರಜತ್ ಅವರ ಸಹಾಯಕ್ಕೆ ಬಂದಿದ್ದು ಬಾಲಿವುಡ್ ನಟ ಅಮೀರ್ ಖಾನ್. ಹೌದು, ನಟ ಅಮೀರ್ ಖಾನ್ ಅವರು ತಮ್ಮ ‘ದಂಗಲ್’ ಚಿತ್ರದಲ್ಲಿ ಎರಡು ಶೇಡ್ ಗಳ ಪಾತ್ರವನ್ನು ನಿರ್ವಹಿಸಿದ್ದು ಚಿತ್ರಪ್ರೇಮಿಗಳಿಗೆ ತಿಳಿದಿರುವ ವಿಚಾರವೇ. ಅಲ್ಲಿ ಅಮೀರ್ ಖಾನ್ ಬಾಡಿ ಫಾರ್ಮೇಶನ್ ಗೆ ಒಳಗಾಗಿದ್ದರು. ಇದರಿಂದ ಪ್ರೇರೇಪಿತರಾದ ರಜತ್ ಅವರು ದೇಹ ಸ್ವರೂಪ ಬದಲಾವಣೆ ಸಂಬಂಧಿತ ಮಾಹಿತಿಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಅದೊಂದು ದಿನ ದೃಢ ನಿರ್ಧಾರಕ್ಕೆ ಬಂದೇ ಬಿಟ್ಟರು.
ತನ್ನ ದೇಹಕ್ಕೊಂದು ಸುಂದರ ರೂಪ ನೀಡಲೇಬೇಕೆಂಬ ಹಠಕ್ಕೆ ಬಿದ್ದ ರಜತ್ ಶೆಣೈ ಬಾಡಿ ಫಾರ್ಮೇಶನ್ ಕಾರ್ಯಕ್ಕೆ ಇಳಿದೇ ಬಿಡುತ್ತಾರೆ. ಬೆಳಿಗ್ಗೆ ಐದೂವರೆಯಿಂದ ಪ್ರಾರಂಭಗೊಂಡ ಅವರ ದಿನಚರಿ ಬಿಸಿನೀರಿನ ಸೇವನೆಯ ಬಳಿಕ, ಒಂದುಗಂಟೆಗಳ ಈಜು, ಬಳಿಕ ಜಿಮ್ ನಲ್ಲಿ ಸರೀಯಾದ ರೀತಿಯ ವರ್ಕೌಟ್, ದಿನಕ್ಕೆ ಕನಿಷ್ಠ 30 ಕಿ,ಮೀ.ಗಳ ಸೈಕಲ್ ಸವಾರಿ, ಪ್ರತೀ 2 ಗಂಟೆಗಳಿಗೊಮ್ಮೆ ಆರೋಗ್ಯಕರ ಆಹಾರ ಸೇವನೆ… ಹೀಗೆ ತನ್ನ ದಿನಚರಿಗೊಂದು ನಿರ್ಧಿಷ್ಠ ಚೌಕಟ್ಟನ್ನು ಹಾಕಿಕೊಂಡು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದ ರಜತ್ ಅವರಿಗೆ ಪ್ರಾರಂಭದಲ್ಲಿ ಅಷ್ಟೇನೂ ಯಶಸ್ಸು ಸಿಗದಿದ್ದರೂ ಹೀಗೆ ಮಾಡಿದರೆ ತನ್ನ ದೇಹ ಬಗ್ಗುತ್ತದೆ ಎಂಬ ವಿಶ್ವಾಸ ಮೂಡಲು ಪ್ರಾರಂಭವಾದದ್ದು ಮಾತ್ರ ಸುಳ್ಳಲ್ಲ.