Advertisement

30ರಿಂದ ಸ್ಪರ್ಶ್‌ ಕುಷ್ಠರೋಗ ಅರಿವು ಆಂದೋಲನ

12:08 PM Jan 28, 2020 | Suhan S |

ದಾವಣಗೆರೆ: ಜಿಲ್ಲೆಯನ್ನು ಕುಷ್ಠರೋಗ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಜ.30 ರಿಂದ 15 ದಿನಗಳ ಕಾಲ ಹಮ್ಮಿಕೊಳ್ಳಲಿರುವ ಸ್ಪರ್ಶ್‌ ಕುಷ್ಠರೋಗ ಅರಿವು ಆಂದೋಲನ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

Advertisement

ಸೋಮವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ಸ್ಪರ್ಶ್‌ ಕುಷ್ಠರೋಗ ಅರಿವು ಆಂದೋಲನ-2020ರ ಜಿಲ್ಲಾ ಸಮನ್ವಯಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸ್ಪರ್ಶ್‌ ಕುಷ್ಠರೋಗ ಅರಿವು ಆಂದೋಲನವನ್ನು ಪ್ರತಿ ವರ್ಷದಂತೆ ಮಹಾತ್ಮ ಗಾಂಧಿ  ಹುತಾತ್ಮರಾದ ಜ.30ರಂದು ಆಚರಿಸಲಾಗುವುದು. ಜ.30 ರಿಂದ ಫೆ.13ರ ವರೆಗೆ ಜಿಲ್ಲೆಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದರು.

ನಮ್ಮ ಜಿಲ್ಲೆಯನ್ನು ಕುಷ್ಠರೋಗದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾ.ಪಂ. ಅಭಿವೃದ್ಧಿ ಅ ಧಿಕಾರಿಗಳು, ಕಾರ್ಯದರ್ಶಿಗಳು, ಚುನಾಯಿತ ಸದಸ್ಯರು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಸ್ಪರ್ಶ್‌ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮವನ್ನು ಗ್ರಾಮೀಣ ಮಟ್ಟದಲ್ಲಿ, ಗ್ರಾಮ ಸಭೆಗಳಲ್ಲಿ ಕೂಡ ಈ ಆಂದೋಲನದ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರಾರ್ಥನೆಯ ನಂತರ ವಿದ್ಯಾರ್ಥಿಗಳಿಗೆ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ಅನುವು ಮಾಡಿಕೊಡಬೇಕು. ಜಾಥಾ ಕಾರ್ಯಕ್ರಮ ಏರ್ಪಡಿಸಲು ಸಹಕರಿಸಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಇಲಾಖೆಯಡಿ ಬರುವ ಎಲ್ಲಾ ವಸತಿ ನಿಲಯದ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಹಾಗೂ ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳಿಂದ ಕಾಲ ಕಾಲಕ್ಕೆ ಪರೀಕ್ಷೆಗೆ ಒಳಪಡಿಸಬೇಕೆಂದು ಸೂಚಿಸಿದರು.

ಜಿಲ್ಲಾ ಆಸ್ಪತ್ರೆ ಚರ್ಮರೋಗ ವಿಭಾಗದ ಎಲ್ಲಾ ತಜ್ಞರು ಮತ್ತು ಖಾಸಗಿ ಚರ್ಮರೋಗ ತಜ್ಞರ ಸಹಕಾರದಿಂದ ಕುಷ್ಠರೋಗ ಬಾಧಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮುಂದೆಯೂ ಸಹಕಾರ ಹೀಗೇ ಮುಂದುವರೆಯಲಿ ಎಂದ ಅವರು, ಗ್ರಾಮ ಮಟ್ಟದಲ್ಲಿ ಡೊಳ್ಳುಕುಣಿತ, ಬೀದಿ ನಾಟಕ ಮತ್ತು ಜಾನಪದ ಹಾಡುಗಳು ಮುಖಾಂತರ ಜನರಿಗೆ ಅರಿವು ಮೂಡಿಸಲು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.

Advertisement

ಆಶಾ ಕಾರ್ಯಕರ್ತೆಯರು ಆಯಾ ಗ್ರಾಮ ಪಂಚಾಯತಿಗಳಲ್ಲಿ ಸ್ಪರ್ಶ್‌ ಕುಷ್ಠರೋಗ ಅರಿವು ಆಂದೋಲನ ಸಭೆಗಳಲ್ಲಿ ಭಾಗವಹಿಸಿ, ಜನರಲ್ಲಿ ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರೂ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಮನೆಗಳ ಸದಸ್ಯರ ತಪಾಸಣೆ ನಡೆಸಿ ಕುಷ್ಠರೋಗ ಸಂಶಯಾಸ್ಪದ ವ್ಯಕ್ತಿಗಳ ಮಾಹಿತಿ ಒದಗಿಸಬೇಕು ಎಂದರು.

ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ| ಮುರಳಿಧರ್‌ ಮಾತನಾಡಿ, ದಾವಣಗೆರೆ ತಾಲೂಕಿನಲ್ಲಿ 23, ಹರಿಹರ 11, ಹೊನ್ನಾಳಿ 7, ಚನ್ನಗಿರಿ 12 ಮತ್ತು ಜಗಳೂರು ತಾಲೂಕಿನಲ್ಲಿ 10 ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 63 ಕುಷ್ಠರೋಗಿಗಳಿದ್ದಾರೆ. ಇದರಲ್ಲಿ 14 ರೋಗಿಗಳಿಗೆ ಪಿ.ಬಿ, 49 ರೋಗಿಗಳಿಗೆ ಎಂ.ಬಿ. ಚಿಕಿತ್ಸಾ ಕ್ರಮ ನಡೆಸಲಾಗುತ್ತಿದೆ. ಜ.30 ರಿಂದ 15 ದಿನಗಳಕಾಲ ನಡೆಯುವ ಆಂದೋಲನಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು. ಡಿಎಚ್‌ಓ ಡಾ| ರಾಘವೇಂದ್ರ ಮಾತನಾಡಿ, ಕುಷ್ಠರೋಗದ ಶೀಘ್ರ ಪತ್ತೆಯು ಪರಿಣಾಮಕಾರಿ ಚಿಕಿತ್ಸೆಗೆ ಸಹಕಾರಿಯಾಗುತ್ತದೆ. ಆದ್ದರಿಂದ ಯಾರೂ ಈ ರೋಗದ ಬಗ್ಗೆ ಹಿಂಜರಿಯದೇ ಬೇಗ ಚಿಕಿತ್ಸೆಗೆ ಒಳಗಾಗಬೇಕೆಂದರು. ಸಭೆಯಲ್ಲಿ ಜಿ.ಪಂ. ಸಿಇಒ ಪದ್ಮ ಬಸವಂತಪ್ಪ, ಆರ್‌ಸಿಎಚ್‌ಓ ಡಾ| ಶಿವಕುಮಾರ್‌, ತಾಲೂಕು ವೈದ್ಯಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್‌ ಕೆ.ಎಚ್‌, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ್‌, ಆರೋಗ್ಯ ಇಲಾಖೆ ಬಿಎಚ್‌ಇಓ ಉಮಾಪತಿ, ಆರೋಗ್ಯ ನಿರೀಕ್ಷಕ ಲೋಕೇಶ್. ಇತರರು ಹಾಜರಿದ್ದರು.

ಬಾಪೂಜಿ ಸದುದ್ದೇಶ ಸಾಕಾರಕ್ಕೆ ಸನ್ನದ್ಧ ಕುಷ್ಠರೋಗ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ಗಳಿಸಲು ನಾವು ಬದ್ಧರಾಗಿದ್ದೇವೆ. ಕುಷ್ಟರೋಗಿಗಳಿಗೆ ಯಾವುದೇ ರೀತಿಯಾದ ತಾರತಮ್ಯಗಳಾಗದಂತೆ ಎಚ್ಚರ ವಹಿಸುತ್ತೇವೆ. ವೈಯಕ್ತಿಕ ಹಾಗೂ ನಾಗರಿಕ ವ್ಯಕ್ತಿಭಾವದ ಒಗ್ಗಟ್ಟಿನಿಂದ ಸಾಮಾಜಿಕ ಕಳಂಕ-ಪಿಡುಗುಗಳನ್ನು ಹೋಗಲಾಡಿಸಿ, ಕುಷ್ಠರೋಗಿಗಳನ್ನು ಮುಖ್ಯವಾಹಿನಿಗೆ ತಂದು, ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಗೊಳಪಡಿಸಿ, ಬಾಪೂಜಿಯವರ ಸದುದ್ದೇಶ ಸಾಕಾರಗೊಳಿಸಲು ಸನ್ನದ್ಧರಾಗಿದ್ದೇವೆ.  –ಮಹಾಂತೇಶ್‌ ಬೀಳಗಿ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next