Advertisement
ಆದಾಗಲೇ ಸಮಯ ಆರು ದಾಟಿತ್ತು. ಬೆಳಗಾವಿಯಿಂದ ಖಾನಾಪುರ ತಲುಪಿ ಅಲ್ಲಿ ಪುನಃ ಏಳು ಗಂಟೆಗೆ ರಾಮನಗರಕ್ಕೆ ಹೋಗುವ ಬಸ್ ಹಿಡಿಯಬೇಕಿತ್ತು ಮಾಧುರ್ಯಸಿರಿಗೆ. ಆ ಬಸ್ ತಪ್ಪಿದರೆ ರಾತ್ರಿ ಒಂಬತ್ತರವರೆಗೆ ಬೇರಾವ ಬಸ್ಸೂ ಇರಲಿಲ್ಲ. ಕಾರ್ಯಕ್ರಮದಲ್ಲಿ ಮಾಧುರ್ಯಸಿರಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದ ಗಾಯಕ, “”ಮ್ಯಾಡಂ, ನಿಮಗೆ ತೊಂದರೆ ಆಗದು ಎಂದರೆ ನನ್ನ ಕಾರಿನಲ್ಲಿ ಖಾನಾಪುರದವರೆಗೂ ಬರಬಹುದು” ಎಂಬ ಸಲಹೆ ಕೊಟ್ಟಿದ್ದರು. ಕತ್ತಲು ತನ್ನ ಮುಖ ಪರಿಚಯಿಸುವ ಆ ಹೊತ್ತಲ್ಲಿ ಹೃಷಿಕೇಶ ಗಾಯಕ ತನ್ನ ಕಾರಿನಲ್ಲಿ ಬರಬಹುದು ಎಂದ ಒಂದು ಮಾತು ಮಾಧುರ್ಯಳಿಗೆ ಹೊಸ ಬೆಳಕಾಗಿ ಕಂಡಿತು. ಅವನು ತನ್ನ ಕಾರಿನಲ್ಲಿ ಬೇರೆ ಯಾರನ್ನೂ ಕರೆದೊಯ್ಯುತ್ತಿರಲಿಲ್ಲ ಎಂಬುದನ್ನು ಈ ಹಿಂದೆ ತಿಳಿದಿದ್ದಳು. ಹೃಷಿಕೇಶ ಡ್ರಾಪ್ ಕೊಡಲು ಮುಂದಾಗಿದ್ದು , ಮಾಧುರ್ಯಳಿಗೆ ತನ್ನ ಬಗ್ಗೆಯೇ ಹೆಮ್ಮೆ ಉಂಟಾಯಿತು. ಸ್ವಲ್ಪ ಹೊತ್ತು ಕಾರಿನಲ್ಲಿ ಇಬ್ಬರೂ ಕಾರ್ಯಕ್ರಮದ ಬಗ್ಗೆ ಮಾತಾಡಿದರು. ಮಿಕ್ಕಿದ್ದೆಲ್ಲ ಆಫೀಷಿಯಲ್ ವಿಷಯಗಳೇ ಆಗಿದ್ದವು. ಕಾರ್ಯಕ್ರಮದಲ್ಲಿ ಆ ದಿನ ಮಾಧುರ್ಯಸಿರಿ ಒಂದು ಗಂಡು ಆತ್ಮಚರಿತೆ ಬರೆಯುವುದಕ್ಕೂ, ಒಂದು ಹೆಣ್ಣು ರಚಿಸುವುದಕ್ಕೂ ಇರುವ ವ್ಯತ್ಯಾಸವನ್ನು ಬಹಳ ಸೂಕ್ಷ್ಮವಾಗಿ ಹೇಳಿದ್ದಳು. ಡಾ. ತೇಜಸ್ವಿನಿ ತಮ್ಮ ಜೀವನದಲ್ಲಿ ನಡೆದ ಎಲ್ಲ ಘಟನೆಗಳನ್ನು ಹಾಗೂ ತಾವು ನಡುವಯಸ್ಸಿನಲ್ಲಿ ಆಕರ್ಷಿತರಾದ ಎಲ್ಲ ವ್ಯಕ್ತಿತ್ವದವರನ್ನು ಹೆಸರಿನ ಸಹಿತ ಪುಸ್ತಕದಲ್ಲಿ ಅನಾವರಣ ಮಾಡಿದ್ದರು. ಅವಳ ಧೈರ್ಯ, ಬೆಳೆದು ಬಂದ ಪರಿಸರ, ಅವಳ ರೀತಿ-ನೀತಿ, ಗಂಡಸರನ್ನು ಎದುರಿಸಿಯಾದರೂ ಬಾಳಬಲ್ಲೆ ಎಂಬ ತೇಜಸ್ವಿನಿಯವರ ನಿಲುವಿನ ಕುರಿತಾದ ವಿಷಯದ ಕುರಿತು ಚರ್ಚಿಸುತ್ತಿರುವಾಗಲೇ ಮುಲ್ಲಾಸಾಬರ ಕಾಂಪ್ಲೆಕ್ಸ್ ಎದುರಿನ ಗಣಪತಿ ದೇವಸ್ಥಾನ ದಾಟಿ ಕಾರು ಮುಂದೆ ಹೋಗಿತ್ತು. “”ವಾಹನ ಚಲಾಯಿಸುವಾಗ ದಯಮಾಡಿ ಫೋನ್ ಕಾಲ್ ಅಟೆಂಡ್ ಮಾಡಬೇಡಿ. ನನಗೆ ಭಯವಾಗುತ್ತದೆ” ಎಂದು ಹೇಳಿ ಮಾಧುರ್ಯ ಹೃಷಿಕೇಶನ ಬಹಳಷ್ಟು ಫೋನ್‌ಗಳಿಗೆ ಅವನು ಉತ್ತರಿಸದ ಹಾಗೆ ನೋಡಿಕೊಂಡಿದ್ದಳು. ನಿಯಮ ಪಾಲನೆ ನೆಪದಲ್ಲಿ ಹೃಷಿಕೇಶ ತನ್ನೊಂದಿಗೆ ಮಾತಾಡಲಿ ಎಂಬ ಪುಟ್ಟ ಆಸೆಯೂ ಮಾಧುರ್ಯಳ ಒಳ ಮನಸಲ್ಲಿ ಇತ್ತು ಎಂಬುದನ್ನು ಹೃಷಿಕೇಶ ಕೂಡ ಗ್ರಹಿಸಿದ್ದ. “”ನಿನ್ನನ್ನು ಕಾರಿನಲ್ಲಿ ಕುಳ್ಳಿಸಿಕೊಂಡ ತಪ್ಪಿಗೆ ನಿನ್ನ ಮಾತು ಕೇಳುವ ಹಾಗಾಯಿತು” ಎಂದು ಗಾಯಕ ದೂರಿದ್ದರೂ ಅವಳ ಮೇಲೆ, ಅವಳ ಕೆಲಸದ ಮೇಲೆ ಹೆಮ್ಮೆ ಅಭಿಮಾನ ಇದ್ದ ಕಾರಣ ಅವಳ ಮಾತು ಕೇಳಿದ್ದ. ಈಗಾಗಲೇ ರಾಜ್ಯದ ಸಾಹಿತ್ಯ ವಲಯದಲ್ಲಿ ಮಾಧುರ್ಯಳ ಸಾಹಿತ್ಯದ ಬಗ್ಗೆ, ಅವಳ ವ್ಯಕ್ತಿತ್ವದ ಬಗ್ಗೆ ಉತ್ತಮ ಅಭಿಪ್ರಾಯವಿತ್ತು. ಹೃಷಿಕೇಶ ಕೂಡ ಅವಳ ಬಗ್ಗೆ ಹಿರಿಯ ಸಾಹಿತಿಯೋರ್ವರು ಬರೆದ ಲೇಖನ ಓದಿದ್ದ. ಹೀಗಾಗಿ, ಖಾನಾಪುರದ ರಿಚ್‌ಮಂಡ್ ಸರ್ಕಲ್ ಬಳಿ ಮಾಧುರ್ಯಳನ್ನು ಇಳಿಸಿ ಮುಂದೆ ಸಾಗುವಾಗ ಯಾಕೋ ಏನೊ ಒಂಥರಾ ಖಾಲಿತನ ಉಂಟಾದಂತೆ ಆಯಿತು.
.
.
ರಾಮನಗರ ಕೆಪಿಸಿಯವರು ತಮ್ಮ ನೌಕರರಿಗಾಗಿಯೇ ನಿರ್ಮಿಸಿದ ಕಾಲೋನಿಯ ಎಸ್‌ಬಿಐ ಬ್ಯಾಂಕಿನ ನೂತನ ಬ್ರಾಂಚಿನಲ್ಲಿ ಮಾಧುರ್ಯ ಸೇವೆ ಸಲ್ಲಿಸುತ್ತಿದ್ದಳು. ಚಿಕ್ಕಂದಿನಿಂದಲೂ ಕಥೆ ಬರೆಯಬೇಕೆಂಬ ಆಸೆ ಹೊಂದಿದ್ದ ಅವಳು ನೌಕರಿ ಸಿಕ್ಕ ಮೇಲೆ ಪೂರ್ತಿ ಸಾಹಿತ್ಯದಲ್ಲಿ ತೊಡಗಿಕೊಡಳು. ಅಲ್ಲಿ ಪರಿಚಯವಾದ ಹೊಸ ಸಂಬಂಧವೇ ಹೃಷಿಕೇಶ ಗಾಯಕ. ಹೃಷಿಕೇಶರ ಅಂಕಣ ಪ್ರತಿ ಬುಧವಾರ ಪ್ರಕಟವಾಗುತ್ತಿತ್ತು. ಬಹಳ ಸಲ ಅಬ್ದುಲ್ ಕಲಾಂ ರೋಡಿನಲ್ಲಿರುವ ಪತ್ರಿಕಾ ಆಫೀಸಿನಲ್ಲಿ ಅವರಿಬ್ಬರ ಭೇಟಿ ಆಗುತ್ತಿತ್ತು. ಮೊದಮೊದಲು ಒಂದು ಕಿರುನಗೆ, ನಂತರ ಹಾಯ್ ಬಾಯ್. ಊಟ ತಿಂಡಿ ಆಯ್ತು ಎಂದು ಕೇಳುವ ಪ್ರಶ್ನೆಗಳಿಂದ ಆರಂಭವಾದ ಸ್ನೇಹ ಮುಂದುವರೆದು ಇಬ್ಬರೂ ತಮ್ಮ ಬರಹದ ಕುರಿತು ತಪ್ಪು ಒಪ್ಪಿನ ಭಾವನೆಗಳನ್ನು ಭೇಟಿ ಆದಾಗಲೆಲ್ಲ ಹಂಚಿಕೊಳ್ಳುತ್ತಿದ್ದರು. ಇದರ ಮುಂದುವರಿದ ಭಾಗವೇ ಇಂದು ಮಾಧುರ್ಯಳನ್ನು ಕಾರಿನಲ್ಲಿ ಕುಳ್ಳಿಸಿಕೊಂಡು ಬಂದದ್ದಾಗಿತ್ತು.
.
.
ಎರಡು-ಮೂರು ವಾರ ಕಳೆದಂತೆ ಮಾಧುರ್ಯಸಿರಿಗೆ ಹೃಷಿಕೇಶ ಪುನಃ ಫೋನ್ ಮಾಡಿದಾಗ ಮತ್ತೆ ತನ್ನಲ್ಲಿ ಕನಸು ಚಿಗುರಿಸಿಕೊಂಡ ಮಾಧುರ್ಯ, ಸೂರ್ಯೋದಯಕ್ಕೆ ಮುನ್ನ ಶುಭಾಶಯಗಳ ಮೆಸೇಜುಗಳನ್ನು, ವಾಟ್ಸಾಪ್ ಚಿತ್ರಗಳನ್ನು ತಾನು ಬರೆಯುವ ಅನೇಕ ಕಥೆಗಳನ್ನು ಕಳಿಸಲು ಆರಂಭಿಸಿ, ಕೊನೆಗೆ ಅದು ಯಾವಾಗ ಎಲ್ಲಿ ಹೇಗೆ ಎಂದು ಅರಿಯುವುದರ ಒಳಗೆ ಒಲವಲಿ ಸಿಕ್ಕಿಕೊಂಡಿದ್ದಂತೂ ನಿಜ. ಹೃಷಿಕೇಶ ಅವಳಿಗೆ ಜೀವವೂ ಆಗಿದ್ದ, ಜೀವನವೂ ಕೂಡ. ಸಂತೋಷ, ನಗು, ಕೋಪ, ನಿರ್ಬಂಧ, ಹೇರಿಕೆ ಹೀಗೆ ಎಲ್ಲ ಅನ್‌ಲಿಮಿಟ್ ವಹಿವಾಟು ಆದುದಕ್ಕಾಗಿ ಇಬ್ಬರಿಗೂ ಅಚ್ಚರಿ.
.
.
ಹಳಿಯಾಳ ಬೀಡಿಯಲ್ಲಿರುವ ಶರಾವತಿ ಕಲಾಕೇಂದ್ರದಲ್ಲಿ ಮಾಧು ರ್ಯಸಿರಿಯ ಪ್ರಬಂಧ ಮಂಡನೆ ಇತ್ತು. ವಿಮರ್ಶಕರು ತಮಗರಿವಿಧ್ದೋ ಅಥವಾ ಅರಿವಿಲ್ಲದೆಯೋ ಸ್ತ್ರೀಲೇಖಕರನ್ನು ಪ್ರತ್ಯೇಕಿಸುವುದನ್ನು ನಡೆಸಿ¨ªಾರೆ. ಸ್ತ್ರೀಯರ ಬದುಕಿನಲ್ಲಿ ಘಟಿಸುವ ಸರ್ವೇಸಾಮಾನ್ಯವಾದ ಸಂಗತಿಗಳಿಂದ ಹಿಡಿದು ಅತಿ ಮುಖ್ಯ ವಿಚಾರದವರೆಗಿನ ಎಲ್ಲ ಆಯಾಮಗಳು ಸಾಹಿತ್ಯದ ವಸ್ತುವಾಗಬಲ್ಲದು. ಈ ಸಮರ್ಥನೆಯನ್ನು ಬಹಳ ಪರಿಣಾಮಕಾರಿಯಾಗಿ ಮಹಿಳೆಯರು ಮಂಡಿಸುತ್ತಿದ್ದಾರೆ. ಸ್ವತಃ ಅನುಭವಿಸಿ ಬರೆದ ಅನೇಕ ಕವಿತೆಗಳು ಪ್ರೀತಿಯ ಹಲವು ಆಯಾಮಗಳನ್ನು ತೆರೆದಿಡುವ ಸಾಹಿತ್ಯವೇ ಆಗಿದೆ. ಪ್ರೀತಿಯ ಹುಡುಕಾಟ ಎನ್ನುವುದು ನಿತ್ಯ ನಿರಂತರ ನಿತ್ಯನೂತನವಾಗಿ ಮಹಿಳೆಯ ದನಿಯಾಗಿ ನಿಲ್ಲುತ್ತದೆ ಎಂದು ಎನ್ನುತ್ತಿದ್ದಂತೆ ಮಂತ್ರಮುಗ್ಧರಾಗಿ ಕೇಳುತ್ತ ಕೂತ ಜನಸಮೂಹ ಕಿವಿಗಡಚಿಕ್ಕುವ ಚಪ್ಪಾಳೆಯೊಂದಿಗೆ, “ವಾವ್Ø ! ಬ್ರಿಲಿಯಂಟ್ ವುಮನ್’ ಎನ್ನುವ ಉದ್ಗಾರಗಳು ಹೊರಟವು. ಸತತ ಒಂದು
Related Articles
.
.
ಎಂದಿನಂತೆ ಅಂದು ಕೂಡ ವೇದಿಕೆಯ ಮೆಟ್ಟಿಲಿಳಿದು ಮುಂದಿನ ಸಾಲಿನಲ್ಲಿ ಕೂತ ಗಾಯಕನ ಪಕ್ಕದ ಕುರ್ಚಿಯಲ್ಲಿ ತಾನು ಬಂದು ಕುಳಿತಳು ಮಾಧುರ್ಯ. ಅಪಾರವಾದ ಓದಿನ ಅನುಭವದಿಂದ ತನ್ನ ಕಾರ್ಯಕ್ಷೇತ್ರದಲ್ಲಿ ಸದಾ ಹೊಸ ಪ್ರಯೋಗ ಮಾಡಲು ಹಾತೊರೆಯುವ ಬುದ್ಧಿವಂತ ಹೃಷಿಕೇಶ ಅವಳನ್ನು ತಿದ್ದುತ್ತಲೇ ಪ್ರೀತಿಸಿದ ವ್ಯಕ್ತಿ. ಆದರೆ, ಈ ಬಾರಿ ಯಾಕೋ ಗಾಯಕ್ ಬೇರೆಯೇ ಮಾತಾಡಿದ್ದ. “”ಸಿರಿ, ಎಲ್ಲರೂ ನಿನ್ನ ಮಾತು ಕೇಳಲು ಬರುವುದಿಲ್ಲ.ಕೆಲವರು ನಿನ್ನ ನೋಡುವುದಕ್ಕೆಂದೇ ಬಂದಿರುತ್ತಾರೆ. ಕಲೆಯ ಜೊತೆಗೆ ನಿನ್ನ ಸೌಂದರ್ಯವನ್ನು ಕಣ್ ತುಂಬಿಕೊಳ್ಳುತ್ತಾರೆ” ಎಂದು ವ್ಯಂಗ್ಯವಾಗಿ ಗುಣುಗುಣಿಸಿದ್ದ. ವೈಚಾರಿಕತೆ, ಮಾನವೀಯತೆ, ಕರುಣೆ ಮುಂತಾದ ಉತ್ತಮ ಗುಣ ರೂಢಿಸಿಕೊಂಡ ಹೃಷಿಕೇಶ ಇತ್ತೀಚೆಗೆ ಬದಲಾದಂತೆ ಕಂಡಿತು. ಹೃಷಿಕೇಶನ ವರ್ತನೆ ಈ ರೀತಿ ಮುಂದುವರೆದರೆ ತನ್ನ ಬಗ್ಗೆ , ತನ್ನ ಸಾಹಿತ್ಯದ ಸ್ಥಿತಿಯ ಬಗ್ಗೆ ಆಡಿಕೊಳ್ಳಲು ಅಡಿಕೆಯ ಹೋಳಿನಂತೆ ಸಿಗಬಹುದಾದ ಸಾಧ್ಯತೆಗಳನ್ನು ಊಹಿಸಿಯೇ ಹೆದರಿದಳು ಮಾಧುರ್ಯ. ಇಂಥ ಮಾತುಗಳು ಪದೇಪದೇ ಬರಲಾರಂಭಿಸಿದವು. ಯಾರೊಂದಿಗಾದರೂ ಮಾತಾಡಿದರೂ ಸಂಶಯ ಹೆಡೆ ಎತ್ತುತ್ತಿತ್ತು. ಈಗೀಗ ಕಾರ್ಯಕ್ರಮ ಇದೆ ಎಂದರೆ ಸಾಕು ಸಿಡಿಮಿಡಿಗೊಳ್ಳುತ್ತ, “”ಮುಗೀತು, ಇನ್ ಮೇಲೆ ನನ್ನ ನೆನಪು ಇರುವುದಿಲ್ಲ ನಿನಗೆ. ಕಾರ್ಯಕ್ರಮದ ಲಹರಿಯಲ್ಲಿಯೇ ಮೂರ್‍ನಾಲ್ಕು ದಿನ ನನ್ನ ಮರೆಯುತ್ತಿ” ಎಂದು ಚುಚ್ಚುತ್ತಿದ್ದ. ವಾದ ಮಾಡಲು ನಿಂತರೆ ಅದು ಮುಗಿಯದ ಕಥೆಯಾಗಿರುತ್ತಿತ್ತು. ಪ್ರತಿ ಹದಿನ್ಯೆದು ದಿನಕ್ಕೊಮ್ಮೆ ಏನಾದರೂ ನೆಪವೊಡ್ಡಿ ಜಗಳ. ಒಂದು ಜಗಳ ಸಮಾಧಾನವಾಗಿ ಮುಗಿಯುತ್ತಿದ್ದಂತೆ ಇನ್ನೊಂದು ಶುರುವಾಗುತ್ತಿತ್ತು. ಮಾಧುರ್ಯಸಿರಿಗೆ ಯಾಕೋ ಈ ಸಾಹಿತ್ಯದ ಸಾಂಗತ್ಯವೇ ಬೇಡ ಎನಿಸುತ್ತಿತ್ತು. ಬರೆದಂತೆ ಯಾರೂ ಇಲ್ಲ. ಸೃಜನಶೀಲತೆಯ ಹಿಂದೆ ಕ್ರೂರ ಮನಸ್ಸೊಂದು ಕೆಲಸ ಮಾಡುತ್ತ ಇರುತ್ತದೆಯಾ ಎಂದು ಯೋಚಿಸಹತ್ತಿತು ಅವಳ ಮನ. ಇತ್ತೀಚೆಗೆ ಒಂಥರಾ ಕೀಳರಿಮೆಗೆ ಒಳಗಾಗಿದ್ದಳು. ಯಾವುದಾದರೊಂದು ಪುಸ್ತಕ ಓದಿನ ಮೂಲಕ ಮನಸ್ಸು ಹಗುರವಾಗಿಸೋಣ ಎಂದುಕೊಂಡಳು ಸಾಧ್ಯವಾಗಲಿಲ್ಲ. ಕಣ್ಣ ಮುಂದೆಲ್ಲ ಷೇಕ್ಸ್‌ಪಿಯರನ ಒಥೆಲೋದ ಡೆಸ್ಟಿಮೋನ್, ಟೆಂಪೆಸ್ಟ್ ನ ಮಿರಾಂಡಾ ಪಾತ್ರಗಳೇ ತಾನಾಗಿ ಕಾಣುತ್ತಿದ್ದವು. ಪರಿಚಿತ ವ್ಯಕ್ತಿಗಳೆಲ್ಲ ಸಂಶಯದ ಆಹಾರಗಳಾಗಿದ್ದವು ಅವನಿಗೆ. ತನ್ನ ಮೇಲಿನ ಅತಿಯಾದ ಪ್ರೀತಿ ಅವನ ಈ ತರಹದ ಯೋಚನೆಗೆ ಕಾರಣ ಅಂತೆನಿಸಿದರೂ ಇನ್ನೆಷ್ಟು ದಿನ ಎಂಬ ಪ್ರಶ್ನೆ ಕಾಡದೆ ಇರಲಿಲ್ಲ. ಪ್ರತಿಬಾರಿ ಸಿಕ್ಕಾಗಲೂ ಒಮ್ಮೊಮ್ಮೆ ಒಂದೊಂದು ರೀತಿ ಇರುತ್ತಿದ್ದ. ಪತ್ರಿಕೆಯಲ್ಲಿ ಮಾಧುರ್ಯಳ ಕಥೆ ಪ್ರಕಟವಾದರೆ ಅದರ ಸಂದರ್ಭ, ಓದಿನ ಹಿನ್ನೆಲೆ, ಅವಳ ಅನುಭವದ ಆಳ- ಹೀಗೆ ಎಲ್ಲ ಸಂಗತಿ ಆಧರಿಸಿ ಬೇರೆಯದೇ ಆದ ಅರ್ಥ ಕಲ್ಪಿಸಿ ಮಾತಾಡುತ್ತಿದ್ದ. ಪ್ರೇಮಕಥೆಯನ್ನೇನಾದರೂ ಅವಳು ಬರೆದರೆ ಓದಿದಷ್ಟೂ ಹೊಸ ಹೊಸ ಅರ್ಥ ಸೃಷ್ಟಿಸಿ ಬೈಯುತ್ತಿದ್ದ. ಈಗೀಗ ಮಾಧುರ್ಯಳಿಗೆ ಅವನು ಬೇರೆಯಾಗಿಯೇ ಕಾಣುತ್ತಾನೆ. ತಾನು ತಿಳಿದಂತೆ ಹೃಷಿಕೇಶ ಹೊರನೋಟಕ್ಕೆ ಕಾಣಿಸುವಷ್ಟು ಪ್ರಗತಿಪರನಲ್ಲ ಅನಿಸುತ್ತದೆ. ಅವನು ಈ ಹಿಂದೆ ತೋರಿಸಿದ್ದ ಪ್ರೀತಿ-ಔದಾರ್ಯದ ಹಿಂದೆ ಉಳಿದದ್ದು ತನ್ನ ಬಗೆಗಿನ ಅಹಂ ಆಗಿತ್ತೆ ಹೊರತು ಬೇರೆಯೇನಲ್ಲ. ಒಂದು ಸುಂದರವಾದ ಹೂವು ಯಾವ ಗಂಡಸರಿಗೂ ಸುಲಭದಲ್ಲಿ ಸಿಗಲೇಬಾರದು. ಸಿಕ್ಕರೆ ತನ್ನಂತಹ ಪರಿಸ್ಥಿತಿ ಆಗುತ್ತದೆ. ಅದರ ಬೆಲೆ ಗೊತ್ತಾಗುವುದಿಲ್ಲ. ಸಂಬಂಧದ ಅರಿವು ತಿಳಿಯದು. ತಾನು ಹೃಷಿಕೇಶನ ಅಹಂಕಾರದ ಕಿರೀಟಕ್ಕೆ ಸಿಕ್ಕಿಸಿಕೊಂಡ ಒಂದು ನವಿಲು ಗರಿಯಷ್ಟೇ.
ಅವನಿಗಿಂತ ಆಳವಾಗಿ ಯೋಚಿಸಲು ಕಲಿಸಿದ್ದು ಅವನೇ. ಆದರೆ, ಅದು ಸಾಧ್ಯವಾದಾಗ ಪುರುಷಾಹಂಕಾರದ ಚಿಪ್ಪು ತೆರೆಯತೊಡಗಿದೆ ಎಂಬೆಲ್ಲ ಸಂಗತಿಗಳು ಮಾಧುರ್ಯಳ ಗಮನಕ್ಕೂ ಬಂತು. ಅಷ್ಟಾಗಿಯೂ ಮಾಧುರ್ಯ ಅವನಿಗೆ ಫೋನ್ ಮಾಡಿ ಮಾತಾಡಿಸುವ ಪ್ರಯತ್ನ ಮಾಡುತ್ತಿರುತ್ತಾಳೆ. ಈಗೀಗ ಅವನು ಫೋನ್ ಕಟ್ ಮಾಡಿ ದೂರವಾಗಲು ಬಯಸಿದಂತೆ ವರ್ತಿಸುತ್ತಾನೆ. ಹಾಗಾದಾಗಲೆಲ್ಲ ಅವನಿಗೆ ಹೆಣ್ಣು ಬೇಕು, ಮನಸ್ಸಲ್ಲ. ಅವನಿಗೆ ಸುಖ ಬೇಕು, ಸಾಂಗತ್ಯವಲ್ಲ ಎಂದು ಮಾಧುರ್ಯ ಅಂದುಕೊಂಡದ್ದಿದೆ. ಯೋಚಿಸಿದರೆ ಪುಟ್ಟ ಮಗುವಿನಂತೆ ಅಳಬೇಕೆನಿಸುತ್ತದೆ ಅವಳಿಗೆ. “”ನಮ್ಮ ನಡುವೆ ಏನೂ ಉಳಿದಿಲ್ಲ. ನೀನು ದೂರವಾಗು. ದಯವಿಟ್ಟು ತೊಂದರೆ ಕೊಡಬೇಡ. ಸಾಹಿತ್ಯ, ಸಾಹಿತಿ ಜೊತೆಗಿನ ಮಾತು, ವೇದಿಕೆ ಎಲ್ಲ ನಿನಗೆ ಸಿಗಲಿ” ಎಂದು ಸಲೀಸಾಗಿ ಮೇಸೇಜು ರವಾನಿಸಿದ್ದ. ವಾಟ್ಸಾಪ್ ಸಂದೇಶದಲ್ಲಿ ಮೂಡಿದ್ದ ನೀಲಿ ಬಣ್ಣದ ಜೋಡಿ ಗೆರೆಗಳನ್ನು ನೋಡಿದ ಅವನಿಗೆ ಮಾಧುರ್ಯಸಿರಿ ವಾಟ್ಸಾಪ್ ನೋಡಿರುವುದು ಖಾತ್ರಿಯಾಗಿದೆ. ಸಂದೇಶವನ್ನೋದಿದ ಅವಳ ಕಣ್ಣು ಹನಿಗೂಡಿದ್ದರ ಅರಿವು ಅವನಿಗೆ ಆಗಿರಲಿಕ್ಕಿಲ್ಲ. ಅವಳು, “”ನಿನ್ನನ್ನು ಮರೆಯಲಾಗದು. ಅರ್ಥ ಮಾಡಿಕೊ” ಎಂದು ಕಳಿಸಿದ ವಾಟ್ಸಾಪ್ ಮೆಸೇಜುಗಳೆಲ್ಲ ಅವನ ನಿರ್ಲಕ್ಷ್ಯಕ್ಕೆ ಗುರಿಯಾಗಿ ನೋಡದೆ ಕರಿಗೆರೆಗಳನ್ನೇ ಹೊತ್ತುಕೊಂಡು ಬಿದ್ದಿವೆ.
.
.
ದಂಡೆಯೂದ್ದಕ್ಕೂ ನಿಂತ ಗಾಳಿ ಮರದಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತಿದ್ದವು.
ಮಾಧುರ್ಯಸಿರಿ ಹೊಸ ಕಥೆ ಬರೆಯಲಾರಂಭಿಸಿದಳು.
Advertisement
ಅಕ್ಷತಾ ಕೃಷ್ಣಮೂರ್ತಿ