Advertisement

ಶೌಚಾಲಯ ಅವ್ಯವಸ್ಥೆಗೆ ಶಾಸಕರ ಕಿಡಿ

09:35 AM Jan 25, 2019 | Team Udayavani |

ಚಿತ್ರದುರ್ಗ: ಬಸ್‌ ನಿಲ್ದಾಣ ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ಗುತ್ತಿಗೆ ನಿಬಂಧನೆಗಳನ್ನು ಉಲ್ಲಂಘಿಸಿ ಮನ ಬಂದಂತೆ ಹಣ ಸುಲಿಗೆ ಮಾಡಿ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಇಲ್ಲಿನ ಖಾಸಗಿ ಬಸ್‌ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ಗುರುವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದ ಅವರು, ಶೌಚಾಲಯಗಳು ಗಬ್ಬು ನಾರುತ್ತಿವೆ. ಮನುಷ್ಯರ್ಯಾರೂ ಶೌಚಾಲಯದೊಳಗೆ ಬರುವಂತಿಲ್ಲ. ಮೂರು ರೂ. ವಸೂಲಿ ಮಾಡುವ ಕಡೆ 6 ರೂ.ಗಳನ್ನು ವಸೂಲಿ ಮಾಡುತ್ತಿರುವುದು ಹಗಲು ದರೋಡೆಯಲ್ಲವೇ ಎಂದು ಕಿಡಿ ಕಾರಿದರು.

ಖಾಸಗಿ ಬಸ್‌ ನಿಲ್ದಾಣಕ್ಕೆ ಪ್ರತಿ ನಿತ್ಯ ಹತ್ತಾರು ಸಾವಿರ ಪ್ರಯಾಣಿಕರು ಬಂದು ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಲು ಶೌಚಾಲಯ ಬಳಕೆ ಮಾಡುವುದು ಅನಿವಾರ್ಯ. ಈ ಪರಿಸ್ಥಿತಿಯನ್ನೇ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ 5-6 ರೂ.ಗಳನ್ನು ಅಕ್ರಮವಾಗಿ ವಸೂಲಿ ಮಾಡಲಾಗುತ್ತಿದೆ. ದುಡ್ಡು ಕೊಡದವರ ಮೇಲೆ ಹಿಂಸೆ, ದೌರ್ಜನ್ಯ ಎಸಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸ್ಥಳಕ್ಕೆ ಗುತ್ತಿಗೆದಾರರನ್ನು ಕರೆಸಿ ಎಂದು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಗ ನಗರಸಭೆ ಅಧಿಕಾರಿಗಳು, ಶೌಚಾಲಯ ಪರಿಶೀಲಿಸಲು ಶಾಸಕರು ಬರುವ ಮಾಹಿತಿ ಪಡೆದು

ಗುತ್ತಿಗೆದಾರ ಕಾಲು ಕಿತ್ತಿದ್ದಾನೆಂದು ಶಾಸಕರಿಗೆ ತಿಳಿಸಿದರು. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಶಾಸಕ ತಿಪ್ಪಾರೆಡ್ಡಿ, ಆ ಗುತ್ತಿಗೆದಾರ ಪ್ರತಿ ತಿಂಗಳು ಎಷ್ಟು ಹಣ ನೀಡುತ್ತಿದ್ದಾನೆ, ಅದಕ್ಕೆ ನಾನು ಮೂರು ಪಟ್ಟು ಅಂದರೆ 50 ಸಾವಿರ ರೂ. ಕೊಡಿಸುತ್ತೇವೆ. ಇಂದೇ ಆತನನ್ನು ಖಾಲಿ ಮಾಡಿಸಿ ಎಂದು ತಾಕೀತು ಮಾಡಿದರು.

ಖಾಸಗಿ ಬಸ್‌ ನಿಲ್ದಾಣದಲ್ಲಿ ವಿದ್ಯುತ್‌ ದೀಪಗಳಿಲ್ಲ. ಇದರ ಪ್ರಯೋಜನ ಪಡೆಯುವ ಸಮಾಜ ಘಾತುಕರು ಸಂಜೆಯಾಗುತ್ತಿದ್ದಂತೆ ಅಮಾಯಕರ ಮೇಲೆ ದೌರ್ಜನ್ಯ ಎಸಗುವುದು, ಕಳ್ಳತನ ಮಾಡುವುದು ಮತ್ತಿತರ ಕೃತ್ಯಗಳನ್ನು ಎಸಗುತ್ತಿದ್ದಾರೆ. ಹಾಗಾಗಿ ಇಂದೇ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದರು.

Advertisement

ಬಸ್‌ ನಿಲ್ದಾಣದ ಮೇಲ್ಛಾವಣಿ ಸೋರಿಕೆಯಾಗುತ್ತಿದ್ದು, ದುರಸ್ತಿ ಮಾಡಿಸುವುದರ ಜೊತೆಗೆ ನಿಲ್ದಾಣದಲ್ಲಿ ಶುಚಿತ್ವ ಕಾಪಾಡುವಂತೆ ಪರಿಸರ ಇಂಜಿನಿಯರ್‌ ಹಾಗೂ ಆರೋಗ್ಯ ನಿರೀಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಖಾಸಗಿ ಬಸ್‌ ನಿಲ್ದಾಣದ ಸುತ್ತಮುತ್ತ ಇರುವಂತಹ ಗೂಡಂಗಡಿಗಳಿಗೆ ಯಾವುದೇ ತೊಂದರೆ ನೀಡಬೇಡಿ. ಗೂಡಂಗಡಿಗಳಿಗೆ ಹೊಂದಿಕೊಂಡಂತೆ ಮುಂದಕ್ಕೆ ಒತ್ತುವರಿ ಮಾಡಿದ್ದರೆ ಅಂತಹ ಜಾಗದಲ್ಲಿ ನಿರ್ಮಾಣ ಮಾಡಲಾಗಿರುವ ಜಾಗ ತೆರವುಗೊಳಿಸಬೇಕೆಂದರು.

ಬಸ್‌ ನಿಲ್ದಾಣದಲ್ಲಿ ಸಿಕ್ಕ ಸಿಕ್ಕ ಕಡೆ ಬೈಕ್‌ ನಿಲುಗಡೆ ಮಾಡಲಾಗುತ್ತಿದೆ. ಇದರ ಜೊತೆಗೆ ಬಿಡಾಡಿ ದನಗಳು ನಿಲ್ದಾಣದ ತುಂಬೆಲ್ಲ ಸಂಚರಿಸಿ ಸಗಣಿ, ಗಂಜಲ ಹಾಕಿ ಹೊಲಸು ಮಾಡುತ್ತಿವೆ. ಇದನ್ನು ನಗರಸಭೆ ಅಧಿಕಾರಿಗಳು ತಡೆಯಬೇಕು. ಇದಕ್ಕಾಗಿ ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸೂಚಿಸಿದರು.

ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ ಮಾತನಾಡಿ, ಇಲ್ಲಿನ ಅವ್ಯವಸ್ಥೆ ಸರಿಪಡಿಸಲು ಒಬ್ಬ ಪೊಲೀಸ್‌ ನೇಮಕ ಮಾಡಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಇದೇ ವೇಳೆ ಶಾಸಕರು ಸಾರ್ವಜನಿಕರ ಅಹವಾಲು ಆಲಿಸಿದರು.

28ಕ್ಕೆ ಸಭೆ ಕರೀರಿ…
ಶೌಚಾಲಯಗಳನ್ನು ಗುತ್ತಿಗೆ ಪಡೆದಿರುವವರ ಸಭೆಯನ್ನು ಜ. 28 ರಂದು ಕರೆಯಬೇಕು. ಅಂದು ನಗರದ ಯಾವ ಯಾವ ಭಾಗದಲ್ಲಿ ಸಾರ್ವಜನಿಕ ಶೌಚಾಲಯಗಳಿವೆ, ಪ್ರತಿ ಶೌಚಾಲಯದ ಗುತ್ತಿಗೆ ಯಾರಿಗೆ ಆಗಿದೆ, ಗುತ್ತಿಗೆದಾರರು ಗುತ್ತಿಗೆ ಸಂದರ್ಭದಲ್ಲಿ ಮಾಡಿಕೊಂಡ ಗುತ್ತಿಗೆ ನಿಬಂಧನೆಗಳನ್ನು ಪಾಲಿಸಲಾಗುತ್ತಿದೆಯಾ, ಸಾರ್ವಜನಿಕ ಶೌಚಾಲಯಗಳಿಗೆ ಬಂದು ಹೋಗುವ ಸಾರ್ವಜನಿಕರಿಗೆ ಅಗತ್ಯ ಸೇವಾ ಸೌಲಭ್ಯಗಳನ್ನು ನೀಡಲಾಗಿದೆಯಾ ಎನ್ನುವುದನ್ನು ಪರಿಶೀಲಿಸಲಾಗುತ್ತದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next