ಗುಜರಾತ್: ಟಾಟಾ-ಏರ್‌ಬಸ್ ಸ್ಥಾವರದ ಉದ್ಘಾಟನೆಗಾಗಿ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಅವರು ಸೋಮವಾರ(ಅ.28) ಮುಂಜಾನೆ ಗುಜರಾತ್ ನ ವಡೋದರಕ್ಕೆ ಆಗಮಿಸಿದ್ದಾರೆ. ಇದು ಅವರ ಮೊದಲ ಭಾರತದ ಪ್ರವಾಸವಾಗಿದೆ ಎನ್ನಲಾಗಿದೆ.
ಸೋಮವಾರ ಮುಂಜಾನೆ 1.30 ರ ಸುಮಾರಿಗೆ ವಡೋದರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಬರಮಾಡಿಕೊಂಡರು.
ಇಂದು (ಸೋಮವಾರ) ಬೆಳಗ್ಗೆ ವಡೋದರಾದಲ್ಲಿ ನಿರ್ಮಿಸಲಾದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಟಾಟಾ-ಏರ್‌ಬಸ್ ಸ್ಥಾವರವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಂಟಿಯಾಗಿ ಉದ್ಘಾಟಿಸಲಿರುವರು ಇದಕ್ಕೂ ಮೊದಲು ಸ್ಪೇನ್ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ವಿಮಾನ ನಿಲ್ದಾಣದಿಂದ ಟಾಟಾ-ಏರ್‌ಬಸ್ ಸ್ಥಾವರ ವರೆಗಿನ ಸುಮಾರು 2.5 ಕಿಮೀ ರೋಡ್‌ಶೋ ನಡೆಯಲಿದ್ದು ಈ ವೇಳೆ ವಿವಿಧ ತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ.
ಕಾರ್ಯಕ್ರಮ ಉದ್ಘಾಟನೆ ಬಳಿಕ ಲಕ್ಷ್ಮಿ ವಿಲಾಸ್ ಅರಮನೆಯಲ್ಲಿ ಉಭಯ ನಾಯಕರು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಆಯೋಜಿಸಿರುವ ದ್ವಿಪಕ್ಷೀಯ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸ್ಯಾಂಚೆಝ್ ಎರಡು ದಿನಗಳ ಕಾಲ ಭಾರತದಲ್ಲಿ ಉಳಿಯಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Actor Darshan: ನಟ ದರ್ಶನ್ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ