ಕನ್ನಡ ಚಿತ್ರರಂಗಕ್ಕೆ ವಿದೇಶಿ ಬೆಡಗಿಯರ ಆಗಮನ ಹೊಸದೇನಲ್ಲ. ಆ ಸಾಲಿಗೆ ವ್ಯಾಲರಿ ಮಾರವಿ ಎಂಬ ಪೆರು ದೇಶದ ಚೆಲುವೆಯೂ ಹೊಸ ಸೇರ್ಪಡೆ. ಈ ವ್ಯಾಲರಿ ಎಂಬ ಪ್ರಶ್ನೆ ಎದುರಾದರೆ, ಜನವರಿ 12 ರಂದು ತೆರೆಗೆ ಬರುತ್ತಿರುವ “ನೀನಿಲ್ಲದ ಮಳೆ’ ಚಿತ್ರದ ನಾಯಕಿ. ಜನಾರ್ದನ್ ನಿರ್ದೇಶಿಸಿ, ನಟಿಸಿರುವ ಈ ಚಿತ್ರ ಬಹುತೇಕ ಅಮೆರಿಕದಲ್ಲಿ ಚಿತ್ರೀಕರಣವಾಗಿರುವುದು ವಿಶೇಷ.
ವ್ಯಾಲರಿ ಹುಟ್ಟಿದ್ದು, ಬೆಳೆದಿದ್ದು, ಓದಿದ್ದೆಲ್ಲವೂ ಅಮೆರಿಕದಲ್ಲೇ. ಪೆರು ದೇಶದ ಹುಡುಗಿಯಾಗಿರುವ ವ್ಯಾಲರಿಗೆ ಸ್ಪ್ಯಾನಿಶ್ ಭಾಷೆ ಬಿಟ್ಟರೆ, ಕನ್ನಡ ಗೊತ್ತಿಲ್ಲ. ಆದರೆ, ಈ ಚಿತ್ರಕ್ಕೆ ನಾಯಕಿ ಅಂತ ಆಯ್ಕೆ ಆಗುತ್ತಿದ್ದಂತೆಯೇ, ಕನ್ನಡ ಕಲಿಯುವ ಆಸೆ ಆಗಿದೆ. ಒಂದಷ್ಟು ಕನ್ನಡ ಬಗ್ಗೆ ತಿಳಿದುಕೊಂಡ ವ್ಯಾಲರಿ, ಈ ಚಿತ್ರ ಮುಗಿಯುವ ಹೊತ್ತಿಗೆ ಕನ್ನಡ ಅರ್ಥಮಾಡಿಕೊಳ್ಳುವಷ್ಟರ ಮಟ್ಟಿಗೆ ತಯಾರಿಯಾಗಿದ್ದಾರೆ.
ವ್ಯಾಲರಿಗೆ ಸಿನಿಮಾ ಹೊಸದೇನಲ್ಲ. ಹಾಲಿವುಡ್‌ನ ಕೆಲ ಚಿತ್ರಗಳಲ್ಲೂ ವ್ಯಾಲರಿ ಕಾಣಿಸಿಕೊಂಡಾಗಿದೆ. ಒಂದಷ್ಟು ಕಿರುಚಿತ್ರಗಳಲ್ಲೂ ನಟಿಸಿದ್ದಾಗಿದೆ. ವ್ಯಾಲರಿಗೆ “ನೀನಿಲ್ಲದ ಮಳೆ’ ಪೂರ್ಣ ಪ್ರಮಾಣದ ಕನ್ನಡ ಚಿತ್ರ. ಈ ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ ವ್ಯಾಲರಿ. ಅದಕ್ಕೆ ಕಾರಣವೂ ಇದೆ. ತಾನು ನಾಯಕಿಯಾಗಿ ನಟಿಸಿರುವ “ನೀನಿಲ್ಲದ ಮಳೆ’ ಚಿತ್ರವನ್ನು ಸ್ಪ್ಯಾನಿಶ್ ಭಾಷೆಗೆ ಡಬ್ ಮಾಡಿಸಿ, ಸೌತ್ ಅಮೆರಿಕಾದ ಪೆರುವಿನಲ್ಲಿ ರಿಲೀಸ್ ಮಾಡಿಸಲು ಹೊರಟಿದ್ದಾರೆ.
ಈಗಾಗಲೇ ಅದಕ್ಕೆ ತಯಾರಿಯೂ ನಡೆದಿದೆ. ಈ ಚಿತ್ರದ ಮೂಲಕ ವ್ಯಾಲರಿ, ತಾನೊಬ್ಬ ಕಲಾವಿದೆ ಎನ್ನುವುದನ್ನು ತೋರಿಸುವ ಉದ್ದೇಶದಿಂದ ತನ್ನ ದೇಶದಲ್ಲಿ ಚಿತ್ರ ಬಿಡುಗಡೆ ಮಾಡುವ ಉತ್ಸಾಹದಲ್ಲಿದ್ದಾರೆ. ಎಲ್ಲಾ ಸರಿ, ವ್ಯಾಲರಿ ಈ ಚಿತ್ರದಲ್ಲಿ ಯಾವ ಪಾತ್ರ ನಿರ್ವಹಿಸಿದ್ದಾರೆಂದರೆ, ಅದು ಗೃಹಮಂತ್ರಿ ಮಗಳ ಪಾತ್ರವಂತೆ. ಗಿರೀಶ್‌ಕಾರ್ನಾಡ್ ಅವರಿಲ್ಲಿ ಹೋಮ್ ಮಿನಿಸ್ಟರ್.
ಅವರ ಮಗಳಾಗಿ ವ್ಯಾಲರಿ ನಟಿಸಿದ್ದಾರೆ. ಆ ಪಾತ್ರ ಹೇಗಿರುತ್ತೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು ವ್ಯಾಲರಿ ಮಾತು. ಈ ಚಿತ್ರವನ್ನು ಡಾ. ಶೈಲೇಂದ್ರ ಕೆ.ಬೆಲ್ದಾಳ್, ದೇವರಾಜ್ ಮತ್ತು ಜನಾರ್ದನ್ ಜೊತೆಗೂಡಿ ನಿರ್ಮಿಸಿದ್ದಾರೆ. ಇಂದ್ರಸೇನಾ ಅವರು ನಾಲ್ಕು ಗೀತೆಗಳಿಗೆ ಸಂಗೀತ ನೀಡಿದ್ದಾರೆ. ನಿರಂಜನ್‌ಬಾಬು ಕ್ಯಾಮೆರಾ ಹಿಡಿದಿದ್ದಾರೆ.