Advertisement

ಬೆನ್ನುಮೂಳೆ ತಪಾಸಣೆಗೆ ಸ್ಪೈನ್ಯಾಕ್‌ ತಂತ್ರಜ್ಞಾನ

01:05 AM Nov 30, 2019 | Team Udayavani |

ಉಡುಪಿ: ಕೆಲವು ಸಂಕೀರ್ಣ ಸ್ಥಿತಿಗಳಲ್ಲಿ ಬೆನ್ನುಮೂಳೆಗೆ ಚಿಕಿತ್ಸೆ ನೀಡುವಾಗ ಅಗತ್ಯವಾದ, ಮಣಿಪಾಲದ ಸಂಸ್ಥೆಗಳು ಅಭಿವೃದ್ಧಿಗೊಳಿಸಿದ ಸ್ಪೈನ್ಯಾಕ್‌ ತಂತ್ರಜ್ಞಾನವನ್ನು ಶುಕ್ರವಾರ ಮಣಿಪಾಲ ಮಾಹೆ ಆಡಳಿತ ಕಚೇರಿಯಲ್ಲಿ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಬಿಡುಗಡೆ ಗೊಳಿಸಿದರು.

Advertisement

ಸ್ಪೈನ್ಯಾಕ್‌ ತಂತ್ರಜ್ಞಾನವನ್ನು ಮಣಿಪಾಲ್‌ ಯುನಿವರ್ಸಲ್‌ ಟೆಕ್ನಾಲಜಿ ಬಿಸಿನೆಸ್‌ ಇನ್‌ಕ್ಯುಬೇಟರ್‌ (ಎಂಯುಟಿಬಿಇ) ಸಹಕಾರದಲ್ಲಿ ಕುಮುದಾ ಹೆಲ್ತ್‌ಟೆಕ್‌ ಪ್ರೈ.ಲಿ., ಎಂಐಟಿ, ಕೆಎಂಸಿಯ ಆರ್ಥೋಪೆಡಿಕ್ಸ್‌ ವಿಭಾಗ ಅಭಿವೃದ್ಧಿಪಡಿಸಿವೆ. ಈ ತಂತ್ರಜ್ಞಾನ ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಲಭ್ಯವಾಗುತ್ತದೆ. ಇದರಿಂದ ಬೆನ್ನುಮೂಳೆಗೆ ಸಂಬಂಧಿಸಿದ ರೋಗಗಳ ತಪಾಸಣೆ ಮತ್ತು ನಿರ್ವಹಣೆ ಮಾಡಬಹುದು ಎಂದು ಡಾ| ಬಲ್ಲಾಳ್‌ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಬೆನ್ನುಮೂಳೆಗೆ ಸಂಬಂಧಿಸಿದ ಸ್ಕೋಲಿಯಾಸಿಸ್‌ನಲ್ಲಿ ಮೂಳೆಯ ತಿರುಚುವಿಕೆ ಕಂಡುಬರುತ್ತದೆ. ಈಗ
ಇದನ್ನು ಎಕ್ಸ್‌ರೇ ಮೂಲಕ ತಪಾಸಣೆ ಮಾಡಲಾಗುತ್ತದೆ. ಎಕ್ಸ್‌ರೇಯಲ್ಲಿ ಮೂರು ಆಯಾಮದ ಚಿತ್ರಣ ಲಭಿಸದ ಕಾರಣ ಪರಿಪೂರ್ಣ ತಪಾಸಣೆ ಸಾಧ್ಯವಾಗುವುದಿಲ್ಲ. ಸಿಟಿಸ್ಕ್ಯಾನ್‌/ ಎಂಆರ್‌ಐ ಸ್ಕ್ಯಾನ್‌ ದುಬಾರಿ ಮಾತ್ರವಲ್ಲದೆ ವಿಕಿರಣ ಹೆಚ್ಚಿರುತ್ತದೆ. ನೂತನ ಸ್ಪೈನ್ಯಾಕ್‌ನಿಂದ ಬೆನ್ನುಮೂಳೆಯ 3ಡಿ ಚಿತ್ರಣ ಸಿಗುತ್ತದೆ, ರೇಡಿಯೇಶನ್‌ ಕಡಿಮೆ. ಇದು ಸಿಟಿ ಸ್ಕ್ಯಾನ್‌/ ಎಂಆರ್‌ಐ ಸ್ಕ್ಯಾನ್‌ಗಿಂತ ಹತ್ತರಲ್ಲಿ ಒಂದು ಪಟ್ಟು ಕಡಿಮೆ ಖರ್ಚಿನಲ್ಲಿ ಸಾಧ್ಯವಾಗುತ್ತದೆ ಎಂದು ಎಂಐಟಿ ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗದ ಪ್ರಾಧ್ಯಾಪಕ, ಕುಮುದಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ|ಸಂಪತ್‌ಕುಮಾರ್‌ ಭಾಗವತ್‌ ಮತ್ತು ಕಂಪ್ಯೂಟರ್‌ ಅಪ್ಲಿಕೇಶನ್‌ ವಿಭಾಗದ ಪ್ರಾಧ್ಯಾಪಕ, ಕುಮುದಾ ಸಂಸ್ಥೆಯ ನಿರ್ದೇಶಕ ಡಾ| ಹರೀಶ್‌ ಕೆ.ಎಸ್‌. ತಿಳಿಸಿದರು.

ಕುಮುದಾ ಸಂಸ್ಥೆ ಈ ತಂತ್ರಜ್ಞಾನದ ಪೇಟೆಂಟ್‌ ಹೊಂದಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಶೇ.50ರಷ್ಟು ಕಡಿತದ ಬೆಲೆಯಲ್ಲಿ ದೊರೆಯಲಿದೆ ಎಂದು ತಿಳಿಸಿದರು.  ಕೆಲವು ಪ್ರಕರಣಗಳಲ್ಲಿ ಈ ತಂತ್ರಜ್ಞಾನದಿಂದ ಪ್ರಯೋಜನವಾಗುತ್ತದೆ ಎಂದು ಅರ್ಥೋಪೆಡಿಕ್ಸ್‌ ವಿಭಾಗದ ಮುಖ್ಯಸ್ಥ ಡಾ| ಎನ್‌. ಶ್ಯಾಮಸುಂದರ ಭಟ್‌ ತಿಳಿಸಿದರು.

ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಕಾರದಲ್ಲಿ ಮಣಿಪಾಲದಲ್ಲಿ 2010ರಲ್ಲಿ ಇನ್‌ಕ್ಯುಬೇಟರ್‌ ಸ್ಥಾಪನೆಯಾಯಿತು. ಇತ್ತೀಚೆಗೆ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಕಾರದಲ್ಲಿ ಬಯೋ ಇನ್‌ಕ್ಯುಬೇಟರ್‌ ಉದ್ಘಾಟನೆಯಾಗಿದೆ ಎಂದು ಎಂಯುಟಿಬಿಇ ಸಿಇಒ ಡಾ| ಶ್ರೀಹರಿ ಉಪಾಧ್ಯಾಯ ತಿಳಿಸಿದರು.

Advertisement

ಮಾಹೆ ಕುಲಸಚಿವ ಡಾ| ನಾರಾಯಣ ಸಭಾಹಿತ್‌, ಸಹಕುಲಪತಿ ಡಾ|ಪಿಎಲ್‌ಎನ್‌ಜಿ ರಾವ್‌, ಎಂಐಟಿ ನಿರ್ದೇಶಕ ಡಾ| ಶ್ರೀಕಾಂತ ರಾವ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next