ವಾಷಿಂಗ್ಟನ್: ಮಿಷನ್ ಶಕ್ತಿ ಹೆಸರಿನಲ್ಲಿ ಭಾರತ ನಡೆಸಿದ ಉಪಗ್ರಹ ನಿರೋಧಕ ಕ್ಷಿಪಣಿ ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ ಉಂಟಾದ ತ್ಯಾಜ್ಯದ ಬಗ್ಗೆ ನಾಸಾ ವ್ಯಕ್ತಪಡಿಸಿದ ಆಕ್ಷೇಪವನ್ನು ಅಮೆರಿಕ ಸರಕಾರ ತಳ್ಳಿಹಾಕಿದೆ. ತ್ಯಾಜ್ಯ ಹೆಚ್ಚುತ್ತಿರುವ ಬಗ್ಗೆ ಅಮೆರಿಕ ಆತಂಕ ಹೊಂದಿದೆಯಾದರೂ, ಭಾರತ ಸರಕಾರ ಕೈಗೊಂಡ ಪರೀಕ್ಷೆಯಲ್ಲಿ ಬಾಹ್ಯಾಕಾಶ ತ್ಯಾಜ್ಯ ನಿವಾರಿಸುವ ಕ್ರಮಗಳೂ ಇವೆ ಎಂಬುದನ್ನು ನಾವು ಗಮನಿಸಿದ್ದೇವೆ ಎಂದು ಅಮೆರಿಕ ಗೃಹ ಸಚಿವಾಲಯ ಹೇಳಿದೆ. ಬಾಹ್ಯಾಕಾಶದಲ್ಲಿ ಸುರಕ್ಷತೆ ಮತ್ತು ಭದ್ರತೆ ಸೇರಿ ಹಲವು ವಿಚಾರಗಳಲ್ಲಿ ಉಭಯ ದೇಶಗಳ ಬಾಹ್ಯಾಕಾಶ ಸಂಶೋ ಧನಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕಿವೆ. ಸೋಮವಾರವಷ್ಟೇ ನಾಸಾ ಬಾಹ್ಯಾಕಾಶದಲ್ಲಿ ತ್ಯಾಜ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಭಾರತದ ಈ ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ 40 ತುಂಡುಗಳು ಹಾರಾಡುತ್ತಿವೆ. ಈ ಪೈಕಿ 24 ತುಂಡುಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಅಪಾಯ ಉಂಟು ಮಾಡಬಹುದು ಎಂದು ಆಕ್ಷೇಪಿಸಲಾಗಿತ್ತು.