ಕೊರಟಗೆರೆ:ಜನಸ್ನೇಹಿ ಸೇವೆ ನೀಡೊದು ಪೊಲೀಸರ ಪ್ರಮುಖ ಕರ್ತವ್ಯ. ಜನಸಾಮಾನ್ಯ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ ತತ್ ಕ್ಷಣವೇ ಪೊಲೀಸರು ಪ್ರಕರಣ ದಾಖಲಿಸಬೇಕು. ಇಲ್ಲವಾದರೆ ಪ್ರಕರಣ ದಾಖಲಿಸಲು ನಿರ್ಲಕ್ಷ್ಯ ವಹಿಸಿದ ಅಧಿಕಾರಿಯ ವಿರುದ್ದ ಶಿಸ್ತುಕ್ರಮ ಕೈಗೊಳ್ಳುತ್ತೇನೆ ಎಂದು ತುಮಕೂರು ಎಸ್ಪಿ ಕೆ.ವಿ.ಅಶೋಕ್ ಎಚ್ಚರಿಕೆ ನೀಡಿದರು.
ಕೊರಟಗೆರೆ ಪಟ್ಟಣದ ಪೊಲೀಸ್ ಠಾಣೆಗೆ ಬುಧವಾರ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ಗೃಹಸಚಿವರ ತವರು ಜಿಲ್ಲೆ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಅಪಘಾತ ತಡೆಗೆ ಕಟ್ಟುನಿಟ್ಟಿನ ಕ್ರಮ ಅಗತ್ಯ. ತುಮಕೂರು ಜಿಲ್ಲೆಯ 42 ಪೊಲೀಸ್ ಠಾಣೆಗಳಿಗೂ ನಾನೇ ಖುದ್ದಾಗಿ ಭೇಟಿ ನೀಡಿ ಅಪರಾಧ ಮತ್ತು ಅಪಘಾತ ಪ್ರಕರಣಗಳ ಮಾಹಿತಿ ಪಡೆಯುತ್ತೇನೆ. ಜನಸ್ನೇಹಿ ಸೇವೆ ನೀಡದ ಪೊಲೀಸರ ವಿರುದ್ದ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇನೆ ಎಂದರು.
ಕೊರಟಗೆರೆ ಠಾಣೆಗೆ ಅಗತ್ಯ ಇರುವ ಮಹಿಳಾ ಸಿಬಂದಿಗಳ ನಿಯೋಜನೆ ಬಗ್ಗೆ ನಮ್ಮ ಇಲಾಖೆಯ ಜೊತೆ ಮಾತನಾಡಿ ಅನುಕೂಲ ಕಲ್ಪಿಸುತ್ತೇನೆ. ತುರ್ತು ವೇಳೆ ಏನೇ ಸಮಸ್ಯೆ ಇದ್ದರೂ 112 ಗೆ ಸಾರ್ವಜನಿಕರು ಕರೆ ಮಾಡಿ ಇಲ್ಲವಾದರೆ ನನ್ನನ್ನೇ ನೇರವಾಗಿ ಸಂಪರ್ಕಿಸಿ. ಜನಸ್ನೇಹಿ ಸೇವೆ ನೀಡೋದು ಪೊಲೀಸ್ ಇಲಾಖೆಯ ಮುಖ್ಯ ಉದ್ದೇಶ ಆಗಿದೆ ಎಂದರು.
ಭೇಟಿ ವೇಳೆಯಲ್ಲಿ ಮಧುಗಿರಿ ಡಿವೈಎಸ್ಪಿ ವೆಂಕಟೇಶ ನಾಯ್ಡು, ಕೊರಟಗೆರೆ ಸಿಪಿಐ ಸುರೇಶ್, ಪಿಎಸ್ ಐ ಚೇತನಗೌಡ, ಕೋಳಾಲ ಪಿಎಸ್ ಐ ರೇಣುಕಾ, ಎಎಸ್ ಐ ಯೊಗೀಶ್, ಮಂಜುನಾಥ, ಧರ್ಮೇಗೌಡ, ಗೋವಿಂದ ನಾಯ್ಕ ಸೇರಿದಂತೆ ಸಿಬಂದಿ ವರ್ಗದವರು ಇದ್ದರು.