ಹೊಸದಿಲ್ಲಿ : ಕಾಂಗ್ರೆಸ್ ಪಕ್ಷವನ್ನು ದೂರ ಇರಿಸಿ ಪರಸ್ಪರ ಚುನವಾಣಾ ಮೈತ್ರಿ ಮಾಡಿಕೊಂಡಿರುವ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಪರಮೋಚ್ಚ ನಾಯಕಿ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಅವರು ಇಂದು ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಉಭಯ ಪಕ್ಷಗಳ ಒಳಗಿನ ಸೀಟು ಹಂಚಿಕೆ ಸೂತ್ರವನ್ನು ಪ್ರಕಟಿಸಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಸೀಟುಗಳಿವೆ. ಎಸ್‌ಪಿ ಮತ್ತು ಬಿಎಸ್‌ಪಿ ಗೆ ಉತ್ತರ ಪ್ರದೇಶದಲ್ಲಿ ತಮ್ಮದೇ ಭದ್ರಕೋಟೆಗಳಿದ್ದು ಅಲ್ಲಿನ ಸೀಟುಗಳನ್ನು ಪರಸ್ಪರರು ಬಾಚಿಕೊಳ್ಳುವ ಉದ್ದೇಶದಲ್ಲಿ ಅನ್ಯ ಎದುರಾಳಿ ಪಕ್ಷಗಳಿಗೆ ಮತ ಹರಿದು ಹೋಗುವುದನ್ನು ತಡೆದು ತಾವು ವಿಜಯಿಗಳಾಗುವ ರಣತಂತ್ರ ಹೊಂದಿವೆ.
ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷಗಳು ಬಲಿಷ್ಠವಾಗಿರುವಾಗ ತಾವೇಕೆ ಕಾಂಗ್ರೆಸ್‌ಗೆ ಮಣೆ ಹಾಕಬೇಕು ಎಂಬ ಧೋರಣೆಯನ್ನು ಎಸ್‌ಪಿ – ಬಿಎಸ್‌ಪಿ ಹೊಂದಿರುವುದು ಸ್ಪಷ್ಟವಿದೆ. ಆ ಕಾರಣಕ್ಕೆ ಅವು ಪರಸ್ಪರ ಕೈ ಜೋಡಿಸಿ, ಕಾಂಗ್ರೆಸ್ ಪಕ್ಷವನ್ನು ತಮ್ಮ ಮೈತ್ರಿಕೂಟದಿಂದ ಹೊರಗಿಟ್ಟಿವೆ.
ಎಸ್‌ಪಿ ಮತ್ತು ಬಿಎಸ್‌ಪಿಗೆ ಆರ್‌ಎಲ್‌ಡಿ (ರಾಷ್ಟ್ರೀಯ ಲೋಕ ದಳ) ಕೂಡ ಮಿತ್ರ ಪಕ್ಷವೇ ಆಗಿದೆ. ಆದರೆ ಅದಕ್ಕೆ ಹೆಚ್ಚೆಂದರೆ ಮೂರು ಸೀಟುಗಳನ್ನು ಮಾತ್ರವೇ ಬಿಟ್ಟುಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಗೋರಖ್‌ಪುರ (ಉ.ಪ್ರ. ಸಿಎಂ ಯೋಗಿ ಆದಿತ್ಯನಾತ್ ಕ್ಷೇತ್ರ) ಮತ್ತು ಫೂಲ್‌ಪುರ (ಡಿಸಿಎಂ ಕ್ಷೇತ್ರ) ಲೋಕಸಭಾ ಉಪ ಚುನಾವಣೆಯಲ್ಲಿ ಈಚೆಗೆ ಇದೇ ರಣ ತಂತ್ರ ಅನುಸರಿಸಿದ್ದ ಎಸ್‌ಪಿ, ಬಿಎಸ್‌ಪಿ ಪಕ್ಷಗಳು ಭರ್ಜರಿ ವಿಜಯ ದಾಖಲಿಸಿ ಬಿಜೆಪಿಯನ್ನು ಮಣ್ಣು ಮುಕ್ಕಿಸಿದ್ದವು.