ಬೆಂಗಳೂರು : ಖಡಕ್ ಖಾಕಿ ಉನ್ನತಾಧಿಕಾರಿ ಎಂದೇ ಖ್ಯಾತರಾಗಿರುವ ಕೆ ಅಣ್ಣಾಮಲೈ ಅವರನ್ನು ರಾಜ್ಯ ಸರಕಾರ ಬೆಂಗಳೂರು ದಕ್ಷಿಣ ವಿಭಾಗಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದ್ದು ಇದು ನಿರೀಕ್ಷಿತವೇ ಆಗಿದೆ ಎಂಬ ಪ್ರತಿಕ್ರಿಯೆ ಸಾರ್ವತ್ರಿಕ ವ್ಯಕ್ತವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇದೀಗ ಅಣ್ಣಾಮಲೈ ಅವರ ಸ್ಥಾನಕ್ಕೆ ಹರೀಶ್ ಪಾಂಡೆ ಅವರನ್ನು ತರಲಾಗಿದೆ. ಅಣ್ಣಾ ಮಲೈ ಉಡುಪಿ ಜಿಲ್ಲೆ ಸಹಿತ ತಾವು ಕರ್ತವ್ಯ ನಿರ್ವಹಿದಲ್ಲೆಲ್ಲ ದಕ್ಷ ಮತ್ತು ಖಡಕ್ ಅಧಿಕಾರಿಯಾಗಿ ಹೆಸರು ಪಡೆದವರಾಗಿದ್ದಾರೆ.
ಅಣ್ಣಾಮಲೈ ಅವರ ಸ್ಥಾನಕ್ಕೆ ಚಿಕ್ಕಮಗಳೂರು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದಿರುವ ಹರೀಶ್ ಪಾಂಡೆ ಅವರು ಈ ಹಿಂದೆ ಸಿಐಡಿ ಎಸ್ಪಿ ಯಾಗಿ ಕರ್ತವ್ಯ ನಿರ್ವಹಿಸಿದ್ದರು.
ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಯಾಗಿ ಪಾಂಡೆ ಅವರು ಗೌರೀ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಅವರ ಯಶಸ್ವಿಯಾಗಿದ್ದರೆಂದು ಹೇಳಲಾಗಿದೆ.
ಅಣ್ಣಾಮಲೈ ಅವರ ವರ್ಗಾವಣೆ ವದಂತಿ ಕಳೆದ ಕೆಲವು ದಿನಗಳಿಂದ ದಟ್ಟವಾಗಿ ಹರಡಿತ್ತು. ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಸಿಎಂ ಆಗಿದ್ದ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಿಗೇ ಅಣ್ಣಾಮಲೈ ಅವರನ್ನು ರಾಜಕೀಯ ಸೂಕ್ಷ್ಮತೆಯ ರಾಮನಗರಕ್ಕೆ ವರ್ಗಾಯಿಸಲಾಗಿತ್ತು.
ಆದರೆ ಎಚ್ ಡಿ ಕುಮಾರಸ್ವಾಮಿ ಅವರು ದೋಸ್ತಿ ಸರಕಾರದ ಮುಖ್ಯಮಂತ್ರಿ ಆದೊಡನೆಯೇ ಅಣ್ಣಾಮಲೈ ಮತ್ತೆ ಚಿಕ್ಕಮಗಳೂರಿನ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದರು.