Advertisement

ಸೌಜನ್ಯ ಕೊಲೆ ಪ್ರಕರಣ: ಸಿಬಿಐ ಮರು ತನಿಖೆಗೆ ಹೈಕೋರ್ಟ್‌ ನಕಾರ

08:03 PM Jan 27, 2021 | Team Udayavani |

ಬೆಂಗಳೂರು: ಧರ್ಮಸ್ಥಳದ ಉಜಿರೆಯ ಎಸ್‌ಡಿಎಂ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ಮರು ತನಿಖೆಗೆ ವಹಿಸಲು ಹೈಕೋರ್ಟ್‌ ನಿರಾಕರಿಸಿದೆ.

Advertisement

ಪ್ರಕರಣವನ್ನು ಸಿಬಿಐಗೆ ಮರು ತನಿಖೆಗೆ ವಹಿಸಬೇಕು ಎಂದು ಕೋರಿ ಸೌಜನ್ಯ ತಂದೆ ಚಂದಪ್ಪಗೌಡ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಆದೇಶ ಹೊರಡಿಸಿದೆ.

ಈಗಾಗಲೇ ಪ್ರಕರಣವನ್ನು ಸ್ಥಳೀಯ ಪೊಲೀಸರು, ಸಿಐಡಿ ಬಳಿಕ ಸಿಬಿಐ ತನಿಖೆ ನಡೆಸಿದೆ. ಸಂತೋಷ್‌ ರಾವ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಹ ಸಲ್ಲಿಸಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಸಂತೋಷ್‌ ರಾವ್‌ ಕೃತ್ಯ ಎಸಗಿರುವುದು ದೃಢಪಟ್ಟಿದೆ. ಈ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಸಿಬಿಐ ನಡೆಸಿರುವ ತನಿಖೆ ಸಮರ್ಪಕ ಮತ್ತು ನ್ಯಾಯಬದ್ಧವಾಗಿದೆ. ಧೀರಜ್‌ ಜೈನ್‌, ಉದಯ್‌ ಜೈನ್‌ ಹಾಗೂ ಮಲ್ಲಿಕ್‌ ಜೈನ್‌ ವಿರುದ್ಧ ಸಂಶಯ ವ್ಯಕ್ತಪಡಿಸಿ, ಅರ್ಜಿದಾರರು ಮರು ತನಿಖೆಗೆ ಕೋರಿದ್ದಾರೆ. ಆದರೆ, ಸಂಶಯ ಋಜುವಾತುಪಡಿಸುವ ಸಾಕ್ಷ್ಯಗಳನ್ನು ಒದಗಿಸಲಾಗಿಲ್ಲ. ಮೇಲಾಗಿ, ಒಮ್ಮೆ ಸಿಬಿಐ ತನಿಖೆ ನಡೆಸಿರುವ ಪ್ರಕರಣವನ್ನು ಮರು ತನಿಖೆಗೆ ವಹಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರಕರಣವನ್ನು ಮರು ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:ಬಿ.ಸಿ.ಪಾಟೀಲ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ : ಉಗ್ರಪ್ಪ ಆರೋಪ

ಅದೇ ರೀತಿ ಪ್ರಕರಣದಲ್ಲಿ ತಮ್ಮನ್ನು ಹೆಚ್ಚುವರಿ ಆರೋಪಿಗಳನ್ನಾಗಿ ಸೇರಿಸಿ ಸಮನ್ಸ್‌ ಜಾರಿಗೊಳಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಧೀರಜ್‌ ಜೈನ್‌, ಉದಯ್‌ ಜೈನ್‌ ಹಾಗೂ ಮಲ್ಲಿಕ್‌ ಜೈನ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.

Advertisement

ನೇರವಾಗಿ ಹೆಚ್ಚುವರಿ ಆರೋಪಿಗಳನ್ನಾಗಿ ಸೇರಿಸಿರುವುದು ಸರಿಯಲ್ಲ. ಹೆಚ್ಚುವರಿ ಆರೋಪಿಗಳನ್ನಾಗಿ ಸೇರಿಸುವ ಮೊದಲು ಅವರ ವಾದ ಆಲಿಸಿದ ಬಳಿಕ ತೀರ್ಮಾನಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿರುವ ಹೈಕೋರ್ಟ್‌, ಮೂವರು ಹೆಚ್ಚುವರಿ ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ ರದ್ದುಪಡಿಸಿತು.

ಹಾಗೆಯೇ, ಸಿಬಿಐ ಪ್ರಕರಣದ ಮರು ತನಿಖೆ ನಡೆಸುವಂತೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಹೊರಡಿಸಿದ್ದ ಆದೇಶವನ್ನೂ ರದ್ದುಪಡಿಸಿದ ಹೈಕೋರ್ಟ್‌, ಪ್ರಕರಣದ ತನಿಖೆಯನ್ನು ತ್ವರಿತವಾಗಿ ನಡೆಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಇದನ್ನೂ ಓದಿ:ಸೇವೆಯ ಜೊತೆ ಪ್ರಾಮಾಣಿಕತೆ ಮೆರೆದ 108 ಆಂಬ್ಯುಲೆನ್ಸ್ ಸಿಬ್ಬಂದಿ

ಪ್ರಕರಣವೇನು?
ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥೇಶ್ವರ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸೌಜನ್ಯಾ, 2012ರ ಅ.9 ರಂದು ಕಾಣೆಯಾಗಿದ್ದಳು. ಆ ಕುರಿತು ಆಕೆಯ ತಂದೆ ಚಂದ್ರಪ್ಪಗೌಡ ಅದೇ ದಿನ ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಿದ್ದರು. ಅ.10 ರಂದು ಸೌಜನ್ಯಾ ಶವ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಮೊದಲು ಬೆಳ್ತಂಡಗಿ ಪೊಲೀಸರು ತನಿಖೆ ನಡೆಸಿದ್ದರು. ನಂತರ ಸಿಐಡಿಗೆ ತನಿಖೆಯನ್ನು ವರ್ಗಾಯಿಸಲಾಗಿತ್ತು. ಈ ಮಧ್ಯೆ ಪ್ರಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ಸದಸ್ಯರ ಹೆಸರು ಕೇಳಿ ಬಂದದ್ದಕ್ಕೆ ದೊಡ್ಡ ಮಟ್ಟದ ಹೋರಾಟ ನಡೆಯಿತು. ಅದರ ಪರಿಣಾಮ ಸರ್ಕಾರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು.

ಸಿಬಿಐ ತನಿಖಾಧಿಕಾರಿಗಳು 2016ರಲ್ಲಿ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆ ದೋಷಾರೋಪ ಪಟ್ಟಿ ಸೂಕ್ತವಾಗಿಲ್ಲ ಎಂದು ಆರೋಪಿಸಿದ್ದ ಸೌಜನ್ಯಾ ತಂದೆ, ಹೆಚ್ಚಿನ ತನಿಖೆಗೆ ಕೋರಿದ್ದರು. ಸಿಬಿಐ ನ್ಯಾಯಾಲಯವು 2017ರಲ್ಲಿ ಹೆಚ್ಚಿನ ತನಿಖೆಗೆ ಆದೇಶಿಸಿ, ಪ್ರಕರಣದ ಸಾಕ್ಷಿಗಳಾದ ಧೀರಜ್‌ ಜೈನ್‌, ಉದಯ್‌ ಜೈನ್‌ ಮತ್ತು ಮಲ್ಲಿಕ್‌ ಜೈನ್‌ಗೆ ಸಮನ್ಸ್‌ ಜಾರಿ ಮಾಡಿತ್ತು. ಆ ಆದೇಶ ರದ್ದು ಕೋರಿ ಈ ಮೂವರು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಸಿಬಿಐ ಕೋರ್ಟ್‌ ಆದೇಶಕ್ಕೆ 2017ರ ಏ.11ರಂದು ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಇದೇ ವೇಳೆ ಪ್ರಕರಣವನ್ನು ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಮರು ತನಿಖೆ ನಡೆಸಲು ಕೋರಿ ಸೌಜನ್ಯಾ ತಂದೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next