ಹಾವೇರಿ: ಕಳೆದ ವರ್ಷ ಮುಂಗಾರು, ಹಿಂಗಾರು ಎರಡೂ ಮಳೆ ಕೈಕೊಟ್ಟು ಬರಗಾಲದ ಬವಣೆಗೊಳಗಾಗಿದ್ದ ಜಿಲ್ಲೆಯಲ್ಲಿ ಈ ಬಾರಿಯೂ ಮುಂಗಾರು ರೈತರಿಗೆ ಕೈಹಿಡಿದಿಲ್ಲ. ಬರೋಬರಿ ಒಂದು ತಿಂಗಳು ತಡವಾಗಿ ಮುಂಗಾರು ಆಗಮಿಸಿದ್ದು ಕಳೆದ ಐದಾರು ದಿನಗಳಿಂದಷ್ಟೇ ಸಾಧಾರಣ ಮಳೆ ಸುರಿಯುತ್ತಿದ್ದು ಬಿತ್ತನೆ ಚುರುಕುಗೊಂಡಿದೆ.
ಕಳೆದ ವರ್ಷದ ಬರಗಾಲ ಸಂಕಷ್ಟ ಅನುಭವಿಸಿರುವ ರೈತರು ಈ ವರ್ಷವಾದರೂ ಉತ್ತಮ ಮಳೆ ಬಂದು ಉತ್ತಮ ಫಸಲು ಪಡೆಯಬಹುದು ಎಂದು ಆಶಿಸಿದ್ದರು. ಆದರೆ, ಈ ವರ್ಷ ಮುಂಗಾರು ಪೂರ್ವ ಮಳೆ ಆಗಿಲೇ ಇಲ್ಲ. ಇನ್ನು ಜೂನ್ ತಿಂಗಳು ಮುಗಿದರೂ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆಗಮನವೂ ಆಗಿಲ್ಲ. ಹೀಗಾಗಿ ಮಳೆ ರೈತರಿಗೆ ಆರಂಭದಲ್ಲಿಯೇ ಆಘಾತವನ್ನುಂಟು ಮಾಡಿದೆ.
ಕಳೆದ ಐದಾರು ದಿನಗಳಿಂದ ಮಳೆ ಬರುತ್ತಿದೆಯಾದರೂ ದೊಡ್ಡ ಪ್ರಮಾಣದಲ್ಲಿ ಸುರಿಯುತ್ತಿಲ್ಲ. ತುಂತುರು ಮಳೆ, ಮೋಡ ಕವಿದ ವಾತಾವರಣವಿದ್ದು, ಈ ವಾತಾವರಣಕ್ಕೆ ಪೂರಕವಾಗಿ ಬಿತ್ತನೆ ಮಾಡಲು ರೈತರು ಮುಂದಾಗಿದ್ದಾರೆ. ಹೀಗಾಗಿ ಹೊಲಗಳೆಲ್ಲ ಸಾಮೂಹಿಕ ಕೃಷಿ ಚಟುವಟಿಕೆಯ ತಾಣವಾಗಿವೆ.
ಸಾಧಾರಣವಾಗಿ ಜಿಲ್ಲೆಯ ರೈತರು ಮುಂಗಾರು ಪೂರ್ವ ಮಳೆ ಬಿದ್ದ ಬಳಿಕ ಕೃಷಿ ಭೂಮಿಯನ್ನು ಬಿತ್ತನೆಗೆ ಹದಗೊಳಿಸಿಕೊಳ್ಳುತ್ತಿದ್ದರು. ಇನ್ನು ಮುಂಗಾರು ಆರಂಭವಾಗುತ್ತಿದ್ದಂತೆ ಬೀಜ ಬಿತ್ತನೆಗೆ ಅಣಿಯಾಗುತ್ತಿದ್ದರು. ಆದರೆ, ಈ ಬಾರಿ ಮುಂಗಾರುಪೂರ್ವ ಮಳೆಯೂ ಇಲ್ಲ. ಮುಂಗಾರು ಮಳೆಯೂ ಸಕಾಲಕ್ಕೆ ಆಗಿಲ್ಲ. ಹೀಗಾಗಿ ರೈತರು ಈದೀಗ ಬೀಳುತ್ತಿರುವ ತುಂತುರು ಮಳೆಯನ್ನಾಧರಿಸಿಕೊಂಡೇ ಕೃಷಿ ಭೂಮಿಯನ್ನು ಬಿತ್ತನೆಗೆ ಹದಗೊಳಿಸಿಕೊಳ್ಳುತ್ತಿದ್ದಾರೆ.
ಮಳೆ ಪ್ರಮಾಣ: ಜೂನ್ ತಿಂಗಳಲ್ಲಿ 110ಮಿ.ಮೀ.ಯಷ್ಟು ವಾಡಿಕೆ ಮಳೆಯಾಗಬೇಕು. ಆದರೆ, ಈ ವರ್ಷ ಜೂನ್ ತಿಂಗಳಲ್ಲಿ ಕೇವಲ 59.57ರಷ್ಟು ಮಾತ್ರ ಮಳೆಯಾಗಿದ್ದು ಶೇ. 53ರಷ್ಟು ಮಳೆಯಾದಂತಾಗಿದೆ. 2018ರಲ್ಲಿ ಜೂನ್ ತಿಂಗಳಲ್ಲಿ 94.90ಮಿಮೀ, 2017ರಲ್ಲಿ 47.51ಮಿಮೀ ಮಳೆ ಜೂನ್ ತಿಂಗಳಲ್ಲಿ ಆಗಿತ್ತು. ಮಳೆ ಅಭಾವದಿಂದಾಗಿ ಕಡಿಮೆ ನೀರಲ್ಲಿ ಬೆಳೆಯಬಹುದಾದ ಮೆಕ್ಕೆಜೋಳದತ್ತ ರೈತರು ಮುಖ ಮಾಡಿದ್ದು ಶೇ. 60ರಷ್ಟು ರೈತರು ಮೆಕ್ಕೆಜೋಳ ಬಿತ್ತನೆಗೆ ಮುಂದಾಗಿದ್ದಾರೆ.
ಬಿತ್ತನೆ ಗುರಿ: ಕೃಷಿ ಇಲಾಖೆ ಪ್ರಸಕ್ತ ವರ್ಷ 207973 ಹೆಕ್ಟೇರ್ ಏಕದಳ, 7209 ಹೆಕ್ಟೇರ್ ದ್ವಿದಳ, 31854 ಹೆಕ್ಟೇರ್ ಎಣ್ಣೆಕಾಳು, 85790 ಹೆಕ್ಟೇರ್ ವಾಣಿಜ್ಯ ಬೆಳೆ ಸೇರಿ ಒಟ್ಟು 332826 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದೆ. ಮುಂಗಾರು ಹಂಗಾಮಿಗಾಗಿ ಜಿಲ್ಲೆಯ 19 ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಉಪಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಗೆ ವ್ಯವಸ್ಥೆ ಮಾಡಿದೆ.
ಮುಂಗಾರು ಹಂಗಾಮಿಗೆ ಒಟ್ಟು 21028 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜು ಆಗಿದ್ದು ಇದರಲ್ಲಿ ಕೇವಲ 11419 ಕ್ವಿಂಟಾಲ್ ಬೀಜ ವಿತರಣೆಯಾಗಿದೆ. ಮುಂಗಾರು ಹಂಗಾಮಿಗೆ ಸರಬರಾಜು ಆಗಿರುವ ಒಟ್ಟು 46335 ಮೆಟ್ರಿಕ್ ಟನ್ ರಸಗೊಬ್ಬರದಲ್ಲಿ 14452 ಮೆಟ್ರಿಕ್ ಟನ್ ವಿತರಣೆಯಾಗಿದೆ.
ಒಟ್ಟಾರೆ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ತುಂತುರು ಮಳೆಯಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಚಾಲನೆ ದೊರಕಿದ್ದು ಮುಂದೆಯೂ ಉತ್ತಮ ಮಳೆ ನಿರೀಕ್ಷೆಯಲ್ಲಿ ರೈತರು ಹೊಲ ಹಸನು ಮಾಡಿ, ಬಿತ್ತನೆಗೆ ಅಣಿಯಾಗಿದ್ದಾರೆ.
•ಎಚ್.ಕೆ. ನಟರಾಜ