ನವಲಗುಂದ: ಎರಡು ದಿನಗಳಿಂದ ತಾಲೂಕಿನಲ್ಲಿ ಮಳೆ ಸುರಿಯುತ್ತಿರುವುದರಿಂದ ಮುಂಗಾರು ಬಿತ್ತನೆಗಾಗಿ ರೈತರು ಜಮೀನುಗಳನ್ನು ಹದ ಮಾಡಿಕೊಡಿದ್ದು, ಹೆಸರು ಬಿತ್ತನೆ ಬೀಜಕ್ಕಾಗಿ ಪರದಾಡುವಂತಾಗಿದೆ.
ಮಂಗಳವಾರ ಪಟ್ಟಣದ ಎಪಿಎಂಸಿಯಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ನೂರಾರು ರೈತರು ಬೆಳ್ಳಂಬೆಳಗ್ಗೆಯಿಂದಲೇ ಹೆಸರು ಬೀಜ ಖರೀದಿಗಾಗಿ ಮುಗಿಬಿದ್ದು ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ ಅಗತ್ಯ ಬೀಜದ ದಾಸ್ತಾನು ಇಲ್ಲದ್ದರಿಂದ ಹಿಡಿಶಾಪ ಹಾಕುತ್ತ ಮರಳಿ ಹೋಗುವಂತಾಯಿತು.
ಕೃಷಿ ಅಧಿಕಾರಿಗಳು, ಜನಪ್ರತಿನಿಧಿಗಳು ಆಯಾ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ತೊಂದರೆಯಾಗದಂತೆ ಬಿತ್ತನೆ ಬೀಜಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದರು. ಆದರೆ ದಾಸ್ತಾನು ಇದ್ದದ್ದು 11 ಕ್ವಿಂಟಲ್ ಹೆಸರು ಬೀಜಮಾತ್ರ. ಕೆಲವು ರೈತರಿಗೆ ವಿತರಿಸಿ, ಸ್ಟಾಕ್ ಬಂದ ನಂತರ ಉಳಿದವರಿಗೆ ವಿತರಿಸಲಾಗುವುದೆಂದು ಸಬೂಬು ಹೇಳಿ ಕೇಂದ್ರದವರು ಜಾರಿಕೊಂಡರು. ಸರದಿಯಲ್ಲಿದ್ದ ನೂರಾರು ರೈತರಿಗೆ ಜೂ. 4 ಹಾಗೂ 6ರ ವರೆಗೆ ಟೋಕನ್ ನೀಡಿ ಕಳುಹಿಸಿದರು. ಇನ್ನು ಒಂದೇ ಕಂಪ್ಯೂಟರ್ ಇರುವುದರಿಂದ ರೈತರ ದಾಖಲಾತಿ ಪರಿಶೀಲನೆ ಅಡೆತಡೆಯಾಗಿ ಸಂಜೆಯವರೆಗೂ ರೈತರು ಬೀಜಕ್ಕಾಗಿ ಕಾಯುತ್ತಾ ಕುಳಿತುಕೊಳ್ಳಬೇಕಾಗಿದೆ.
ಮುಗಿಬಿದ್ದಿದ್ದು ಯಾಕೆ?: ರೈತ ಸಂಪರ್ಕ ಕೇಂದ್ರದಲ್ಲಿ 5 ಕೆಜಿಗೆ 360 ರೂ. ಇದ್ದರೆ, ಹೊರಗಡೆ ವ್ಯಾಪಾರಸ್ಥರಲ್ಲಿ 5 ಕೆಜಿಗೆ 1100ರಿಂದ 1700 ರೂ.ವರೆಗೆ ವಿವಿಧ ಕಂಪನಿಗಳ ಬೀಜಗಳು ಮಾರಾಟಕ್ಕೆ ಇವೆ. ಹೀಗಾಗಿ ಹೆಚ್ಚಿನ ಅನ್ನದಾತರು ರೈತ ಸಂಪರ್ಕ ಕೇಂದ್ರಕ್ಕೆ ಮುಗಿಬಿದ್ದಿದ್ದಾರೆ. ಕೊರೊನಾದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಸರಕಾರ ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜಗಳನ್ನು ಆಯಾ ಕ್ಷೇತ್ರಗಳಿಗೆ ಕಳುಹಿಸಿದ್ದರೆ ಹದಗೊಳಿಸಿದ ಜಮೀನುಗಳಲ್ಲಿ ರೈತರು ಇಷ್ಟೊತ್ತಿಗೆ ಬಿತ್ತನೆ ಕಾರ್ಯ ಪ್ರಾರಂಭಿಸುತ್ತಿದ್ದರು.
10 ಕ್ವಿಂಟಲ್ ದಾಸ್ತಾನಿದೆ ಎಂದಿದ್ದ ಅಧಿಕಾರಿಗಳು ಕೇವಲ 23 ರೈತರಿಗೆ ಮಾತ್ರ ನೀಡಿ ಇನ್ನುಳಿದ ಬೀಜಗಳನ್ನು ರಾತ್ರೋರಾತ್ರಿ ಬೇರೆಯವರಿಗೆ ನೀಡಿದ್ದಾರೆ. ಕೊರೊನಾದಿಂದ ಜೀವನ ನಡೆಸುವುದು ತೊಂದರೆಯಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ ನೀಡುವ ಬೀಜಗಳು ಆಸರೆಯಾಗುತ್ತವೆ ಎಂದು ಬಂದರೆ ದಾಸ್ತಾನಿಲ್ಲ ಎಂಬುದನ್ನು ಕೇಳಿ ಬಂದ ದಾರಿಗೆ ಸುಂಕ ಇಲ್ಲದೇ ಅಲೆದಾಡಬೇಕಾಗಿದೆ. ಜಮೀನು ಹದಗೊಳಿಸಿಟ್ಟಿದ್ದು, ಬಿತ್ತನೆ ಕೈಗೊಳ್ಳುವುದು ಯಾವಾಗ ಎಂಬ ಚಿಂತೆ ಆವರಿಸಿದೆ. –
ನಿಂಗಪ್ಪ ಸಿದ್ದಗಿರಿ, ಬೆಳವಟಗಿ ರೈತ
–ಪುಂಡಲೀಕ ಮುಧೋಳೆ