ಜೇವರ್ಗಿ: ಕೋವಿಡ್ ತಂದೊಡ್ಡಿದ ಸಂಕಷ್ಟ ಪರಿಸ್ಥಿತಿಗೆ ಎಲ್ಲ ಕ್ಷೇತ್ರಗಳು ತಲ್ಲಣಿಸಿದ್ದರೆ, ಕೃಷಿ ಕ್ಷೇತ್ರಕ್ಕೆ ಮಾತ್ರ ಅದರ ಎಫೆಕ್ಟ್ ತಟ್ಟಿಲ್ಲ. ಉತ್ತಮ ವರ್ಷಧಾರೆ ನಡುವೆ ಈ ವರ್ಷ ದಾಖಲೆಯ ಬಿತ್ತನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೇ ಶೇ.15% ಕ್ಕಿಂತ ಹೆಚ್ಚುವರಿ ಬಿತ್ತನೆಯಾಗಿದೆ.
ಪ್ರಸಕ್ತ ವರ್ಷ ಸಕಾಲದಲ್ಲಿ ಉತ್ತಮ ಮಳೆಯಾಗಿ ತಾಲೂಕಿನ ಜನರ ಜೀವನಾಡಿ ಭೀಮಾ ನದಿ ತುಂಬಿಹರಿಯುತ್ತಿದ್ದು, ಕೃಷ್ಣ ಭಾಗ್ಯ ಜಲ ನಿಗಮದ ಕಾಲುವೆಗಳಲ್ಲಿ ನೀರುಹರಿಯುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ಸೃಷ್ಟಿಯಾಯಿತು. ಇದರ ಬೆನ್ನ ಹಿಂದೆಯೇ ಕೃಷಿ ಚಟುವಟಿಕೆಗಳು ಗರಿಗೆದರಿದವು. ತೊಗರಿ, ಹತ್ತಿ, ಸೂರ್ಯ ಕಾಂತಿ, ಮೆಕ್ಕೆ ಜೋಳ, ಕಬ್ಬು ಬಿತ್ತನೆ ಕಾರ್ಯ ಬಿರುಸುಗೊಂಡಿತು. ಇದರ ಪರಿಣಾಮ ಸೆಪ್ಟೆಂಬರ್ ತಿಂಗಳ ಮಧ್ಯದ ವೇಳೆಗೆ ಶೇ.90% ಬಿತ್ತನೆ ನಡೆದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ತಾಲೂಕಿನಲ್ಲಿ ಬಿತ್ತನೆ 75%-80% ರಷ್ಟು ಬಿತ್ತನೆ ನಡೆದಿತ್ತು. ಕೊರೊನಾ ಸಂಕಷ್ಟಕ್ಕೆ ಹೆದರಿ ಮಹಾನಗರಗಳು ಹಾಗೂ ಹೊರ ಜಿಲ್ಲೆಗಳಿಂದ ವಾಪಸಾದವರು ಬಹುತೇಕ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇದರಿಂದ ದಶಕಗಳಿಂದ ಬೀಳು ಬಿದ್ದಿದ್ದ ಭೂಮಿಗಳಲ್ಲೂ ಕೃಷಿ ಚಟುವಟಿಕೆ ಆರಂಭಗೊಂಡಿದೆ. ಉದ್ಯೋಗ ಕಳೆದುಕೊಂಡವರು ಕೃಷಿಯನ್ನು ಜೀವನಾಧಾರ ಮಾಡಿಕೊಂಡಿರುವುದರಿಂದ ಶೇಕಡಾವಾರು ಬಿತ್ತನೆ ಪ್ರಮಾಣ ಹೆಚ್ಚಳವಾಗಿದೆ. ಕೋವಿಡ್ ತಂದಿಟ್ಟ ತುರ್ತು ಪರಿಸ್ಥಿತಿ ಸದ್ಯಕ್ಕೆ ನಿವಾರಣೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.
ಮುಂದಿನ ಒಂದು ವರ್ಷ ಉದ್ಯೋಗವಕಾಶಗಳು ಸೃಷ್ಟಿಯಾಗುವ ಬಗ್ಗೆ ನಂಬಿಕೆಯೂ ಇಲ್ಲ. ಹಾಗಾಗಿ ಹೊರಗಿನಿಂದ ಬಂದ ಬಹಳಷ್ಟು ಜನರು ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳುವಪ್ರಯತ್ನ ನಡೆಸುತ್ತಿದ್ದಾರೆ. ಹೊರಗಿನಿಂದ ಬಂದವರಲ್ಲಿ ಯುವಕರು ಕೃಷಿಯತ್ತ ಮುಖ ಮಾಡಿದ್ದಾರೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಹಳ್ಳಿಗಳಲ್ಲಿರುವ ಹಿರಿಯರು ಮತ್ತೆ ನಗರ ಪ್ರದೇಶಗಳಿಗೆ ತೆರಳದಂತೆ ಮನವೊಲಿಸಿದ್ದಾರೆ. ಹೊಸದಾಗಿ ಜಮೀನು ಖರೀದಿಸಿ ವ್ಯವಸಾಯದಲ್ಲಿ ತೊಡಗುವಂತೆ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಸಕಾಲಕ್ಕೆ ಮಳೆಯಾಗದೇ ಅನ್ನದಾತ ಕಣ್ಣೀರಲ್ಲಿ ಕೈ ತೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಜಮೀನುಗಳನ್ನು ಬೇರೆಯವರಿಗೆ ಗುತ್ತಿಗೆ ನೀಡುವಂತಾಗಿತ್ತು. ಆದರೆ ಪ್ರಸಕ್ತ ವರ್ಷ ಮನೆಗಳಲ್ಲಿ ಹೆಚ್ಚು ಸಂಖ್ಯೆಯ ಜನರು ಇರುವುದರಿಂದ ಎಲ್ಲರೂ ಒಟ್ಟಾಗಿಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ.ಇದೂ ಸಹ ತಾಲೂಕಿನಲ್ಲಿ ಕೃಷಿ ಕ್ಷೇತ್ರ ಬೆಳವಣಿಗೆಯತ್ತ ಸಾಗಲುಕಾರಣವಾಗಿದೆ.
ಕಳೆದ ಐದಾರು ವರ್ಷಗಳಲ್ಲಿ ಬೀಳದ ಮಳೆ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಮುಂಗಾರು ಬೆಳೆಗಳ ಇಳುವರಿ ಗಣನೀಯವಾಗಿ ಹೆಚ್ಚಳವಾಗಲಿದೆ. ರೈತರು ಕೃಷಿ ಇಲಾಖೆ ಅಧಿ ಕಾರಿಗಳ ಸಲಹೆ ಪಡೆದು ಬೆಳೆಗಳಿಗೆ ರಸಗೊಬ್ಬರ, ಕ್ರಿಮಿನಾಶಕ ಅಗತ್ಯ ಪ್ರಮಾಣದಲ್ಲಿ ಬಳಸಬೇಕು.ತಾಲೂಕಿನ ಪ್ರಮುಖ ಬೆಳೆಗಳಾದ ತೊಗರಿ, 64,450 ಹೆಕ್ಟೇರ್, ಹತ್ತಿ 42,725 ಹೆಕ್ಟೇರ್, ಸಜ್ಜೆ, ಸೂರ್ಯಕಾಂತಿ, ಮೆಕ್ಕೆ ಜೋಳ 1000 ಹೆಕ್ಟೇರ್, ಹೆಸರು,1,250 ಹೆಕ್ಟೇರ್, ಎಳ್ಳು 500 ಹೆಕ್ಟೇರ್ ಸೇರಿದಂತೆ ಒಟ್ಟು 1,18,271 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡಲಾಗಿದೆ.
– ಸುನೀಲಕುಮಾರ ಜವಳಗಿ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ
-ವಿಜಯಕುಮಾರ ಎಸ್.ಕಲ್ಲಾ