ತುಮಕೂರು: ಜಿಲ್ಲೆಯಾದ್ಯಂತ ಮುಂಗಾರು ಮಳೆ ಆಶಾದಾಯಕವಾಗಿ ಬರುತ್ತದೆ ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ. ಬಿತ್ತನೆ ಮಾಡುವ ಸಮಯದಲ್ಲಿ ಮುಂಗಾರು ಮಳೆ ಮತ್ತೆ ಕೈ ಕೊಟ್ಟಿದೆ.
ಪೂರ್ವ ಮುಂಗಾರು ಮಳೆಯಲ್ಲಿ ಬಿತ್ತನೆ ಮಾಡಿದ್ದ ಅಲ್ಪ ಸ್ವಲ್ಪ ದ್ವಿದಳ ಧಾನ್ಯ ಬೆಳೆಗಳಾದ ಹೆಸರು, ಎಳ್ಳು, ಉದ್ದು, ಸೇರಿದಂತೆ ದ್ವಿದಳ ಧಾನ್ಯ ಮಳೆಯಿಲ್ಲದೆ ಒಣಗುತ್ತಿವೆ. ಜೊತೆಗೆ ಕಾಯಿ ಕಟ್ಟುವ ಸಮಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರನ್ನು ಆತಂಕ ಕ್ಕೀಡು ಮಾಡಿದೆ. ಈ ಬಾರಿ ಜಿಲ್ಲೆಯಾದ್ಯಂತ ವಾಡಿಕೆ ಮಳೆಗಿಂತ ಕಡಿಮೆ ಮಳೆ ಬಂದಿದ್ದು, 2019-20ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 4,16,000ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಇಲ್ಲಿಯವರೆಗೆ ಕೇವಲ 9921 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಚಿಕ್ಕನಾಯಕನಹಳ್ಳಿ 38264 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಾಗಿತ್ತು. ಈವರೆಗೆ 832 ಹೆಕ್ಟೇರ್ ಪ್ರದೇಶ, ಗುಬ್ಬಿ ತಾಲೂಕಿನಲ್ಲಿ 31750 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕು ಈವರೆಗೆ 230 ಹೆಕ್ಟೇರ್ ಪ್ರದೇಶ, ಕುಣಿಗಲ್ ತಾಲೂಕಿನಲ್ಲಿ 44661 ಹೆಕ್ಟೇರ್ ಪ್ರದೇಶದಲ್ಲಿ ಈವರೆಗೆ 1952 ಹೆಕ್ಟೇರ್ ಪ್ರದೇಶ, ಮಧುಗಿರಿ ತಾಲೂಕಿನಲ್ಲಿ 38560 ಹೆಕ್ಟೇರ್ ಪ್ರದೇಶದಲ್ಲಿ 110 ಹೆಕ್ಟೇರ್ ಪ್ರದೇಶ, ಪಾವಗಡ ತಾಲೂಕಿನಲ್ಲಿ 73030 ಹೆಕ್ಟೇರ್ ಪ್ರದೇಶದಲ್ಲಿ ಈವರೆಗೆ 80 ಹೆಕ್ಟೇರ್ ಪ್ರದೇಶ, ಶಿರಾ ತಾಲೂಕಿನಲ್ಲಿ 61030 ಹೆಕ್ಟೇರ್ ಪ್ರದೇಶದಲ್ಲಿ ಈವರೆಗೆ 507 ಹೆಕ್ಟೇರ್ ಪ್ರದೇಶ, ತಿಪಟೂರು ತಾಲೂಕಿನಲ್ಲಿ 27720 ಹೆಕ್ಟೇರ್ ಪ್ರದೇಶದಲ್ಲಿ ಈವರೆಗೆ 3346 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತುಮಕೂರು ತಾಲೂಕಿನಲ್ಲಿ 38960 ಹೆಕ್ಟೇರ್ ಪ್ರದೇಶದಲ್ಲಿ ಈವರೆಗೆ 394 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ತುರುವೇಕೆರೆ ತಾಲೂಕಿ ನಲ್ಲಿ 27875 ಹೆಕ್ಟೇರ್ ಪ್ರದೇಶದಲ್ಲಿ ಈ ವರೆಗೆ 1230 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕೊರಟಗೆರೆೆ ತಾಲೂಕಿನಲ್ಲಿ 34600 ಹೆಕ್ಟೇರ್ ಪ್ರದೇಶದಲ್ಲಿ 1240 ಹೆಕ್ಟೇರ್ ಪ್ರದೇಶ ದಲ್ಲಿಬಿತ್ತನೆಯಾಗಿದೆ. ಕಳೆದ ವರ್ಷ ಈ ವೇಳೆಗೆ 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.
ಶೇಂಗಾ ಬಿತ್ತನೆಯಲ್ಲಿ ಕುಂಠಿತ: ಜೂ.15ರಿಂದ ಜು.15 ರವರೆಗೆ ಶೇಂಗಾ ಬಿತ್ತನೆಗೆ ಸಕಾಲವಾಗಿದೆ. ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ ಶಿರಾ ತಾಲೂಕುಗಳಲ್ಲಿ ಶೇಂಗಾ ಬಿತ್ತನೆ ಮಾಡುತ್ತಾರೆ. ಈ ಭಾಗದಲ್ಲಿ ಮಳೆ ಕೊರತೆಯಾದ ಕಾರಣ ಶೇಂಗಾ ಬಿತ್ತನೆಯಲ್ಲಿ ಕುಂಠಿತವಾಗಿದ್ದು, ಶೇಂಗಾ ಬೆಳೆಯನ್ನು 121952 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲು ಗುರಿ ಹೊಂದಿದ್ದು, ಇಲ್ಲಿಯವರೆಗೆ 1172 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಜು.15ರವೆರೆಗೆ ಬಿತ್ತನೆಗೆ ಕಾಲಾವ ಕಾಶವಿದೆ. ರೈತರು ಭೂಮಿ ಹಸನು ಮಾಡಿಕೊಂಡು ಬೀಜಗಳನ್ನು ಕೃಷಿ ಕೇಂದ್ರಗಳಲ್ಲಿ ಖರೀದಿಸಿದ್ದು, ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ.
ಬಿತ್ತನೆಯಲ್ಲಿ ಕುಂಠಿತ: ರಾಜ್ಯದ ವಿವಿಧ ಕಡೆ ಭರ್ಜರಿ ಮಳೆಯಾಗುತ್ತಿದೆ ಆದರೆ ಜಿಲ್ಲೆಯಲ್ಲಿ ಮುಂಗಾರು ಮಳೆ ಆಶಾದಾಯಕವಾಗಿ ಬರುತ್ತಿಲ್ಲ. ಜಿಲ್ಲೆಯ ರೈತರು ಪ್ರಧಾನ ಬೆಳೆಗಳಾದ ಶೇಂಗಾ ಹಾಗೂ ರಾಗಿ ಬೆಳೆ ಬಿತ್ತಲು ಭೂಮಿ ಹಸನು ಮಾಡಿಕೊಂಡು ಕಾಯುತ್ತಿದ್ದಾರೆ.
● ಚಿ.ನಿ.ಪುರುಷೋತ್ತಮ್