ಕೋಲಾರ: ಜಿಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 5 ಲಕ್ಷ ಬೀಜದುಂಡೆಗಳ ಬಿತ್ತನೆ, 50,000 ಸಸಿ ನೆಡಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ನಿರ್ದೇಶಕ ಜೆ. ಚಂದ್ರಶೇಖರ್ ತಿಳಿಸಿದರು.
ತಾಲೂಕಿನ ಮಾರ್ಜೆನಹಳ್ಳಿ ಗ್ರಾಪಂ ವ್ಯಾಪ್ತಿಯ ವರದೇನಹಳ್ಳಿ ಉದ್ಬವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ದೇಗುಲದ ಜೀರ್ಣೋದ್ಧಾರಕ್ಕೆ ಶ್ರೀಕ್ಷೇತ್ರದಿಂದ 2 ಲಕ್ಷ ರೂ.ಗಳ ಡಿಡಿ ವಿತರಣೆ ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಸಸಿ ವಿತರಿಸಿ ಮಾತನಾಡಿದರು.
ಕೆರೆ ಸಂಜೀವಿನಿ ಕಾರ್ಯಕ್ರಮ: ಈ ಮಣ್ಣಿನಲ್ಲಿ ದಾನ ಧರ್ಮ ನಿರಂತರವಾಗಿ ನಡೆಯುವವರೆಗೆ ಮಣ್ಣಿನ ರಕ್ಷಣೆಗೆ ಆಗುತ್ತದೆ. ಅದೇ ರೀತಿ ಧರ್ಮಸ್ಥಳದಲ್ಲಿ ದಾನ ಧರ್ಮ ನಿರಂತರವಾಗಿ ನಡೆಯುತ್ತಿದೆ. ಸರ್ಕಾರಕ್ಕಿಂತ ಪರ್ಯಾಯ ವ್ಯವಸ್ಥೆಯನ್ನು ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ಮಾಡಿದ್ದಾರೆ. ಅವರು ಮಾಡದ ಕಾರ್ಯಕ್ರಮಗಳಿಲ್ಲ. ಕೆರೆಗಳ ಹೂಳೆತ್ತುವ ಕಾರ್ಯವನ್ನು ಶ್ರೀ ಕ್ಷೇತ್ರದಿಂದ ಕೈ ಗೊಂಡ ನಂತರ ಸರ್ಕಾರ ಕೆರೆ ಸಂಜೀವಿನಿ ಕಾರ್ಯಕ್ರಮ ಕೈಗೊಂಡಿತು ಎಂದು ಉದಾಹರಿಸಿದರು.
ರೈತ ಕುಟುಂಬಕ್ಕೆ ಸಹಾಯ: ಕಳೆದ ಐದಾರು ವರ್ಷಗಳಿಂದ ಮಳೆ ಇಲ್ಲದೆ ಬರದ ನಾಡಾಗಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ತರಿಸುವ ವ್ಯವಸ್ಥೆ ದೇವರ ಅನುಗ್ರಹದಿಂದ ಶೀಘ್ರವೇ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಜನತೆ ಮಳೆ ನೀರನ್ನೇ ನಂಬಿದ್ದಾರೆ. ಕಷ್ಟ ಇದ್ದರೂ ಇನ್ನೊಂದು ಕಡೆ ಬೇಡುವ ಕೈಗಳಲ್ಲ, ಕಷ್ಟಪಟ್ಟು ಭೂ ಗರ್ಭದಿಂದ ನೀರು ತೆಗೆದು ಬೆವರು ಸುರಿಸಿ ತರಕಾರಿ ಬೆಳೆದು ಇನ್ನೊಂದು ಕುಟುಂಬಕ್ಕೆ ಸಹಾಯ ಮಾಡುವ ಕೈಗಳು. ಕೋಲಾರದಲ್ಲಿ ನೀರಿಲ್ಲದಿದ್ದರೂ ಹಾಲು ಉತ್ಪಾದನೆಯಲ್ಲಿ ಇಡೀ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ ಎಂದು ನುಡಿದರು.
ಮಳೆ ನೀರನ್ನು ಸಂರಕ್ಷಿಸಿ: ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆ ಬರುವ ಲಕ್ಷಣ ಇದೆ. ಹೀಗಾಗಿ ಯೋಜನೆಯ ವತಿಯಿಂದ 5 ಲಕ್ಷ ಬೀಜದುಂಡೆಗಳನ್ನು ಮಾಡಿ ಗ್ರಾಮಗಳಲ್ಲಿ ಬಿತ್ತನೆ ಮಾಡುವ ಹಾಗೂ 50 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಬಿದ್ದ ಮಳೆ ನೀರನ್ನು ಸಂರಕ್ಷಿಸುವ ಉದ್ದೇಶದಿಂದ 300 ಕುಟುಂಬಗಳಿಗೆ ಮಳೆ ಕೊಯ್ಲು ಅಳವಡಿಸಿ ನೀರನ್ನು ಸಂಪ್‌ಗೆ ಬಿಡುವ ಯೋಜನೆಯಿದೆ ಎಂದರು.
ಪ್ರಸಾದವಾಗಿ 2 ಲಕ್ಷ ರೂ.: ರಾಜ್ಯದಲ್ಲಿ 152 ಕೆರೆಗಳು ಸೇರಿದಂತೆ ಕೋಲಾರ ಜಿಲ್ಲೆಯಲ್ಲಿ 10 ಕೆರೆಗಳ ಪುನಶ್ಚೇತನ ಕೈಗೊಂಡಿದ್ದು, ಎಲ್ಲ ಕೆರೆಗಳಲ್ಲಿ ಭರ್ತಿ ನೀರಿದೆ. ಈ ವರ್ಷವೂ 5 ಕೆರೆಗಳನ್ನು ಆಯ್ಕೆ ಮಾಡಿಕೊಂಡು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದ ಅವರು, ಕಳೆದ ಎರಡು ವರ್ಷಗಳಲ್ಲಿ ದೇವಾಲಯಗಳ ಜೋರ್ಣೋದ್ಧಾರಕ್ಕೆ 2.50 ಕೋಟಿ ರೂ. ನೀಡಲಾಗಿದೆ. ಉದ್ಬವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಶ್ರೀಕ್ಷೇತ್ರದ ಪ್ರಸಾದವಾಗಿ 2 ಲಕ್ಷ ರೂ. ನೀಡುತ್ತಿರುವುದಾಗಿ ಹೇಳಿದರು.
ಹಣ ಸದ್ಬಳಕೆ ಮಾಡಿಕೊಳ್ಳಿ: ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಅರುಣಮ್ಮ ಮಾತನಾಡಿ, ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದ್ದರೆ ಗ್ರಾಮಕ್ಕೆ ಒಂದು ಶಕ್ತಿ ಬರುತ್ತದೆ. ಶ್ರೀಕ್ಷೇತ್ರದಿಂದ ಬಂದಿರುವ ಪ್ರಸಾದದ ಹಣವನ್ನು ಸದ್ಬಳಕೆ ಮಾಡಿಕೊಂಡು ದೇವಾಲಯ ಜೀರ್ಣೋದ್ಧಾರ ಕೈಗೊಳ್ಳಬೇಕು ಎಂದರು. ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್, ದೇವಸ್ಥಾನ ಸಮಿತಿ ಅಧ್ಯಕ್ಷ ವೆಂಕಟೇಶಪ್ಪ, ಉಪಾಧ್ಯಕ್ಷ ವೆಂಕಟಾಚಲಪತಿ, ಸಮಿತಿ ಸದಸ್ಯರಾದ ಶ್ರೀರಾಮಯ್ಯ, ಸೊಣ್ಣೇಗೌಡ,ಅನಂತ ಜ್ಯುಯೆಲರ್ ಮಾಲೀಕ ನಾಗರಾಜ್, ಮುಖಂಡರಾದ ಗದ್ದೆಕಣ್ಣೂರು ನಾರಾಯಣಸ್ವಾಮಿ, ಸೊಣ್ಣೇಗೌಡ, ಕೃಷಿ ಅಕಾರಿ ಮಹಂತೇಶ್, ಮೇಲ್ವಿಚಾಲಕಿ ಶಶಿಕಲಾ, ಸೇವಾ ಪ್ರತಿನಿ ಸುಕನ್ಯ ಮತ್ತು ಕಾಂತಮ್ಮ ಹಾಜರಿದ್ದರು.