ಹೊಸದಿಲ್ಲಿ: ದೇಶದ ಬಹುತೇಕ ಪ್ರದೇಶಗಳಲ್ಲಿ ಮಳೆ ಇಳಿ ಮುಖ ವಾಗಿದ್ದು, ಸೋಮವಾರ ನೈಋತ್ಯ ಮುಂಗಾರು ಸಂಪೂರ್ಣವಾಗಿ ಭಾರತದಿಂದ ವಾಪಸಾಗಿದೆ.
ವಿಶೇಷವೆಂದರೆ, ಇಷ್ಟೊಂದು ವಿಳಂಬವಾಗಿ ಮುಂಗಾರು ವಾಪಸಾಗಿದ್ದು 1975ರ ಬಳಿಕ ಇದು 7ನೇ ಬಾರಿ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
2010 ಮತ್ತು 2021ರ ನಡುವೆ ಒಟ್ಟು 5 ಬಾರಿ ನೈಋತ್ಯ ಮುಂಗಾರು ವಾಪಸಾತಿ ವಿಳಂಬವಾಗಿತ್ತು. ಅಂದರೆ, 2017, 2010, 2016, 2020 ಮತ್ತು 2021ರಲ್ಲಿ ಅಕ್ಟೋಬರ್ 25 ಅಥವಾ ಅನಂತ ರದಲ್ಲಿ ಮುಂಗಾರು ಹಿಂಪಡೆಯಲ್ಪಟ್ಟಿತ್ತು. ಪ್ರಸಕ್ತ ವರ್ಷ ನೈಋತ್ಯ ಮಾರುತವು ಪಶ್ಚಿಮ ರಾಜಸ್ಥಾನ ಮತ್ತು ಪಕ್ಕದ ಗುಜರಾತ್‌ನಿಂದ ಅ.6ರ ವೇಳೆಗೆ ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿತ್ತು.
ಸಾಮಾನ್ಯವಾಗಿ ಸೆ.17ರ ವೇಳೆಗೆ ಈ ಪ್ರಕ್ರಿಯೆ ಆರಂಭವಾಗಬೇಕಿತ್ತು. ಕಳೆದ ವರ್ಷ ಸೆ.28ರಂದು ಮುಂಗಾರು ವಾಪಸಾತಿ ಆರಂಭವಾಗಿದ್ದರೆ, 2019ರಲ್ಲಿ ಅ.9ರಂದು, 2018ರಲ್ಲಿ ಸೆ.29ರಂದು, 2017ರಲ್ಲಿ ಸೆ.27ರಂದು 2016ರಲ್ಲಿ ಸೆ.15ರಂದು ಆರಂಭವಾಗಿತ್ತು ಎಂದೂ ಇಲಾಖೆ ಹೇಳಿದೆ.
ಇದನ್ನೂ ಓದಿ:ಆನ್‌ಲೈನ್ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ
ಚಳಿಗೆ ನಡುಗಲಿದೆ “ಉತ್ತರ’
ಪೆಸಿಫಿಕ್ ಸಾಗರದಲ್ಲಿನ “ಲಾ ನಿನಾ’ ಎಫೆಕ್ಟ್ನಿಂದಾಗಿ ಮುಂದಿನ ವರ್ಷ ಉತ್ತರ ಭಾರತವು ವಿಪರೀತ ಚಳಿಯಿಂದ ನಡುಗಲಿದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ. 2022ರ ಜನವರಿ, ಫೆಬ್ರವರಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಚಳಿಯಿರಲಿದ್ದು, ತಾಪಮಾನವು ಸುಮಾರು 3 ಡಿಗ್ರಿ ಸೆಲ್ಸಿಯಸ್ ಗೆ ತಲುಪಲಿದೆ ಎಂಬ ಮುನ್ಸೂಚನೆಯನ್ನೂ ಇಲಾಖೆ ನೀಡಿದೆ. ಕಳೆದ ವರ್ಷ ಉತ್ತರಪ್ರದೇಶ, ಪಂಜಾಬ್‌ನಂಥ ರಾಜ್ಯಗಳಲ್ಲಿ ಕನಿಷ್ಠ ತಾಪಮಾನ 5 ಡಿ.ಸೆ.ನಷ್ಟಿತ್ತು.