ಹೊಸದಿಲ್ಲಿ : ”ನೈಋತ್ಯ ಮನ್ಸೂನ್ ಇಂದು ಸೋಮವಾರ ಕೇರಳ ಪ್ರವೇಶಿದೆ. ಆ ಮೂಲಕ ದೇಶಕ್ಕೆ ಮುಂಗಾರು ಮಳೆಯ ಋತು ಆರಂಭವಾದಂತಾಗಿದೆ” ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆಯಾಗಿರುವ ಸ್ಕೈ ಮೆಟ್ ಹೇಳಿದೆ.
ಆದರೆ ದೇಶದ ಅಧಿಕೃತ ಹವಾಮಾನ ಮುನ್ಸೂಚನೆ ಇಲಾಖೆ (ಐಎಂಡಿ) ಇಂದು ಬೆಳಗ್ಗಿನ 8.15ರ ಹೊತ್ತಿನ ತನ್ನ ಬುಲೆಟಿನ್‌ನಲ್ಲಿ “ಮುಂದಿನ 24 ತಾಸುಗಳಲ್ಲಿ ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶಿಸಲಿವೆ” ಎಂದು ಹೇಳಿದೆ.
“ಕೇರಳದ ಆದ್ಯಂತ ಮುಂಗಾರು ಮಳೆಗಾಲದಂತಹ ವಾತಾವರಣ ನೆಲೆಗೊಂಡಿದೆ. ಆ ಪ್ರಕಾರ ನಾವು ವಾರ್ಷಿಕ ಮುಂಗಾರು ಋತು ಆರಂಭಗೊಂಡಿದೆ ಎಂದು ಹೇಳಬಹುದು” ಎಂಬುದಾಗಿ ಸ್ಕೈ ಮೆಟ್ ಸಿಇಓ ಜತಿನ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದರು.
ಮೇ 28ರಂದು ಮುಂಗಾರು ಮಾರುತ ಕೇರಳ ಕರಾವಳಿಯನ್ನು ಪ್ರವೇಶಿಸುವುದಾಗಿ ಸ್ಕೈ ಮೆಟ್ ಈ ಮೊದಲು ಹೇಳಿತ್ತು. ಐಎಂಡಿ ಪ್ರಕಾರ ಮೇ 29ರಂದು ಕೇರಳದಲ್ಲಿ ಮುಂಗಾರು ಮಳೆ ಆರಂಭವಾಗುವುದಿತ್ತು.
ಈ ಬಾರಿಯ ಮುಂಗಾರು ಸಾಮಾನ್ಯವಾಗಿಯೇ ಇರುವುದೆಂದು ಐಎಂಡಿ ಹೇಳಿತ್ತು. ಎಲ್ ನಿನೋ ಪ್ರಭಾವ ಇಲ್ಲದ ಈ ಬಾರಿಯ ಮುಂಗಾರಿನಲ್ಲಿ ಶೇ.98ರಷ್ಟು ಮಳೆಯಾಗುವುದೆಂಬ ಭವಿಷ್ಯವನ್ನು ಅದು ನುಡಿದಿತ್ತು.
ಐಎಂಡಿ ಹೆಚ್ಚುವರಿ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ಮುಂದಿನ 24 ತಾಸುಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶಿಸುವುದೆಂದು ಹೇಳಿದರು.